ಜಮ್ಮು ಮತ್ತು ಕಾಶ್ಮೀರ ಸಂಬಂಧಿಸಿದಂತೆ ಮುಂದಿನ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ವಪಕ್ಷ ಸಭೆ ಕರೆಯುವ ಸಾಧ್ಯತೆ: ಮೂಲಗಳು

|

Updated on: Jun 19, 2021 | 12:22 AM

ಆಗಸ್ಟ್​ 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ನಂತರ ಅದನ್ನು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ್ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಲಾಗಿತ್ತು.

ಜಮ್ಮು ಮತ್ತು ಕಾಶ್ಮೀರ ಸಂಬಂಧಿಸಿದಂತೆ ಮುಂದಿನ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ವಪಕ್ಷ ಸಭೆ ಕರೆಯುವ ಸಾಧ್ಯತೆ: ಮೂಲಗಳು
ಪ್ರಧಾನಿ ನರೇಂದ್ರ ಮೋದಿ
Follow us on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಂದಿನ ವಾರ ಸರ್ವ ಪಕ್ಷಗಳ ಸಭೆಯೊಂದನ್ನು ಕರೆಯಲಿದ್ದಾರೆ ಎಂದು ಉನ್ನತ ಮೂಲಗಳಿಂದ ಲಭ್ಯವಾಗಿರುವ ಮಹಿತಿಯೊಂದು ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ ಸುಮಾರು ಎರಡು ವರ್ಷಗಳ ನಂತರ ಅದಕ್ಕೆ ಪುನಃ ರಾಜ್ಯದ ದರ್ಜೆ ನೀಡುವ ಆಂಶ ಸೇರಿದಂತೆ ಇನ್ನು ಕೆಲ ವಿಷಯಗಳನ್ನು ಪ್ರಧಾನಿ ಮೋದಿಯವರು ಸರ್ವ ಪಕ್ಷಗಳ ಸದಸ್ಯರೊಂದಿಗೆ ಚರ್ಚಿಸಲಿದ್ದಾರೆಂದು ಮೂಲಗಳು ತಿಳಿಸುತ್ತವೆ.

ಶುಕ್ರವಾರ ಸಾಯಂಕಾಲ ಮಾಧ್ಯಮವೊಂದರ ಜೊತೆ ಮಾತಾಡಿದ ಜಮ್ಮು ಮತ್ತು ಕಾಶ್ಮೀರದ ಹಿರಿಯ ನಾಯಕರೊಬ್ಬರು, ‘ಮುಂದಿನ ಒಂದು ವಾರ ಸಭೆ ನಡೆಯಲಿದೆ ಎಂದಷ್ಟೇ ನಮಗೆ ತಿಳಿಸಲಾಗಿದೆ. ಯಾವ ವಿಷಯಕ್ಕೆ ಸಂಬಂಧಿಸಿದಂತೆ ಎನ್ನುವುದು ಇನ್ನೂ ಖಚಿತಪಟ್ಟಿಲ್ಲ. ನಾವು ಅಧಿಕೃತ ಅಹ್ವಾನಕ್ಕಾಗಿ ಕಾಯುತ್ತಿದ್ದೇವೆ,’ ಎಂದು ಹೇಳಿದರು.

‘ಸಭೆಯನ್ನು ಮುಂದಿನ ವಾರದಲ್ಲಿ ಯಾವುದೇ ದಿನ ಕರೆಯಬಹುದು, ನಾನಂದುಕೊಳ್ಳುವ ಹಾಗೆ ಜೂನ್ 24 ರಂದು ಅದು ನಡೆಯುವ ಸಾಧ್ಯತೆಯಿದೆ,’ ಎಂದು ನಾಯಕರು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರದಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನಂಟ್​ ಗವರ್ನರ್ ಮನೋಜ್ ಸಿನ್ಹಾ ಮತ್ತು ಉನ್ನತ ಮಟ್ಟದ ಭದ್ರತಾ ಹಾಗೂ ಗುಪ್ತಚರ ವಿಭಾಗದ ಅಧಿಕಾರಿಗಳನ್ನು ಭೇಟಿ ಮಾಡಿದರು.

