ನಾನೆಂಬ ಪರಿಮಳದ ಹಾದಿಯಲಿ: ಧಾರಾವಾಹಿ ಮುಂದುವರಿಯುವುದು..

‘ತಾಯ್ತನವೆಂದರೆ ಬರೀ ಡಿವೈನ್ ಫೀಲಿಂಗ್, ಮಣ್ಣು ಮಸಿ ಎಂದು ವೈಭವೀಕರಿಸಿ ಅದರ ಇನ್ನೊಂದು ಮುಖವನ್ನು ಮರೆಮಾಚುವ ಮನಸ್ಥಿತಿಯ ಬಗ್ಗೆ ನನ್ನ ವಿರೋಧವಿದೆ. ಅಮ್ಮನೆಂದರೆ ತ್ಯಾಗಮಯಿ, ಸಹನಾಮಯಿ, ಕಷ್ಟಸಹಿಷ್ಟ್ಣು ಎಂದೆಲ್ಲಾ ಹೊಗಳಿ ಪಟ್ಟಕ್ಕೇರಿಸಿ ಎಲ್ಲಾ ಕಷ್ಟ, ಜವಾಬ್ದಾರಿಗಳನ್ನು ಹೆಣ್ಣೊಂದೇ ಅನುಭವಿಸುವ, ಎದುರಿಸುವಂತೆ ಭಾವಿಸುವ ಸಮಾಜದ ಧೋರಣೆಯ ಬಗ್ಗೆಯೂ ಆಕ್ಷೇಪವಿದೆ.‘ ಶ್ವೇತಾ ಹೊಸಬಾಳೆ

  • TV9 Web Team
  • Published On - 11:32 AM, 25 Jan 2021

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಲೇಖಕಿ, ಹವ್ಯಾಸಿ ಛಾಯಾಗ್ರಾಹಕಿ ಶ್ವೇತಾ ಹೊಸಬಾಳೆ ಅವರ ಬರಹ ನಿಮ್ಮ ಓದಿಗೆ

ಜೀವನದಲ್ಲಿ ಕೆಲವೊಂದು ವಿಷಯಗಳು ದೂರದಿಂದ ನೋಡಿದರೆ ಅರ್ಥವಾಗುವುದಿಲ್ಲ; ಅದರ ಆಳ ಅಗಲ ವಿಸ್ತಾರ ಸೂಕ್ಷ್ಮತೆಗಳು ಅನುಭವಕ್ಕೆ ಬರುವುದಿಲ್ಲ. ಅದರಲ್ಲಿ ಅಮ್ಮನಾಗುವುದೂ ಒಂದು. Its a lifetime experience! ಅಮ್ಮನಾಗುವುದು ಎಂದರೆ ಹಳೆಯ ಬದುಕನ್ನು ಮರೆತು ಹೊಸಹುಟ್ಟು ಪಡೆದಂತೆ. ಹಿಂದೆ ಕಳೆದ ದಿನಗಳು ನಮ್ಮದಲ್ಲವೇನೋ, ಅದು ನಾವಲ್ಲವೇನೋ ಎನಿಸುವಷ್ಟು ಮಗುವಿನ ಆಗಮನದ ನಂತರ ನಮ್ಮ ಬದುಕು ಸಂಪೂರ್ಣವಾಗಿ ಬದಲಾಗಿ ಹೋಗಿರುತ್ತದೆ. ಅಮ್ಮನಾಗುವ ಮೊದಲು ಕನ್ನಡದ ಮುಖ್ಯ ಮನರಂಜನಾ ವಾಹಿನಿಗಳಲ್ಲಿ ಧಾರಾವಾಹಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನನಗೆ, ನನ್ನ ಕೆಲಸದ ಬಗ್ಗೆ ಒಂಥರಾ ಖುಷಿಯಿತ್ತು, ಅಭಿಮಾನವಿತ್ತು; ಯಾಕೆಂದರೆ ಕರ್ನಾಟಕದಾದ್ಯಂತ ಲಕ್ಷಾಂತರ ಜನರು ಟಿ.ವಿ ಮುಂದೆ ಕುಳಿತು ನೋಡುವ ಕಂಟೆಂಟನ್ನು ನಾನು ಮೊದಲು ನೋಡುತ್ತೇನೆ, ಪ್ರಸಾರವಾಗಬೇಕಾದ ಎಪಿಸೋಡುಗಳನ್ನು ನಾನು ನಿರ್ಧರಿಸುತ್ತೇನೆ ಎನ್ನುವ ಸಕಾರಣ ಹೆಮ್ಮೆ ನನ್ನಲ್ಲಿ ಖುಷಿಯ ಕೋಡು ಮೂಡಿಸುತ್ತಿತ್ತು.

