Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಚರಣೆ ಯಾಂತ್ರಿಕವಾಗಿದ್ದರೆ ಉತ್ಸಾಹ ಕ್ರಮೇಣ ತಣ್ಣಗಾಗುತ್ತೆ.. ಹೊಸತನ ಮೈಗೂಡಿಸಿಕೊಂಡರೆ ಅರ್ಥಪೂರ್ಣ

ಪ್ರತಿ ವರ್ಷ ನವೆಂಬರ್ ಬರುತ್ತಿದ್ದಂತೆ ರಾಜ್ಯೋತ್ಸವದ ಸಡಗರ, ಸಂಭ್ರಮ ಎಲ್ಲ ಕಡೆ ಪ್ರಾರಂಭವಾಗುತ್ತದೆ. ಕನ್ನಡ ಬಾವುಟ ಹಾರಿಸಿ, ವಾಹನಗಳಿಗೆ ಅಲಂಕಾರ ಮಾಡಿ, ಸನ್ಮಾನ ಸಮಾರಂಭ ಏರ್ಪಡಿಸುವ ಕಾರ್ಯಕ್ರಮ ತಿಂಗಳಿಡೀ ನಡೆಯುತ್ತದೆ. ಇಂತಹ ಆಚರಣೆಯಿಂದ ಲಾಭವಾಗಿದೆಯೇ ಅಥವಾ ಬೇರೆ ವಿಧಾನದಲ್ಲಿ ಆಚರಿಸಬಹುದೇ ಎಂಬುದನ್ನು ವಿವೇಚಿಸುವ ಸಮಯ ಇದು. ಆಚರಣೆ ಯಾಂತ್ರಿಕವಾಗಿದ್ದರೆ ಜನರಲ್ಲಿ ಉತ್ಸಾಹ ಕ್ರಮೇಣ ತಣ್ಣಗಾಗುತ್ತದೆ. ಆಚರಣೆಯಲ್ಲಿ ಚಲನಶೀಲತೆ, ಹೊಸತನ ಮತ್ತು ವೈಚಾರಿಕತೆಯನ್ನು ಮೈಗೂಡಿಸಿಕೊಂಡರೆ ಆಗ ಅದು ಅರ್ಥಪೂರ್ಣವಾಗುತ್ತದೆ. ಹೆಚ್ಚು ವೆಚ್ಚ ಮಾಡಿ ಅದ್ಧೂರಿಯಾಗಿ ಆಚರಿಸಿದರೆ ಮಾತ್ರ ರಾಜ್ಯೋತ್ಸವ […]

ಆಚರಣೆ ಯಾಂತ್ರಿಕವಾಗಿದ್ದರೆ ಉತ್ಸಾಹ ಕ್ರಮೇಣ ತಣ್ಣಗಾಗುತ್ತೆ.. ಹೊಸತನ ಮೈಗೂಡಿಸಿಕೊಂಡರೆ ಅರ್ಥಪೂರ್ಣ
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Nov 23, 2020 | 1:10 PM

ಪ್ರತಿ ವರ್ಷ ನವೆಂಬರ್ ಬರುತ್ತಿದ್ದಂತೆ ರಾಜ್ಯೋತ್ಸವದ ಸಡಗರ, ಸಂಭ್ರಮ ಎಲ್ಲ ಕಡೆ ಪ್ರಾರಂಭವಾಗುತ್ತದೆ. ಕನ್ನಡ ಬಾವುಟ ಹಾರಿಸಿ, ವಾಹನಗಳಿಗೆ ಅಲಂಕಾರ ಮಾಡಿ, ಸನ್ಮಾನ ಸಮಾರಂಭ ಏರ್ಪಡಿಸುವ ಕಾರ್ಯಕ್ರಮ ತಿಂಗಳಿಡೀ ನಡೆಯುತ್ತದೆ. ಇಂತಹ ಆಚರಣೆಯಿಂದ ಲಾಭವಾಗಿದೆಯೇ ಅಥವಾ ಬೇರೆ ವಿಧಾನದಲ್ಲಿ ಆಚರಿಸಬಹುದೇ ಎಂಬುದನ್ನು ವಿವೇಚಿಸುವ ಸಮಯ ಇದು.

