ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ನೋವು ಬಾರದಂತೆ ಹೀಗೆ ಮುನ್ನೆಚ್ಚರಿಕೆ ವಹಿಸಿ.. ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ

ಮಿದುಳಿನ ಸುತ್ತಮುತ್ತ ಇರುವ ರಕ್ತನಾಳಗಳು ಏಕಾಏಕಿ ಹಿಗ್ಗುತ್ತವೆ. ಹೀಗಾದಾಗ ನರಗಳ ಮೇಲೆ ಒತ್ತಡ ಬೀರುವುದಲ್ಲದೆ, ವಿವಿಧ ರೀತಿಯ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದೇ ಮೈಗ್ರೇನ್​ಗೆ ಮುಖ್ಯ ಕಾರಣ.

ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ನೋವು ಬಾರದಂತೆ ಹೀಗೆ ಮುನ್ನೆಚ್ಚರಿಕೆ ವಹಿಸಿ.. ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ
ಮೈಗ್ರೇನ್​ (ಸಂಗ್ರಹ ಚಿತ್ರ)
Follow us
Lakshmi Hegde
|

Updated on:Feb 20, 2021 | 7:27 PM

ತಲೆನೋವು ಸಹಿಸುವುದು ತೀರ ಕಷ್ಟ..ಅದರಲ್ಲೂ ಮೈಗ್ರೇನ್ (migraine)​ ಇದ್ದರೆ ಜೀವನವೇ ಸಾಕು ಎನ್ನುವಷ್ಟರ ಮಟ್ಟಿಗೆ ನಮ್ಮನ್ನು ಹೈರಾಣು ಮಾಡುತ್ತದೆ. ಸಾಮಾನ್ಯ ತಲೆನೋವು ಬಂದರೆ ಅದನ್ನು ಮಾತ್ರೆಯ ಮೂಲಕವೋ, ನೋವು ನಿವಾರಕ ಬಾಮ್​ಗಳಿಂದಲೋ ಗುಣಪಡಿಸಿಕೊಳ್ಳಬಹುದು. ಆದರೆ ಮೈಗ್ರೇನ್​ ಸ್ವರೂಪ ಬೇರೆಯದ್ದೇ ಆಗಿರುತ್ತದೆ. ಇದು ತಲೆಯ ಒಂದು ಬದಿಗೆ ಮಾತ್ರ ಬರುವ ನೋವು. ಒಮ್ಮೆ ನೋವು ಬಂದರೆ ಅದು ಅಷ್ಟು ಬೇಗ ನಿವಾರಣೆ ಆಗುವುದೂ ಇಲ್ಲ. ಕಣ್ಣು ಬಿಡಲಾರದಷ್ಟು ನೋವು ಕಿತ್ತು ತಿನ್ನುತ್ತದೆ. ಕೆಲವರಿಗೆ ವಾಂತಿಯೂ ಆಗುತ್ತದೆ. ಅದರಲ್ಲೂ ಪುರುಷರಿಗಿಂತ ಮಹಿಳೆಯರಲ್ಲೇ ಮೈಗ್ರೇನ್​ ಹೆಚ್ಚು ಎನ್ನುತ್ತದೆ ಅಧ್ಯಯನ.

ಮಿದುಳಿನ ಸುತ್ತಮುತ್ತ ಇರುವ ರಕ್ತನಾಳಗಳು ಏಕಾಏಕಿ ಹಿಗ್ಗುತ್ತವೆ. ಹೀಗಾದಾಗ ನರಗಳ ಮೇಲೆ ಒತ್ತಡ ಬೀರುವುದಲ್ಲದೆ, ವಿವಿಧ ರೀತಿಯ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದು ಭರಿಸಲಾಗದಷ್ಟು ತಲೆನೋವನ್ನು ತರುತ್ತದೆ. ಇದಕ್ಕೇ ಮೈಗ್ರೇನ್​ ಎಂದು ಕರೆಯಲಾಗುತ್ತದೆ.

ಮೈಗ್ರೇನ್​ ಲಕ್ಷಣಗಳು

  • ವಿಪರೀತ ತಲೆನೋವು
  • ತಲೆಯ ಒಂದು ಬದಿ ಅಥವಾ ಎರಡೂ ಬದಿ ಪೂರ್ತಿ ಸಿಡಿದುಹೋಗುತ್ತಿರುವಂತೆ ಭಾಸವಾಗುತ್ತದೆ
  • ಕಣ್ಣಿನ ಸುತ್ತ, ತಲೆಯ ಹಿಂಭಾಗ ನೋವು
  • ತಲೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ನೋವಿನ ಚಲನೆ
  • ಕೆಲವರಲ್ಲಿ ವಾಂತಿ-ವಾಕರಿಕೆ, ಅತಿಸಾರ ಇರುತ್ತದೆ
  • ಮುಖ ಪೇಲವವಾಗುತ್ತದೆ, ಕಾಲು, ತೋಳುಗಳು ತಣ್ಣಗಾಗುತ್ತವೆ
  • ಅತಿಯಾದ ಬೆಳಕು, ಗಲಾಟೆಯನ್ನು ಕೇಳಲು ಸಾಧ್ಯವಾಗುವುದಿಲ್ಲ
  • ಮೈಗ್ರೇನ್​ ಇರುವವರು ಸದಾ ಕಿರಿಕಿರಿ ಅನುಭವಿಸುತ್ತ, ನಿರುತ್ಸಾಹಿಗಳಾಗಿರುತ್ತಾರೆ

