
ಯಾದಗಿರಿ, ಮೇ 26: ಯಾದಗಿರಿ ಕಾಂಗ್ರೆಸ್ ಕಚೇರಿಗೆ ಬೆಂಕಿ (Yadgiri Congress Office Fire) ಹಚ್ಚಿದ್ದ ಮತ್ತೊಬ್ಬ ಆರೋಪಿಗಳನ್ನು ಯಾದಗಿರಿ (Yadgiri) ನಗರ ಪೊಲೀಸರು (Police) ಬಂಧಿಸಿದ್ದಾರೆ. ರೌಡಿಶೀಟರ್ ಬಾಬುಗೌಡ ಅಗತೀರ್ಥ ಮತ್ತು ಮಂಜುಳಾ ಗೂಳಿಯ ಪತಿ, ಆರೋಪಿ ಶಂಕರ್ ಗೂಳಿ ಬಂಧಿತರು. ಘಟನೆ ಸಂಬಂಧ ದೂರು ದಾಖಲಾಗುತ್ತಿದ್ದಂತೆ ರೌಡಿಶೀಟರ್ ಬಾಬುಗೌಡ ಅಗತೀರ್ಥ ವಿಜಯವಾಡದಲ್ಲಿನ ತನ್ನ ಗೆಳೆಯನ ಮನೆಯಲ್ಲಿ ಅಡಗಿಕೊಂಡಿದ್ದನು. ಈ ವಿಚಾರ ತಿಳಿದು, ವಿಜಯವಾಡಕ್ಕೆ ತೆರಳಿದ ಯಾದಗಿರಿ ನಗರ ಪೊಲೀಸರು ಆರೋಪಿ ಬಾಬುಗೌಡನನ್ನು ಸೆರೆ ಹಿಡಿದಿದ್ದಾರೆ.
ರೌಡಿಶೀಟರ್ ಬಾಬುಗೌಡ ಅಗತೀರ್ಥ, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಜುಳಾ ಗೂಳಿಯವರ ಪತಿ ಶಂಕರ್ ಗೂಳಿಯ ಬೆಂಬಲಿಗನಾಗಿದ್ದಾನೆ. ಯಾದಗಿರಿ ನಗರ ಪೊಲೀಸರು ಮಂಜುಳಾ ಪತಿ ಶಂಕರ್ನನ್ನು ಕೂಡ ಬಂಧಿಸಿದ್ದಾರೆ. ಈ ಇಬ್ಬರೂ ಸೇರಿಕೊಂಡು ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ್ದರು.
ಶುಕ್ರವಾರ (ಮೇ.23) ರಾತ್ರಿ ಯಾದಗಿರಿ ನಗರದಲ್ಲಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಮಧ್ಯರಾತ್ರಿ ಯಾರೂ ಇಲ್ಲದ ವೇಳೆ ಕಾಂಗ್ರೆಸ್ ಕಚೇರಿಯ ಹೊರಗಿನಿಂದ ಸುರಿಯಲಾಗಿದೆ. ಬಳಿಕ ಕಡ್ಡಿ ಗೀರಿ ಬೆಂಕಿ ಹಚ್ಚಲಾಗಿದೆ. ಕಿಟಕಿಗಳು ಸುಟ್ಟು ಬೆಂಕಿ ಕಚೇರಿಯ ಒಳಗಡೆ ಆವರಿಸಿಕೊಂಡಿದೆ. ಇದರಿಂದ ಕಚೇರಿಯಲ್ಲಿದ್ದ ಸೋಫಾ, ಎಸಿ ಸೇರಿದಂತೆ ಹಲವು ಉಪಕರಣಗಳು ಸುಟ್ಟು ಕರಕಲಾಗಿದ್ದವು. ಮಾಹಿತಿ ತಿಳಿದ ಕೂಡಲೇ ಓಡೋಡಿ ಬಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ಮುಖಂಡರು ಕಚೇರಿಯ ಸ್ಥಿತಿ ನೋಡಿ ಶಾಕ್ ಆಗಿದ್ದರು.
ಸ್ಥಳಕ್ಕೆ ಆಗಮಿಸಿದ್ದ ಯಾದಗಿರಿ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದರು. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳವನ್ನು ಕರೆಸಿಕೊಂಡು ಪರಿಶೀಲನೆ ನಡೆಸಿದ್ದರು. ಆದರೆ, ಬೆಂಕಿ ಹಚ್ಚಿದವರು ಯಾರು ಅಂತ ಮಾತ್ರ ಪೊಲೀಸರಿಗೆ ಗೊತ್ತಾಗಿರಲಿಲ್ಲ. ಕೊನೆಗೆ ಕಚೇರಿಯ ಮುಂದಿರುವ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ, ಬೆಂಕಿ ಹಚ್ಚಿರುವುದು ಯಾರು ಅಂತ ಗೊತ್ತಾಗಿದೆ. ಮಂಜುಳಾ ಗೂಳಿಯ ಪತಿ, ಆರೋಪಿ ಶಂಕರ್ ಗೂಳಿ ಸರ್ಕಾರಿ ಮಹಿಳಾ ಪಿಯು ಕಾಲೇಜಿನ ಉಪನ್ಯಾಸಕನಾಗಿದ್ದಾನೆ. ಈ ಇಬ್ಬರೇ ರಾತ್ರಿ ವೇಳೆ ಬೆಂಕಿ ಹಚ್ಚಿದ್ದು ಅಂತ ಗೊತ್ತಾಗುತ್ತಿದ್ದಂತೆ ಕೂಡಲೆ ಪೊಲೀಸರು ಶಂಕರ್ ಗೂಳಿಯನ್ನು ಅರೆಸ್ಟ್ ಮಾಡಿದ್ದಾರೆ.
ಕಳೆದ ಹದಿಮೂರು ವರ್ಷಗಳಿಂದ ಮಂಜುಳಾ ಗೂಳಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷರಾಗಿದ್ದರು. ಆದರೆ, ಪಕ್ಷ ಮತ್ತೊಬ್ಬರಿಗೆ ಅವಕಾಶ ಕೊಡಬೇಕು ನಿರ್ಧರಿಸಿದ್ದರಿಂದ ಶುಕ್ರವಾರ ಮಂಜುಳಾ ಗೂಳಿಯವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು. ಮುಸ್ಲಿಂ ಸಮುದಾಯದ ನಿಲೋಫರ್ ಬಾದಲ್ ಅವರಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಕಾಲುವೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲು
ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿದ್ದಕ್ಕೆ ರೊಚ್ಚಿಗೆದ್ದ ಮಂಜುಳಾ ಗೂಳಿ ಪತಿ ಶಂಕರ್ ಮೇ.23ರ ರಾತ್ರಿ ರೌಡಿ ಶೀಟರ್ ಬಾಬುಗೌಡ ಅಗತೀರ್ಥ ಜೊತೆ ಸೇರಿ ಕಂಠಪೂರ್ತಿ ಎಣ್ಣೆ ಕುಡಿದಿದ್ದಾನೆ. ಬಳಿಕ ಇಬ್ಬರೂ ಸೇರಿ ಐದು ಲೀಟರ್ ಪೆಟ್ರೋಲ್ ಖರೀದಿ ಮಾಡಿಕೊಂಡು ಬಂದು ಕಚೇರಿಗೆ, ಸುರಿದು ಬೆಂಕಿ ಹಚ್ಚಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Mon, 26 May 25