ಧಾರಾವಾಹಿಗಳು ಶೂಟಿಂಗ್ ಆಗುತ್ತಿದ್ದ ಸೆಟ್‍ಗೆ ಕೆಲವೊಮ್ಮೆ ಭೇಟಿಕೊಡುವುದು, ನಟ-ನಟಿಯರ ಪರಿಚಯ, ಪ್ರೋಮೋ ಶೂಟಿಂಗ್, ಸ್ಕ್ರಿಪ್ಟ್, ಕಥೆಯನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ನಡೆಯುತ್ತಿದ್ದ ಚರ್ಚೆಗಳು ಹೀಗೆ ಅಲ್ಲಿ ದಿನವೂ ಕಲಿಯುತ್ತಿದ್ದ ಹೊಸ ವಿಷಯ, ಎದುರಾಗುತ್ತಿದ್ದ ಹೊಸಾ ಪರಿಸರ, ಹೊಸಾ ಜನರು, ಹೊಸಾ ಸವಾಲುಗಳನ್ನೆದುರಿಸುತ್ತಾ ಕೆಲಸದ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದೆ. ಯಾರಾದರೂ ಎಲ್ಲಿ ಏನು ಕೆಲಸ ಮಾಡುತ್ತೀರಿ ಎಂದಾಗ ಟಿ.ವಿಯಲ್ಲಿ, ಅದರಲ್ಲೂ ಧಾರಾವಾಹಿ ವಿಭಾಗದಲ್ಲಿ ಎಂದಾಗ ನನ್ನ ಬಗ್ಗೆ ಅವರ ಕಣ್ಣು ಮನಸ್ಸಲ್ಲಿ ಮೂಡುತ್ತಿದ್ದ ಆಸಕ್ತಿ, ವಿಶೇಷ ಅಭಿಮಾನದ ನೋಟವನ್ನು ಮರೆಯಲಾರೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಧಾರಾವಾಹಿ ನೋಡುವವರೇ ಆಗಿರುತ್ತಾರಾದ್ದರಿಂದ ಎಲ್ಲರಿಗೂ ತಮ್ಮ ಪ್ರೀತಿಯ ನಟ ನಟಿಯರ ಬಗ್ಗೆ, ಮುಂದೇನಾಗುತ್ತದೆ ಎಂದು ಕಥೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಮಾತನಾಡಿಸುತ್ತಿದ್ದರು. ಹೀಗಿದ್ದ ನಾನು ಮಗು ಆದ ನಂತರ ಆ ಎಲ್ಲಾ ವಿಶೇಷ ಸ್ಥಾನ ಮಾನ ಗೌರವಗಳ ಗುಂಗನ್ನು ಕಳಚಿಕೊಂಡು ಎಲ್ಲರಂತೆ ಮನೆಯಲ್ಲಿದ್ದುಕೊಂಡು ಟಿ.ವಿ ನೋಡುವ ಸಾಮಾನ್ಯ ಮಹಿಳೆಯಾಗಿ ನನ್ನನ್ನು ಒಪ್ಪಿಕೊಳ್ಳುವುದು ಕಷ್ಟವೆನಿಸಿದರೂ ಅನಿವಾರ್ಯವಾಗಿತ್ತು. ಧಾರಾವಾಹಿಗಳ ಕಥೆಯನ್ನೇ ನಿರ್ಧರಿಸುವ ಉನ್ನತ ಸ್ಥಾನದಲ್ಲಿದ್ದ ನಾನು ಕಳೆದುಕೊಂಡ ಅಸ್ತಿತ್ವವನ್ನು ಮರೆತು ಮಗುವಿನ ಕೆಲಸದಲ್ಲಿ ವ್ಯಸ್ತಳಾಗುವುದು ಮೊದಮೊದಲು ವಿಪರೀತ ಕಾಡುತ್ತಿತ್ತು; ಈಗಲೂ ಕೆಲವೊಮ್ಮೆ ಟಿ.ವಿಯಲ್ಲಿ ಝಗಮಗಿಸುವ ತಾರೆಗಳನ್ನು, ಕಾರ್ಯಕ್ರಮಗಳನ್ನು ನೋಡುವಾಗ ಆ ಜಗತ್ತಿನ ಒಂದು ಭಾಗವಾಗಿದ್ದ ನನ್ನ ಬದುಕಿನ ಬದಲಾದ ತಿರುವಿನ ಬಗ್ಗೆ ಅಚ್ಚರಿ, ವಿಷಾದ ಎರಡೂ ಮೂಡುತ್ತದೆ.