ಆಗಸ್ಟ್​ 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ನಂತರ ಅದನ್ನು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ್ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಲಾಗಿತ್ತು.

ಸರ್ಕಾರವು ಸಂಸತ್ತಿನಲ್ಲಿ ಈ ದೊಡ್ಡ ಘೋಷನೆ ಮಾಡುವ ಮೊದಲು, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾಗಿರುವ ಮೆಹಬೂಬಾ ಮುಫ್ತಿ, ಫರೂಕ್ ಅಬ್ದುಲ್ಲಾ, ಮತ್ತು ಒಮರ್ ಅಬ್ದುಲ್ಲಾ ಸೇರಿದಂತೆ ಕಣಿವೆ ಪ್ರಮುಖ ನಾಯಕರನ್ನು ಬಂಧಿಸಲಾಗಿತ್ತು. ಹಲವಾರು ತಿಂಗಳುಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.

ಕಳೆದ ಎರಡು ವರ್ಷಗಳಿಂದ ರಾಜಕೀಯವಾಗಿ ಸ್ತಬ್ಧವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಪ್ರಕ್ರಿಯನ್ನು ಕೇಂದ್ರ ಸರ್ಕಾರ ಆರಂಭಿಸಲಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನ ಸಭೆ ಚುನಾವಣೆಗಳನ್ನು ನಡೆಸುವ ಬಗ್ಗೆ ಮೋದಿ ಸರ್ಕಾರ ಚರ್ಚೆ ನಡೆಸುವ ಸಾಧ್ಯತೆಯಿದೆ. 2018 ರಲ್ಲಿ ಮುಖ್ಯಮಂತ್ರಿಯಾಗಿದ್ದ ಮೆಹಬೂಬಾ ಮುಫ್ತಿ ಅವರು ಮಿತ್ರಪಕ್ಷವಾಗಿದ್ದ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡ ನಂತರದಿಂದ ಅಲ್ಲಿನ ವಿಧಾನ ಸಭೆಗೆ ಚುನಾವಣೆಗಳು ನಡೆದಿಲ್ಲ.

ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೊಮ್ಮೆ ರಾಜ್ಯದ ಸ್ಥಾನಮಾನ ಸಿಗುವಂತೆ ಮಾಡಲು ಏಳು ರಾಜಕೀಯ ಪಕ್ಷಗಳ ಸಮೂಹ ಗುಪ್ಕರ್ ಮೈತ್ರಿ ಅಥವಾ ಪಿಎಜಿಡಿ (ಪೀಪಲ್ಸ್ ಅಲಯನ್​ ಫಾರ್ ಗುಪ್ಕರ್ ಡಿಕ್ಲರೇಷನ್) ಮಾತುಕತೆ ನಡೆದರೆ ಭಾಗಿಯಾಗುವ ಇಚ್ಛೆ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರವು ಕಳೆದ ಡಿಸೆಂಬರ್​ನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸಿದಾಗ ಗುಪ್ಕರ ಮೈತ್ರಿ ಕೂಟವು 100 ಕ್ಕಿಂತ ಹೆಚ್ಚು ಸ್ಥಾನ ಗಳಿಸದರೆ ಬಿಜೆಪಿ 74 ಸ್ಥಾನಗಳನ್ನು ಗೆದ್ದು ಹೆಚ್ಚು ಸ್ಥಾನಗಳನ್ನು ಗೆದ್ದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು,

ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಗುಂಟ ಕದನ ವಿರಾಮ ಘೋಷಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಬೆಳವಣಿಗೆ ಕಂಡುಬಂದಿದೆ. 2019 ರ ನಂತರ ಎರಡು ರಾಷ್ಟ್ರಗಳ ನಡುವೆ ಆಗಿರುವ ಪ್ರಮುಖ ಶಾಂತಿ ಮಾತುಕತೆ ಇದಾಗಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನ ಸಿಗುತ್ತದೆ: ಲೋಕಸಭೆಯಲ್ಲಿ ಅಮಿತ್ ಶಾ ಪ್ರತ್ಯುತ್ತರ