ಮತಗಳ್ಳತನ: ಅಷ್ಟೆಲ್ಲಾ ಆರೋಪ ಮಾಡಿ ಚುನಾವಣೆ ಆಯೋಗಕ್ಕೆ ದೂರು ನೀಡದೇ ಹೋದ ರಾಹುಲ್ ಗಾಂಧಿ

ಕಳ್ಳತನ, ಮಹಾಕಳ್ಳತನ, ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಮತಗಳ್ಳತನವಾಗಿ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಈ ಮತಗಳ್ಳತನ ವಿರುದ್ಧ ಸಮರ ಸಾರಿರುವ ರಾಹುಲ್, ಚುನಾವಣೆ ಆಯೋಗ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಾಖಲೆ ಬಹಿರಂಗ ಪಡಿಸಿರುವ ರಾಹುಲ್ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆಯ ಕಹಳೆ ಮೊಳಗಿಸಿದ್ದಾರೆ. ಆದ್ರೆ, ಚುನಾವಣಾ ಆಯೋಗಕ್ಕೆ ದೂರು ನೀಡದೇ ಬಂದ ದಾರಿಗೆ ಸುಂಕವಿಲ್ಲದಂತೆ ದೆಹಲಿಗೆ ಹಾರಿದ್ದಾರೆ.

ಮತಗಳ್ಳತನ: ಅಷ್ಟೆಲ್ಲಾ ಆರೋಪ ಮಾಡಿ ಚುನಾವಣೆ ಆಯೋಗಕ್ಕೆ ದೂರು ನೀಡದೇ ಹೋದ ರಾಹುಲ್ ಗಾಂಧಿ
Rahul Gandhi

Updated on: Aug 08, 2025 | 5:41 PM

ಬೆಂಗಳೂರು, (ಆಗಸ್ಟ್ 08): ಲೋಕಸಭೆ ಚುನಾವಣೆಯಲ್ಲಿ (Loksabha Election) ಮತಗಳ್ಳತನವಾಗಿದೆ ಎಂದು ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದು, ನಿನ್ನೆ(ಆಗಸ್ಟ್ 07) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಂಕಿಸಂಖ್ಯೆ ಸಮೇತ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಇಷ್ಟಕ್ಕೆ ಸುಮ್ಮನಿರ ರಾಹುಲ್, ಇಂದು (ಆಗಸ್ಟ್ 08) ಬೆಂಗಳೂರಿಗೆ ಬಂದು ಚುನಾವಣೆ ಆಯೋಗ (Election commission ) ಹಾಗೂ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಆದ್ರೆ, ಮತಗಳ್ಳತನ ವಿರುದ್ಧ ಕರ್ನಾಟಕ ಚುನಾವಣೆ ಆಯೋಗಕ್ಕೆ ದೂರು ನೀಡದೇ ರಾಹುಲ್ ಗಾಂಧಿ ಹಾಗೇ ದೆಹಲಿಗೆ ಹಾರಿದ್ದಾರೆ. ಬರೀ ಬಾಯಲ್ಲೇ ಆರೋಪ ಮಾಡಿ ದೂರು ನೀಡದೇ ಹೋಗಿದ್ಯಾಕೆ ಎನ್ನುವ ಚರ್ಚೆಗಳು ಶುರುವಾಗಿವೆ.

ದೆಹಲಿಯಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮತಗಳ್ಳತನದ ಬಗ್ಗೆ ಆಟಂ ಬಾಂಬ್​ ಹಾಕಿರುವ ರಾಹುಲ್​ ಗಾಂಧಿ ಇಂದು ಬೆಂಗಳೂರಿನಲ್ಲಿ ಅಬ್ಬರಿಸಿದರು. ಫ್ರೀಡಂ ಪಾರ್ಕ್​​​ ನಲ್ಲಿ ಆಯೋಜಿಸಲಾಗಿದ್ದ ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟದಲ್ಲಿ ರಾಹುಲ್​ ಗಾಂಧಿ, ಕೇಂದ್ರದ ಚುನಾವಣಾ ಆಯೋಗದ ವಿರುದ್ಧ ಗುಡುಗಿದರು.. ಮಹದೇವಪುರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಮತ್ತೊಮ್ಮೆ ಸಂವಿಧಾನ ಪುಸ್ತಕ ಹಿಡಿದು ವಾಗ್ದಾಳಿ ನಡೆಸಿದರು. ಮಹದೇವಪುರ ಕ್ಷೇತ್ರದಲ್ಲಿ 5 ವಿಧಗಳಲ್ಲಿ ಮತ ಕಳ್ಳತನವಾಗಿದೆ ಪುನರುಚ್ಛರಿಸಿರು. ಇಷ್ಟೆಲ್ಲಾ ಗಂಭೀರ ಆರೋಪ ಮಾಡಿರುವ ರಾಹುಲ್ ಗಾಂಧಿ, ಪ್ರತಿಭಟನಾ ಸಮಾವೇಶ ಮುಗಿಯುತ್ತಿದ್ದಂತೆಯೇ ಕರ್ನಾಟಕ ಚುನಾವಣಾ ಆಯೋಗಕ್ಕೆ ದೂರು ನೀಡಲು ಹೋಗಲಿಲ್ಲ. ಬದಲಿಗೆ ಖಾಸಗಿ ಹೋಟೆಲ್​​ ಗೆ ತೆರಳಿ ಅಲ್ಲಿಂದ ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿ ಭೋಜನ ಸವಿದು ದೆಹಲಿಗೆ ಹಾರಿದ್ದಾರೆ.

