Personal Finance: ಬಡ್ಡಿ ದರ ಹೆಚ್ಚಾಗುತ್ತಿರುವಾಗ ಪೋರ್ಟ್ಫೋಲಿಯೋದಲ್ಲಿ ಬದಲಾವಣೆ ತಂದು ಲಾಭ ಪಡೆಯುವುದು ಹೇಗೆ?
Personal Finance: ಕೇಂದ್ರ ಬಜೆಟ್ ಮಂಡನೆಯಾದ ನಂತರ ಬಾಂಡ್ಗಳ ಹೂಡಿಕೆ ಮೇಲೆ ಸಿಗುವ ಬಡ್ಡಿ ದರದಲ್ಲಿ ಏರಿಕೆ ಮುಂದುವರಿದಿದೆ. ಇಂಥ ಸಂದರ್ಭದಲ್ಲಿ ಹಣ ಹೂಡಿಕೆ ಹೇಗಿರಬೇಕು ಎಂದು ತಿಳಿಸಿಕೊಡುವ ಲೇಖನ ಇದು.

ಈಕ್ವಿಟಿ, ಮ್ಯೂಚುವಲ್ ಫಂಡ್, ಚಿನ್ನ ಹೀಗೆ ತಮ್ಮ ಹೂಡಿಕೆಯನ್ನು ವಿವಿಧೆಡೆ ಹಂಚಿದವರೂ ಈಗ ಮತ್ತೊಮ್ಮೆ ಬಡ್ಡಿ ಬರುವಂಥ ಇನ್ಸ್ಟ್ರುಮೆಂಟ್ಗಳಲ್ಲಿ ಹಣ ಇಡಬಹುದಾ ಎಂದು ಆಲೋಚಿಸುವ ಟ್ರೆಂಡ್ ಬಂದಿದೆ. ಈ ರೀತಿ ಬರುವ ಆದಾಯಕ್ಕೆ ನಿಶ್ಚಿತ ಆದಾಯ ಅಥವಾ ಫಿಕ್ಸೆಡ್ ಇನ್ಕಮ್ ಎನ್ನಲಾಗುತ್ತದೆ. 2021ರ ಕೇಂದ್ರ ಬಜೆಟ್ ನಂತರ ಆಗಿರುವ ಬದಲಾವಣೆ ಇದು. ಸರ್ಕಾರವು ಈ ಸಲ ಬಾಂಡ್ ಮೂಲಕವಾಗಿ ದೊಡ್ಡ ಮೊತ್ತದ ಹಣ ಸಂಗ್ರಹಕ್ಕೆ ಮುಂದಾಗಲಿದೆ. ಆದ್ದರಿಂದ ಬಾಂಡ್ ಯೀಲ್ಡ್ (ಪ್ರತಿಫಲ) ಕೂಡ ಉತ್ತಮವಾಗಿರಲಿದೆ. “ಸರ್ಕಾರದ ಸಾಲ ಮಾಡುವ ದೊಡ್ಡ ಪಟ್ಟಿಯನ್ನೇ ಸಿದ್ಧ ಮಾಡಿಟ್ಟುಕೊಂಡಿರುವುದರಿಂದ ಬಡ್ಡಿ ದರ ಏರಿಕೆ ಆಗುವ ಒತ್ತಡ ಇದೆ. ಆದರೆ ಇದು ಸ್ವಲ್ಪ ಮಟ್ಟಿಗೆ ನಿಧಾನವಾಗಿ ಹಾಗೂ ಕ್ರಮೇಣವಾಗಿ ಆಗಬಹುದು,” ಎಂದು ಕಾರ್ಪೊರೇಟ್ ತರಬೇತುದಾರರಾದ (ಡೆಟ್ ಮಾರ್ಕೆಟ್) ಜೊಯ್ದೀಪ್ ಸೇನ್ ಅಭಿಪ್ರಾಯ ಪಡುತ್ತಾರೆ.
