ಮೈಸೂರು: ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಾಣಿಸಿಕೊಳ್ಳುವ ಹಾರುವ ಹಾವು ಮೈಸೂರಿನಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ ಕುತೂಹಲ ಮೂಡಿಸಿದೆ. ಮೈಸೂರಿನ ರಾಮಾನುಜ ರಸ್ತೆಯ ವೆಂಕಟರಮಣ ಎಂಬುವರ ಮನೆಯ ಪಕ್ಕದಲ್ಲಿದ್ದ ಮರದ ಮೇಲಿಂದ ಹಾವು ಮನೆಯ ಮೇಲ್ಛಾವಣಿಗೆ ಬಿದ್ದಿದೆ. ನಂತರ ಮನೆ ಬಾಗಿಲಿನ ಗ್ರಿಲ್ನಲ್ಲಿ ಕಳೆದ ರಾತ್ರಿ ಕಾಣಿಸಿಕೊಂಡಿದೆ.
ಹಾವನ್ನು ನೋಡಿ ಗಾಬರಿಗೊಂಡ ಮನೆಯ ಮಾಲೀಕರು ಉರಗ ತಜ್ಞರನ್ನು ಸಂಪರ್ಕ ಮಾಡಿದ್ದಾರೆ. ಮತ್ತೆ ಮಾಲೀಕ ನೋಡುವಷ್ಟರಲ್ಲಿ ಹಾವು ನಾಪತ್ತೆಯಾಗಿದೆ. ಮನೆಯಲ್ಲಿ ಕಾಣಿಸಿಕೊಂಡಿದ್ದ ವೇಳೆ ಮನೆಯವರು ತಮ್ಮ ಮೊಬೈಲ್ನಲ್ಲಿ ಫೋಟೋ ಸೆರೆ ಹಿಡಿದಿದ್ದು, ಅದನ್ನು ಉರಗ ತಜ್ಞ ಸ್ನೇಕ್ ಶಾಮ್ ಅವರಿಗೆ ತೋರಿಸಿದಾಗ ಇದು ಹಾರುವ ಹಾವು ಎಂದು ತಿಳಿದು ಬಂದಿದೆ.
ಹಾರುವ ಹಾವಿನ ವಿಶೇಷ
ಭಾರತದಲ್ಲಿರುವ 270ಕ್ಕೂ ಹೆಚ್ಚು ವಿಧದ ಹಾವುಗಳಲ್ಲಿ ಈ ಹಾರುವ ಹಾವು ಕೂಡ ಒಂದಾಗಿದೆ. ಈ ಹಾವು ಸಾಮಾನ್ಯವಾಗಿ ಎತ್ತರದ ಮರದಲ್ಲಿ ವಾಸಮಾಡುತ್ತದೆ. ಈ ಹಾವುಗಳು ನೆಲದಲ್ಲಿ ಸಂಚಾರ ಮಾಡುವುದಕ್ಕಿಂತ ಹೆಚ್ಚಾಗಿ ಮರದಿಂದ ಮರಕ್ಕೆ ಹಾರಿ ಆಹಾರ ಹುಡುಕಿಕೊಳ್ಳುತ್ತವೆ. ಹೆಚ್ಚಾಗಿ ಹಸಿರು ಹಾಗೂ ಎತ್ತರದ ಮರಗಳಿರುವ ಮಲೆನಾಡು ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ.
ಅದರಲ್ಲಿ ಸಣ್ಣ ಕೀಟಗಳು, ಪಕ್ಷಿ ಮೊಟ್ಟೆ, ಹಲ್ಲಿಗಳು, ಓತಿಕ್ಯಾತಗಳನ್ನು ತಿಂದು ಜೀವಿಸುತ್ತವೆ. ನೋಡಲು ಸುಂದರವಾಗಿರುವ ಈ ಹಾವು, ಕೆಂಪು, ಕಪ್ಪು, ಕಂದು ಬಣ್ಣದಲ್ಲಿರುತ್ತವೆ. ಈ ಹಾವುಗಳಿಗೆ ರೆಕ್ಕೆ ಇಲ್ಲದಿದ್ದರು ಎತ್ತರ ಮರದಿಂದ ಸಣ್ಣ ಮರದ ಕಡೆ ಗಾಳಿಯಲ್ಲಿ ತೇಲುತ್ತವೆ. ಭಾರತದಲ್ಲಿ ಮರದ ಹಾವು ಸಾಕಷ್ಟಿದ್ದರೂ, ಹಾರುವ ಹಾವು ಇದೊಂದೆ ಎಂಬುದು ವಿಶೇಷ.
ಮೈಸೂರಿಗೆ ಬಂದಿದ್ದು ಹೇಗೆ?
ಮೈಸೂರಿನಲ್ಲಿ ಕಳೆದ ಮೂರು ತಿಂಗಳ ಹಿಂದೆ ನಗರದ ಕೈಗಾರಿಕ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಅದಾದ ನಂತರ ಅಗ್ರಹಾರದಲ್ಲಿ ಕಾಣಿಸಿದೆ. ಇದು ವಿಷಕಾರಿ ಹಾವಲ್ಲ, ಮನುಷ್ಯನಿಗೆ ಕಚ್ಚಿದರೆ ಅಪಾಯವಿಲ್ಲ. ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಈ ಹಾವುಗಳು ಕಂಡು ಬರುತ್ತವೆ.
Published On - 4:52 pm, Fri, 5 June 20