2020- 21ನೇ ಹಣಕಾಸು ವರ್ಷದ ಕೊನೆಯ ತಿಂಗಳಲ್ಲಿ ನಾವಿದ್ದೀವಿ. ಮಾರ್ಚ್ 31ಕ್ಕೆ ಮುಂಚೆ ಮುಗಿಸಲೇಬೇಕಾದ ಕೆಲವು ಆರ್ಥಿಕ ಜವಾಬ್ದಾರಿಗಳು ನಮ್ಮೆಲ್ಲರ ಪಾಲಿಗಿವೆ. ನಿಮ್ಮಲ್ಲಿ ಕೆಲವರು ಈಗಾಗಲೇ ಇವುಗಳನ್ನು ಪೂರ್ತಿ ಮಾಡಿದ್ದೀರಿ ಅಂದರೆ ಆರಾಮವಾಗಿ ಇರಬಹುದು. ಒಂದು ವೇಳೆ ಯಾವುದನ್ನೇ ತಪ್ಪಿಸಿದ್ದರೂ ಈಗಲೂ ಕಾಲ ಮಿಂಚಿಲ್ಲ. ಬೇಗ ಬೇಗ ಮಾಡಿ ಮುಗಿಸಿ. ಆದಾಯ ತೆರಿಗೆ ಅನ್ನೋದು ವೈಯಕ್ತಿಕವಾಗಿ ಗಳಿಸುವ ಆದಾಯದ ಮೇಲೆ ಸರ್ಕಾರಕ್ಕೆ ಪಾವತಿ ಮಾಡಲಾಗುತ್ತದೆ. ಇದು ಭಾರತದಲ್ಲಿ ಆದಾಯ ಗಳಿಸುವ ಹಾಗೂ ಹೊರ ದೇಶದಲ್ಲಿ ಆದಾಯ ಬಂದಿದ್ದನ್ನು ಭಾರತಕ್ಕೆ ತರುವವರ ಪಾಲಿನ ಜವಾಬ್ದಾರಿ ಆಗುತ್ತದೆ.
ಸರ್ಕಾರಕ್ಕೆ ಯಾವುದೇ ಬಾಕಿ ಉಳಿಸಿಕೊಂಡಿದ್ದಲ್ಲಿ ಅದನ್ನು ಕಟ್ಟಿಬಿಡಿ. ಅದು ವಿಳಂಬ ಪಾವತಿಗೆ ಬಡ್ಡಿ, ಜುಲ್ಮಾನೆ, ವಿಳಂಬ ಪಾವತಿ ಶುಲ್ಕ ಮತ್ತ್ಯಾವುದಾದರೂ ಸರಿ. ಸರ್ಕಾರಕ್ಕೆ ಕಟ್ಟಬೇಕಾದ ಹಣ ಬಾಕಿ ಉಳಿಸಿಕೊಳ್ಳುವುದು ಖಂಡಿತಾ ತಪ್ಪು. ಇನ್ನು ಈ ತಿಂಗಳ ಮಾರ್ಚ್ 31ನೇ ತಾರೀಕಿನೊಳಗೆ ಮಾಡಿ ಮುಗಿಸಲೇಬೇಕಾದ 5 ಜವಾಬ್ದಾರಿಗಳು ಯಾವುವು ಎಂಬುದನ್ನು ತಿಳಿದುಕೊಂಡುಬಿಡಿ.