ಆಚರಣೆ ಯಾಂತ್ರಿಕವಾಗಿದ್ದರೆ ಜನರಲ್ಲಿ ಉತ್ಸಾಹ ಕ್ರಮೇಣ ತಣ್ಣಗಾಗುತ್ತದೆ. ಆಚರಣೆಯಲ್ಲಿ ಚಲನಶೀಲತೆ, ಹೊಸತನ ಮತ್ತು ವೈಚಾರಿಕತೆಯನ್ನು ಮೈಗೂಡಿಸಿಕೊಂಡರೆ ಆಗ ಅದು ಅರ್ಥಪೂರ್ಣವಾಗುತ್ತದೆ. ಹೆಚ್ಚು ವೆಚ್ಚ ಮಾಡಿ ಅದ್ಧೂರಿಯಾಗಿ ಆಚರಿಸಿದರೆ ಮಾತ್ರ ರಾಜ್ಯೋತ್ಸವ ಎಂಬ ಚಿಂತನೆ ಬಿಟ್ಟು, ಕಡಿಮೆ ವೆಚ್ಚದಲ್ಲಿ ಸರಳವಾಗಿ, ಅರ್ಥಪೂರ್ಣವಾಗಿ ವಿವೇಕಯುತವಾಗಿ ರಾಜ್ಯೋತ್ಸವ ಆಚರಿಸಲು ಸಾಧ್ಯವಿದೆ ಎಂಬುದೇ ನನ್ನ ಅನಿಸಿಕೆ. ಇದರಿಂದ ಜನಪ್ರಿಯತೆ ಹಾಗೂ ಜನ ಮನ್ನಣೆಯನ್ನೂ ಪಡೆಯಬಹುದು.

ಸ್ವಇಚ್ಛೆಯಿಂದ ಜನರು ಸಮಾರಂಭದಲ್ಲಿ ಭಾಗವಹಿಸುವ ವೇದಿಕೆಯೊಂದನ್ನು ಕಲ್ಪಿಸಬೇಕಾಗಿದೆ. ರಾಜ್ಯದ ಜನತೆಯಲ್ಲಿ ಕನ್ನಡ ನಾಡಿನ ಸಂಸ್ಕೃತಿ, ಚರಿತ್ರೆ, ಭೂಗೋಳ, ಸಾಹಿತ್ಯ ಕುರಿತು ಅರಿವು ಮೂಡಿಸಿದರೆ ಅದೇ ನಿಜವಾದ ಯಶಸ್ಸು. ಇಂತಹ ಹೆಮ್ಮೆಪಡುವ ವಿಷಯಗಳ ಪರಿಚಯವೇ ಜನರಲ್ಲಿ ಇಲ್ಲವಾದರೆ ಕನ್ನಡದ ಬಗ್ಗೆ ಹೆಮ್ಮೆ ಮೂಡುವುದು ಕನಸೇ ಸರಿ. ಇಂತಹ ವಿಷಯಗಳನ್ನು ಕಲಿಯಲು, ಹಂಚಿಕೊಳ್ಳಲು ಜನರಿಗೆ ಅವಕಾಶ ಮಾಡಿಕೊಡಬೇಕು. ಇದಕ್ಕಾಗಿ ಸಂಸ್ಥೆಗಳಿಗೆ ಹಣಕ್ಕಿಂತ ಹೆಚ್ಚಾಗಿ ನಿಜವಾದ ಕನ್ನಡಾಭಿಮಾನ, ಸೃಜನಶೀಲತೆ, ಸ್ವಂತಿಕೆ ಮತ್ತು ಸದಸ್ಯರುಗಳಲ್ಲಿ ಒಗ್ಗಟ್ಟಿನ ಅಗತ್ಯವಿರುತ್ತದೆ.