ಒಮ್ಮೆ ಅಮ್ಮನಾದ ನಂತರ ನಮ್ಮ ದಿನಚರಿ, ಆಲೋಚನಾಲಹರಿ ಎಲ್ಲದರ ಕೇಂದ್ರಬಿಂದು ಮಗುವಾಗಿರುತ್ತದೆ. ಮಗುವನ್ನು ದೃಷ್ಟಿಯಲ್ಲಿಟ್ಟುಕೊಂಡೇ ನಮ್ಮೆಲ್ಲಾ ಯೋಜನೆ ರೂಪಿಸಬೇಕಾಗಿರುತ್ತದೆ. ಮಗುವೆಂಬ ಜೀವ ಹೊಟ್ಟೆಯಲ್ಲಿ ಮೊಳಕೆಯೊಡೆದು ಜೀವಂತವಾಗಿ ಹೊರಗೆ ಬರುವವರೆಗೆ, ಬಂದು ಒಂದು ಹಂತಕ್ಕೆ ಜಗತ್ತನ್ನು ಅರಿತುಕೊಳ್ಳುವವರೆಗೆ ನಿಮಗೆ ಹಲವಾರು ವಿಷಯಗಳಲ್ಲಿ ಜ್ಞಾನೋದಯವಾಗಿರುತ್ತದೆ; ಹಲವು ಸತ್ಯಗಳು ಗೋಚರಿಸಿರುತ್ತವೆ. ಅದರಲ್ಲಿ ಮುಖ್ಯವಾದದ್ದು; ನನಗೆ ಬದುಕಿನಲ್ಲಿ ಸಮಯದ ಮಹತ್ವ ಗೊತ್ತಾಗಿದ್ದೇ ಮಗುವಾದ ನಂತರ! ಅಮ್ಮನಾಗುವ ಮೊದಲು ಸಮಯದ ಪರಿವೆಯಿಲ್ಲದೆ ಬೇಕೆಂದಾಗ ಮಲಗಿ ಎಷ್ಟೊತ್ತಿಗೋ ಏಳುತ್ತಿದ್ದ, ಕೆಲಸಗಳನ್ನೆಲ್ಲಾ ಮುಂದೂಡುತ್ತಾ ಯಥೇಚ್ಛವಾಗಿದ್ದ ಸಮಯವನ್ನು ಹೇಗೆ ಹೇಗೋ ಕಳೆಯುತ್ತಾ ಹಾಯಾಗಿದ್ದ ನನ್ನನ್ನು ಜಾಗೃತಗೊಳಿಸಿ ಸಮಯದ ಹಿಂದೆ ಓಡುವಷ್ಟು ಬ್ಯುಸಿಯಾಗಿಸಿದ್ದು ಮಗುವೆಂಬ ಮಂತ್ರದಂಡ! ಈಗ ಒಂದರ್ಧ ಗಂಟೆ ನನ್ನದು ಅಂಥ ಸಮಯ ಸಿಕ್ಕರೆ ಸಾಕು ಎಂದು ಬರಗೆಟ್ಟಂತೆ ಆಡುವಾಗ ಇಡೀ ದಿನ-ವಾರ-ತಿಂಗಳುಗಳನ್ನು ಏನೂ ಮಾಡದೇ ಕಳೆದ ಮನಸ್ಥಿತಿ ಎದುರಾಗಿ ಹುಳ್ಳಗೆ ನಕ್ಕಂತಾಗುತ್ತದೆ. ಯಾವುದೇ ವಸ್ತು-ವಿಷಯ-ಸನ್ನಿವೇಶಗಳು ಇದ್ದಾಗ ಅದರ ಬೆಲೆ ಗೊತ್ತಾಗದೇ ಇಲ್ಲದಾಗ ಬೇಕೆನಿಸುವ ಜೀವನದ ವೈರುಧ್ಯಕ್ಕೆ, ಅದು ಕಲಿಸುವ ಪಾಠಕ್ಕೆ ಬೆರಗಾಗುವಂತಾಗುತ್ತದೆ. ಆಗ ದಿನದ ಇಪ್ಪತ್ನ್ಕಾಲ್ಕು ಗಂಟೆಗಳೂ ನನ್ನದೇ ಆಗಿತ್ತು; ಹಾಗಂಥ ಏನೂ ಘನಂದಾರಿ ಕೆಲಸ ಕಡೆದು ಕಟ್ಟೆ ಹಾಕಲಿಲ್ಲ. ಈಗ ಪುಸ್ತಕಗಳನ್ನು ಓದಬೇಕು, ಬರೆಯಬೇಕು, ಪೇಂಟಿಂಗ್, ಗಾರ್ಡನಿಂಗ್ ಮಾಡಬೇಕು, ಸಿನೆಮಾ ನೋಡಬೇಕು, ವಾಕಿಂಗು ವ್ಯಾಯಾಮ ಎಲ್ಲದಕ್ಕೂ ಸಮಯ ಬೇಕು ಎಂದು ಒದ್ದಾಡುವಾಗ ಮನುಷ್ಯನ ಮನಸ್ಥಿತಿಯ ಬಗ್ಗೆ ಎರಡು ವಿಷಯಗಳು ಗಮನಕ್ಕೆ ಬಂದವು. ಒಂದು – ನಮ್ಮ ಬಳಿ ಹೆಚ್ಚು ಸಮಯವಿದ್ದಾಗಲೇ ನಾವೇನೂ ಮಾಡಿರುವುದಿಲ್ಲ; ಮಾಡಿದರಾಯಿತು ಎನ್ನುವ ಆರಾಮದಾಯಕ ಮೂಡ್ಅನ್ನು ಆವಾಹಿಸಿಕೊಂಡಿರುತ್ತೇವೆ. ಅದೇ ಕಡಿಮೆ ಸಮಯವಿದ್ದಾಗಲೇ ಹೇಗೋ ಹೊಂದಿಸಿಕೊಂಡು ಏನಾದರೂ ಮಾಡಬೇಕು, ಮಾಡಿ ಮುಗಿಸಬೇಕು ಎನ್ನುವ ಹಪಾಹಪಿ ನಮ್ಮನ್ನಾವರಿಸಿಕೊಂಡು ಪಟ್ಟು ಹಿಡಿದು ಕೆಲಸ ಮಾಡಿರುತ್ತೇವೆ. ಇದು ವಿಚಿತ್ರವೆನಿಸಿದರೂ ನಿಜ. ಮಗು ಹೊಟ್ಟೆಯಲ್ಲಿ ಮಿಸುಕಾಡುವ ದಿನಗಳಿಂದ ತಲೆಯಲ್ಲಿ ಬರುವುದಕ್ಕೆ ಶುರುವಾದ ಹೊಸ ಯೋಚನೆಗಳ ಸರಣಿ ನಂತರವೂ ಮುಂದುವರೆದು ನನ್ನ ಮಟ್ಟಿಗೆ ನಾನು ಸೃಜನಶೀಲತೆಯ ಗರಿಷ್ಠ ಮಟ್ಟಕ್ಕೆ ತಲುಪಿದ್ದು ಮಗುವಾದ ನಂತರವೇ.

