ನಿಮ್ಮ ಫೋನ್ನಲ್ಲಿ ಬರುವ ಕೊರೊನಾ ಜಾಗೃತಿಗೆ ಧ್ವನಿ ಕೊಟ್ಟವರು ಇವರೇ..
ಮಂಗಳೂರು: ಕೊರೊನಾದ ಆರಂಭ ದಿನಗಳಿಂದಲೂ ಫೋನ್ ಮೂಲಕ ಜಾಗೃತಿಯ ಧ್ವನಿ ಸಂದೇಶ ಬಿತ್ತರವಾಗುತ್ತಿದೆ. ಇದು ಕೆಲವರಿಗೆ ಕಿರಿಕಿರಿ ನೀಡಿದರೂ ಕೋಟ್ಯಂತರ ಜನರ ಹಿತದೃಷ್ಟಿಯಿಂದ ಇದು ಜನಮನ ಗೆದ್ದಿದೆ. ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಈ ಸಂದೇಶಕ್ಕೆ ಧ್ವನಿ ನೀಡಿದವರು ದಕ್ಷಿಣ ಕನ್ನಡ ಜಿಲ್ಲೆಯವರು ಎಂಬ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಮೂವರೂ ದಕ್ಷಿಣ ಕನ್ನಡ ಜಿಲ್ಲೆಯವರು: ಜಗತ್ತಿನಲ್ಲಿ ಕೊರೊನಾ ಆರಂಭವಾದ ಕ್ಷಣದಿಂದ ಮೊಬೈಲ್ ಮೂಲಕ ಧ್ವನಿ ಸಂದೇಶಗಳು ಮೊಳಗಿ ಜಾಗೃತಿಯ ಸಂದೇಶ ಕೇಳಿಸತೊಡಗುತ್ತಿದೆ. ಎಲ್ಲಿಗೆ ಕರೆ ಮಾಡಿದರೂ ಕನೆಕ್ಟ್ ಆದ […]
ಮಂಗಳೂರು: ಕೊರೊನಾದ ಆರಂಭ ದಿನಗಳಿಂದಲೂ ಫೋನ್ ಮೂಲಕ ಜಾಗೃತಿಯ ಧ್ವನಿ ಸಂದೇಶ ಬಿತ್ತರವಾಗುತ್ತಿದೆ. ಇದು ಕೆಲವರಿಗೆ ಕಿರಿಕಿರಿ ನೀಡಿದರೂ ಕೋಟ್ಯಂತರ ಜನರ ಹಿತದೃಷ್ಟಿಯಿಂದ ಇದು ಜನಮನ ಗೆದ್ದಿದೆ. ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಈ ಸಂದೇಶಕ್ಕೆ ಧ್ವನಿ ನೀಡಿದವರು ದಕ್ಷಿಣ ಕನ್ನಡ ಜಿಲ್ಲೆಯವರು ಎಂಬ ವಿಚಾರ ಬಹುತೇಕರಿಗೆ ಗೊತ್ತಿಲ್ಲ.
ಮೂವರೂ ದಕ್ಷಿಣ ಕನ್ನಡ ಜಿಲ್ಲೆಯವರು: ಜಗತ್ತಿನಲ್ಲಿ ಕೊರೊನಾ ಆರಂಭವಾದ ಕ್ಷಣದಿಂದ ಮೊಬೈಲ್ ಮೂಲಕ ಧ್ವನಿ ಸಂದೇಶಗಳು ಮೊಳಗಿ ಜಾಗೃತಿಯ ಸಂದೇಶ ಕೇಳಿಸತೊಡಗುತ್ತಿದೆ. ಎಲ್ಲಿಗೆ ಕರೆ ಮಾಡಿದರೂ ಕನೆಕ್ಟ್ ಆದ ಕೂಡಲೇ ಆಯಾ ರಾಜ್ಯದ ಭಾಷೆಗಳಲ್ಲಿ ಕೊರೊನಾ ಜಾಗೃತಿ ಕುರಿತಾದ ಈ ಧ್ವನಿ ಸಂದೇಶ ಕೇಳತೊಡಗುತ್ತಿದೆ. ಹಾಗಾದರೆ ಈ ಧ್ವನಿ ಯಾರದ್ದು ಎಂಬ ಕುತೂಹಲ ಎಲ್ಲರಿಗೂ ಇರಬಹುದು. ಇವರು ಮೂವರು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನವರು.
ಮೊದಲ ಹಂತದ ಧ್ವನಿ: ಕನ್ನಡದಲ್ಲಿ ಮೂರು ಹಂತಗಳಲ್ಲಿ ಈ ಧ್ವನಿ ಸಂದೇಶ ಬಂದಿದೆ. ಈ ಪೈಕಿ ಮೊದಲ ಹಂತದ ಧ್ವನಿ ಮಂಗಳೂರು ಮೂಲದ ಡಾರೆಲ್ ಜೆಸಿಂತಾ ಫೆರ್ನಾಂಡಿಸ್ ಅವರದು. ಪಡೀಲ್‌ನಲ್ಲಿರುವ ದಿ.ವಲೇರಿಯನ್ ಫೆರ್ನಾಂಡಿಸ್ ಹಾಗೂ ಲವೀನಾ ಫೆರ್ನಾಂಡಿಸ್ ಅವರ ಪುತ್ರಿಯಾಗಿರುವ ಡಾರೆಲ್ ಜೆಸಿಂತಾರವರು ತನ್ನ ಎಂ.ಪಿ.ಎಡ್ ಪದವಿಯ ಬಳಿಕ ಸ್ವಲ್ಪ ಕಾಲ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕಿಯಾಗಿದ್ದರು.
