ಆ ಮೂವರಿಗಾಗಿ ಇನ್ನಿಬ್ಬರು ಕೆರೆಗೆ ಹಾರಿದ್ರು; ಮುಗಿದೇ ಹೋಯ್ತು ಕತೆ ಎನ್ನುವಾಗ ನಡೆಯಿತು ‘ಹೊನ್ನಯ್ಯ’ನ ಪವಾಡ
ಇನ್ನೇನು ಐವರೂ ಮುಳುಗಿ ಪ್ರಾಣ ಕಳೆದುಕೊಳ್ಳಬೇಕೆಂಬ ಸಂದರ್ಭದಲ್ಲಿ ಪವಾಡವೇ ನಡೆದಿದೆ. 5 ಜನರೂ ಅಪಾಯದಲ್ಲಿದ್ದಾರೆ ಎನ್ನುವುದು ಕೆರೆಯ ಹತ್ತಿರವೇ ಇದ್ದ ಹೊನ್ನಯ್ಯ ಎಂಬ ವ್ಯಕ್ತಿಯ ಗಮನಕ್ಕೆ ಬಂದಿದೆ. ವಿಷಯ ತಿಳಿದ ತಕ್ಷಣ ಕೊಂಚವೂ ತಡಮಾಡದೇ ಆತ ಸಮಯಪ್ರಜ್ಞೆ ಮೆರೆದು ಎಲ್ಲರನ್ನೂ ರಕ್ಷಿಸಿದ್ದಾನೆ.

ತುಮಕೂರು: ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ಕಾಪಾಡಲೆಂದು ತಾಯಿ ಜಿಗಿದರೆ, ಆಕೆಯನ್ನು ಕಾಪಾಡಲೆಂದು ಜೊತೆಯಲ್ಲಿದ್ದ ಮಗಳು ಮತ್ತು ಇನ್ನಿಬ್ಬರು ಮಹಿಳೆಯರು ನೀರಿಗೆ ಧುಮುಕಿ ಅಪಾಯಕ್ಕೆ ಸಿಲುಕಿದ್ದ ಘಟನೆ ಗುಬ್ಬಿ ತಾಲ್ಲೂಕಿನ ಕಡಬ ಕೆರೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬ ಸಮಯಪ್ರಜ್ಞೆ ಮೆರೆದು ಐವರನ್ನೂ ರಕ್ಷಿಸಿರುವ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಘಟನೆಯ ವಿವರ: ಮುತ್ತಮ್ಮ ಎಂಬ ಮಹಿಳೆ ತನ್ನ 8 ವರ್ಷದ ಮಗ ಚಿನ್ನು ಹಾಗೂ 11 ವರ್ಷದ ಮಗಳು ಸಹನಾಳನ್ನು ಕರೆದುಕೊಂಡು ಬಟ್ಟೆ ಒಗೆಯಲೆಂದು ಕಡಬ ಕೆರೆಗೆ ತೆರಳಿದ್ದಾರೆ. ಅದೇ ಹೊತ್ತಿನಲ್ಲಿ ಗ್ರಾಮದ ಶಿಲ್ಪ ಮತ್ತು ಪದ್ಮ ಎಂಬುವವರು ಮುತ್ತಮ್ಮಳಿಗೆ ಜೊತೆಯಾಗಿದ್ದಾರೆ.
ಬಟ್ಟೆ ಒಗೆಯುತ್ತಿರಬೇಕಾದರೆ ಬಾಲಕ ಚಿನ್ನು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಮಗ ನೀರಿಗೆ ಬಿದ್ದಿದ್ದನ್ನು ನೋಡಿ ಗಾಬರಿಗೊಂಡ ತಾಯಿ ಮುತ್ತಮ್ಮ ಆತನನ್ನು ರಕ್ಷಿಸಲೆಂದು ತಾನೇ ಜಿಗಿದಿದ್ದಾಳೆ. ಆದರೆ, ಕಾಪಾಡಲು ಹೋದ ಮುತ್ತಮ್ಮ ಕೆರೆಯಲ್ಲಿ ಮುಳುಗಲಾರಂಭಿಸಿದ್ದಾಳೆ.
