ವಿದ್ಯುತ್ ಕಣ್ಣಾಮುಚ್ಚಾಲೆಗೆ ಬಲಿಯಾಯ್ತು ಬಂಗಾರದಂತಹ ಬೆಳೆ: ಜೆಸ್ಕಾಂ ವಿರುದ್ಧ ಸಿಟ್ಟಿಗೆದ್ದು ಪಪ್ಪಾಯ ತೋಟವನ್ನೇ ನಾಶ ಮಾಡಿದ ರೈತ!

ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಜೆಸ್ಕಾಂ ಇಲಾಖೆಯ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಬೋರ್‌ವೆಲ್ ಇದ್ದರೂ ಬೆಳೆಗೆ ನೀರುಣಿಸಲಾಗದೆ ರೈತನೊಬ್ಬ ತಾನು ಬೆಳೆದಿದ್ದ ಎರಡೂವರೆ ಎಕರೆ ಪಪ್ಪಾಯ ತೋಟವನ್ನೇ ಕತ್ತರಿಸಿ ನಾಶಪಡಿಸಿದ್ದಾನೆ. ಕೈಗೆ ಬಂದ ಬೆಳೆ ಕಣ್ಣೆದುರೇ ಒಣಗಿ ಹೋಗಿದ್ದಕ್ಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಣ್ಣೀರಿಟ್ಟಿದ್ದಾನೆ.

ವಿದ್ಯುತ್ ಕಣ್ಣಾಮುಚ್ಚಾಲೆಗೆ ಬಲಿಯಾಯ್ತು ಬಂಗಾರದಂತಹ ಬೆಳೆ: ಜೆಸ್ಕಾಂ ವಿರುದ್ಧ ಸಿಟ್ಟಿಗೆದ್ದು ಪಪ್ಪಾಯ ತೋಟವನ್ನೇ ನಾಶ ಮಾಡಿದ ರೈತ!
ಜೆಸ್ಕಾಂ ವಿರುದ್ಧ ಸಿಟ್ಟಿಗೆದ್ದು ಪಪ್ಪಾಯ ತೋಟವನ್ನೇ ನಾಶ ಮಾಡಿದ ರೈತ!
Edited By:

Updated on: Jul 25, 2026 | 11:03 AM

ಮುಖ್ಯಾಂಶಗಳು

  • ಕರೆಂಟ್ ಸಮಸ್ಯೆಯಿಂದ ಹಾಳಾದ ಪಪ್ಪಾಯ ಬೆಳೆಯನ್ನು ರೈತ ಕತ್ತರಿಸಿ ನಾಶಪಡಿಸಿದ್ದಾನೆ.
  • ಯಾದಗಿರಿಯ ಶಹಾಪುರದಲ್ಲಿ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಅನ್ನದಾತ ಕಣ್ಣೀರಿಟ್ಟು ಆಕ್ರೋಶ ಹೊರಹಾಕಿದ್ದಾನೆ.
  • ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನೀರಿಲ್ಲದೆ ನಷ್ಟವಾಗಿದೆ.

ಯಾದಗಿರಿ, ಜುಲೈ 25: ಒಂದು ಕಡೆ ಕೈಕೊಟ್ಟ ಮಳೆರಾಯ, ಇನ್ನೊಂದೆಡೆ ಜೆಸ್ಕಾಂ (GESCOM) ಇಲಾಖೆಯ ನಿರಂತರ ವಿದ್ಯುತ್ ಕಣ್ಣಾಮುಚ್ಚಾಲೆ. ಜಮೀನಿನಲ್ಲಿ ಬೋರ್‌ವೆಲ್ ಇದ್ದರೂ ಬೆಳೆಗೆ ನೀರು ಹಾಯಿಸಲಾಗದೆ, ಕಣ್ಣೆದುರೇ ಒಣಗಿ ಹೋಗುತ್ತಿದ್ದ ಬಂಗಾರದಂತಹ ಪಪ್ಪಾಯ ಬೆಳೆಯನ್ನು ಕಂಡು ಮನನೊಂದ ರೈತನೊಬ್ಬ ತಾನೇ ಕೊಡಲಿ ಹಾಗೂ ಕೊಡುಗೋಲಿನಿಂದ ಗಿಡಗಳನ್ನು ಕತ್ತರಿಸಿ ನಾಶಪಡಿಸಿರುವ ಭಾವುಕ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ನಡೆದಿದೆ. ಶಹಾಪುರದ ರೈತ ಅಮರೇಶ್ ಎಂಬುವರೇ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಸಂಪೂರ್ಣ ಪಪ್ಪಾಯ ಬೆಳೆಯನ್ನು ಕತ್ತರಿಸಿ ಆಕ್ರೋಶ ಹೊರಹಾಕಿದ ನಿರ್ಭಾಗ್ಯ ಅನ್ನದಾತ.