ಅಮ್ಮನಾಗುವ ಮೊದಲೂ ಮಗು ಇಲ್ಲ ಎನ್ನುವ ಕೊರಗಿನ ಜೊತೆಗೆ ಬೇರೆ ಬೇರೆ ವೈಯಕ್ತಿಕ ಸಮಸ್ಯೆಗಳು, ಮಿತಿಗಳಿಂದ ಬಳಲುತ್ತಿದ್ದ ನಾನು ಅಷ್ಟೇನೂ ಖುಷಿಯಾಗಿರಲಿಲ್ಲ; ಒಂದು ಕಷ್ಟ ಪರಿಹಾರವಾಗುತ್ತಿದ್ದಂತೇ ಇನ್ನೊಂದೇನೋ ನೆಮ್ಮದಿಗೆಡಿಸುವುದಕ್ಕೆ ಹಾಜರು. ಜೀವನದ ಪೆಂಡ್ಯೂಲಮ್ ಕಷ್ಟದಿಂದ ಸುಖಕ್ಕೆ, ಸಂತಸದಿಂದ ದುಃಖಕ್ಕೆ ಪಲ್ಲಟಗೊಳ್ಳುತ್ತಿರುತ್ತದೆ. ಒತ್ತಡಗಳೇನೇ ಇದ್ದರೂ ಖುಷಿಯಾಗಿರಬೇಕು ಎಂದು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಲೇಬೇಕು. ಇಲ್ಲವಾದರೆ ಬದುಕಿನಲ್ಲಿ ನಾವೆಂದೂ ಖುಷಿಯಾಗಿರುವುದಿಲ್ಲ.