ಮೈಗ್ರೇನ್​ಗೆ ಕಾರಣಗಳು

  • ಅತಿಯಾದ ಬೆಳಕಿಗೆ ಒಡ್ಡಿಕೊಳ್ಳುವುದು
  • ವಿಪರೀತ ಮಾನಸಿಕ ಒತ್ತಡ
  • ನಿದ್ರಾಹೀನತೆ ಮತ್ತು ಉಪವಾಸ ಇರುವುದು
  • ಹಾರ್ಮೋನ್​ ಸಮಸ್ಯೆ
  • ಅಲ್ಕೋಹಾಲ್​, ತಂಬಾಕು, ಸಿಗರೇಟ್​ಗಳ ಸೇವನೆ
  • ಕಾಫಿ ಅಥವಾ ಕೆಫೀನ್​ಯುಕ್ತ ಆಹಾರಗಳ ಅತಿಯಾದ ಸೇವನೆ
  • ತಿಂಗಳ ಮುಟ್ಟಿನ ಸಮಸ್ಯೆಯಿಂದಲೂ ಮೈಗ್ರೇನ್ ಬರಬಹುದು

ನಿಮಗೆ ಮೈಗ್ರೇನ್​ ತಲೆನೋವು ಬರುವುದಕ್ಕೂ ಮೊದಲು ಕಣ್ಣೆದುರು ಮಿಂಚು ಹೋದಂತೆ ಭಾಸವಾಗುತ್ತದೆ. ಬೆಳಕನ್ನು ದಿಟ್ಟಿಸಲು ಸಾಧ್ಯವೇ ಆಗುವುದಿಲ್ಲ. ನೋವು ಶುರುವಾದ ಮೇಲೆ ಕೆಲವರಿಗೆ ಸ್ವಲ್ಪಹೊತ್ತಿನಲ್ಲೇ ಗುಣವಾಗುತ್ತದೆ. ಆದರೆ ಬಹುತೇಕರು ಅದೆಷ್ಟೋ ಹೊತ್ತು ಒದ್ದಾಡುತ್ತಾರೆ. ಮಲಗಲೂ ಆಗದೆ, ಎಚ್ಚರವಿರಲು ಸಾಧ್ಯವಾಗದೆ ಕಷ್ಟಪಡುತ್ತಿರುತ್ತಾರೆ. ಮೈಗ್ರೇನ್​ನಿಂದ ಬಳಲುತ್ತಿರುವವರು ನೋವು ಬಾರದಂತೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಹುದು. ಮದ್ಯಪಾನ, ಸ್ಮೋಕಿಂಗ್​ ಚಟವನ್ನು ಬಿಡಬೇಕು. ಪ್ರತಿನಿತ್ಯ ಚೆನ್ನಾಗಿ ನೀರು ಕುಡಿಯಬೇಕು. ಜೀವನ ಶೈಲಿ, ಆಹಾರ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನಿಯಮಿತ ವ್ಯಾಯಾಮ ಅಗತ್ಯ. ಮಾಂಸ, ಬೇಳೆಕಾಳುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಯೋಗವನ್ನು ನಿತ್ಯವೂ ಮಾಡಬೇಕು. ತುಂಬ ಗಲಾಟೆ, ದೊಡ್ಡ ಶಬ್ದಗಳಾಗುತ್ತಿರುವಲ್ಲಿ ಹೋಗಲೇಬಾರದು.

ಮೈಗ್ರೇನ್​​ಗೆ ಚಿಕಿತ್ಸೆ ಏನು? ಮೈಗ್ರೇನ್​ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರನ್ನು ಭೇಟಿಯಾಗಿ ಉತ್ತಮ ಚಿಕಿತ್ಸೆ ಪಡೆಯುವುದು ತುಂಬ ಮುಖ್ಯ. ನೋವು ಶುರುವಾಗುತ್ತಿದ್ದಂತೆ ತಕ್ಷಣ ಉಪಶಮನಕ್ಕೆಂದು ಕೆಲವರು ಮಾತ್ರೆ ತೆಗೆದುಕೊಳ್ಳುತ್ತಾರೆ. ಆದರೆ ನಂತರ ಬಿಟ್ಟುಬಿಡುತ್ತಾರೆ. ಇನ್ನೊಂದಷ್ಟು ಜನರು, ಮೈಗ್ರೇನ್​ನಿಂದ ಶಾಶ್ವತವಾಗಿ ಮುಕ್ತಿಪಡೆಯಲು ಅಗತ್ಯವಿರುವ ಸುದೀರ್ಘ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಅದೇನೆ ಇರಲಿ, ವೈದ್ಯರನ್ನು ಭೇಟಿಯಾಗಿ, ಅವರು ಶಿಫಾರಸು ಮಾಡಿದ ಚಿಕಿತ್ಸೆ, ಮಾತ್ರೆಯನ್ನೇ ಪಡೆಯುವುದು ತುಂಬ ಒಳಿತು.

ಇದನ್ನೂ ಓದಿ: Periods: ಮಹಿಳೆಯರ ಸಮಸ್ಯೆಗಳು ಹಲವಾರು; ಅದರಲ್ಲೊಂದು ಅನಿಯಮಿತ ಮುಟ್ಟು.. ಕಾರಣ, ಪರಿಹಾರವೇನು?

ಒಣಹವೆಗೆ ತುಟಿಯ ಸೌಂದರ್ಯ ಕಳೆಗುಂದದಿರಲಿ; ಚಳಿಗಾಲದ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಮದ್ದು!

Published On - 7:17 pm, Sat, 20 February 21