ಕರ್ನಾಟಕ ಸರ್ಕಾರದ 30 ಎಕರೆ ಭೂಮಿ ಆಂಧ್ರ ಮೂಲದ ಪ್ರಭಾವಿಗಳಿಂದ ಒತ್ತುವರಿ

| Updated By: ವಿವೇಕ ಬಿರಾದಾರ

Updated on: Oct 22, 2024 | 10:12 AM

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೋನಾಳ್ ಗ್ರಾಮದಲ್ಲಿ ಫಲವತ್ತಾದ ಎಕರೆಗಟ್ಟಲೆ ಸರ್ಕಾರಿ ಭೂಮಿ ಇದೆ. ಸರ್ಕಾರ ಮನಸ್ಸು ಮಾಡಿದ್ದರೇ ಆ ಜಾಗದಲ್ಲಿ ಶಾಲೆ, ಅಂಗನವಾಡಿ ಸೇರಿದಂತೆ ಸರ್ಕಾರಿ ಕಟ್ಟಡಗಳನ್ನು ಕಟ್ಟಬಹುದಿತ್ತು. ಆದರೆ ಈಗ ಸರ್ಕಾರಿ ಭೂಮಿಯನ್ನ ಆಂಧ್ರ ಮೂಲದ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಗ್ರಾಮಕ್ಕೆ ಶಾಲೆ ಮಂಜೂರಾದರೂ ಕಟ್ಟಲು ಜಾಗ ಇಲ್ಲದಂತಾಗಿದೆ.

ಕರ್ನಾಟಕ ಸರ್ಕಾರದ 30 ಎಕರೆ ಭೂಮಿ ಆಂಧ್ರ ಮೂಲದ ಪ್ರಭಾವಿಗಳಿಂದ ಒತ್ತುವರಿ
ಒತ್ತುವರೆ ತೆರವುಗೊಳಿಸುವಂತೆ ಗ್ರಾಮಸ್ಥರ ಪ್ರತಿಭಟನೆ
Follow us on

ಯಾದಗಿರಿ, ಅಕ್ಟೋಬರ್​ 22: ಸುರಪುರ (Surapur) ತಾಲೂಕಿನ ಬೋನಾಳ್ ಗ್ರಾಮದ ಸರ್ಕಾರಿ ಭೂಮಿಯನ್ನು ಆಂಧ್ರಪ್ರದೇಶ (Andhra Pradesh) ರಾಜ್ಯದ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡರೂ, ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬೋನಾಳ್ ಗ್ರಾಮ ನೀರಾವರಿ ಪ್ರದೇಶ. ಗ್ರಾಮದಲ್ಲಿರುವ ಪ್ರತಿಯೊಬ್ಬ ರೈತರು ವರ್ಷಕ್ಕೆ ಎರಡು ಬಾರಿ ಭತ್ತವನ್ನು ಬೆಳೆದು ಸಮೃದ್ಧರಾಗಿದ್ದಾರೆ. ಇಲ್ಲಿನ ಭೂಮಿಗೆ ಸಾಕಷ್ಟು ಬೇಡಿಕೆಯಿದೆ ಹೀಗಾಗಿಯೇ ಈ ಗ್ರಾಮಕ್ಕೆ ಆಂಧ್ರ ಮೂಲದ ಜನ ಎಂಟ್ರಿ ಕೊಟ್ಟಿದ್ದಾರೆ. ಆಂಧ್ರಪ್ರದೇಶ ಮೂಲದ ಪ್ರಭಾವಿಗಳು ಆರಂಭದಲ್ಲಿ ಗ್ರಾಮದಲ್ಲಿರುವ ಕೆಲ ರೈತರ ಅಲ್ಪ ಜಮೀನು ಖರೀದಿ ಮಾಡಿಕೊಂಡು ಕೃಷಿ ಕಾರ್ಯ ಆರಂಭಿಸಿದ್ದಾರೆ. ಬಳಿಕ ಜಾಲಿ ಕಂಟಿ ಬೆಳೆದು ಪಾಳು ಬಿದ್ದ ಜಮೀನು ಕಂಡು, ಅದಕ್ಕೂ ಬೇಲಿ ಹಾಕಿದ್ದಾರೆ.