ಜನರು ಸೇರಲು ಅನುಕೂಲವಾಗುವ ಸ್ಥಳದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಸುವುದು ಉತ್ತಮ. ಒಂದು ತಿಂಗಳು ಮುಂಚಿತವಾಗಿಯೇ ಸಂಸ್ಥೆಯು ಈ ಕಾರ್ಯಕ್ರಮದ ವಿವರ ಪ್ರಕಟಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಅವಕಾಶವನ್ನು ಜನರಿಗೆ ನೀಡಬೇಕು. ವಯೋಮಾನಕ್ಕೆ ಅನುಗುಣವಾಗಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಿದರೆ ಹೊಸ ವಿಷಯ ಕಲಿಯುವ ಆಸಕ್ತಿ ಮತ್ತು ಗುಂಪಿನಲ್ಲಿ ಕಲಿಯುವ (ಸರ್ವರೂ ಸೇರ್ಪಡೆಯಂತೆ) ಅವಕಾಶವನ್ನೂ ಎಲ್ಲರಿಗೆ ನೀಡಿದಂತಾಗುತ್ತದೆ.

ರಸಪ್ರಶ್ನೆಯಲ್ಲಿ ಕೇಳುವ ಪ್ರಶ್ನೆಗಳು ಕರ್ನಾಟಕಕ್ಕೆ ಸಂಬಂಧಿಸಿದ ಚರಿತ್ರೆ, ಸಂಗೀತ, ಸಾಹಿತ್ಯ, ಸಾಹಿತಿಗಳು, ಜಾನಪದ ಕಲೆಗಳು, ಒಗಟುಗಳು, ಪ್ರೇಕ್ಷಣೀಯ ಸ್ಥಳಗಳು ಮುಂತಾದ ವಿಚಾರಗಳಿಗೆ ಸಂಬಂಧಿಸಿರಬಹುದು. ಇಂತಹ ಪ್ರಯೋಗವನ್ನು ಹಿಂದೂಸ್ತಾನ್ ವಿಮಾನ ಕಾರ್ಖಾನೆಯ ರಾಜ್ಯೋತ್ಸವ ಸಮಾರಂಭದಲ್ಲಿ ನಡೆಸಿದಾಗ ಉತ್ಸಾಹಕರ ಪ್ರತಿಕ್ರಿಯೆ ಕಂಡುಬಂದಿತ್ತು.

ಕಲಿಕೆಯ ತರಗತಿ ಏರ್ಪಡಿಸಿ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸಬೇಕು. ಕನ್ನಡ ಕಲಿಕೆಯ ಸಮಯದಲ್ಲಿ ನಮ್ಮ ನಾಡಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆಯೂ ತಿಳಿಸಬೇಕು. ಕನ್ನಡ ಗೀತೆಗಳ ಸಮೂಹ ಗಾಯನ, ಆಟ ಇವುಗಳನ್ನು ಕಲಿಕೆಗಾಗಿ ಅಳವಡಿಸಿಕೊಂಡರೆ ಉತ್ತಮ. ಈ ತರಗತಿಯಲ್ಲಿ ಭಾಗವಹಿಸಿ ಕನ್ನಡ ಕಲಿತವರಿಗೆ ಪ್ರತ್ಯೇಕ ವಿಭಾಗದ ಸ್ಪರ್ಧೆ ಏರ್ಪಡಿಸಿದರೆ ಹೆಚ್ಚು ಜನ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಕನ್ನಡ ಮಾತೃಭಾಷೆ ಅಲ್ಲದಿದ್ದರೂ ಕನ್ನಡಕ್ಕೆ ಉತ್ತಮ ಕೊಡುಗೆ ನೀಡಿದ ಮಾಸ್ತಿ ವೆಂಕಟೇಶ್​ ಅಯ್ಯಂಗಾರ್, ಕಿಟ್ಟಲ್ ಮುಂತಾದ ಮಹನೀಯರ ವಿಚಾರವನ್ನು ಹೇಳಿ ಭಾಷಾ ಕಲಿಕೆ ಬಾಂಧವ್ಯ ಬೆಳೆಸಬಲ್ಲದು ಎಂಬ ವಿಷಯವನ್ನು ಅನ್ಯ ಭಾಷಿಕರಿಗೆ ಮನದಟ್ಟು ಮಾಡಿಸಬೇಕು. ಕನ್ನಡ ಗೀತ ಗಾಯನ ಸ್ಪರ್ಧೆಯಲ್ಲಿ ಗೆದ್ದವರಿಗೆ ಕನ್ನಡ ಭಾವಗೀತೆ, ದೇವರನಾಮದ ಕ್ಯಾಸೆಟ್ ಅಥವಾ ಸಿ.ಡಿ.ಯನ್ನು ಬಹುಮಾನವಾಗಿ ನೀಡಬಹುದು.

