ಬಾಯಾರಿಕೆ ಎಂದು ನೀರು ಕುಡಿಯಲು ಹೋದ ಮೂವರು ದುರ್ಮರಣ: ಅಣ್ಮಂದಿರ ದುರಂತ ಅಂತ್ಯ
ಬೇಸಿಗೆ ರಜೆ ಆರಂಭವಾಗಿದ್ದು, ಹಳ್ಳಿಗಳಲ್ಲಿ ಮಕ್ಕಳು ಜಮೀನು ಕೆಲಸಕ್ಕೆ ಹೋಗಿ ಪೋಷಕರಿಗೆ ಸಾಹಯ ಮಾಡುತ್ತಾರೆ. ಇದೇ ರೀತಿ ಯಾದಗಿರಿ ಜಿಲ್ಲೆಯ ಮೂರು ಮಂದಿ ಸಹೋದರರು ಪೋಷಕರಿಗೆ ಸಹಾಯ ಮಾಡಲು ಕುರಿಗಳನ್ನು ಮೇಯಿಸಲು ಹೋಗಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಕುರಿಗಳನ್ನು ಮೇಯಿಸಲು ಹೋದ ಬಾಲಕರು ಮನೆಗೆ ಹೆಣವಾಗಿ ಬಂದಿದ್ದಾರೆ. ನೀರು ಕುಡಿಯಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.

ಯಾದಗಿರಿ, ಮೇ 05: ಯಾದಗಿರಿ (Yadgiri) ತಾಲೂಕಿನ ಅಚೋಲಾ ತಾಂಡದಲ್ಲಿ ಹೃದವಿದ್ರಾಹಕ ಘಟನೆಯೊಂದು ನಡೆದು ಹೋಗಿದೆ. ಕುರಿ (Sheep) ಮೇಯಿಸಲು ಹೋಗಿದ್ದ ಮೂರು ಜನ ಸಹೋದರರು ನೀರು ಪಾಲಾಗಿದ್ದಾರೆ. ಅಚೋಲಾ ತಾಂಡದ 10 ವರ್ಷದ ಕೃಷ್ಣ ರಾಠೋಡ್, 14 ವರ್ಷದ ಜಯ ರಾಠೋಡ್ ಹಾಗೂ 12 ವರ್ಷದ ಅಮರ್ ಎಂಬ ಮೂರು ಬಾಲಕರು ಮೃತಪಟ್ಟಿದ್ದಾರೆ. ಮೂವರು ಸಹೋದರರು ಶಾಲೆಗೆ ಹೋಗುತ್ತಾರೆ. ಆದರೆ, ಬೇಸಿಗೆ ರಜೆ ಇರುವ ಹಿನ್ನೆಲೆಯಲ್ಲಿ ಪೋಷಕರು ಮಾಡುತ್ತಿದ್ದ ಕುರಿ ಕಾಯುವ ಕೆಲಸವನ್ನು ತಾವೂ ಮಾಡುತ್ತಿದ್ದರು.
ಹೇಗಿದ್ದರು ಶಾಲೆಗೆ ರಜೆ ಇದೆ ಹೀಗಾಗಿ, ಪೋಷಕರಿಗೆ ಸಹಾಯ ಮಾಡೋಣ ಅಂತ ಸಹೋದರರು ನಿತ್ಯ ಕುರಿ ಕಾಯೊಕೆ ಹೋಗುತ್ತಿದ್ದರು. ರವಿವಾರ (ಮೇ.05) ಕೂಡ ಬೆಳಗ್ಗೆ ಊಟ ಕಟ್ಟಿಕೊಂಡು ಕುಡಿಯುವ ನೀರು ತೆಗೆದುಕೊಂಡು ಕುರಿಗಳನ್ನು ಕಾಯೋಕೆ ಹೋಗಿದ್ದರು. ಮಧ್ಯಾಹ್ನ ಊಟ ಮಾಡಿ ತಾವು ತೆಗೆದುಕೊಂಡು ಬಂದಿದ್ದ ನೀರು ಬಿಸಿಯಾಗಿದ್ದಕ್ಕೆ ಪಕ್ಕದಲ್ಲೇ ಇದ್ದ ಹೊಂಡದಲ್ಲಿ ನೀರು ತಂಪಾಗಿರುತ್ತೆ ಕುಡಿಯಲು ಹೋಗಿದ್ದಾರೆ. ಈ ವೇಳೆ ಕಾಲು ಜಾರಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಪಕ್ಕದಲ್ಲಿ ಖಾಸಗಿ ಕಂಪನಿಯೊಂದು ಬೃಹತ್ ಕೋಳಿ ಪಾರ್ಮ್ ನಿರ್ಮಾಣ ಮಾಡುತ್ತಿತ್ತು. ಇದೆ ಕೋಳಿ ಪಾರ್ಮ್ ಕೆಲಸಕ್ಕಾಗಿ ಬೃಹತ್ ಗಾತ್ರ ಹೊಂಡ ನಿರ್ಮಾಣ ಮಾಡಲಾಗಿದೆ. ಮಳೆಯಾದ ಹಿನ್ನೆಲೆಯಲ್ಲಿ ಮಳೆಯಿಂದ ಹೊಂಡದಲ್ಲಿ ನೀರು ನಿಂತಿದೆ. ಇದೇ ನೀರನ್ನು ಬಾಲಕರು ಕುರಿಗಳಿಗೆ ಕುಡಿಸಿ ಬಳಿಕ ತಾವು ಕುಡಿಯಲು ಹೋಗಿದ್ದರು. ಆದರೆ, ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಸಂಜೆಯಾದರೂ ಬಾಲಕರು ಮನೆಗೆ ಬಂದಿಲ್ಲ ಆದರೆ, ಕುರಿಗಳು ಮಾತ್ರ ಮನೆಗೆ ಹೋಗಿವೆ. ಹೀಗಾಗಿ ಪೋಷಕರು ಗಾಬರಿಗೊಂಡು ಬಾಲಕರಿಗೆ ಹುಡುಕಾಟ ನಡೆಸಿದ್ದಾರೆ. ಆದರೆ, ಬಾಲಕರು ಎಲ್ಲೂ ಸಿಗಲಿಲ್ಲ. ಆದರೆ, ತಾಂಡದ ನಿವಾಸಿಯೊಬ್ಬ ಇದೆ ಮಾರ್ಗವಾಗಿ ಹೋಗಿದ್ದಾರೆ ಅಂತ ಹೇಳಿದ್ದಾನೆ. ಹೀಗಾಗಿ ನೇರವಾಗಿ ಹೊಂಡದ ಕಡೆ ಪೋಷಕರು ಹೋಗಿದ್ದಾರೆ. ಹೊಂಡಾದ ಬಳಿ ಬಾಲಕರು ಮನೆಯಿಂದ ತೆಗೆದುಕೊಂಡು ಹೋಗಿದ್ದ ಊಟದ ಡಬ್ಬ ಹಾಗೂ ನೀರಿನ ಬಾಟಲ್ ಬಿದ್ದಿದ್ದನ್ನು ಕಂಡು ಹುಡುಕಾಡಿದ್ದಾರೆ.
ಇದನ್ನೂ ಓದಿ: ತಾಪಮಾನ ಏರಿಕೆ ಪರಿಣಾಮ ನವಜಾತ ಶಿಶುಗಳಲ್ಲಿ ಕಿಡ್ನಿ ಬಾವು, ಆರೋಗ್ಯ ಸಮಸ್ಯೆ ಹೆಚ್ಚಳ
ಆಗ, ಹೊಂಡದಲ್ಲಿ ಮೂವರ ಶವಗಳು ಸಿಕ್ಕಿವೆ. ಶವಗಳು ಸಿಕ್ಕದೆ ತಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಬಂದ ಯಾದಗಿರಿ ಗ್ರಾಮಾಂತರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಬೇಸಿಗೆ ರಜೆ ಅಂತ ಪೋಷಕರಿಗೆ ಸಾಹಯ ಮಾಡಲು ಕುರಿಗಳನ್ನ ಮೇಯಿಸಲು ಹೋಗಿದ್ದ ಬಾಲಕರು ಪ್ರಾಣ ಕಳೆದುಕೊಂಡಿದ್ದಾರೆ. ಹೊಂಡ ನಿರ್ಮಾಣ ಮಾಡಲು ಪರವಾನಿಗೆ ಪಡೆದಿದ್ರಾ ಅಥವಾ ಇಲ್ಲ ಅಂತ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 pm, Mon, 5 May 25