1. ತಡವಾಗಿರುವ ಮತ್ತು ಪರಿಷ್ಕೃತ ರಿಟರ್ನ್ ಫೈಲ್ ಮಾಡಿ: ಅಸೆಸ್ಮೆಂಟ್ ವರ್ಷ 20-21ಕ್ಕೆ ಪರಿಷ್ಕೃತ ರಿಟರ್ನ್ ಅನ್ನು ಮಾರ್ಚ್ 31, 2021ಕ್ಕೆ ಮುಂಚೆ ಯಾವಾಗ ಬೇಕಾದರೂ ಫೈಲ್ ಮಾಡಬಹುದು. ಇದೇ ಅಸೆಸ್ಮೆಂಟ್ ವರ್ಷದ ಕೊನೆ. ಆದರೆ ಒಂದು ವೇಳೆ ಆದಾಯ ತೆರಿಗೆ ಇಲಾಖೆಯು ಅಸೆಸ್ಮೆಂಟ್ ಮುಗಿಸುವುದಕ್ಕಿಂತ ಮುಂಚೆ ರಿಟರ್ನ್ ಪರಿಷ್ಕರಣೆಗೆ ಕೊನೆ ದಿನವಾಗಿರುತ್ತದೆ. ಜತೆಗೆ ತಡವಾಗಿ ಫೈಲ್ ಮಾಡಿರುತ್ತೀರಲ್ಲಾ ಆ ಐಟಿಆರ್ಗಳನ್ನೂ ಪರಿಷ್ಕರಣೆ ಮಾಡಬಹುದು. ಜನವರಿ 10, 2021ರ ನಂತರ ಅಥವಾ ವಿಸ್ತರಣೆಯಾದ ಯಾವುದೇ ಅನ್ವಯಿತ ದಿನಾಂಕಕ್ಕೆ ಫೈಲ್ ಮಾಡಿರುವ 2019-20ರ ಹಣಕಾಸು ವರ್ಷದ ರಿಟರ್ನ್ ಕೂಡ ಪರಿಷ್ಕರಿಸಬಹುದು. ತಡವಾದ ರಿಟರ್ನ್ ಹಾಗೂ ಪರಿಷ್ಕೃತ ರಿಟರ್ನ್ ಫೈಲ್ ಮಾಡವುದಕ್ಕೂ ಒಂದೇ ದಿನಾಂಕ ಕೊನೆಯಾಗಿರುತ್ತದೆ. ಅದು ಆಯಾ ಅಸೆಸ್ಮೆಂಟ್ ವರ್ಷದ ಕೊನೆ ಅಥವಾ ಅಸೆಸ್ಮೆಂಟ್ ಪೂರ್ತಿಯಾಗುವ ಮುನ್ನ ಯಾವುದು ಶೀಘ್ರವೋ ಅದೇ ಗಡುವಾಗಿರುತ್ತದೆ.
2. ಅಡ್ವಾನ್ಸ್ ಟ್ಯಾಕ್ಸ್ (ಮುಂಗಡ ತೆರಿಗೆ): ಯಾವುದೇ ವ್ಯಕ್ತಿಯ ತೆರಿಗೆ ಪಾವತಿಸಬೇಕಾದ ಮೊತ್ತವು ಒಂದು ವರ್ಷದಲ್ಲಿ ರೂ. 10 ಸಾವಿರ ದಾಟಿದಲ್ಲಿ (ವೃತ್ತಿಪರ ಆದಾಯ ಇಲ್ಲದ ಹಿರಿಯ ನಾಗರಿಕರನ್ನು ಹೊರತುಪಡಿಸಿ) ಅಂಥವರು ನಾಲ್ಕು ಕಂತುಗಳಲ್ಲಿ ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಬೇಕು. ಅದು ಜುಲೈ 15, ಸೆಪ್ಟೆಂಬರ್ 15, ಡಿಸೆಂಬರ್ 15 ಮತ್ತು ಮಾರ್ಚ್ 15ಕ್ಕೆ ಮುಂಚೆ ಪಾವತಿಸಬೇಕು. ಒಂದು ವೇಳೆ ಪಾವತಿ ಮಾಡಲಿಲ್ಲ ಅಂತಾದಲ್ಲಿ ತಡವಾಗಿದ್ದಕ್ಕೆ ಸೆಕ್ಷನ್ 234C ಅಡಿಯಲ್ಲಿ ತಿಂಗಳಿಗೆ ಶೇ 1ರಷ್ಟು ಬಡ್ಡಿ ಪಾವತಿಸಬೇಕು ಮತ್ತು ಹಣಕಾಸು ವರ್ಷದ ಕೊನೆಗೆ ಶೇಕಡಾ 90ರಷ್ಟು ಬಾಕಿ ಉಳಿಸಿಕೊಂಡಲ್ಲಿ ಅದಕ್ಕೆ ಸೆಕ್ಷನ್ 234B ಅಡಿಯಲ್ಲಿ ತಿಂಗಳಿಗೆ ಶೇ 1ರಷ್ಟು ಬಡ್ಡಿ ಪಾವತಿಸಬೇಕು.
