
ಬೆಂಗಳೂರು, (ಅಕ್ಟೋಬರ್ 07): ಕರ್ನಾಟಕದಲ್ಲಿ ಬಾಕಿಯಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು 2027ರ ಜನವರಿ ಮೊದಲ ವಾರದಲ್ಲಿ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಮಂಗಳವಾರ(ಅ,06) ನಡೆದ ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ ಕೈಗಳ್ಳಲಾಗಿದೆ. ಇದರ ಬೆನ್ನಲ್ಲೇ ಚುನಾವಣಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಇದಕ್ಕೆ ಪೂರಕವೆಂಬಂತೆ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ನ ವರ್ಗವಾರು ಮೀಸಲಿರಿಸಿದ ಸ್ಥಾನಗಳ ಅಧಿಸೂಚನೆ ಪ್ರಕಟಿಸಿದೆ. ರಾಜ್ಯದಲ್ಲಿ ಒಟ್ಟು 1,129 ಜಿಲ್ಲಾ ಪಂಚಾಯಿತಿ ಹಾಗೂ 3,656 ತಾಲೂಕು ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 1,129 ಜಿಲ್ಲಾ ಪಂಚಾಯಿತಿ ಸ್ಥಾನಗಳಿದ್ದು, ಈ ಪೈಕಿ ಎಸ್‌ಸಿ, ಎಸ್‌ಟಿ, ಹಿಂದೂಳಿದ ವರ್ಗ ಎ, ಬಿ ವರ್ಗವಾರು ಮೀಸಲಾತಿ ಪ್ರಕಟಿಸಿದೆ. ಯಾರಿಗೆ ಎಷ್ಟು ಸ್ಥಾನ ಮೀಸಲು ಎನ್ನುವುದನ್ನು ನೋಡುವುದಾರೆ. ಪರಿಶಿಷ್ಟ ಜಾತಿ 225, ಪರಿಶಿಷ್ಟ ಪಂಗಡಕ್ಕೆ 102 ಸ್ಥಾನ ಮೀಸಲು ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಹಿಂದುಳಿದ ವರ್ಗ ಎ-183, ಹಿಂದುಳಿದ ವರ್ಗ ಬಿ-43 ಸ್ಥಾನ ಹಾಗೂ ಸಾಮಾನ್ಯ ವರ್ಗಕ್ಕೆ 576 ಸ್ಥಾನಗಳನ್ನು ಮೀಸಲಿಡಲಾಗಿದೆ.
ಇನ್ನು ತಾಲೂಕು ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟವಾಗಿದ್ದು, ರಾಜ್ಯದಲ್ಲಿ ಒಟ್ಟು 3,656 ತಾಲೂಕು ಪಂಚಾಯಿತಿ ಸದಸ್ಯ ಸ್ಥಾನಗಳಿವೆ. ಈ ಪೈಕಿ ಪರಿಶಿಷ್ಟ ಜಾತಿಗೆ 733, ಪರಿಶಿಷ್ಟ ಪಂಗಡಕ್ಕೆ 394 ಸ್ಥಾನ ಮೀಸಲು. ಹಾಗೇ ಹಿಂದುಳಿದ ವರ್ಗ ಎ-508, ಹಿಂದುಳಿದ ವರ್ಗ ಎ-111 ಸ್ಥಾನ, ಸಾಮಾನ್ಯ ವರ್ಗಕ್ಕೆ 1,910 ಸ್ಥಾನಗಳು ಮೀಸಲು. ಒಟ್ಟು ಒಟ್ಟು 3,656 ಸ್ಥಾನಗಳಿಗೆ ವರ್ಗವಾರು ಮೀಸಲಾತಿ ಪ್ರಕಟಿಸಲಾಗಿದೆ.
ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಬಗ್ಗೆ ಮಂಗಳವಾರದ ನಡೆದಿದ್ದ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಜನವರಿ ಮೊದಲ ವಾರದಲ್ಲಿ ಅಂದರೆ ಜನವರಿ 15ರೊಳಗೆ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸಲು ನಿರ್ಧರಿಸಿದೆ.
ಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಪಂಚಾಯತ್ ಚುನಾವಣೆ ನಡೆಸುವ ಕುರಿತು ಚರ್ಚೆ ನಡೆದಿದ್ದು, ಡಿಸೆಂಬರ್ ನಲ್ಲಿ ಪ್ರಕ್ರಿಯೆ ಆರಂಭಿಸಿ ಜನವರಿ ಮೊದಲ ವಾರದಲ್ಲೇ ಚುನಾವಣೆ ಪೂರ್ಣಗೊಳಿಸಲು ಸಭೆಯಲ್ಲಿ ನಿರ್ಧರಿಲಾಗಿದೆ. ಇನ್ನು ಜಿಲ್ಲಾ ಹಾಗೂ ತಾಲ್ಲೂಕ್ ಪಂಚಾಯತ್ ಚುನಾವಣೆ ಬಳಿಕ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಸಂಪುಟ ಅಸ್ತು ಎಂದಿದೆ.
ಈ ಬಾರಿಯ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ (EVM) ಬದಲಾಗಿ ಮತಪೆಟ್ಟಿಗೆಗಳನ್ನು (ಬ್ಯಾಲೆಟ್ ಬಾಕ್ಸ್) ಬಳಸಲು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹೀಗಾಗಿ ಈ ಬಾರಿ ನಡೆಯುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಇವಿಎಂ ಮಷಿನ್ ಬದಲಾಗಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ.
ಒಟ್ಟಿನಲ್ಲಿ ಪಂಚಾಯ್ತಿ ಚುನಾವಣಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು, ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿ ಜನವರಿ ಮೊದಲ ವಾರದಲ್ಲಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ. ಎಲೆಕ್ಷನ್ 3 ತಿಂಗಳು ಬಾಕಿ ಇದ್ದು, ಎಲೆಕ್ಷನ್ ತಯಾರಿ ಜೋರಾಗಲಿದೆ. ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರದ ಚರ್ಚೆ ಗರಿಗೆದರಲಿದೆ.
Published On - 7:44 pm, Wed, 7 October 26