ಬೆಂಗಳೂರು: ನಾಗರಿಕರ ಮನೆಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ಜನಸೇವಕ ಯೋಜನೆಯನ್ನು ಜನವರಿ 15ಕ್ಕೆ ಬೆಂಗಳೂರಿನ 05 ವಿಧಾನಸಭಾ ಕ್ಷೇತ್ರಗಳಲ್ಲಿ ಮರು ಪ್ರಾರಂಭಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು ಬೆಂಗಳೂರು ನಗರದ ಸಂಬಂಧಿತ ಕ್ಷೇತ್ರಗಳ ಶಾಸಕರ ಸಭೆ ನಡೆಸಿ ಸಹಕಾರ ಕೋರಿದ ಸಚಿವರು ಸರ್ಕಾರದ ಈ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಯಶವಂತಪುರ ಕ್ಷೇತ್ರಕ್ಕೂ ವಿಸ್ತರಣೆಯಾದ ಜನಸೇವಕ ಯೋಜನೆ.. ಈ ಬಾರಿ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೂ ಜನಸೇವಕ ಯೋಜನೆಯನ್ನು ವಿಸ್ತರಿಸಲಾಗುತ್ತಿದ್ದು, ಬಿಬಿಎಂಪಿಯ ಖಾತಾ ವರ್ಗಾವಣೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಸೇವೆಗಳು, ಆಧಾರ್ ಕಾರ್ಡಿನಲ್ಲಿನ ದೋಷಗಳ ತಿದ್ದುಪಡಿ, ಕಂದಾಯ ಇಲಾಖೆ, ಪೊಲಿಸ್ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಒಟ್ಟು 55 ಸೇವೆಗಳನ್ನು ಈ ಯೋಜನೆಯಡಿ ಒದಗಿಸಲಾಗುತ್ತದೆಯೆಂದರು.
ಇಸ್ಟ್ಯಾಂಪ್ ಸೇವೆ.. ಅತಿ ಶೀಘ್ರದಲ್ಲಿಯೇ ಮುದ್ರಾಂಕ ಇಲಾಖೆಯ ಇಸ್ಟ್ಯಾಂಪ್ ಮತ್ತು ಸಾರಿಗೆ ಇಲಾಖೆಯ ಸೇವೆಗಳನ್ನು ಸಹ ಜನಸೇವಕ ಯೋಜನೆಯಡಿಯಲ್ಲಿ ತರಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲು ಆಲೋಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವುದು.. ಜನಸೇವಕ ಯೋಜನೆಯ ಬಗ್ಗೆ ಸ್ಥಳೀಯ ವಾಟ್ಸಾಪ್, ಫೇಸ್ ಬುಕ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವುದು, ಕ್ಷೇತ್ರ ವ್ಯಾಪ್ತಿಯಲ್ಲಿ ಸ್ತ್ರೀಶಕ್ತಿ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು, ವಿವಿಧ ಸಮುದಾಯ ಆಧಾರಿತ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಪ್ರಚಾರಕ್ಕೆ ಅನುವು ಮಾಡುವುದು ಸೇರಿದಂತೆ ಈ ಮಹತ್ವದ ನಾಗರಿಕ ಸೇವಾ ಯೋಜನೆಯ ಸಮರ್ಪಕ ಹಾಗೂ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸಬೇಕೆಂದು ಸಚಿವರು ಹಾಗೂ ಬೆಂಗಳೂರು ನಗರದ ಶಾಸಕರನ್ನು ಸಚಿವ ಸುರೇಶ್‌ಕುಮಾರ್ ಮನವಿ ಮಾಡಿದರು.
ಮಾರ್ಗಸೂಚಿ ಪಾಲಿಸದ ಶಾಲೆಗಳಿಗೆ ನೋಟಿಸ್: ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್