ಬಡ್ಡಿ ದರ ಹೆಚ್ಚಾಗಿ ಸಿಗುತ್ತೆ ಅನ್ನೋದಾದರೆ ಹೂಡಿಕೆಯನ್ನು ಆ ಕಡೆಗೆ ತಿರುಗಿಸಬಹುದಲ್ಲವಾ? ಪ್ರತಿ ತಿಂಗಳು ಆದಾಯ ಬರುವುದಕ್ಕೆ ದಾರಿ ಆಗುತ್ತದೆ. ಏಕೆಂದರೆ, ಸತತವಾಗಿ ಬಡ್ಡಿ ದರ ಇಳಿಯುತ್ತಾ ಬಂದಿತ್ತು ಎಂದು ಬೇರೆ ಕಡೆ ಹೂಡಿಕೆ ಮಾಡುತ್ತಾ ಬಂದಿದ್ದವರು ಈಗ ನಿಶ್ಚಿತ ಆದಾಯ (Fixed Income) ಕಡೆಗೆ ನೋಡಬಹುದು. ಈಗಿನ ಸನ್ನಿವೇಶದಿಂದ ಲಾಭ ಪಡೆಯಬೇಕಾದಲ್ಲಿ ಗಮನಿಸಬೇಕಾದ ಅಂಶಗಳೇನು ಹಾಗೂ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ:
ದೀರ್ಘಾವಧಿಗೆ ಬಡ್ಡಿ ದರಕ್ಕೆ ಲಾಕ್ ಆಗಬೇಡಿ: ದೀರ್ಘಾವಧಿಗೆ ಹೂಡಿಕೆ ಮಾಡಬೇಡಿ. ಏಕೆಂದರೆ ಈಗ ನಿಮ್ಮ ಎಲ್ಲ ಹಣವನ್ನು ಲಾಕ್ ಮಾಡಿಕೊಂಡು ಬಿಟ್ಟರೆ ಇದೇ ಬಡ್ಡಿ ದರವನ್ನೇ ಪಡೆಯುತ್ತಿರುತ್ತೀರಿ. ಈಗಿನ ಬಡ್ಡಿ ದರ ಇನ್ನೂ ಮೇಲೆ ಹೋದರೂ ನಿಮಗೆ ಆ ಲಾಭ ಸಿಗಲ್ಲ. ಅಂಥ ಸ್ಥಿತಿ ಬರಬಾರದು ಅಂದರೆ, ನಾನ್ ಕನ್ವರ್ಟಬಲ್ ಡಿಬೆಂಬಚರ್ಸ್ ಮತ್ತು ಫಿಕ್ಸೆಡ್ ಡೆಪಾಸಿಟ್ನಲ್ಲಿ ಹೂಡಿಕೆ ಮಾಡಿ. ಅದು 12ರಿಂದ 15 ತಿಂಗಳಲ್ಲಿ ಮೆಚ್ಯೂರ್ ಆಗಬೇಕು. ಒಂದು ವೇಳೆ ಬಡ್ಡಿ ದರ ಜಾಸ್ತಿಯಾದಲ್ಲಿ ಮೆಚ್ಯೂರಿಟಿ ಆಗಿ, ಬಂದ ಮೊತ್ತವನ್ನು ಹೆಚ್ಚಿನ ಬಡ್ಡಿ ದರಕ್ಕೆ ಮತ್ತೆ ಡೆಪಾಸಿಟ್ ಮಾಡಬಹುದು.