3. ತೆರಿಗೆ ಉಳಿತಾಯ ಇನ್ಸ್ಟ್ರುಮೆಂಟ್ಗಳ ಮೇಲೆ ಹೂಡಿಕೆ : ವರ್ಷದ ಕೊನೆಗೆ ನಿರ್ದಿಷ್ಟ ಪ್ರಾಡಕ್ಟ್ಗಳ ಮೇಲೆ ವೈಯಕ್ತಿಕ ತೆರಿಗೆ ಪಾವತಿದಾರರು ಅಥವಾ ಹಿಂದೂ ಅವಿಭಕ್ತ ಕುಟುಂಬದಿಂದ ಮಾಡುವ ಹೂಡಿಕೆಗೆ ಸೆಕ್ಷನ್ 80C ಅಡಿ ರೂ. 1.50 ಲಕ್ಷದ ತನಕ ತೆರಿಗೆ ವಿನಾಯಿತಿ ಸಿಗುತ್ತದೆ. ಹಣಕಾಸು ವರ್ಷ 2020-21ಕ್ಕೆ ಅಂಥ ವಿನಾಯಿತಿ ಪಡೆಯುಬುದಕ್ಕೆ ಮಾರ್ಚ್ 31, 2021 ಕೊನೆ ದಿನ. ಯಾರಾದರೂ ಆ ದಿನ ತಪ್ಪಿಸಿದರೆ ಅನುಕೂಲ ಸಿಗುವುದಿಲ್ಲ. ಆ ಗಡುವು ಮೀರಿದ ಮೇಲೆ 2019-20ನೇ ಸಾಲಿನ ಹಣಕಾಸು ವರ್ಷಕ್ಕೆ ಪರಿಷ್ಕೃತ ಅಥವಾ ತಡವಾದ ಐಟಿಆರ್ ಸಾಧ್ಯವಿಲ್ಲ. ಮಾರ್ಚ್ 31, 2021ಕ್ಕೆ ಅಥವಾ ಅದಕ್ಕಿಂತ ಮುಂಚೆ ವಿಳಂಬ ಫೈಲಿಂಗ್ ಶುಲ್ಕ ರೂ. 10,000 ಪಾವತಿಸಬೇಕು.
4. ಆಧಾರ್ ಮತ್ತು ಪ್ಯಾನ್ ಜೋಡಣೆ: ಪ್ಯಾನ್ ಮತ್ತು ಆಧಾರ್ ಜೋಡಣೆಗೂ ಮಾರ್ಚ್ 31, 2021 ಕೊನೆ ದಿನ. ಒಂದು ವೇಳೆ ಆಧಾರ್ ಜತೆಗೆ ಪ್ಯಾನ್ ಲಿಂಕ್ ಆಗದಿದ್ದಲ್ಲಿ ಪ್ಯಾನ್ ಕಾರ್ಯ ನಿರ್ವಹಿಸಲ್ಲ.
5. ವಿವಾದ್ ಸೇ ವಿಶ್ವಾಸ್: ವಿವಾದ್ ಸೇ ವಿಶ್ವಾಸ್ ಅಡಿಯಲ್ಲಿ ಘೋಷಣೆ ಫೈಲ್ ಮಾಡುವುದಕ್ಕೆ ಮಾರ್ಚ್ 31, 2021ರ ತನಕ ಗಡುವು ವಿಸ್ತರಿಸಲಾಗಿತ್ತು. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧಿಸೂಚನೆ ಪ್ರಕಾರ, ಈ ಯೋಜನೆ ಅಡಿಯಲ್ಲಿ ಯಾವುದೇ ಹೆಚ್ಚುವರಿ ಬಡ್ಡಿ ಇಲ್ಲದೆ ತೆರಿಗೆ ಪಾವತಿ ಮಾಡುವುದಕ್ಕೆ ಕೊನೆ ದಿನಾಂಕ ಏಪ್ರಿಲ್ 30, 2021ರಲ್ಲಿ ಬದಲಾವಣೆ ಆಗಿಲ್ಲ. ನೇರ ತೆರಿಗೆಯ ವಿವಾದ್ ಸೇ ವಿಶ್ವಾಸ್ ಕಾಯ್ದೆ, 2020 ಮಾರ್ಚ್ 17, 2020ರಲ್ಲಿ ಅಸ್ತಿತ್ವಕ್ಕೆ ಬಂತು. ಬಾಕಿ ಇರುವ ಆದಾಯ ತೆರಿಗೆ ವ್ಯಾಜ್ಯಗಳನ್ನು ಕಡಿಮೆ ಮಾಡುವುದು ಮತ್ತು ಸರ್ಕಾರಕ್ಕೆ ಸಮಯಕ್ಕೆ ಸರಿಯಾಗಿ ಆದಾಯ ಬರುವುದು ಹಾಗೂ ತೆರಿಗೆ ಪಾವತಿದಾರರಿಗೆ ಅನುಕೂಲ ಆಗಲಿ ಅನ್ನೋದು ಇದರ ಉದ್ದೇಶ.
ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?
Published On - 12:10 pm, Fri, 5 March 21