ಇದನ್ನೂ ಓದಿ:  ಮತಗಟ್ಟೆಗಳ ದೃಶ್ಯಾವಳಿ ನೀಡಿದ್ರೆ ಮತಗಳ್ಳತನ ಸಾಬೀತು ಮಾಡುವೆ: ಚುನಾವಣೆ ಆಯೋಗಕ್ಕೆ ರಾಹುಲ್ ಸವಾಲ್

ಇದನ್ನೂ ಓದಿ
4 ಕಡೆ ಒಂದೇ ಮತದಾರರ ಹೆಸರು ಬಂದಿದ್ದು ಹೇಗೆ? ರಾಹುಲ್ ಗಾಂಧಿಯ ಆರೋಪ ಸುಳ್ಳಾ?
ಬಿಹಾರ್​ನಲ್ಲಿ ಸೋಲು ಖಚಿತ ಅನ್ನೋದು ರಾಹುಲ್​ಗೆ ಮನವರಿಕೆಯಾಗಿದೆ: ಮೋಹನ್
ಮತಗಳ್ಳತನ ಸಂಖ್ಯೆ ಬಿಡುಗಡೆ ಮಾಡಿದ ರಾಹುಲ್​ಗೆ ಚುನಾವಣಾ ಆಯೋಗ ತಿರುಗೇಟು!
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ನಕಲಿ ಮತದಾನ; ರಾಹುಲ್ ಗಾಂಧಿ

ಫ್ರೀಡಂಪಾರ್ಕ್​ ನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಈ ಕಾರ್ಯಕ್ರಮ ಮುಗಿದ ಬಳಿಕ ಚುನಾವಣಾ ಆಯೋಗ ಕಚೇರಿಗೆ ತೆರಳಿ ದೂರು ನೀಡುತ್ತೇವೆ ಎಂದಿದ್ದರು. ಆದ್ರೆ ಯಾವುದೇ ದೂರು ನೀಡದೆ ರಾಹುಲ್ ಗಾಂಧಿ ತಾಜ್​ ವೆಸ್ಟೆಂಡ್​ ಹೋಟೆಲ್​​ ತೆರಳಿದ್ದರು. ಬಳಿಕ ಅಲ್ಲಿಂದ ಖರ್ಗೆ ನಿವಾಸಕ್ಕೆ ತೆರಳಿ ಅಲ್ಲಿಂದ HLA ಏರ್​ಪೋರ್ಟ್​ ನಿಂದ ದೆಹಲಿಗೆ ಹಾರಿದ್ದಾರೆ. ಆದ್ರೆ, ಇತ್ತ ಚುನಾವಣಾ ಆಯೋಗಕ್ಕೆ ಯಾವುದೇ ದೂರು ನೀಡಿಲ್ಲ. ಬರೀ ಮಾತಲ್ಲೇ ಮನೆ ಕಟ್ಟಿದ್ರಾ? ಅಂಕಿ-ಸಂಖ್ಯೆ ಸಮೇತ ದಾಖಲೆ ಬಿಡುಗಡೆ ಮಾಡಿದ್ದ ರಾಹುಲ್ ಗಾಂಧಿ ಏಕೆ ಚುನಾವಣಾ ಆಯೋಗಕ್ಕೆ ದೂರು ನೀಡಿಲ್ಲ ಎನ್ನುವ ಚರ್ಚೆಗಳು ಶುರುವಾಗಿವೆ.

ರಾಹುಲ್ ಏಕೆ ಆಯೋಗಕ್ಕೆ ದೂರು ನೀಡಿಲ್ಲ

ಇನ್ನು ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿರುವ ಚುನಾವಣೆ ಆಯೋಗ, ಮತಗಳ್ಳತನ ಆರೋಪಕ್ಕೆ ಸಾಕ್ಷ್ಯ ನೀಡಿ ತನಿಖೆ ಮಾಡುತ್ತೇವೆ ಎಂದಿದೆ. ಡಿಕ್ಲರೇಷನ್​ ಗೆ ಸಹಿ ಹಾಕುವಂತೆ ರಾಹುಲ್ ಗಾಂಧಿಗೆ ತಾಕೀತು ಮಾಡಿದೆ. ಇಲ್ಲದಿದ್ರೆ ಕ್ಷಮೆ ಕೇಳಿ ಎಂದು ಆಯೋಗ ಹೇಳಿದೆ. ಇನ್ನು ಡಿಕ್ಲರೇಷನ್​ ಗೆ ಸಹಿ ಹಾಕಿದರೆ ಮುಂದೆ ಕಾನೂನಾತ್ಮಕ ಸಮಸ್ಯೆ ಸಾಧ್ಯತೆ ಇದೆ.  ಕಾನೂನಿಗೆ ಹೆದರಿ ದೂರು ನೀಡಲು ರಾಹುಲ್‌ ಗಾಂಧಿ ಹಿಂದೇಟು ಹಾಕಿದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಡಿಕ್ಲೆರೇಷನ್​ ಗೆ ಸಹಿ ಹಾಕಿದ್ರೆ ಏನಾಗುತ್ತೆ?