ಗಿಲ್ಟ್ ಫಂಡ್ಗಳಲ್ಲಿ ಹೂಡಿಕೆ ಬೇಡ: ಬಾಂಡ್ ಫಂಡ್ಗಳ ಪೈಕಿ ಗಿಲ್ಟ್ಫಂಡ್ಗಳು ಮತ್ತು ದೀರ್ಘಾವಧಿಯ ಬಾಂಡ್ ಫಂಡ್ಗಳಲ್ಲಿ ಸಾಧ್ಯವಾದಷ್ಟೂ ಹೂಡಿಕೆ ಮಾಡಬೇಡಿ. ವ್ಯಾಲ್ಯೂ ರೀಸರ್ಚ್ ಮಾಹಿತಿ ಪ್ರಕಾರ, ಫೆಬ್ರವರಿ 26, 2021ಕ್ಕೆ ಕೊನೆಯಾದಂತೆ ಈ ರೀತಿಯ ಮೂರು ವರ್ಷದ ಅವಧಿಯ ಫಂಡ್ಗಳು ಶೇ 9.27ರಿಂದ ಶೇ 9.1ರಷ್ಟು ರಿಟರ್ನ್ಸ್ (CAGR) ಕ್ರಮವಾಗಿ ನೀಡಿವೆ. ಈ ಹಿಂದಿನ ರಿಟರ್ನ್ಸ್ ಚೆನ್ನಾಗಿರಬಹುದು. ಆದರೆ ಇಂಥದ್ದರಲ್ಲಿ ಹೂಡಿಕೆ ಮಾಡದಿರುವುದು ಉತ್ತಮ. ಏಕೆಂದರೆ ಈ ಫಂಡ್ಗಳು ಲಾಂಗ್ ಟರ್ಮ್ ಬಾಂಡ್ಗಳ ಮೇಲೆ ಹೂಡಿಕೆ ಮಾಡುತ್ತವೆ. ಇದರಿಂದ ಬದಲಾಗುವ ಬಡ್ಡಿ ದರದ ಲಾಭ ಸಿಗಲ್ಲ. ಬಡ್ಡಿ ದರ ಹೆಚ್ಚುತ್ತಾ ಸಾಗುವ ಕಾಲ ಘಟ್ಟದಲ್ಲಿ ಹೂಡಿಕೆದಾರರಿಗೆ ಇದರಿಂದ ನಷ್ಟವಾಗುತ್ತೆ.
2020ರ ಕೊನೆಗೆ ಉಳಿತಾಯ ಖಾತೆಯಲ್ಲಿ (ಸೇವಿಂಗ್ಸ್ ಬ್ಯಾಂಕ್ ಅಕೌಂಟ್) ಇರುವ ಹಣಕ್ಕೆ ಸಿಗುವ ಬಡ್ಡಿಗಿಂತ ಲಿಕ್ವಿಡ್ ಫಂಡ್ಗಳಿಗೆ ಸಿಗುವ ರಿಟರ್ನ್ಸ್ ಕಡಿಮೆ ಇತ್ತು. ಆದರೆ ಈಗ ಸ್ಥಿತಿ ಬದಲಾಗಿದೆ. ದರ ಇನ್ನೂ ಮೇಲೆ ಹೋಗಬಹುದು. ಈ ಫಂಡ್ಗಳು ಅಲ್ಪಾವಧಿಯ ಹಣ ಹೂಡಿಕೆ ಮಾರ್ಗಗಳಂತೆ ಸಹಾಯ ಮಾಡುತ್ತವೆ. “ಬಡ್ಡಿ ದರ ಹೆಚ್ಚಾಗುತ್ತಾ ಸಾಗಿದಂತೆ ಅದರ ಅಡ್ಡಿ ಪರಿಣಾಮ ಈಗಿನ ಬಾಂಡ್/ಬಾಂಡ್ ಫಂಡ್ ಹೂಡಿಕೆ ಮೇಲೆ ಆಗುತ್ತದೆ. ಬಡ್ಡಿ ದರ ಹಾಗೂ ಬಾಂಡ್ ಬೆಲೆ ಎರಡೂ ವಿರುದ್ಧ ದಿಕ್ಕಿನಲ್ಲಿ ಸಾಗುತ್ತವೆ. ಆದರೆ ಈಗ ಬಡ್ಡಿ ದರ ಮೇಲ್ಮುಖವಾಗಿ ಸಾಗುತ್ತಿರುವುದು ಸರಿಯಾದ ಹಾದಿಯಲ್ಲಿದೆ. ಅದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬೆಂಬಲ ಇದೆ. ಹೂಡಿಕೆದಾರರು ಆತಂಕಪಡುವ ಅಗತ್ಯ ಇಲ್ಲ,” ಎನ್ನುತ್ತಾರೆ ಸೇನ್.
