
ಯಾದಗಿರಿ, ಮೇ 12: ವರುಣನ ಆರ್ಭಟಕ್ಕೆ ಮನೆ ಗೋಡೆ ಕುಸಿದು ಬಾಲಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ನಡೆದಿದೆ. ಅಕ್ಷತಾ(8) ಮೃತ ದುರ್ದೈವಿಯಾಗಿದ್ದು, ಘಟನೆಯಲ್ಲಿ ಇಬ್ಬರು ಮಕ್ಕಳಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಯಾದಗಿರಿ ಯೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡೆಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್ಪೆಕ್ಟರ್!
ಸಿದ್ದಪ್ಪ ಎಂಬುವರಿಗೆ ಸೇರಿದ ಮನೆಯ ಅಡುಗೆ ಕೋಣೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಗೋಡೆ ಕುಸಿದಿದೆ. ಅವಶೇಷಗಳಡಿ ಸಿಲುಕಿದ್ದ ಮಕ್ಕಳಾದ ಸಂಗೀತಾ ಹಾಗೂ ಭೂಮಿಕಾಳನ್ನ ಸುರಕ್ಷಿತವಾಗಿ ಹೊರ ತೆಗೆಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಕ್ಷತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮೊನ್ನೆ ಗ್ರಾಮದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಈ ವೇಳೆ ನೀರಿನಲ್ಲಿ ನೆಂದಿದ್ದ ಅಡುಗೆ ಕೋಣೆಯ ಗೋಡೆ ಅಲುಗಾಡುವ ಹಂತಕ್ಕೆ ಬಂದಿತ್ತು. ಗಾಳಿಯ ಅಬ್ಬರಕ್ಕೆ ಕೋಣೆಯ ತಗಡಿನ ಮೇಲ್ಛಾವಣಿ ಹಾರಹೋಗಿತ್ತು. ಹೀಗಾಗಿ ಮನೆಯವರು ಅಡುಗೆ ಕೋಣೆಯನ್ನು ಬೇರೆಡೆಗೆ ಶಿಫ್ಟ್ ಮಾಡಿದ್ದರು. ಆದರೆ ಅದೇ ಜಾಗದಲ್ಲಿ ಮಕ್ಕಳು ಆಟ ಆಡುವ ವೇಳೆ ಗೋಡೆ ಕುಸಿದ ಪರಿಣಾಮ ಓರ್ವ ಬಾಲಕಿಯ ಸಾವಾಗಿದೆ.
ಘಟನಾ ಸ್ಥಳಕ್ಕೆ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿ.ಪಂ.CEO ಲವೀಶ್ ಒರಡಿಯಾ ಮತ್ತು SP ಪೃಥ್ವಿಕ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬದುಕಿ ಬಾಳಬೇಕಿದ್ದ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಾವುದೇ ಅನಾಹುತ ಆಗಬಾರದೆಂದು ಮುನ್ನೆಚ್ಚರಿಕೆಯಿಂದ ಅಡುಗೆ ಮನೆಯನ್ನೇ ಬೇರೆಡೆ ಶಿಫ್ಟ್ ಮಾಡಿದ್ದರೂ ವಿಧಿಯಾಟಕ್ಕೆ ಬಾಲಕಿಯ ಸಾವಾಗಿರೋದು ಗ್ರಾಮಸ್ಥರಿಗೂ ಆಘಾತ ಉಂಟುಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.