ಶೈಕ್ಷಣಿಕ ಸಂಸ್ಥೆಗಳಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದು ಅಭ್ಯಂತರವಿಲ್ಲ ಅಂತಾದರೆ ಸರ್ಕಾರದ ನಿಲುವೇನು? ಪ್ರಶ್ನಿಸಿತು ಹೈಕೋರ್ಟ್
ವಿಚಾರಣೆ ಆರಂಭಗೊಂಡ ಬಳಿಕ ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಾಧೀಶರ ನೇತೃತ್ವದ ಪೀಠವು, ಹಿಜಾಬ್ ನಿಷೇಧಿಸುವ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕು ಅಂತ ಎ ಜಿ ಅವರಿಗೆ ಸೂಚಿಸಿತು.
ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ತರಗತಿಗೆ ಹಿಜಾಬ್ (hijab) ಧರಿಸಿಯೇ ಹಾಜರಾಗುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರಕ್ಕೂ ಹೆಚ್ಚಿನ ಅವಧಿಯಿಂದ ವಿಚಾರಣೆ ನಡೆಸುತ್ತಿರುವ ರಾಜ್ಯ ಹೈಕೋರ್ಟ್ (high court) ವಿಸ್ತೃತ ಪೀಠವು ಸೋಮವಾರ ಅದನ್ನು ಮುಂದುವರಿಸಿತು. ಹಿಜಾಬ್ ಧರಿಸಿ ಶಾಲಾ-ಕಾಲೇಜಿಗಳಿಗೆ ಬರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಬೇಕು ಅಂತ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯದ (Muslim community) ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳನ್ನು ಕೈಗೆತ್ತಿಕೊಂಡ ನ್ಯಾಯಪೀಠವು ಸರ್ಕಾರದ ಪರವಾಗಿ ವಾದಿಸುತ್ತಿರುವ ಅಡ್ವೊಕೇಟ್ ಜನರಲ್ (advocate general) ಅವರ ವಾದವನ್ನು ಸೋಮವಾರ ಆಲಿಸುವುದನ್ನು ಆರಂಭಿಸಿತು. ಇದು ವಿಚಾರಣೆಯ 7ನೇ ದಿನವಾಗಿದೆ.
ವಿಚಾರಣೆ ಆರಂಭಗೊಂಡ ಬಳಿಕ ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಾಧೀಶರ ನೇತೃತ್ವದ ಪೀಠವು, ಹಿಜಾಬ್ ನಿಷೇಧಿಸುವ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕು ಅಂತ ಎ ಜಿ ಅವರಿಗೆ ಸೂಚಿಸಿತು. ಮುಸ್ಲಿಂ ವಿದ್ಯಾರ್ಥಿನಿಯರು ಪ್ರಶ್ನಿಸಿರುವ ಕರ್ನಾಟಕ ಸರ್ಕಾರದ ಫೆಬ್ರವರಿ 5 ರ ಆದೇಶವು ಹಿಜಾಬ್ ಅನ್ನು ನಿಷೇಧಿಬೇಕೆಂದು ಸೂಚಿಸುವುದಿಲ್ಲ, ಅದಕ್ಕೆ ಬದಲಾಗಿ ಆಯಾ ಶಾಲಾ ಕಾಲೇಜಿಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರವನ್ನು ಧರಿಸಿ ವಿದ್ಯಾರ್ಥಿನಿಯರು ಶಾಲಾ ಕಾಲೇಜುಗಳಿಗೆ ಹೋಗಬೇಕು ಎಂಬ ನಿರುಪದ್ರವಕಾರಿ ಅಂಶವನ್ನು ಮಾತ್ರ ಸೂಚಿಸುತ್ತದೆ. ಹಾಗಾಗೇ, ಹಿಜಾಬ್ ಬಗ್ಗೆ ಸರ್ಕಾರದ ನಿಲುವು ಅಸಲಿಗೆ ಏನು ಅಂತ ನ್ಯಾಯಾಲಯ ಪ್ರಶ್ನಿಸಿತು.
‘ನಿಮ್ಮ ನಿಲುವು ಏನು? ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಅನುಮತಿ ನೀಡಬೇಕೆ ಅಥವಾ ಇಲ್ಲವೇ?’ ಎಂದು ಮುಖ್ಯ ನ್ಯಾಯಮೂರ್ತಿಗಳು ಕೇಳಿದರು.
‘ಸರ್ಕಾರೀ ಆದೇಶವನ್ನು ಅನುಷ್ಠಾನಗೊಳಿಸುವ ಭಾಗವು, ಶೈಕ್ಷಣಿಕ ಸಂಸ್ಥೆಗಳ ವಿವೇಚನೆಗೆ ಬಿಟ್ಟಿದೆ,’ ಅಂತ ಎಜಿ ಉತ್ತರಿಸಿದರು.
‘ಅಂದರೆ, ಶೈಕ್ಷಣಿಕ ಸಂಸ್ಥೆಗಳು ಹಿಜಾಬ್ ಧರಿಸಲು ಅನುಮತಿ ನೀಡಿದರೆ ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲವೇ?’ ಎಂದು ಸಿಜೆ ಕೇಳಿದರು.
‘ಒಂದು ಪಕ್ಷ ಶೈಕ್ಷಣಿಕ ಸಂಸ್ಥೆಗಳು ಅನುಮತಿ ನೀಡುವುದಾದರೆ ಮತ್ತು ವಿವಾದ ತಲೆದೋರುವ ಸಂದರ್ಭ ಎದುರಾದರೆ ನಾವೊಂದು ನಿರ್ಧಾರ ತೆಗೆದುಕೊಳ್ಳಬೇಕಾಬಹುದು,’ ಎಂದು ಎ ಜಿ ಹೇಳಿದರು.
‘ಕಾಲೇಜು ನಿಗದಿಪಡಿಸಿರುವ ಸಮವಸ್ತ್ರದ ಬಣ್ಣದಂಥ ಹಿಜಾಬ್ ಇಲ್ಲವೇ ದುಪ್ಪಟ್ಟಾ ಧರಿಸಲು ಅನುಮತಿ ನೀಡಬೇಕು ಎಂದು ಪೀಠದೆದುರು ವಾದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿಲುವೇನು ಅನ್ನೋದು ನಾವು ತಿಳಿದುಕೊಳ್ಳಬೇಕಿದೆ. ಒಂದು ವೇಳೆ, ಅವರು ಯೂನಿಫಾರ್ಮ್ ಭಾಗವಾಗಿರುವ ದುಪ್ಪಟ್ಟಾ ಧರಿಸಿದರೆ ಅದಕ್ಕೆ ಅವಕಾಶವಿದೆಯೇ?’ ಎಂದು ಸಿಜೆ ಮತ್ತಷ್ಟು ವಿವರವಾಗಿ ಕೇಳಿದರು.
‘ನಾವು ಯಾವುದನ್ನೂ ನಿಗದಿಪಡಿಸಿಲ್ಲ ಅನ್ನೋದೇ ನನ್ನ ಉತ್ತರವಾಗಿದೆ. ಯೂನಿಫಾರ್ಮ್ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಶೈಕ್ಷಣಿಕ ಸಂಸ್ಥೆಗಳಿಗೆ ಸರ್ಕಾರದ ಆದೇಶ ನೀಡುತ್ತದೆ. ಧಾರ್ಮಿಕತೆಯನ್ನು ಬಿಂಬಿಸುವ ಬಟ್ಟೆಯಾಗಲೀ ಅಥವಾ ಸಮವಸ್ತ್ರವಾಗಲೀ ಧರಿಸಲು ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಧಾರ್ಮಿಕತೆಯನ್ನು ಬಿಂಬಿಸುವ ಅಂಶ ಸಮವಸ್ತ್ರ ಒಳಗೊಂಡಿರಬಾರದು. ತಾತ್ವಿಕ ಅಂಶದ ಹಿನ್ನೆಲೆಯಲ್ಲಿ ಹೇಳುವುದಾದರೆ, ಕೋಮು ಸೌಹಾರ್ದತೆಯನ್ನು ಪ್ರತಿಪಾದಿಸುವ ಕರ್ನಾಟಕ ಶಿಕ್ಷಣ ಕಾಯ್ದೆಯ ಮುನ್ನುಡಿಯಲ್ಲಿ ತಾವು ಕೇಳಿದ ಪ್ರಶ್ನೆಗೆ ಉತ್ತರವಿದೆ ಎಂದು ಎ ಜಿ ಪ್ರಭುಲಿಂಗ ನಾವದಗಿ ಉತ್ತರಿಸಿದರು.
‘ನೀವೊಂದು ನಿಲುವನ್ನು ತೆಗೆದುಕೊಳ್ಳಲೇಬೇಕು,’ ಎಂದು ಮುಖ್ಯ ನ್ಯಾಯಮೂರ್ತಿಗಳು ಪುನರುಚ್ಛರಿಸಿದರು.
ಫೆಬ್ರುವರಿ 18 ರಂದು ನಡೆದ ವಿಚಾರಣೆಯಲ್ಲಿ ಎಜಿ ನಾವದಗಿ ಅವರು ಸರ್ಕಾರಿ ಆದೇಶವನ್ನು ಮತ್ತಷ್ಟು ಸಮರ್ಪಕವಾದ ಪದಗಳಿಂದ ಬರೆಯಬಹುದಿತ್ತು, ಮತ್ತು ಹಿಜಾಬ್ ಪದ ಬಳಸುವುದನ್ನು ತಪ್ಪಿಸಬಹುದಿತ್ತು ಅಂತ ಅಂಗೀಕರಿಸಿದ್ದರು ಎಂಬ ಅಂಶವನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ವಾದ ವಿವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ಇದನ್ನೂ ಓದಿ: ಹಿಜಾಬ್‌ಗೂ ಈ ಕೊಲೆಗೂ ಲಿಂಕ್ ಇಲ್ಲ ಅನಿಸುತ್ತಿದೆ, ಆರೋಪಿಗಳು ಯಾರು ಅಂತಾ ಗೊತ್ತಾಗಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