ಒಂದು ವೇಳೆ ನೀವು ಒಂದು ವರ್ಷದ ಅವಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೂಡಿಕೆ ಮಾಡುವುದಕ್ಕೆ ಬಯಸಿದಲ್ಲಿ ಮನಿ ಮಾರ್ಕೆಟ್ ಫಂಡ್ಗಳು ಮತ್ತು ಕಡಿಮೆ ಅವಧಿಯ ಫಂಡ್ಗಳು ಉತ್ತಮ. ಈ ಬಾಂಡ್ಗಳು ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮೆಚ್ಯೂರ್ ಆಗುವುದರಿಂದ ಹೆಚ್ಚುತ್ತಿರುವ ಬಡ್ಡಿ ದರಗಳು ಇವುಗಳ ಮೇಲೆ ಕನಿಷ್ಠ ಮಟ್ಟದ ಪ್ರಭಾವ ಬೀರುತ್ತವೆ.
ಹೂಡಿಕೆ ವೈವಿಧ್ಯತೆಯಿಂದ ಇರಲಿ: ಜಾಗತಿಕವಾಗಿಯೇ ಕೇಂದ್ರ ಬ್ಯಾಂಕ್ಗಳು ದೊಡ್ಡ ಪ್ರಮಾಣದಲ್ಲಿ ನಗದು ಪೂರೈಕೆ ಮಾಡುತ್ತಿರುವ ಸನ್ನಿವೇಶದಲ್ಲಿ ಒಂದು ವೇಳೆ ಬಡ್ಡಿ ದರಕ್ಕಿಂತ ಹಣದುಬ್ಬರ ಜಾಸ್ತಿಯಾದಲ್ಲಿ ಹೂಡಿಕೆದಾರರಿಗೆ ನಕಾರಾತ್ಮಕವಾದ ರಿಯಲ್ ರೇಟ್ ಆಫ್ ರಿಟರ್ನ್ಸ್ ದೊರೆಯುತ್ತದೆ. ಅಂಥ ವೇಳೆಯಲ್ಲಿ ಫಿಕ್ಸೆಡ್ ಇನ್ಕಮ್ ಪೋರ್ಟ್ಫೋಲಿಯೋಗೆ ಹಣದ ಖರೀದಿ ಶಕ್ತಿಯು ಕಡಿಮೆ ಆಗುತ್ತದೆ. ಈ ಸವಾಲಿನಿಂದ ಆಚೆಗೆ ಬರಬೇಕು ಅಂದರೆ ಸ್ವಲ್ಪ ಹಣವನ್ನು ಮ್ಯೂಚುವಲ್ ಫಂಡ್ ಮೂಲಕ ಚಿನ್ನ ಮತ್ತು ಈಕ್ವಿಟಿಯಲ್ಲಿ ಆಗಾಗ ಹೂಡಿಕೆ ಮಾಡಬಹುದು.