ನನ್ನ ಮಗ ಹುಟ್ಟಿದ ನಾಲ್ಕು ವರ್ಷಗಳಿಂದ ಒಂದೇ ಒಂದು ಸಿನೆಮಾ ನೋಡಲಾಗಿಲ್ಲ; ನಾಟಕ, ಸಂಗೀತ, ಯಕ್ಷಗಾನ. ಪುಸ್ತಕ ಬಿಡುಗಡೆ ಎಂದು ತಿರುಗಾಡಿಲ್ಲ. ಜಗತ್ತಿನೆಲ್ಲೆಡೆ ಏನೇನೋ ನಡೆಯುತ್ತಿದ್ದರೂ ಎಲ್ಲದರ ಬಗ್ಗೆಯೂ ಒಂದು ರೀತಿಯ ನಿರ್ಲಕ್ಷ್ಯ ತೋರುತ್ತಾ ಮಗನನ್ನೇ ಜಗತ್ತಾಗಿಸಿಕೊಳ್ಳುವುದು ಅಷ್ಟು ಸುಲಭವೇನಲ್ಲ. ಸುಳ್ಳೇಕೆ ಹೇಳಲಿ? ಅಮ್ಮನಾದ ನಂತರ ಮಗುವಿನ ಒಡನಾಟದಿಂದ ಸಿಗಬಹುದಾದ ಆನಂದದ ಉತ್ತುಂಗ ಸ್ಥಿತಿ ಹಾಗೂ ನಿಭಾಯಿಸಲೇಬೇಕಾದ ಕೆಲಸಗಳಿಂದುಂಟಾಗುವ ಒತ್ತಡದ ಕಷ್ಟ ಎರಡೂ ರೀತಿಯ ಭಾವಗಳನ್ನೂ ಅನುಭವಿಸಿದ್ದೇನೆ. ತಾಯ್ತನವೆಂದರೆ ಬರೀ ಡಿವೈನ್ ಫೀಲಿಂಗ್, ಮಣ್ಣು ಮಸಿ ಎಂದು ವೈಭವೀಕರಿಸಿ ಅದರ ಇನ್ನೊಂದು ಮುಖವನ್ನು ಮರೆಮಾಚುವ ಮನಸ್ಥಿತಿಯ ಬಗ್ಗೆ ನನ್ನ ವಿರೋಧವಿದೆ. ಅಮ್ಮನೆಂದರೆ ತ್ಯಾಗಮಯಿ, ಸಹನಾಮಯಿ, ಕಷ್ಟಸಹಿಷ್ಟ್ಣು ಎಂದೆಲ್ಲಾ ಹೊಗಳಿ ಪಟ್ಟಕ್ಕೇರಿಸಿ ಎಲ್ಲಾ ಕಷ್ಟ, ಜವಾಬ್ದಾರಿಗಳನ್ನು ಹೆಣ್ಣೊಂದೇ ಅನುಭವಿಸುವ, ಎದುರಿಸುವಂತೆ ಭಾವಿಸುವ ಸಮಾಜದ ಧೋರಣೆಯ ಬಗ್ಗೆಯೂ ಆಕ್ಷೇಪವಿದೆ.

