AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವೇರಿಯಂತೆ ಕೃಷ್ಣೆಗೂ ನಡೆಯಲಿ ಗಂಗಾ ಆರತಿ; ಸರ್ಕಾರಕ್ಕೆ ಬೇಡಿಕೆಯಿಟ್ಟ ಉತ್ತರ ಕರ್ನಾಟಕದ ಜನ

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮಧ್ಯೆ ಬೇಧ-ಭಾವ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂಬ ಆರೋಪ ಇದೆ. ಕೆಲಸ, ಕಾಮಗಾರಿ, ಅಭಿವೃದ್ದಿ, ಪ್ರಾತಿನಿಧ್ಯತೆ ಸೇರಿದಂತೆ ಇತರೆ ವಿಚಾರಗಳಲ್ಲಿ ಉತ್ತರ ಕರ್ನಾಟಕ ಮಲತಾಯಿ ಧೋರಣೆಗೆ ಒಳಗಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ನೀರಾವರಿ, ಶಿಕ್ಷಣ, ಸ್ಥಾನಮಾನ, ಉದ್ಯೋಗ, ಕೈಗಾರಿಕೆ ಹೀಗೆ ಹತ್ತು ಹಲವು ವಿಷಯಗಳಲ್ಲಿ ಉತ್ತರ ಕರ್ನಾಟಕ ಭಾಗ ನಿರ್ಲಕ್ಷ್ಯಕ್ಕೆ ಈಡಾಗುತ್ತಲೇ ಬಂದಿದೆ. ಕೃಷ್ಣಾ ನದಿಯ ವಿಚಾರದಲ್ಲಿಯೂ ಸಹ ಈ ತಾರತಮ್ಯ ನಿಜವಾಗಿದೆ ಎನ್ನಬಹುದು. ಯಾಕೆ ಅಂತೀರಾ? ಹಾಗಾದರೆ ಈ ಸ್ಟೋರಿ ಓದಿ.

ಕಾವೇರಿಯಂತೆ ಕೃಷ್ಣೆಗೂ ನಡೆಯಲಿ ಗಂಗಾ ಆರತಿ; ಸರ್ಕಾರಕ್ಕೆ ಬೇಡಿಕೆಯಿಟ್ಟ ಉತ್ತರ ಕರ್ನಾಟಕದ ಜನ
ಕಾವೇರಿಯಂತೆ ಕೃಷ್ಣೆಗೂ ನಡೆಯಲಿ ಗಂಗಾ ಆರತಿ; ಸರ್ಕಾರಕ್ಕೆ ಬೇಡಿಕೆಯಿಟ್ಟ ಉತ್ತರ ಕರ್ನಾಟಕದ ಜನ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Aug 18, 2024 | 5:37 PM

Share

ವಿಜಯಪುರ, ಆ.18: ಗಂಗಾನದಿಯ ಗಂಗಾ ಆರತಿಯನ್ನು ಕಾವೇರಿ ನದಿಯಲ್ಲೂ ಮಾಡಲಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಇತ್ತೀಚೆಗೆ ಹೇಳಿಕೆ ನೀಡಿದ್ದು, ಉತ್ತರ ಕರ್ನಾಟಕ ಭಾಗದ ಜನರಿಗೆ ಅಸಮಾಧಾನ ಉಂಟು ಮಾಡಿದೆ. ರಾಜ್ಯದ ಕಾವೇರಿ ಹಾಗೂ ಕೃಷ್ಣೆ ನಾಡಿನ ಎರಡು ಕಣ್ಣುಗಳು ಎಂದು ಹೇಳುವ ಸರ್ಕಾರಗಳು, ಈ ಮಾತನ್ನು ಕೇವಲ ಮಾತಿಗೆ ಸೀಮಿತ ಮಾಡಿಕೊಂಡು ಬಂದಿದೆ. ಕಾವೇರಿಗೆ ಕೊಟ್ಟ ಪ್ರಾತಿನಿಧ್ಯತೆಯನ್ನು ಕೃಷ್ಣೆಗೆ ನೀಡಿಲ್ಲ. ಕಾವೇರಿ ನದಿಗಿಂತ ವಿಶಾಲ ವ್ಯಾಪ್ತಿಯನ್ನು ಹೊಂದಿರೋ ಕೃಷ್ಣೆಯ ಬಗ್ಗೆ ಸರ್ಕಾರಗಳಿಗೆ ನಿಜವಾಗಲೂ ಅಸಡ್ಡೆಯೆ ಆಗಿದೆ ಎನ್ನಬಹುದು. ಇದಕ್ಕೆ ಕಾರಣ, ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಎಂದು ಭರವಸೆ ನೀಡಿರೋ ಡಿಕೆ ಶಿವಕುಮಾರ್​ಗೆ ಕೃಷ್ಣೆಯ ನೆನಪಾಗಲಿಲ್ಲವಾ? ಅಥವಾ ಉತ್ತರ ಕರ್ನಾಟಕ ಎಂಬ ತಾತ್ಸಾರ ಉಂಟಾಯ್ತಾ? ಎಂಬ ಮಾತುಗಳನ್ನು ಈ ಭಾಗದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಕೃಷ್ಣಾ ಆರತಿಗಾಗಿ ಬೇಡಿಕೆ