ನಗದು ಇನ್ಸ್ಟ್ರುಮೆಂಟ್ನಲ್ಲಿ ಹೂಡಿಕೆ: ಬಡ್ಡಿ ದರ ಹೆಚ್ಚಳ ಆಗುತ್ತಾ ಸಾಗಿದೆ ಎಂದಾಗ ಫಿಕ್ಸೆಡ್ ಡೆಪಾಸಿಟ್ ಮತ್ತು ಸಾಲ ಎರಡರ ಬಡ್ಡಿ ದರವೂ ಮೇಲೇರುತ್ತದೆ. ಒಂದು ವೇಳೆ ಫ್ಲೋಟಿಂಗ್ ದರದಲ್ಲಿ ಸಾಲ ಪಡೆದಿದ್ದಲ್ಲಿ ಆ ಕಡೆ ಗಮನ ನೀಡಿ. ಯಾಕೆಂದರೆ, ಆ ಸಾಲಕ್ಕೆ ಹೆಚ್ಚಿನ ಬಡ್ಡಿಯನ್ನು ಕಟ್ಟುತ್ತಿರುತ್ತೀರಿ. ಒಂದು ವೇಳೆ ಬಡ್ಡಿ ದರ ಸಿಕ್ಕಾಪಟ್ಟೆ ಜಾಸ್ತಿ ಆಗಿಹೋಯಿತು ಎಂದಾದರೆ, ನಿಶ್ಚಿತ ಆದಾಯ ಬರಲಿ ಎಂದು ಮಾಡಿದ್ದ ಹೂಡಿಕೆಯನ್ನು ತೆಗೆದು, ಸಾಲ ತೀರಿಸುವುದು ಉತ್ತಮ. ಅದಕ್ಕಾಗಿ ನಿಮ್ಮ ನಿಶ್ಚಿತ ಆದಾಯ ಹೂಡಿಕೆಯು ಲಿಕ್ವಿಡ್ ಆಗಿರಬೇಕು.
ಚೆನ್ನಾಗಿ ನಿರ್ವಹಣೆ ಮಾಡಿದ ಕ್ರೆಡಿಟ್ ರಿಸ್ಕ್ ಫಂಡ್ಗಳನ್ನು ಆರಿಸಿಕೊಳ್ಳಿ: ಬಡ್ಡಿ ದರ ಮೇಲೆ ಹೋಗಲು ಕೆಲ ಸಲ ಸಮಯ ತೆಗೆದುಕೊಳ್ಳುತ್ತದೆ. ಭಾರೀ ಯೀಲ್ಡ್ (ಪ್ರತಿಫಲ) ಬೆನ್ನು ಬೀಳಬೇಡಿ. ರೇಟಿಂಗ್ ಇಲ್ಲದ ಫಿಕ್ಸೆಡ್ ಡೆಪಾಸಿಟ್ ಮತ್ತು ಬಾಂಡ್ಗಳ ಮೇಲೆ ಹೂಡಿಕೆ ಮಾಡದಿರಿ. ಒಂದು ವೇಳೆ ಜಾಸ್ತಿ ಬಡ್ಡಿಯೇ ಬೇಕಿದ್ದಲ್ಲಿ ಅದರ ಬದಲಿಗೆ ಕ್ರೆಡಿಟ್ ರಿಸ್ಕ್ ಫಂಡ್ಸ್ನಲ್ಲಿ ಹೂಡಿಕೆ ಮಾಡಿ. ಅಂಥ ಸಂದರ್ಭದಲ್ಲಿ ವೈವಿಧ್ಯತೆ ಹೂಡಿಕೆಯಿಂದ ಅನುಕೂಲ ಪಡೆಯುತ್ತೀರಿ.
“ಹೂಡಿಕೆದಾರರು ಒಂದೋ ಬಹಳ ಸುರಕ್ಷಿತ ಲೆಕ್ಕಾಚಾರದಲ್ಲಿ ಅಥವಾ ಸೀಮಿತ ಮೊತ್ತವನ್ನು ಉತ್ತಮ ಇತಿಹಾಸ ಹೊಂದಿದ ಎಎಂಸಿಯ ಕ್ರೆಡಿಟ್ ಫಂಡ್ನಲ್ಲಿ ಹೂಡಿಕೆ ಮಾಡಬೇಕು,” ಎನ್ನುತ್ತಾರೆ ಸುಂದರಂ ಮ್ಯೂಚುವಲ್ ಫಂಡ್ಸ್ ಫಿಕ್ಸೆಡ್ ಇನ್ಕಮ್ ಇನ್ಸ್ಟಿಟ್ಯೂಷನಲ್ ಬಿಜಿನೆಸ್ ಹೆಡ್ ಸಿದ್ಧಾರ್ಥ ಚೌಧರಿ.
ಇದನ್ನೂ ಓದಿ: ಷೇರು ಮಾರ್ಕೆಟ್ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್
Published On - 1:16 pm, Tue, 2 March 21