ತಾಯಿ ಕೂಡಾ ಮನುಷ್ಯಳೇ; ಅವಳೇನೂ ದೇವರಲ್ಲ, ದೇವರಂತೆ ವಿಶೇಷ ಶಕ್ತಿಯೇನೂ ಇರುವುದಿಲ್ಲ. ಅವಳಿಗೂ ಸುಸ್ತು, ನಿದ್ರೆ, ಹಸಿವು, ಬಾಯಾರಿಕೆ, ಬೇಸರ, ದುಃಖ, ಹತಾಶೆ, ಎಲ್ಲವೂ ಆಗುತ್ತದೆ. ಆಕೆಗೂ ಸಹಾನುಭೂತಿಯ, ಸಹಕಾರದ, ಸಾಂಗತ್ಯದ ಅಗತ್ಯವಿದೆ. ಅಮ್ಮನಾದ ಸಂಪೂರ್ಣ ಖುಷಿಯನ್ನು ನಿರಾಳವಾಗಿ ಅನುಭವಿಸಲು ಜವಾಬ್ದಾರಿಗಳನ್ನು ಹಂಚಿಕೊಂಡು ಭಾವನೆಗಳಿಗೆ ಹೆಗಲುಕೊಟ್ಟು ಸ್ಪಂದಿಸುವ ಅಂತಃಕರಣವುಳ್ಳ ಸಹೃದಯೀ ಸಂಗಾತಿ ಬೇಕೇ ಬೇಕು. ಇಲ್ಲದಿದ್ದರೆ ಬದುಕಿನಲ್ಲಿ ಸಂತಸದ ಸಂಗತಿಯಾದ ಮಗುವೆಂಬ ಬಂಧವೂ ಉಸಿರುಗಟ್ಟಿಸಬಹುದು, ಅಭದ್ರಭಾವ ಅಸಂತೋಷದಲ್ಲಿ ನರಳಿಸಬಹುದು. ಇತ್ತೀಚಿನ ದಿನಗಳಲ್ಲಿ ನನಗಂತೂ ಈ ಭೂಮಿಯ ಮೇಲೆ ಜೀವಂತವಾಗಿರುವುದಕ್ಕೊಂದು ಕಾರಣ, ಕಷ್ಟಗಳಿಗೆಲ್ಲಾ ಕಲ್ಲಾಗುವ ಧೈರ್ಯ. ಎಷ್ಟೇ ಭಿನ್ನಾಭಿಪ್ರಾಯ ಏನೇ ಅಸಹಕಾರವಿದ್ದರೂ ಮತ್ತೆ ಮತ್ತೆ ನನ್ನ ಸಂಗಾತಿಯೊಂದಿಗೆ ನನ್ನನ್ನು ಬೆಸೆದಿಡುವಲ್ಲಿ ಶಕ್ತಿಯಾಗಿ ಗೋಚರಿಸಿದ್ದು ಮಗುವೇ.

ಅಮ್ಮನಾಗುವ ಮೊದಲು ತುಂಬಾ ಕಡಿಮೆ ಮಾತಾಡುತ್ತಾ ಅಕ್ಕಪಕ್ಕದ ಮನೆಯವರೊಂದಿಗೆ ಅಷ್ಟಾಗಿ ಬೆರೆಯದೆ ನನ್ನಷ್ಟಕ್ಕೇ ಇರುತ್ತಿದ್ದ ನಾನು ಮಗುವಿನ ಕಾರಣದಿಂದಾಗಿ ಹೆಚ್ಚೆಚ್ಚು ಮಾತನಾಡುವಂತಾಯಿತು. ಮಗುವನ್ನು ಮಾತನಾಡಿಸುವ ನೆಪದಲ್ಲಿ ಗುರುತು ಪರಿಚಯ ಇಲ್ಲದವರೂ ಪರಿಚಿತರಾದರು. ಆಪತ್ತಿಗಾದವನೇ ನೆಂಟ ಎನ್ನುವ ಮಾತಿನಂತೆ, ಗಂಡ ಹೆಂಡತಿ ಮಗು ಮೂವರೇ ಇರುವ ಇಂದಿನ ಆಧುನಿಕ ಕುಟುಂಬಗಳಲ್ಲಿ ಮಗು ಬಂದ ನಂತರ ಅಕ್ಕಪಕ್ಕದ ಮನೆಯವರ ನಂಟು ಹೆಚ್ಚಾಯಿತು. ಎಷ್ಟೋ ಅಷ್ಟೇ ಗಂಭೀರವಾಗಿ ಇತರರೊಂದಿಗೆ ಇರುತ್ತಿದ್ದ ನಾನು ಮಗು ಬಂದ ನಂತರ ಸ್ನೇಹಶೀಲಳಾದೆ.