ಪಾರಿತೋಷಕವಾಗಿ ಉತ್ತಮ ಅಭಿರುಚಿಯ ಕನ್ನಡ ಪುಸ್ತಕಗಳನ್ನು ಮಾತ್ರ ನೀಡಬೇಕು. ಇಲ್ಲಿ ಹೆಚ್ಚು ಜನರಿಗೆ ಪುಸ್ತಕ ಬಹುಮಾನ ನೀಡುವ ಗುರಿ ಹೊಂದಿದ್ದರೆ ಉತ್ತಮ. ಸ್ಪರ್ಧಾ ವಿಭಾಗದಲ್ಲಿ ಭಾಗವಹಿಸುವವರ ವಯಸ್ಸು, ಕನ್ನಡ ಜ್ಞಾನ ಎರಡನ್ನೂ ಗಮನದಲ್ಲಿಟ್ಟುಕೊಂಡು ಪುಸ್ತಕಗಳನ್ನು ಆರಿಸಬೇಕು. ಕೆಲವು ಕನ್ನಡ ಪುಸ್ತಕ ಮಾರಾಟ ಮಳಿಗೆಗಳೊಂದಿಗೆ ಒಪ್ಪಂದ ಮಾಡಿಕೊಂಡು ರಿಯಾಯಿತಿ ದರದಲ್ಲಿ ಕನ್ನಡ ಪುಸ್ತಕವನ್ನು ಕೊಳ್ಳುವಂತೆ ಬಹುಮಾನದ ಕೂಪನ್ ನೀಡುವ ಯೋಚನೆ ಅಳವಡಿಸಿಕೊಳ್ಳಬಹುದು. ಇದು ಒಂದು ರೀತಿ ಉಳಿತಾಯ ಯೋಜನೆಯೂ ಆಗುವುದರಿಂದ ಹೆಚ್ಚು ಜನರಿಗೆ ಬಹುಮಾನ ನೀಡಲು ಸಾಧ್ಯವಾಗುತ್ತದೆ.

ಬಡಾವಣೆಯಲ್ಲಿರುವ ಕನ್ನಡಿಗರು ಮತ್ತು ಕನ್ನಡೇತರರ ಸಂಖ್ಯೆ, ವಿವಿಧ ವಯಸ್ಸಿನ ಮಕ್ಕಳು ಮತ್ತು ವಯಸ್ಕರ ಸಂಖ್ಯೆ ಆಧರಿಸಿ ಅದರಲ್ಲಿ ಅಗತ್ಯ ಬದಲಾವಣೆಗಳೊಂದಿಗೆ ಕಾರ್ಯಕ್ರಮ ರೂಪಿಸಿ ನಿರ್ವಹಿಸಿದರೆ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಇದಮಿತ್ತಂ ಎಂಬ ಸೂತ್ರ ಅಥವಾ ಉತ್ತರವಿಲ್ಲ. -ಸದ್ದಾಂ ಹುಸೇನ್ ಎಸ್ ಮಾತ್ಪಳ್ಳಿ, ದೇವದುರ್ಗ

Published On - 9:46 pm, Sat, 31 October 20