ಗ್ರಾಮಸ್ಥರು ದಾಖಲೆಗಳನ್ನು ತೆಗೆದು ಪರಿಶೀಲನೆ ಮಾಡಿದಾಗ ಜಾಲಿ ಕಂಟಿ ಬೆಳೆದು ಪಾಳು ಬಿದ್ದಿದ್ದ ಜಮೀನು ಸರ್ಕಾರಿ ಜಮೀನು ಅಂತ ಗೊತ್ತಾಗಿದೆ. ಆದರೆ, ಆಂಧ್ರ ಮೂಲದ ಪ್ರಭಾವಿಗಳು ಸ್ಥಳೀಯ ಪ್ರಭಾವಿಗಳ ಜೊತೆ ಸೇರಿ ಸುಮಾರು 30 ಎಕರೆಗೂ ಅಧಿಕ ಸರ್ಕಾರಿ ಭೂಮಿಯನ್ನು ಲಪಾಟಿಯಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕರ್ನಾಟಕ ಸರ್ಕಾರದ ಜಮೀನನ್ನು ಆಂಧ್ರ ಮೂಲದ ಜನ ಒತ್ತುವರಿ ಮಾಡಿಕೊಂಡ ಬಗ್ಗೆ ಹಲವು ತಿಂಗಳುಗಳಿಂದ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದು ಹೋರಾಟ ಮಾಡುತ್ತಿದ್ದಾರೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಮನವಿ ಸ್ಪಂದಿಸದೆ ಮೌನಕ್ಕೆ ಜಾರಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಆರಂಭದಲ್ಲಿ ಬೋನಾಳ್ ಗ್ರಾಮದ ರೈತರ ಜಮೀನು ಮಾತ್ರ ಖರೀದಿಸಿದ್ದ ಆಂಧ್ರ ಮೂಲದ ಪ್ರಭಾವಿಗಳು ನಂತರ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖರೀದಿ ಮಾಡಿದ್ದಾರೆ. ಸ್ಥಳೀಯ ಕೆಲ ಪ್ರಭಾವಿಗಳು ಪಾಳು ಬಿದ್ದಿದ್ದ ಸರ್ಕಾರಿ ಜಮೀನು ಕೂಡ ಮಾರಾಟ ಮಾಡಿದ್ದಾರೆ. ಹಣ ಪಡೆದು ನಕಲಿ ದಾಖಲೆಗಳನ್ನ ಸೃಷ್ಟಿ ಮಾಡಿ ಮಾರಾಟ ಮಾಡಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.ಗ್ರಾಮದ ಪ್ರಭಾವಿಯೊಬ್ಬರು ಆಂಧ್ರ ಮೂಲದ ಶ್ರೀನಿವಾಸ್, ವೆಂಕಟೇಶ್ವರ, ಸೂರ್ಯನಾರಾಯಣಮ್ಮ, ರಾಮಯ್ಯ ಹಾಗೂ ಮಾರನಿ ಎಂಬವರಿಗೆ ಸುಮಾರು 30 ರಿಂದ 40 ಎಕರೆ ಜಮೀನು ನೀಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಸುರಪುರ ತಹಶೀಲ್ದಾರ ಗಮನಕ್ಕೆ ತಂದಿದ್ದಾರೆ.  ತಹಶೀಲ್ದಾರ್ ಕಂದಾಯ ನಿರೀಕ್ಷಕರನ್ನು ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ. ಕಂದಾಯ ನಿರೀಕ್ಷಕರು ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಅಂತ ವರದಿ ಸಹ ಕೊಟ್ಟಿದ್ದಾರೆ. ಇಷ್ಟೇಲ್ಲ ಆದರೂ ಮೇಲಾಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.

ಇದನ್ನೂ ಓದಿ: ಮತ್ತೆ ವಕ್ಕರಿಸಿದ ಚರ್ಮಗಂಟು ರೋಗ, ಒಂದೇ ವಾರದಲ್ಲಿ 5 ಜಾನುವಾರುಗಳ ಸಾವು

ಕೆಲ ವರ್ಷಗಳ ಹಿಂದೆ ಪಾಳು ಬಿದ್ದಿದ್ದ ಜಮೀನು ಒತ್ತುವರಿಯಾದ ಬಳಿಕ ಸಂಪೂರ್ಣವಾಗಿ ಕೃಷಿ ಭೂಮಿಯಾಗಿ ಬದಲಾಗಿದೆ. ಸರ್ಕಾರಿ ಭೂಮಿಯಂತ ಗುರುತು ಸಿಗದ ಹಾಗೆ ಪರಿವರ್ತನೆ ಮಾಡಲಾಗಿದೆ. ಗ್ರಾಮದಲ್ಲಿ ಶಾಲೆಯ ಕಟ್ಟಡ ಇಲ್ಲ ಅಂತ ಸರ್ಕಾರದಿಂದ ಶಾಲೆಯ ಕಟ್ಟಡವನ್ನ ಮಂಜೂರು ಮಾಡಲಾಗಿದೆ. ಆದರೆ, ಶಾಲೆ ಕಟ್ಟಡ ನಿರ್ಮಾಣ ಮಾಡಲು ಗ್ರಾಮದಲ್ಲಿ ಸರ್ಕಾರಿ ಜಾಗ ಇಲ್ಲದಂತಾಗಿದೆ. ಇರುವ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡ ಮೇಲೆ ಸರ್ಕಾರದ ಯಾವುದೇ ಸಣ್ಣ ಕಟ್ಟಡ ಕಟ್ಟೋಕೂ ಸಹ ಜಾಗ ಇಲ್ಲದಂತಾಗಿದೆ.ಹೀಗಾಗಿ ಒತ್ತುವರಿಯಾದ ಭೂಮಿಯನ್ನ ತೆರವು ಮಾಡಿ ಅಂಗನವಾಡಿ ಹಾಗೂ ಶಾಲೆ ಕಟ್ಟೋಕೆ ಅನುಕೂಲ ಮಾಡಬೇಕು ಅಂತ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಒಟ್ನಲ್ಲಿ ಎಲ್ಲಿ ನೋಡಿದರೆ ಸರ್ಕಾರಿ ಭೂಮಿ ಒತ್ತುವರಿ ದಂಧೆ ಜೋರಾಗಿ ನಡೆಯುತ್ತಿದೆ. ಕಾಡನ್ನೇ ಬಿಡದ ನುಂಗುಕೋರರು ಖಾಲಿ ಬಿದ್ದ ಜಾಗವನ್ನ ಹೇಗೆ ಬಿಡಲು ಸಾಧ್ಯ? ಅಂತ ಇದೆ ಪ್ರಕರಣ ನೋಡಿದರೆ ಗೊತ್ತಾಗುತ್ತೆ. ಹೀಗಾಗಿ ಅಧಿಕಾರಿಗಳು ತಮ್ಮ ಜಾಗವನ್ನು ಉಳಿಸಿಕೊಂಡು ಪ್ರಮಾಣಿಕತೆ ಮೆರೆಯಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:56 am, Tue, 22 October 24