ನರೇಗಾ ಯೋಜನೆ ಹಣ ಲೂಟಿ ಮಾಡಲು ಪುರುಷರಿಗೆ ಮಹಿಳೆ ವೇಷ ಹಾಕಿಸಿದ ಅಧಿಕಾರಿಗಳು!
ಪಂಚಾಯತ್ ಅಧಿಕಾರಿಗಳು ಪುರುಷರಿಗೆ ಮಹಿಳೆಯರ ವೇಷ ಧರಿಸಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹಣ ಲಪಟಾಯಿಸಲು ಮುಂದಾಗಿ ಲಾಕ್ ಆಗಿರುವಂತಹ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಹಣದ ಆಸೆಗೆ ಅಧಿಕಾರಿಗಳು ಇಂತಹ ಕೆಲಸಕ್ಕೆ ಇಳಿದಿದ್ದು, ಸದ್ಯ ಓರ್ವ ಹೊರ ಗುತ್ತಿಗೆ ನೌಕರನನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಯಾದಗಿರಿ, ಏಪ್ರಿಲ್ 09: ಕೆಲಸ ಹುಡುಕಿಕೊಂಡು ಜನ ಊರು ಬಿಟ್ಟು ಮಹಾ ನಗರಗಳಿಗೆ ಗೂಳೆ ಹೋಗಬಾರದು ಮತ್ತು ಕೆಲಸ ಮಾಡಲು ಮನಸ್ಸಿರುವವರಿಗೆ ಸ್ಥಳೀಯವಾಗಿಯೇ ಕೆಲಸ ನೀಡಬೇಕು ಎನ್ನುವ ಉದ್ದೇಶದಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (NREGA Scheme) ಜಾರಿಗೆ ತರಲಾಗಿದೆ. ಇದೇ ಯೋಜನೆಯಡಿ ಕೂಲಿ ಕೆಲಸವನ್ನ ನೀಡಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಈ ಯೋಜನೆಯನ್ನ ಅಧಿಕಾರಿಗಳು (Officials) ದುರ್ಬಳಕೆ ಮಾಡಿಕೊಂಡಿದ್ದಾರೆ. ಪುರುಷರಿಗೆ ಮಹಿಳೆಯರ ವಸ್ತ್ರವನ್ನ ಧರಿಸಿ ಹಣ ಹೊಡೆಯಲು ಹೋಗಿ ಲಾಕ್ ಆಗಿರುವಂತಹ ಘಟನೆ ನಡೆದಿದೆ.
ಹಣ ಲಪಟಾಯಿಸಲು ಹೊಸ ಮಾರ್ಗ ಕಂಡುಹಿಡಿದ ಅಧಿಕಾರಿಗಳು
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಬಾರಿ ಗೋಲ್ಮಾಲ್ ನಡೆದಿದೆ. ಬಡವರಿಗಾಗಿ ಬಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪಂಚಾಯತಿ ಅಧಿಕಾರಿಗಳು ಹಣ ಲಪಟಾಯಿಸಲು ಹೋಗಿ ಸಿಕ್ಕಿ ಬಿದ್ದಿದ್ದಾರೆ. ಅಷ್ಟಕ್ಕೂ ಇಲ್ಲಿ ಆಗಿದ್ದಾದ್ದರೂ ಏನು ಅಂದರೆ, ನರೇಗಾ ಯೋಜನೆಯಡಿ ಮಲ್ಹಾರ್ ಪಂಚಾಯತಿ ವ್ಯಾಪ್ತಿಯಲ್ಲಿ ನಿಂಗಪ್ಪ ಪೂಜಾರಿ ಎಂಬ ರೈತನ ಜಮೀನಿನ ನಾಲಾ ಹೂಳೆತ್ತುವ ಕೆಲಸ ಮಾಡಲಾಗಿದೆ.
ಇದನ್ನೂ ಓದಿ: ಐಷಾರಾಮಿ ಜೀವನ ತ್ಯಜಿಸಿದ ಕೋಟ್ಯಾಧೀಶನ ಪುತ್ರಿ: 26ನೇ ವಯಸ್ಸಿಗೆ ಆಡಂಬರದ ಜೀವನಕ್ಕೆ ಯುವತಿ ಗುಡ್ಬೈ
ನೂರಾರು ಜನ ಕೂಲಿ ಕಾರ್ಮಿಕರಿಗೆ ಈ ಕೆಲಸ ಕೊಡುವ ಉದ್ದೇಶದಿಂದ ಕೆಲಸ ಆರಂಭಿಸಲಾಯ್ತು. ಜಾಬ್ ಕಾರ್ಡ್ ಹೊಂದಿರುವ ಮಹಿಳೆಯರು ಹಾಗೂ ಪುರುಷ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಳೆದ ಫೆಬ್ರವರಿಯಲ್ಲಿ ಕೆಲಸ ಆರಂಭವಾಗಿದ್ದು, ಸುಮಾರು ನೂರಾರು ಜನ ಕಾರ್ಮಿಕರು ನಾಲೆಯ ಹೂಳೆತ್ತುವ ಕೆಲಸ ಮಾಡುತ್ತಿದ್ದರು. ಆದರೆ ಇಲ್ಲಿ ಕೆಲಸ ಇನ್ನು ಬಾಕಿ ಇರುವಾಗಲೇ ಹಣ ಹೊಡೆಯೋಕೆ ಅಧಿಕಾರಿಗಳು ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ಬೆಳಗ್ಗೆ ಕೆಲಸ ಆರಂಭದ ಒಂದು ಫೋಟೋ ಅಪ್ಲೋಡ್ ಮಾಡಬೇಕು. ಬಳಿಕ ಸಂಜೆ ವೇಳೆ ಒಂದು ಪೋಟೋ ಅಪ್ಲೋಡ್ ಮಾಡಬೇಕು. ಇಲ್ಲಿ ಅಧಿಕಾರಿಗಳು ಮಾಡಿದ್ದ ಕೆಲಸ ಏನು ಅಂದರೆ ಮಹಿಳೆಯರು ಕೆಲಸಕ್ಕೆ ಬಾರದೆ ಇದ್ದರೂ ಪುರುಷರನ್ನ ಮಹಿಳೆಯರ ವೇಷದಲ್ಲಿ ರೆಡಿ ಮಾಡಿ ಹಾಜರಿ ಹಾಕಿಸಿದ್ದಾರೆ.