2 & 3ನೇ ಹಂತದ ಧ್ವನಿ: ಕನ್ನಡ ಭಾಷೆಯ ಎರಡು ಮತ್ತು ಮೂರನೆಯ ಹಂತದಲ್ಲಿ ಜಾಗೃತಿ ಸಂದೇಶಕ್ಕೆ ಧ್ವನಿ ನೀಡಿದವರು ವಿಟ್ಲದ ಮುಳಿಯದವರಾದ ವಿದ್ಯಾ ನಾರಾಯಣ ಭಟ್. ಮುಳಿಯದ ಗೋಪಾಲಕೃಷ್ಣ ಭಟ್, ವಾಣಿ ಭಟ್ ದಂಪತಿಯ ಪುತ್ರಿಯಾಗಿರುವ ವಿದ್ಯಾ ಅವರು ಮುಚ್ಚೂರುಪದವು, ಅಳಿಕೆ, ಮೂಡಬಿದಿರೆಗಳಲ್ಲಿ ಶಿಕ್ಷಣ ಪೂರೈಸಿದ ಬಳಿಕ ಕಾಸರಗೋಡಿನ ಸಿ.ಪಿ.ಸಿ.ಆರ್.ಐ ಯಲ್ಲಿ ಸೈಂಟಿಸ್ಟ್ ಆಗಿದ್ದರು. ಪುತ್ತೂರು ಮೂಲದ ಡಾ| ನಾರಾಯಣ ಭಟ್ ಅವರೊಂದಿಗೆ ವಿವಾಹವಾಯಿತು. ಪತಿಯ ಉದ್ಯೋಗ ನಿಮಿತ್ತ ಶಿಲ್ಲಾಂಗ್, ಸಿಕ್ಕಿಂ, ಸೂರತ್ ಮೊದಲಾದ ಸ್ಥಳಗಳಲ್ಲಿ ನೆಲೆಸಿ 2009ರಲ್ಲಿ ದೆಹಲಿಗೆ ಬಂದರು.
ಮಲಯಾಳಂನಲ್ಲೂ ಧ್ವನಿ ಕೊಟ್ಟವರು ಕನ್ನಡಿಗರು: ಇದರ ಜೊತೆಗೆ ಕೇರಳದಲ್ಲಿ ಆ ರಾಜ್ಯ ಭಾಷೆಯಾಗಿರುವ ಮಲಯಾಳಂನಲ್ಲಿ ಕೊರೊನಾ ಜಾಗೃತಿ ಧ್ವನಿ ಸಂದೇಶ ಬಿತ್ತರಿಸಲ್ಪಡುತ್ತಿದೆ. ನಾವು ಕರೆ ಮಾಡಿದಾಗ ಕೇಳಿಸುವ ಈ ಧ್ವನಿಯ ಒಡತಿ ಮಾತ್ರ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜದ ಹೆಣ್ಣು ಮಗಳು ಟಿಂಟುಮೋಳ್ ಎಂಬ ಪ್ರತಿಭಾನ್ವಿತ ಯುವತಿಯದ್ದು.
ಸುಳ್ಯ ತಾಲೂಕಿನ ಮರ್ಕಂಜದ ಟಿ.ವಿ. ಜೋಸೆಫ್ ಮತ್ತು ಆಲಿಸ್ ಜೋಸೆಫ್ ದಂಪತಿಯ ಪುತ್ರಿ ಟಿಂಟುಮೋಳ್ ಅವರು ಮೂಲತ ಕೇರಳದವರು. ಕೇರಳ ಮೂಲದ ಈ ಕುಟುಂಬ ಸುಮಾರು 24 ವರ್ಷಗಳಿಂದ ಸುಳ್ಯ ತಾಲೂಕಿನಲ್ಲಿ ನೆಲೆಸಿದೆ.
ಕೊಟ್ಟಾಯಂ ಜಿಲ್ಲೆಯ ಪಾಲ ನಿವಾಸಿ ಟಿ.ವಿ ಜೋಸೆಫ್ 24 ವರ್ಷಗಳ ಹಿಂದೆ ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾಗಿ ಸುಳ್ಯದ ಗುತ್ತಿಗಾರಿಗೆ ಬಂದಿದ್ದರು. ನಂತರದಲ್ಲಿ ಅವರ ಕುಟುಬವು ಇಲ್ಲಿಗೆ ಬಂದು ವಾಸ ಆರಂಭಿಸಿದರು. ಕೆಲವು ವರ್ಷ ಗುತ್ತಿಗಾರಿನಲ್ಲಿದ್ದ ಇವರು ಆಮೇಲೆ ಒಂದಷ್ಟು ವರ್ಷ ಮಂಗಳೂರಿನ ಬಿ.ಸಿ.ರೋಡ್ನಲ್ಲಿ ಇದ್ದರು. ಬಳಿಕ ಸುಳ್ಯದ ಮರ್ಕಂಜಕ್ಕೆ ಬಂದಿದ್ದು, ಕಳೆದ 12 ವರ್ಷಗಳಿಂದ ಇಲ್ಲಿ ರಬ್ಬರ್ ಎಸ್ಟೇಟ್ ಒಂದರಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಾ ಪತ್ನಿಯೊಂದಿಗೆ ವಾಸ್ತವ್ಯ ಹೂಡಿದ್ದಾರೆ.
ಕರ್ನಾಟಕದ ಹೆಣ್ಣು ಮಕ್ಕಳು ಮೂವರು ತಮ್ಮ ಧ್ವನಿಯ ಕಾರಣದಿಂದ ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿರುವುದು ಕರ್ನಾಟಕದ ಜನತೆಗೆ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಅಭಿಮಾನವಾಗಿದೆ.
Published On - 5:07 pm, Wed, 20 May 20