ವರ್ಷಪೂರ್ತಿ ಪಟ್ಟ ಶ್ರಮ ನೀರುಪಾಲು

ರೈತ ಅಮರೇಶ್ ಅವರು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಸಾಲ-ಸೋಲ ಮಾಡಿ, ಒಂದು ವರ್ಷದಿಂದ ಪಪ್ಪಾಯ ಬೆಳೆಯನ್ನು ಜೀವಕ್ಕಿಂತ ಹೆಚ್ಚಾಗಿ ಸಾಕಿ ಬೆಳೆಸಿದ್ದರು. ಆರಂಭದಲ್ಲಿ ಬೇಸಿಗೆಯ ಅತಿಯಾದ ಬಿಸಿಲಿನ ಬೇಗೆಯನ್ನು ತಡೆದುಕೊಂಡು ಬೆಳೆಯನ್ನು ರಕ್ಷಿಸಿಕೊಂಡಿದ್ದರು. ಇನ್ನು ಕೇವಲ 15 ದಿನಗಳು ಕಳೆದಿದ್ದರೆ ಪಪ್ಪಾಯ ಕೊಯ್ಲಿಗೆ ಬಂದು ಕೈತುಂಬಾ ಲಾಭ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಕಡೆಯ ಕ್ಷಣದಲ್ಲಿ ಜೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಸೂಕ್ತ ಸಮಯಕ್ಕೆ ವಿದ್ಯುತ್ ಪೂರೈಸದ ಕಾರಣ ಗಿಡಗಳಲ್ಲಿದ್ದ ಕಾಯಿಗಳೆಲ್ಲ ನೀರಿಲ್ಲದೆ ಒಣಗಿ ಹಾಳಾಗತೊಡಗಿದವು.

ಜೆಸ್ಕಾಂ ವಿರುದ್ಧ ಕಣ್ಣೀರಿಟ್ಟ ಅನ್ನದಾತ

“ನಮ್ಮ ಜಮೀನಿನಲ್ಲಿ ಬೋರ್‌ವೆಲ್ ಇದ್ದರೂ ಕರೆಂಟ್ ಇಲ್ಲದೆ ಬೆಳೆಗೆ ನೀರುಣಿಸಲು ಸಾಧ್ಯವಾಗಲಿಲ್ಲ. ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸಾಲು ಸಾಲು ಮನವಿಗಳನ್ನು ಮಾಡಿ, ಕಾಲಿಗೆ ಬಿದ್ದು ಗೋಗರೆದರೂ ಅವರು ನಮ್ಮ ನೋವಿಗೆ ಸ್ಪಂದಿಸಲಿಲ್ಲ. ಇನ್ನೇನು ಕೈಗೆ ಬಂದ ಬೆಳೆ ಕಣ್ಣೆದುರೇ ಹಾಳಾಗುತ್ತಿರುವುದನ್ನು ನೋಡಲಾಗದೆ, ಬೇಸರ ಮತ್ತು ಜೆಸ್ಕಾಂ ಮೇಲಿನ ಸಿಟ್ಟಿನಿಂದ ಗಿಡಗಳನ್ನು ಕತ್ತರಿಸಿ ಹಾಕಿದ್ದೇನೆ” ಎಂದು ರೈತ ಅಮರೇಶ್ ಕಣ್ಣೀರಿಡುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತನಿಗೆ ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆ ತಕ್ಷಣವೇ ಸೂಕ್ತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us