ಫೋಟೋ: ಶ್ವೇತಾ ಹೊಸಬಾಳೆ

ಗಂಡ ಬೆಳಿಗ್ಗೆ ಆಫೀಸಿಗೆ ಹೋಗಿ ರಾತ್ರಿ ಮರಳುವವರೆಗೆ ಮನೆಯಲ್ಲಿ ನಾನು, ಮಗು ಇಬ್ಬರೇ ಇದ್ದು ಅತೀ ಚಿಕ್ಕಪುಟ್ಟ ಕೆಲಸಗಳಿಗೂ ಪರದಾಡಿದ್ದೇನೆ. ಪರದಾಡುವ ಕೆಲವೊಮ್ಮೆ ಹೇಳಲಾರದ ಆತಂಕ, ಖಿನ್ನತೆಯನ್ನೂ ಉಂಟುಮಾಡಿದ್ದಿದೆ. ನನ್ನನ್ನೂ ಸೇರಿಸಿ ಅನೇಕರು ಒಂದು ಮಗುವನ್ನೇ ದೊಡ್ಡ ಮಾಡುವ ಹೊಣೆಯಿಂದ ಹೈರಾಣಾಗಿ ಕೈ ಮುಗಿಯುವಾಗ ಹಿಂದೆಲ್ಲಾ ಹೆಚ್ಚೆಚ್ಚು ಮಕ್ಕಳನ್ನು ಹೆತ್ತು ಅವು ತಮ್ಮ ಪಾಡಿಗೆ ತಾವು ಬೆಳೆಯುವುದಕ್ಕೆ ಅನುವು ಮಾಡಿಕೊಡುತ್ತಿದ್ದ ಅವಿಭಕ್ತ ಕುಟುಂಬದ ಮಹತ್ವ ಮನಸ್ಸಿಗೆ ಬಾರದೇ ಇರದು.

ಹೆಣ್ಣು ಅಮ್ಮನಾದಷ್ಟು ಸುಲಭವಾಗಿ ಗಂಡು ಅಪ್ಪನಾಗಲಾರ ಎನ್ನುವ ಪರಿಸ್ಥಿತಿ ಈಗೀಗ ಸ್ವಲ್ಪ ಬದಲಾಗಿದೆಯಾದರೂ ಯಾವುದನ್ನೇ ಆಗಲಿ, ಮಾಡುವ ಮಾಡದಿರುವ ಆಯ್ಕೆ ಗಂಡಸಿಗಿರುತ್ತದೆ. ಅಪ್ಪನಿಗೆ ಸಿಗುವಷ್ಟು ಬಿಡುವು, ವಿಶ್ರಾಂತಿ, ಸಮಯಾವಕಾಶ, ಹವ್ಯಾಸಗಳ ಮುಂದುವರಿಕೆಗೆ ಬೇಕಾದಷ್ಟು ನಿರಾಳತೆ ಅಮ್ಮನಿಗೆ ಮರೀಚಿಕೆ! ಈ ವಿಷಯದಲ್ಲಿ ಗಂಡಸಿಗಿರುವ ಅವಕಾಶಗಳು ಹೆಂಗಸರಿಗಿರುವ ಮಿತಿಗಳು ಮಗುವಾದ ನಂತರ ತುಂಬಾ ಸ್ಪಷ್ಟವಾಗಿ ನನ್ನ ಗಮನಕ್ಕೆ ಬಂದಿದೆ; ಕಾಡಿದೆ, ಚಿಂತೆಗೀಡುಮಾಡಿದೆ ಕೂಡಾ. ಎಲ್ಲಿಗೇ ಆಗಲಿ, ಯಾವಾಗಲೇ ಆಗಲಿ ನಿಂತ ಕ್ಷಣದಲ್ಲಿ ಹೊರಟುಬಿಡಬಹುದಾದ ಸಾಧ್ಯತೆ, ಸೌಕರ್ಯ ಅಪ್ಪನಿಗಿರುತ್ತದೆ. ಆದರೆ ಅಮ್ಮ ಹೊರಡಬೇಕೆಂದರೆ ಮಗುವಿನ ಬೇಕು ಬೇಡಗಳು, ಮಗುವಿಗಾಗಬಹುದಾದ ಅನ್‍ಕಂಫರ್ಟ್ ಫೀಲ್‍ಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ; ಮಗುವಿನ ಅಗತ್ಯಗಳನ್ನು ಮುಂದುಮಾಡಿ ಹೋಗುವುದನ್ನೇ ಬಿಡಬೇಕಾಗುತ್ತದೆ. ಈ ದೃಷ್ಟಿಯಿಂದ ಅಮ್ಮನಾದ ನಂತರ ಹೆಣ್ಣಿನ ಬದುಕು ಕೆಲವು ವರ್ಷ ಅಜ್ಞಾತವಾಸವೇ ಸರಿ!