ಇನ್ನು ನಿನ್ನೆಯೇ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ರಾಜ್ಯ ಚುನಾವಣಾ ಮುಖ್ಯ ಆಯುಕ್ತ ಅನ್ಬುಕುಮಾರ್, ಡಿಕ್ಲೆರೇಷನ್ಗೆ ಸಹಿ ಹಾಕಿ ದಾಖಲೆಗಳನ್ನ ನೀಡುವಂತೆ ಸೂಚಿಸಿದ್ದರು. ಆದ್ರೆ ಡಿಕ್ಲೆರೇಷನ್ಗೆ ಸಹಿ ಹಾಕಿದರೆ ಮುಂದೆ ಕಾನೂನಾತ್ಮಕ ಸಮಸ್ಯೆಯಾಗಲಿದೆ. ಅದೇನು ಎಂದು ನೋಡುವುದಾದರೆ, ಘೋಷಣಾ ಪತ್ರದಲ್ಲಿ ಕಾನೂನು ಅಂಶಗಳ ಬಗ್ಗೆ ಉಲ್ಲೇಖಿಸಲಾಗಿದೆ. ಚುನಾವಣಾ ಪಟ್ಟಿ ತಿದ್ದುಪಡಿ, ಸಿದ್ದತೆ ಅಥವಾ ಶುದ್ಧೀಕರಣ ಸಂಬಂಧ ನೀಡುವ ತಪ್ಪು ಘೋಷಣೆ ಶಿಕ್ಷಾರ್ಹವಾಗಿದೆ. 1950ರ ಪ್ರಜಾಪ್ರಭುತ್ವ ಪ್ರತಿನಿಧಿ ಕಾಯ್ದೆ ಕಲಂ 31ರಂತೆ ಗರಿಷ್ಠ ಒಂದು ವರ್ಷದವರೆಗೆ ಜೈಲುಶಿಕ್ಷೆ ವಿಧಿಸಬಹುದು. ದಂಡ ಅಥವಾ ಎರಡೂ ವಿಧಿಸಬಹುದು ಎಂದು ಅರಿತಿದ್ದೇನೆ ಎಂದು ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು.

ನ್ಯಾಯಾಲಯ ಅಥವಾ ಅಧಿಕೃತ ದಾಖಲೆಗಳಲ್ಲಿ ಸುಳ್ಳು ಸಾಕ್ಷ್ಯ ಅಥವಾ ಪ್ರಮಾಣಪತ್ರ ನೀಡುವುದು 2023ರ ಕಲಂ 227ರಂತೆ ಶಿಕ್ಷಾರ್ಹವಾಗಿದೆ. ಇದಕ್ಕೆ ಹೆಚ್ಚು ಕಠಿಣ ಶಿಕ್ಷೆಗಳು ವಿಧಿಸಲಾಗುತ್ತವೆ. ವಿಶೇಷವಾಗಿ ನ್ಯಾಯಾಂಗ ಅಥವಾ ಅಧಿಕೃತ ಪ್ರಕರಣಗಳಲ್ಲಿ ಸುಳ್ಳು ಹೇಳಿಕೆ ಅಥವಾ ವಂಚನೆ ಮಾಡಿದರೆ ಎಂಬ ಮಾಹಿತಿ ಕೂಡ ಇದೆ. ಹೀಗೆಂದು ಡಿಕ್ಲೆರೇಷನ್​ ನಲ್ಲಿ ಸಹಿ ಮಾಡಲು ಆಯೋಗ ಸೂಚನೆ ನೀಡಿದೆ.

ಇಷ್ಟೆಲ್ಲಾ ಕಾನೂನು ಸಮಸ್ಯೆ ಇರುವ ಕಾರಣ ಮತಗಳ್ಳತನ ಆರೋಪ ಮಾಡಿರುವ ರಾಹುಲ್ ಗಾಂಧಿ ದೂರು ಸಲ್ಲಿಕೆ ವೇಳೆ ಘೋಷಣಾ ಪತ್ರಕ್ಕೆ ಸಹಿ ಹಾಕ್ತಾರಾ? ಇಲ್ಲವಾ ಎನ್ನುವುದು ಕುತೂಹಲ ಮೂಡಿಸಿದೆ.