ಈ ವೇಳೆ ದಡದ ಮೇಲಿದ್ದ ಮುತ್ತಮ್ಮಳ ಮಗಳು ಸಹನಾ ಹಾಗೂ ಜೊತೆಯಲ್ಲಿದ್ದ ಶಿಲ್ಪಾ ಮತ್ತು ಪದ್ಮಾ ಮುಳುಗುತ್ತಿದ್ದ ಅಮ್ಮ, ಮಗನನ್ನು ಕಾಪಾಡಲೆಂದು ತಾವೂ ಕೆರೆಗೆ ಜಿಗಿದಿದ್ದಾರೆ. ದುರದೃಷ್ಟವಶಾತ್ ಇಬ್ಬರನ್ನು ರಕ್ಷಿಸಲೆಂದು ಜಿಗಿದ ಈ ಮೂವರೂ ಅವರಂತೆಯೇ ಅಪಾಯಕ್ಕೆ ಸಿಲುಕಿ ಒದ್ದಾಡಲಾರಂಭಿಸಿದ್ದಾರೆ.
ಇನ್ನೇನು ಐವರೂ ಮುಳುಗಿ ಪ್ರಾಣ ಕಳೆದುಕೊಳ್ಳಬೇಕೆಂಬ ಸಂದರ್ಭದಲ್ಲಿ ಪವಾಡವೇ ನಡೆದಿದೆ. 5 ಜನರೂ ಅಪಾಯದಲ್ಲಿದ್ದಾರೆ ಎನ್ನುವುದು ಕೆರೆಯ ಹತ್ತಿರವೇ ಇದ್ದ ಹೊನ್ನಯ್ಯ ಎಂಬ ವ್ಯಕ್ತಿಯ ಗಮನಕ್ಕೆ ಬಂದಿದೆ. ವಿಷಯ ತಿಳಿದ ತಕ್ಷಣ ಕೊಂಚವೂ ತಡಮಾಡದೇ ಆತ ಸಮಯಪ್ರಜ್ಞೆ ಮೆರೆದು ಎಲ್ಲರನ್ನೂ ರಕ್ಷಿಸಿದ್ದಾನೆ.
ಒಂದು ವೇಳೆ ಹೊನ್ನಯ್ಯ ಸ್ಥಳದಲ್ಲಿ ಇಲ್ಲದೇ ಹೋಗಿದ್ದರೆ ದಾರುಣ ಘಟನೆಯೊಂದಕ್ಕೆ ಕಡಬ ಕೆರೆ ಸಾಕ್ಷಿಯಾಗಬೇಕಿತ್ತು. ಆದರೆ, ತನ್ನ ಜೀವವನ್ನು ಪಣಕ್ಕಿಟ್ಟು ಕೆರೆಗೆ ಜಿಗಿದ ಹೊನ್ನಯ್ಯ ಅನಾಹುತವನ್ನು ತಪ್ಪಿಸಿದ್ದಾನೆ. ಈತನ ಕಾರ್ಯವನ್ನು ಗೌರವಿಸಿ ಗ್ರಾಮಸ್ಥರು ಹಾಗೂ ಪೊಲೀಸ್ ಪೇದೆ ಚಂದ್ರಪ್ಪ ಸನ್ಮಾನ ಹೊನ್ನಯ್ಯನಿಗೆ ಸನ್ಮಾನ ಮಾಡಿದ್ದಾರೆ. ಆಪತ್ಕಾಲದಲ್ಲಿ ದೇವರಂತೆ ಬಂದು ಸಾಹಸ ಮೆರೆದ ಹೊನ್ನಯ್ಯನಿಗೆ ಈಗ ಶ್ಲಾಘನೆಯ ಮಹಾಪೂರವೇ ಹರಿದುಬರುತ್ತಿದೆ.