ಮಗುವಾಗುವ ಮುಂಚೆ ವಿಶಿಷ್ಟ ವಿಭಿನ್ನ ಆಸಕ್ತಿ, ಹವ್ಯಾಸಗಳಿರುವ ಸಂಗಾತಿಯೊಂದಿಗಿನ ಬದುಕು ಮುದ ಕೊಡುತ್ತದೆಯಾದರೂ ಮಗುವಾಗಿ ಬದುಕಿನ ಆದ್ಯತೆಗಳು ಬದಲಾದ ಕಾಲದಲ್ಲಿ ವೈಯಕ್ತಿಕ ಆಸಕ್ತಿಗಳಿಗಿಂತ ಹೆಂಡತಿ ಮಗುವಿನೊಟ್ಟಿಗೆ ಹೆಚ್ಚು ಸಮಯ ಕಳೆಯುವ, ಅವರ ಅಗತ್ಯ ಅವಶ್ಯಕತೆಗಳನ್ನು ಕಾಳಜಿಯಿಂದ ಪೂರೈಸುವ ಸಂಗಾತಿ ಬೇಕು ಎನ್ನಿಸುವುದೂ ಅತ್ಯಂತ ಸಹಜ. ಗಂಡಸಿನ ಕರ್ತವ್ಯವೇನಿದ್ದರೂ ದುಡಿದು ತಂದು ಹಾಕುವುದು, ಮನೆ ಮಗುವಿನ ಕೆಲಸಗಳನ್ನು ಹೆಂಡತಿಯೇ ನೋಡಿಕೊಳ್ಳಬೇಕು, ಅದರ ತಲೆಬಿಸಿ ಗಂಡಸಿಗೆ ತಾಗದಂತೆ ಎಚ್ಚರವಹಿಸಬೇಕು ಎನ್ನುವ ಸಾಂಪ್ರದಾಯಿಕ ಮನೋಭಾವಕ್ಕಿಂತ ಇಬ್ಬರೂ ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಂಡು ನಿಭಾಯಿಸಬೇಕು, ಬದುಕಿನ ಖುಷಿಯನ್ನು ಇಬ್ಬರೂ ಅನುಭವಿಸಬೇಕು ಎನ್ನುವದು ನನ್ನ ನಂಬಿಕೆ. ಇದನ್ನು ಬದುಕಾಗಿಸಿಕೊಳ್ಳಲು ನಾನು ಕಂಡುಕೊಂಡ ದಾರಿ ಆಗಾಗ್ಗೆ ಬಿಡುವು ಮಾಡಿಕೊಂಡು ಪಾರ್ಕಿಗೆ ಹೋಗಿ ಬೆಳಗ್ಗಿನಿಂದ ಸಂಜೆಯವರಗೆ ಒಬ್ಬಳೇ ಕಳೆಯುವುದು, ಮನಸ್ಸಿಗೆ ಬಂದಂತೆ ಅಲೆದಾಡುವುದು, ಪ್ರಕೃತಿಯೊಂದಿಗೆ ಒಡನಾಡುತ್ತಾ ಗಿಡ ಮರ ಹಸಿರು ಬಿಸಿಲು ನೋಡುತ್ತಾ ಚೈತನ್ಯವನ್ನು ಮೈಮನಗಳಲ್ಲಿ ತುಂಬಿಸಿಕೊಳ್ಳುವುದು, ಓದುವುದೋ ಬರೆಯುವುದೋ ನನ್ನಿಷ್ಟವಾದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು, ನಿರಾಳ ಭಾವವನ್ನನುಭವಿಸಿ ಹಿಂದಿರುಗುವುದು. ಇದು ನನ್ನನ್ನೇ ನಾನು ಹೊಸ ಮನುಷ್ಯಳನ್ನಾಗಿಸಿಕೊಳ್ಳಲು ಸಹಾಯ ಮಾಡುತ್ತಿದೆ.

***

ಪರಿಚಯ: ಶ್ವೇತಾ ಹೊಸಬಾಳೆ ಅವರು ಕನ್ನಡ ಎಂ.ಎ, ಪತ್ರಿಕೋದ್ಯಮದಲ್ಲಿ ಪಿ.ಜಿ ಡಿಪ್ಲೊಮಾ ಓದಿದ್ದಾರೆ. ಈಟಿವಿ, ಝೀ ಕನ್ನಡ, ಕಲರ್ಸ್​ ಕನ್ನಡ ವಾಹಿನಿಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಬರೆವಣಿಗೆ, ಓದುವುದು, ಪ್ರವಾಸ, ಪೇಂಟಿಂಗ್, ಫೋಟೋಗ್ರಫಿಯಲ್ಲಿ ನಿರತರಾಗಿದ್ದಾರೆ.

ನಾನೆಂಬ ಪರಿಮಳದ ಹಾದಿಯಲಿ: ಖಿನ್ನತೆಗೆ ಜಾರುವ ಅಂಜಿಕೆಯಲ್ಲಿದ್ದಾಗಲೇ ಬರವಣಿಗೆಗೆ ತೊಡಗಿಕೊಂಡೆ