ಅಳು ಮತ್ತು ನಗು ಎರಡೂ ಭಾವನೆಗಳೇ, ಅಳುವುದು ತಪ್ಪಲ್ಲ ಮತ್ತು ಬಲಹೀನತೆಯೂ ಅಲ್ಲ: ಡಾ ಸೌಜನ್ಯ ವಶಿಷ್ಠ
ನಮ್ಮ ಸಮಾಜದಲ್ಲಿ, ಕುಟುಂಬಗಳಲ್ಲಿ ನಾವು ಪುರುಷರ ಭಾವನೆಗಳಿಗೆ ಜಾಸ್ತಿ ಮಹತ್ವ ಕೊಡೋದಿಲ್ಲ. ಕೇವಲ ಅವಗಿರುವ ಜವಾಬ್ದಾರಿಗಳನ್ನು ನೆನಪು ಮಾಡಿಕೊಡುತ್ತಿರುತ್ತೇವೆ ಎನ್ನುತ್ಥಾರೆ ಡಾ ಸೌಜನ್ಯ.
ಖ್ಯಾತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಅವರು ನಮ್ಮ ಭಾವನೆ ಅಥವಾ ಎಮೋಶನ್ ಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೇಗೆ ಅನ್ನೋದನ್ನು ಈ ಸಂಚಿಕೆಯಲ್ಲಿ ಹೇಳಿದ್ದಾರೆ. ನಮ್ಮಲ್ಲಿ ಹುಟ್ಟುವ ಭಾವನೆಗಳು ಶಾಶ್ವತವಲ್ಲ ಅವು ಕ್ಷಣಿಕ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬೇಗ ಭಾವೋತ್ಕರ್ಷಕ್ಕೆ ಒಳಗಾಗುವವರು, ಯಾವುದೋ ಒಂದು ಭಾವನೆಗೆ ಜೋತುಬಿದ್ದು ನನ್ನ ಬದುಕು ಮುಗಿದೇ ಹೋಯಿತು ಅಂತ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನಕ್ಕಿಳಿಯುತ್ತಾರೆ. ಅದು ಸರ್ವಥಾ ತಪ್ಪು. ನಮ್ಮ ಭಾವನೆಗಳ ಆಯಸ್ಸು ಚಿಕ್ಕದು. ಬದುಕಿನಲ್ಲಿ ನಾವು ಸಂತೋಷವಾದಾಗ ನಗುತ್ತೇವೆ, ದುಃಖವಾದರೆ ಅಳುತ್ತೇವೆ. ಅಳು ಮತ್ತು ನಗು ಎರಡೂ ಎಮೋಶನ್ಗಳೇ, ಅವುಗಳನ್ನು ಹ್ಯಾಂಡಲ್ ಮಾಡುವ ರೀತಿ ನಮಗೆ ಗೊತ್ತಿರಬೇಕು ಅಂತ ಡಾ ಸೌಜನ್ಯ ಹೇಳುತ್ತಾರೆ.
ನಮ್ಮಲ್ಲಿರುವ ಒಂದು ಕೆಟ್ಟ ಪದ್ಧತಿಯ ಮೇಲೆ ಸೌಜನ್ಯ ಬೆಳಕು ಚೆಲ್ಲುತ್ತಾರೆ. ನಮ್ಮ ಸಮಾಜದಲ್ಲಿ, ಕುಟುಂಬಗಳಲ್ಲಿ ನಾವು ಪುರುಷರ ಭಾವನೆಗಳಿಗೆ ಜಾಸ್ತಿ ಮಹತ್ವ ಕೊಡೋದಿಲ್ಲ. ಕೇವಲ ಅವಗಿರುವ ಜವಾಬ್ದಾರಿಗಳನ್ನು ನೆನಪು ಮಾಡಿಕೊಡುತ್ತಿರುತ್ತೇವೆ.
ಹಾಗಾಗಿ, ಗಂಡಸರು ಕೆಲಸ ಮಾಡೋದು, ಹಣ ಸಂಪಾದನೆ ಮಾಡಿ ಸಂಸಾರ ನಡೆಸುವುದು, ಮಕ್ಕಳ ಓದು-ಮದುವೆ, ತಂದೆ-ತಾಯಿಗಳನ್ನು ನೋಡಿಕೊಳ್ಳೋದು-ಬದುಕು ಇಷ್ಟ ಅಂದುಕೊಂಡು, ತನ್ನ ಭಾವನೆಗಳಿಗೆ ಬೆಲೆಯಿಲ್ಲವೆಂದರೆ ಬದುಕಿ ಏನು ಪ್ರಯೋಜನ ಅಂತ ಜೀವನವನ್ನು ಕೊನೆಗಾಣಿಸುವ ಪ್ರಯತ್ನ ಮಾಡುತ್ತಾರೆ. ಅದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಪುರುಷರ ಭಾವನಗೆಳಿಗೂ ಬೆಲೆ ನೀಡುವ ಪರಿಪಾಠ ನಮ್ಮಲ್ಲಿ ಬೆಳೆಯಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ.
ದುಃಖವಾದಾಗ ಅಳುವುದು ತಪ್ಪೂ ಅಲ್ಲ ಮತ್ತು ಬಲಹೀನತೆಯೂ ಅಲ್ಲ. ನಾವು ಅತ್ತಾಗ ಕಣ್ಣಲ್ಲಿ ನೀರು ಸುರಿವ ಹಾಗೆ ನಗುವಾಗಲೂ ಆನಂದಭಾಷ್ಪ ಬರುತ್ತದೆ. ಅತ್ತಾಗ ನಮ್ಮ ದೇಹದಲ್ಲಿ ಎಂಡಾರ್ಫಿನ್ ಎಂಬ ಹಾರ್ಮೋನ್ ರಿಲೀಸ್ ಆಗುತ್ತದೆ. ಅತ್ತಾಗ ಇಲ್ಲವೇ ನಕ್ಕಾಗ ನಮ್ಮ ದೇಹಕ್ಕೆ ಅದು ನಿರಾಳತೆಯನ್ನು ಒದಗಿಸುತ್ತದೆ ಎಂದು ಸೌಜನ್ಯ ಹೇಳುತ್ತಾರೆ.
ಲವಲವಿಕೆಯ ಜೀವನ ನಡೆಸಬೇಕಾದರೆ ಖುಷಿಖುಷಿಯಾಗಿರಬೇಕು, ಭಾವನೆಗಳನ್ನು ಸರಿಯಾಗಿ ನಿರ್ವಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ಮತ್ತು ನಮ್ಮ ಸುತ್ತಲಿನ ಪರಿಸರದಲ್ಲಿ ಪಾಸಿಟಿವಿಟಿಯನ್ನು ಸೃಷ್ಟಿಸಬೇಕು ಅಂತ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ.
ಇದನ್ನೂ ಓದಿ: ‘ನನಗೆ ಪುನೀತ್ ಮಾಮ ನೆನಪಾಗುತ್ತಿದ್ದಾರೆ’; ಅಪ್ಪುಗಾಗಿ ಕಣ್ಣೀರು ಹಾಕಿದ ಪುಟ್ಟ ಅಭಿಮಾನಿ, ವಿಡಿಯೋ ವೈರಲ್