ಇದೇ ಕೃಷ್ಣಾ ನದಿಗೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ನಿರ್ಮಾಣ ಮಾಡಿರುವ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಭರ್ತರಿಯಾಗಿದ್ದು, ಇದೇ ವಾರದಲ್ಲಿ ಸಿಎಂ ಸಿದ್ದರಾಮಯ್ಯ ಕೃಷ್ಣೆಗೆ ಗಂಗಾಪೂಜೆ ನೆರವೇರಿಸಿ ಜಲಾಶಯಕ್ಕೆ ಬಾಗೀನ ಅರ್ಪಿಸಲಿದ್ಧಾರೆ. ಇದೇ ವೇಳೆ ಗಂಗಾ ನದಿಗೆ ಗಂಗಾರತಿ ರೀತಿಯಲ್ಲೇ ಕೃಷ್ಣಾ ನದಿಗೆ ಕೃಷ್ಣಾ ಆರತಿಗಾಗಿ ಬೇಡಿಕೆ ಹೆಚ್ಚಾಗಿದೆ. ಪ್ರತಿ ವರ್ಷ ಕೃಷ್ಣಾ ನದಿ ತುಂಬಿದಾಗ ಮುಖ್ಯಮಂತ್ರಿ, ಸಚಿವರು ಬಾಗಿನ ಅರ್ಪಿಸುವುದು ರೂಢಿಯಲ್ಲಿದೆ. ಆದರೆ, ಬಾಗಿನ ಅರ್ಪಿಸುವುದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಸಚಿವರು, ಶಾಸಕರು, ಅಧಿಕಾರಿಗಳಿಗೆ ಮಾತ್ರ ಅವಕಾಶವಿದೆ. ಸಾರ್ವಜನಿಕರು ಭಾಗವಹಿಸಲು ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಕೃಷ್ಣಾ ಆರತಿ ಏರ್ಪಡಿಸಿದರೆ ಕೃಷ್ಣಾ ನದಿಗೆ ಈ ಭಾಗದ ರೈತರು ಕೃತಜ್ಞತೆ ಅರ್ಪಿಸಲು ಸಹಕಾರಿ ಆಗುತ್ತೇ ಎನ್ನುವುದು ಬೇಡಿಕೆ. ಜೊತೆಗೆ ಪ್ರವಾಸಿಗರನ್ನ ಆಲಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬಹುದು ಎಂಬ ಬೇಡಿಕೆ ಹೆಚ್ಚಾಗಿದೆ.

ಇದನ್ನೂ ಓದಿ:ಗಂಗಾರತಿ‌ ಮಾದರಿಯಲ್ಲಿ ಕೆಆರ್​ಎಸ್ ಜಲಾಶಯದಲ್ಲಿ ಕಾವೇರಿ ಆರತಿ: ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ

ಆಲಮಟ್ಟಿ ಜಲಾಶಯ ವೀಕ್ಷಣೆಗೆ ಪ್ರತಿ ದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕೃಷ್ಣಾ ಆರತಿ ನೆಪದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದರೆ ರಾಜ್ಯ, ನೆರೆ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ. ಜಿಲ್ಲೆಯಲ್ಲಿ ವಿಶ್ವ ಪ್ರಸಿದ್ಧ ಸ್ಮಾರಕಗಳು, ಪ್ರವಾಸಿ ತಾಣಗಳು ಇದ್ದರೂ ಸದ್ಯ ಯಾವುದೇ ದೊಡ್ಡ ಮಟ್ಟದ ಉತ್ಸವಗಳು ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೃಷ್ಣಾ ಆರತಿ ಏರ್ಪಡಿಸಿದರೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಆಲಮಟ್ಟಿ ಜಲಾಶಯದ ಬಳಿ ಯಲಗೂರು ಆಂಜನೇಯ ದೇವಸ್ಥಾನ, ಚಂದ್ರಮ್ಮ ದೇವಸ್ಥಾನ, ಕೂಡಲಸಂಗಮ, ಚಿಕ್ಕ ಸಂಗಮದ ಬಳಿ ಕೃಷ್ಣಾ ಆರತಿ ಮಾಡಲು ಅವಕಾಶ ಇದೆ. ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಗಮನ ಸೆಳೆದಾಗ ಕಾವೆರಿ ಆರತಿ ಮಾದರಿಯಲ್ಲಿ ಕೃಷ್ಣಾ ಆರತಿ ಮಾಡಲು ಜನ ಸಂಪನ್ಮೂಲ‌ ಸಚಿವರ ಜೊತೆ ಮಾತನಾಡಿ ಕೃಷ್ಣಾ ಆರತಿ ಕಾರ್ಯಕ್ರಮ ಮಾಡಲು ಸಕಲ ಪ್ರಯತ್ನ ಮಾಡುತ್ತೇವೆಂದು ಹೇಳಿದ್ದಾರೆ.

ಸದ್ಯ ಕಾವೇರಿ ಆರತಿ ಮಾಡುವ ಮಾದರಿಯಲ್ಲೇ ಕೃಷ್ಣಾ ಆರತಿ ಕಾರ್ಯಕ್ರಮವನ್ನೂ ಆಯೋಜಿಸಬೇಕೆಂದು ವಿಜಯಪುರ ಜಿಲ್ಲೆಯಷ್ಟೇ ಅಲ್ಲ, ನೆರೆಯ ಬಾಗಲಕೋಟೆ, ಕೊಪ್ಪಳ, ಯಾದಗಿರಿ, ಕಲಬುರಗಿ ಜಿಲ್ಲೆಗಳ ಜನರು ಸಹ ಒತ್ತಾಯ ಮಾಡಿದ್ದಾರೆ. ಈ ದಿಸೆಯಲ್ಲಿ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ ಹಾಗೂ ಸರ್ಕಾರ ಕಾವೇರಿ ಆರತಿ ಮಾದರಿಯಲ್ಲೇ ಕೃಷ್ಣಾ ಆರತಿ ಮಾಡುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದರೆ ಈ ಭಾಗದ ಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಜನರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