ಪೇಪರ್​ ಕಪ್​ನಲ್ಲಿ ಟೀ-ಕಾಫಿ ಕುಡಿಯೋ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ ಪ್ಲೀಸ್; ಇದು ನಿಮ್ಮ ಒಳಿತಿಗೆ

| Updated By: ಆಯೇಷಾ ಬಾನು

Updated on: Mar 14, 2021 | 6:52 AM

ಓರ್ವ ವ್ಯಕ್ತಿ ಸರಾಸರಿ 3 ಟೀ/ಕಾಫಿ ಕುಡಿಯುತ್ತಾನೆ. ಒಂದೊಮ್ಮೆ ಆತ ಪೇಪರ್​ ಕಪ್​ನಲ್ಲಿ ಇದನ್ನು ಸೇವನೆ ಮಾಡಿದರೆ ದೇಹಕ್ಕೆ ತುಂಬಾನೇ ಅಪಾಯಕಾರಿಯಾಗಲಿದೆ. ಒಂದು ದಿನಕ್ಕೆ ಸುಮಾರು 75 ಸಾವಿರ ಮೈಕ್ರೋ ಪ್ಲಾಸ್ಟಿಕ್​ ಕಣಗಳು ದೇಹ ಸೇರಿಕೊಳ್ಳಲಿವೆ.

ಪೇಪರ್​ ಕಪ್​ನಲ್ಲಿ ಟೀ-ಕಾಫಿ ಕುಡಿಯೋ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ ಪ್ಲೀಸ್; ಇದು ನಿಮ್ಮ ಒಳಿತಿಗೆ
ಸಾಂದರ್ಭಿಕ ಚಿತ್ರ
Follow us on

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಸಾಕಷ್ಟು ಬದಲಾವಣೆ ಆಗಿದೆ. ಹೋಟೆಲ್​ಗಳಲ್ಲಿ ಸ್ಟೀಲ್​ ಪ್ಲೇಟ್​ಗಳ ಬದಲಿಗೆ ಪೇಪರ್​​​ ಪ್ಲೇಟ್​ಗಳು ಬಂದಿವೆ. ಟೀ-ಕಾಫಿ ಕುಡಿಯೋಕೆ ಗ್ಲಾಸ್ ಲೋಟದ ಬದಲಿಗೆ ಪೇಪರ್ ಲೋಟ ಬಂದಿದೆ. ಆದರೆ, ಈ ಪೇಪರ್ ಲೋಟ ತುಂಬಾನೇ ಅಪಾಯಕಾರಿ ಎನ್ನುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಹೀಗಾಗಿ, ಪೇಪರ್​ ಕಪ್​ನಲ್ಲಿ ಬಿಸಿ ದ್ರವ್ಯವನ್ನು ಹಾಕಿ ಕುಡಿಯುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟು ಬಿಡಿ ಎನ್ನುತ್ತಿದೆ ಅಧ್ಯಯನ.

ಅಂಗಡಿಯಲ್ಲಿ ಕೊಡುವ ಪೇಪರ್​ ಕಪ್​ ಅನ್ನು ಯಾವಾಗಲಾದರೂ ಸರಿಯಾಗಿ ಗಮನಿಸಿದ್ದೀರಾ? ಈ ಕಪ್​ನ ಒಳಭಾಗದಲ್ಲಿ ತೆಳುವಾದ ಪ್ಲಾಸ್ಟಿಕ್​ ಪದರ ಇರುತ್ತದೆ. ಈ ತೆಳ್ಳನೆಯ ಪ್ಲಾಸ್ಟಿಕ್​ ಹಾಕೋದಕ್ಕೂ ಒಂದು ಕಾರಣ ಇದೆ. ಕಾಗದಕ್ಕೆ ಯಾವುದೇ ದ್ರವ್ಯ ತಾಗಿದರೂ ಅದು ಮುದ್ದೆ ಆಗಿ ಬಿಡುತ್ತದೆ. ಆದರೆ, ಅದರ ಮೇಲೆ ಒಂದು ಸಣ್ಣನೆಯ ಪ್ಲಾಸ್ಟಿಕ್​ ಲೇಯರ್ ಇದ್ದರೆ ವಾಟರ್​ಪ್ರೂಫ್​ ರೀತಿ ವರ್ತಿಸುತ್ತದೆ. ಹೀಗಾಗಿ, ತೆಳ್ಳನೆಯ ಪೇಪರ್​ ಲೇಯರ್​ ಹಾಕಲಾಗುತ್ತದೆ.

ಈ ಪೇಪರ್​ ಕಪ್​ನಲ್ಲಿ ಬಿಸಿ ದ್ರವ್ಯ ಹಾಕಿದಾಗ ಪ್ಲಾಸ್ಟಿಕ್​ ಕರಗುತ್ತದೆ. ವೈದ್ಯರು 100 ಎಂಎಲ್​ ಕಪ್​ನಲ್ಲಿ ಬಿಸಿ ನೀರನ್ನು ಹಾಕಿ 15 ನಿಮಿಷ ಇಟ್ಟಿದ್ದರು. ನಂತರ ಮೈಕ್ರೋಸ್ಕೋಪ್​ ಮೂಲಕ ನೀರನ್ನು ಪರೀಕ್ಷಿಸಲಾಯಿತು. ಈ ವೇಳೆ 25,000ಕ್ಕೂ ಅಧಿಕ ಮೈಕ್ರೋ ಪ್ಲಾಸ್ಟಿಕ್​ ಕಂಡಿದೆ. ಇದರ ಜತೆಗೆ ಜಿಂಕ್​, ಲೆಡ್​ ಅಂಶಗಳು ಕೂಡ ನೀರಿನಲ್ಲಿ ಕಂಡಿದೆ.

ಓರ್ವ ವ್ಯಕ್ತಿ ಸರಾಸರಿ 3 ಟೀ/ಕಾಫಿ ಕುಡಿಯುತ್ತಾನೆ. ಒಂದೊಮ್ಮೆ ಆತ ಪೇಪರ್​ ಕಪ್​ನಲ್ಲಿ ಇದನ್ನು ಸೇವನೆ ಮಾಡಿದರೆ ದೇಹಕ್ಕೆ ತುಂಬಾನೇ ಅಪಾಯಕಾರಿಯಾಗಲಿದೆ. ಒಂದು ದಿನಕ್ಕೆ ಸುಮಾರು 75 ಸಾವಿರ ಮೈಕ್ರೋ ಪ್ಲಾಸ್ಟಿಕ್​ ಕಣಗಳು ದೇಹ ಸೇರಿಕೊಳ್ಳಲಿವೆ. ಈ ಪ್ಲಾಸ್ಟಿಕ್​ ಕಣಗಳು ಕಣ್ಣಿಗೆ ಕಾಣುವುದೇ ಇಲ್ಲ. ಆದರೆ, ಇವು ದೇಹ ಸೇರಿ ಭಾರೀ ತೊಂದರೆ ಉಂಟು ಮಾಡುತ್ತದೆ ಎಂದು ಅಧ್ಯಯನ ಹೇಳಿದೆ.

ಇದನ್ನೂ ಓದಿ: ‘5 A Day’: ಎರಡು ಹಣ್ಣು – ಮೂರು ತರಕಾರಿ.. ಪ್ರತಿದಿನವೂ ಸೇವಿಸುವುದರಿಂದ ಆರೋಗ್ಯ ವೃದ್ಧಿ!