ಫೋಟೋದಲ್ಲಿ ಮಹಿಳೆಯರೇ ಇದ್ದಾರೆ ಎನ್ನುವ ಹಾಗೆ ಐದು ಜನ ಪುರುಷರನ್ನ ಮಹಿಳೆಯರ ಸೀರೆ ಉಡಿಸಿ ಪುರುಷರ ಪಕ್ಕದಲ್ಲಿ ನಿಲ್ಲಿಸಿ ಫೋಟೋ ಹಾಕಿದ್ದಾರೆ. ಮುಖದ ಮೇಲೆ ಮೀಸೆ ಇರುವುದು ಗೊತ್ತಾಗಬಾರದು ಎಂದು ಸೀರೆಯಿಂದ ಮುಖವನ್ನ ಮುಚ್ಚಿಸಲಾಗಿದೆ. ಕಳೆದ ಫೆಬ್ರವರಿ 5 ರಂದು ಕೆಲಸ ಮಾಡಲಾಗಿದೆ ಎಂದು ಫೋಟೋ ಅಪ್ಲೋಡ್ ಮಾಡಲಾಗಿದೆ. ಆದರೆ ಅನುಮಾನಗೊಂಡ ಹಿರಿಯ ಅಧಿಕಾರಿಗಳು ಪರಿಶೀಲನೆ ಮಾಡಿದ ಬಳಿಕ ಪಂಚಾಯತಿ ಅಧಿಕಾರಿಗಳ ಕಳ್ಳಾಟ ಬಯಲಾಗಿದೆ.
ಗುತ್ತಿಗೆ ನೌಕರ ಕೆಲಸದಿಂದ ವಜಾ
ನರೇಗಾ ಕೆಲಸವನ್ನ ಪಂಚಾಯತಿಯಲ್ಲಿ ಮೇಲ್ವಿಚಾರಣೆ ಮಾಡುತ್ತಿದ್ದ ವಿರೇಶ್ ಎಂಬ ಹೊರ ಗುತ್ತಿಗೆ ನೌಕರ ಈ ಕೆಲಸ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಕೂಡಲೇ ಅಧಿಕಾರಿಗಳು ವಿರೇಶ್ರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಇದು ಕೇವಲ 5 ರಂದು ನಡೆದ ಘಟನೆ ಮಾತ್ರ ಆದರೆ ಇದಕ್ಕೂ ಮೊಲದು ಮೇಲ್ಧಿಕಾರಿಗಳ ಕಣ್ಣು ತಪ್ಪಿಸಿ ಇನ್ನೇಷ್ಟು ಬಾರಿ ಈ ರೀತಿಯ ಕೆಲಸ ಮಾಡಿದ್ದಾರೆ ಎನ್ನೋದು ಹೆಚ್ಚಿನ ತನಿಖೆ ನಡೆದ ಮೇಲೆಯೇ ಗೊತ್ತಾಗಲಿದೆ.
ಇನ್ನು ನಿಂಗಪ್ಪ ಪೂಜಾರಿ ಜಮೀನಿನ ನಾಲಾ ಹೂಳೆತ್ತುವ ಕೆಲಸದ ಬಿಲ್ ಎತ್ತುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಯಾದಗಿರಿ ತಾಲೂಕು ಪಂಚಾಯತಿ ಮುಖ್ಯಾಧಿಕಾರಿ ಮಹಾದೇವಪ್ಪ ಕೇಳಿದರೆ ವಿರೇಶ್ರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಮಹಿಳೆಯರು ಕೆಲಸಕ್ಕೆ ಬಾರದೆ ಇದ್ದಾಗ ಈ ರೀತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕರ ಗಮನಕ್ಕೆ: ಕರ್ನಾಟಕದ ಈ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ
ನರೇಗಾ ಯೋಜನೆ ಬಹಳಷ್ಟು ಬಡ ಜನರಿಗೆ ಒಂದು ಹೊತ್ತಿನ ಊಟಕ್ಕೆ ಆಸರೆಯಾದ ಯೋಜನೆಯಾಗಿದೆ. ಕೆಲಸವಿಲ್ಲದ ಬಡವರ ಕೈಗೆ ಕೆಲಸ ಸಿಕ್ಕಂತಾಗಿದೆ. ಆದರೆ ಹಣದ ಆಸೆಗೆ ಅಧಿಕಾರಿಗಳು ಇಂತಹ ಕೆಲಸ ಮಾಡಿದ್ದು, ಅಕ್ಷಮ್ಯ ಅಪರಾಧವೇ ಸರಿ. ಕೇವಲ ಕೆಲಸದಿಂದ ವಜಾ ಮಾಡದೆ ಕೃತ್ಯದ ಪ್ಲ್ಯಾನ್ ಮಾಡಿದ ವ್ಯಕ್ತಿ ಸೇರಿದಂತೆ ಭಾಗಿಯಾದವರ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:00 pm, Wed, 9 April 25