ಚಿಕ್ಕಮಗಳೂರು: ಹುಲಿ ಯೋಜನೆ, ಪರಿಸರ ಸೂಕ್ಷ್ಮ ವಲಯ ಯೋಜನೆ ವಿರೋಧಿಸಿ ಎನ್.ಆರ್. ಪುರ ತಾಲೂಕು ಬಂದ್ ಗೆ ಕೊಟ್ಟಿದ್ದ ಕರೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಎನ್.ಆರ್. ಪುರ ತಾಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿ ವರ್ತಕರು ಬೆಂಬಲ ಸೂಚಿಸಿದ್ರು. ಪಟ್ಟಣದ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೂ ಸುಮಾರು ಎರಡು ಕಿಲೋಮೀಟರ್ ನಡೆದ ಬೃಹತ್ ಪಾದಯಾತ್ರೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.
ಇದೇ ಮೊದಲ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಹಳ್ಳಿ ಹಳ್ಳಿಯಿಂದ ರೈತರು ಬಂದು ಜನ ವಿರೋಧಿ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾವಿರಾರು ಸಂಖ್ಯೆಯಲ್ಲಿ ನೆರೆದ ರೈತರು, ಭದ್ರಾ ಹುಲಿ ಯೋಜನೆಯ ಬಫರ್ ಜೋನ್ ಹಾಗೂ ಪರಿಸರ ಸೂಕ್ಷ್ಮವಲಯ ಯೋಜನೆ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು. ಎನ್.ಆರ್ ಪುರ ತಾಲೂಕಿನ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ 30ಕ್ಕೂ ಅಧಿಕ ಹಳ್ಳಿಗಳು ಸೇರಿದಂತೆ ಮಲೆನಾಡು ಭಾಗದ ಹತ್ತಾರು ಹಳ್ಳಿಗಳಿಗೂ ಈ ಯೋಜನೆ ಮಾರಕವಾಗಲಿದೆ ಅಂತಾ ಪ್ರತಿಭಟನಾನಿರತ ರೈತರು ಆಕ್ರೋಶ ಹೊರಹಾಕಿದರು.
ಪಕ್ಷಾತೀತವಾಗಿ ನಡೆದ ಈ ಬಂದ್ ಗೆ ಮಲೆನಾಡು ರೈತ ಹಿತ ರಕ್ಷಣಾ ಸಮಿತಿ ಕರೆ ಕೊಟ್ಟಿತ್ತು. ತಾಲೂಕು ಕಚೇರಿಯಲ್ಲಿ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಯಾವುದೇ ಕಾರಣಕ್ಕೂ ರಾಜ್ಯ, ಕೇಂದ್ರ ಸರ್ಕಾರಗಳು ಜನವಿರೋಧಿ ಯೋಜನೆಗಳನ್ನು ಜಾರಿಗೆ ತಂದು ಜನರ ಬದುಕಿಗೆ ಕಲ್ಲು ಹಾಕೋ ಕೆಲಸ ಮಾಡಬಾರದು, ಒಂದು ವೇಳೆ ಆ ಪ್ರಯತ್ನಕ್ಕೆ ಮುಂದಾದ್ರೆ ಭಾರೀ ದಂಡವನ್ನು ತೆತ್ತಬೇಕು ಅಂತ ರೈತ ಮುಖಂಡರು ಆಕ್ರೋಶ ಹೊರಹಾಕಿದ್ರು. ಸಾವಿರಾರು ಜನರು ಭಾಗಿಯಾಗಿದ್ದ ಪ್ರತಿಭಟನೆ ಸಮಾವೇಶದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಟಿ ಡಿ ರಾಜೇಗೌಡ, ಮಾಜಿ ಶಾಸಕ ಡಿ.ಎನ್ ಜೀವರಾಜ್ ಸೇರಿದಂತೆ ಮೂರು ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.