ವಿಜಯಪುರ: ದೇವರ ಸೇವೆಗೆಂದು ದೇವಸ್ಥಾನದಲ್ಲಿಯೇ ಉಳಿದುಕೊಂಡಿದ್ದವನ ಬರ್ಬರ ಹತ್ಯೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 25, 2023 | 7:15 PM

ದೇವರ ಸೇವೆ ಮಾಡುತ್ತೇನೆ ಎಂದು ಪತ್ನಿ, ಮಕ್ಕಳನ್ನ ಬಿಟ್ಟು ದೇವಸ್ಥಾನವನ್ನ ಸೇರಿದ್ದ ಪರಸಪ್ಪ ಇದೀಗ ಭೀಕರವಾಗಿ ಹೆಣವಾಗಿದ್ದಾನೆ.

ವಿಜಯಪುರ: ದೇವರ ಸೇವೆಗೆಂದು ದೇವಸ್ಥಾನದಲ್ಲಿಯೇ ಉಳಿದುಕೊಂಡಿದ್ದವನ ಬರ್ಬರ ಹತ್ಯೆ
ಮೃತ ಪರಸಪ್ಪ
Follow us on

ವಿಜಯಪುರ: ತಾಲೂಕಿನ ಅರಕೇರಿ ಅಮೋಘ ಸಿದ್ದೇಶ್ವರ ದೇವಸ್ಥಾನ ಅಪಾರ ಭಕ್ತರನ್ನು ಹೊಂದಿದ ತಾಣ. ಇದೇ ದೇವಸ್ಥಾನದಲ್ಲಿ ಮನೆ ಸಂಸಾರ ಬಿಟ್ಟು ಸೇವೆಗೆ ಇದ್ದ 55 ವರ್ಷದ ಪರಸಪ್ಪ ಗುಂಡಕರಜಗಿ ಎಂಬಾತ ದೇವಸ್ಥಾನದ ಬಳಿಯ ಭೂತಾಳಸಿದ್ದ ದೇವರ ಮೂರ್ತಿಯ ಬಳಿ ಇಂದು(ಜ.24) ಹೆಣವಾಗಿ ಬಿದ್ದಿದ್ದಾನೆ. ಭೂತಾಳ ಸಿದ್ದ ದೇವರ ಬಳಿ ಪೂಜೆ ಇಟ್ಟಿದ್ದ ದಾಂಡಿನಿಂದ ಪರಸಪ್ಪನ ತಲೆಗೆ ಭೀಕರವಾಗಿ ಹೊಡೆದ ಕಾರಣ ಪರಸಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಪರಸಪ್ಪ ತನ್ನ ಮನೆ ಬಿಟ್ಟು ದೇವರ ಸೇವೆ ಮಾಡುತ್ತೇನೆಂದು ಅಮೋಘ ಸಿದ್ದೇಶ್ವರ ದೇವಸ್ಥಾನದಲ್ಲೇ ಉಳಿದಿದ್ದ.

ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಾಮನಕೇರಿ ಗ್ರಾಮದ ನಿವಾಸಿಯಾದ ಪರಸಪ್ಪ, ನಾನು ದೇವರ ಸೇವೆ ಮಾಡುತ್ತೇನೆಂದು ಪತ್ನಿ ಮಕ್ಕಳನ್ನ ಬಿಟ್ಟು ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ದೇವಸ್ಥಾನಕ್ಕೆ ಬಂದಿದ್ದನಂತೆ. ಅರಕೇರಿಯ ಅಮೋಘ ಸಿದ್ದೇಶ್ವರ ದೇವಸ್ಥಾನದಲ್ಲೇ ವಾಸವಿದ್ದ ಪರಸಪ್ಪ, ನಿತ್ಯ ದೇವಸ್ಥಾನದ ಕೆಲಸ ಕಾರ್ಯಗಳನ್ನು ಮಾಡುತ್ತಾ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗಿರುತ್ತಿದ್ದ. ಇಂದು ನಸುಕಿನ ಜಾವ ಎದ್ದು ದೇವಸ್ಥಾನದಲ್ಲಿ ಕೆಲಸ ಮಾಡಿದ್ದು, ಬಳಿಕ ಪೂಜೆಯಲ್ಲಿ ಭಾಗಿಯಾಗಿದ್ದಾನೆ. ದೇವಸ್ಥಾನದ ಅನತಿ ದೂರದಲ್ಲಿರುವ ಭೂತಾಳ ದೇವರ ಪೂಜೆಗೆ ಪರಸಪ್ಪ ಹೋಗಿದ್ದಾನೆ. ಭೂತಾಳ ದೇವರ ಪೂಜೆಗೆ ಹೋದವ ಅಲ್ಲೇ ಭೂತಾಳ ದೇವರ ಮೂರ್ತಿ ಎದುರಲ್ಲೇ ಭೀಕರವಾಗಿ ಕೊಲೆಯಾಗಿದ್ದಾನೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಇನ್ಸಪೆಕ್ಟರ್ ಸಂಗಮೇಶ ಪಾಲಭಾವಿ ಹಾಗೂ ಇತರೆ ಸಿಬ್ಬಂದಿಗಳು ತೆರಳಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿ ಪರಸಪ್ಪನ ಕೊಲೆಯಾಗಿದ್ದರ ಕುರಿತು ಕೆಲ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಶವನನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಪರಸಪ್ಪನ ಶವವನ್ನು ಆತನ ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಪರಸಪ್ಪನ ಕೊಲೆ ಯಾವ ಉದ್ದೇಶಕ್ಕೆ ಆಗಿದೆ ಹಾಗೂ ಯಾರು ಮಾಡಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ.

ಇದನ್ನೂ ಓದಿ:ವಿರುದ್ಧವಾಗಿ ಬಂದ ತೀರ್ಪು: ರೊಚ್ಚಿಗೆದ್ದು 40ಕ್ಕೂ ಹೆಚ್ಚು ಬಾರಿ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಪಾಪಿ

ಇದೀಗ ಭೂತಾಳ ದೇವರ ಪೂಜೆಗೆ ಹೋದವನನ್ನು ಬರ್ಭರವಾಗಿ ಹತ್ಯೆ ಮಾಡಿದ್ದರ ಕುರಿತು ಅನೇಕ ಸಂಶಯಗಳು ಸಹ ಹುಟ್ಟಿವೆ. ದೇವರ ಸೇವೆಗೆ ಬಂದವ ದೇವರ ಎದುರಲ್ಲೇ ಕೊಲೆಯಾಗಿದ್ದಾದರೂ ಯಾಕೆ ಎಂಬ ಪ್ರಶ್ನೆಗಳು ಹುಟ್ಟಿದ್ದು, ಪೊಲೀಸರ ತನಿಖೆಯಿಂದಲೇ ಕೊಲೆಯ ರಹಸ್ಯ ಬಹಿರಂಗವಾಗಬೇಕಿದೆ.

ವರದಿ: ಅಶೋಕ ಯಡಳ್ಳಿ ಟಿವಿ9 ವಿಜಯಪುರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