ಉತ್ತಮ ಮುಂಗಾರಿನ ಖುಷಿಯಲ್ಲಿದ್ದವರಿಗೆ ಶಾಕ್ ಕೊಟ್ಟ ಸೋಯಾಬೀನ್ ಬೀಜ

ಹಾವೇರಿ: ಕಳೆದ ಕೆಲವು ವರ್ಷಗಳಿಂದ ಭೀಕರ ಬರಗಾಲ ಮತ್ತು ಅತಿವೃಷ್ಟಿ ಅನುಭವಿಸಿದ್ದ ಹಾವೇರಿ ಜಿಲ್ಲೆಯ ರೈತರು ಈ ಭಾರಿ ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಆಗಾಗ ಮಳೆ ಆಗುತ್ತಿರುವುದರಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಈಗಾಗಲೆ ಸೋಯಾಬೀನ್ ಬೀಜ ಬಿತ್ತನೆ ಮಾಡಿರುವ ರೈತರಿಗೆ ಶಾಕ್ ಆಗಿದೆ. ಹಾವೇರಿ ತಾಲೂಕಿನ ವರದಾಹಳ್ಳಿ ಮತ್ತು ಕರ್ಜಗಿ ಭಾಗದಲ್ಲಿನ ಹೆಚ್ಚಿನ ಪ್ರಮಾಣದ ರೈತರು ಸೋಯಾಬೀನ್ ಬೀಜವನ್ನು ಬಿತ್ತನೆ ಮಾಡಿದ್ದರು. ಕೆಲವರು ರೈತ ಸಂಪರ್ಕ‌ ಕೇಂದ್ರದ ಮೂಲಕ ಬಿತ್ತನೆ […]

ಉತ್ತಮ ಮುಂಗಾರಿನ ಖುಷಿಯಲ್ಲಿದ್ದವರಿಗೆ ಶಾಕ್ ಕೊಟ್ಟ ಸೋಯಾಬೀನ್ ಬೀಜ

Updated on: Jun 07, 2020 | 3:31 PM

ಹಾವೇರಿ: ಕಳೆದ ಕೆಲವು ವರ್ಷಗಳಿಂದ ಭೀಕರ ಬರಗಾಲ ಮತ್ತು ಅತಿವೃಷ್ಟಿ ಅನುಭವಿಸಿದ್ದ ಹಾವೇರಿ ಜಿಲ್ಲೆಯ ರೈತರು ಈ ಭಾರಿ ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಆಗಾಗ ಮಳೆ ಆಗುತ್ತಿರುವುದರಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಈಗಾಗಲೆ ಸೋಯಾಬೀನ್ ಬೀಜ ಬಿತ್ತನೆ ಮಾಡಿರುವ ರೈತರಿಗೆ ಶಾಕ್ ಆಗಿದೆ.

ಹಾವೇರಿ ತಾಲೂಕಿನ ವರದಾಹಳ್ಳಿ ಮತ್ತು ಕರ್ಜಗಿ ಭಾಗದಲ್ಲಿನ ಹೆಚ್ಚಿನ ಪ್ರಮಾಣದ ರೈತರು ಸೋಯಾಬೀನ್ ಬೀಜವನ್ನು ಬಿತ್ತನೆ ಮಾಡಿದ್ದರು. ಕೆಲವರು ರೈತ ಸಂಪರ್ಕ‌ ಕೇಂದ್ರದ ಮೂಲಕ ಬಿತ್ತನೆ ಬೀಜ ಖರೀದಿ ಮಾಡಿದ್ದರೆ, ಮತ್ತೆ ಕೆಲವು ರೈತರು ಖಾಸಗಿ ಅಂಗಡಿಗಳಲ್ಲಿ ಸೋಯಾಬೀನ್ ಬಿತ್ತನೆ ಬೀಜ ಖರೀದಿಸಿ ತಂದು ಬಿತ್ತನೆ ಮಾಡಿದ್ದರು.

ಕರ್ಜಗಿ ಮತ್ತು ವರದಾಹಳ್ಳಿ ಗ್ರಾಮಗಳ ಇಪ್ಪತ್ತಕ್ಕೂ ಅಧಿಕ ರೈತರು ಐವತ್ತಕ್ಕೂ ಅಧಿಕ ಎಕರೆಯಲ್ಲಿ ಬಿತ್ತನೆ ಮಾಡಿದ್ದ ಸೋಯಾಬೀನ್ ಮೊಳಕೆ ಒಡೆದಿಲ್ಲ. ನೆಲದಲ್ಲಿ ನೋಡಿದರೆ ಬೀಜ ಮೊಳಕೆ ಒಡೆಯದೆ ಮುಟುರು ಮುಟುರಿನಂತಾಗಿದೆ. ಹೀಗಾಗಿ ರೈತರು ಕಳಪೆ ಬಿತ್ತನೆ ಬೀಜ ವಿತರಣೆ ಆಗಿದೆ ಎಂದು ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಕರ್ಜಗಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಬದಲಿಸಿ‌ ಕೊಡುವುದಾಗಿ ಅಧಿಕಾರಿಗಳು ಕೆಲವು ದಿನಗಳಿಂದ ಹೇಳುತ್ತಾ ಬಂದಿದ್ದರೂ ಬಿತ್ತನೆ ಬೀಜ ಬದಲಾವಣೆ ಆಗಿಲ್ಲ. ಅನಿವಾರ್ಯ ಎನ್ನುವ ಹಾಗೆ ರೈತರು ಅವುಗಳನ್ನೆ ಒಯ್ದು ಬಿತ್ತನೆ ಮಾಡಿದರೂ ಬೀಜ ಮೊಳಕೆ ಒಡೆಯುತ್ತಿಲ್ಲ. ಇದರಿಂದ ರೈತರು ರೈತ ಸಂಪರ್ಕ ಕೇಂದ್ರ ಮತ್ತು ಬೀಜ ಕಂಪನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಾಹಳ್ಳಿ ಗ್ರಾಮದ ರೈತರ ಇಪ್ಪತ್ತಕ್ಕೂ ಅಧಿಕ ಎಕರೆ ಜಮೀನಿನಲ್ಲಿ ಸೋಯಾಬೀನ್ ಮೊಳಕೆ ಒಡೆಯದೆ ಹಾಳಾಗಿರುವುದು ಗಮನಕ್ಕೆ ಬಂದ ನಂತರ ಕೃಷಿ ಇಲಾಖೆ ಅಧಿಕಾರಿಗಳು ಸೋಯಾಬೀನ್ ಬಿತ್ತನೆ ಮಾಡಿದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತರಿಗೆ ಆಗಿರುವ ಸಮಸ್ಯೆ ಕುರಿತು ಚರ್ಚಿಸಿ ಪರಿಹರಿಸುವ ಭರವಸೆ ನೀಡಿದ್ದಾರೆ. ಅಧಿಕಾರಿಗಳ ಭೇಟಿ ವೇಳೆ ರೈತರು, ಹಾನಿಗೆ ಒಳಗಾದವರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಹಾಗೂ ಕಳಪೆ ಬಿತ್ತನೆ ಬೀಜ ವಿತರಣೆ ಮಾಡಿದ ಬೀಜ ಕಂಪನಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Published On - 8:52 am, Sun, 7 June 20