ಕೊರೊನಾ ನಡುವೆಯೂ ವಿಜೃಂಭಣೆಯಿಂದ ಜರುಗಿದ ಪಾರ್ವತಾಂಬೆ ಜಾತ್ರೆ.. ಹರಿದು ಬಂದಿತ್ತು ಭಕ್ತ ಸಾಗರ
ಕೊರೊನಾ ನಡುವೆಯೂ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಸಗೂಲಿ ಗ್ರಾಮದ ಅಲ್ಲಹಳ್ಳಿ ಪಾರ್ವತಾಂಭ ಜಾತ್ರೆಯನ್ನು ಭಕ್ತರು ವಿಜೃಂಭಣೆಯಿಂದ ನೆರವೇರಿಸಿದ್ದಾರೆ.
ಚಾಮರಾಜನಗರ: ಮಹಾಮಾರಿ ಕೊರೊನಾದಿಂದಾಗಿ ಅದೆಷ್ಟೋ ಮಹಾ ಕಾರ್ಯಗಳು ಸ್ಥಗಿತಗೊಳ್ಳುತ್ತಿವೆ. ಹೆಚ್ಚು ಜನ ಸಾಮೂಹಿಕವಾಗಿ ಸೇರದಂತೆ ಸರ್ಕಾರ ನಿರ್ಬಂಧ ಹೇರಿದೆ. ಆದ್ರೆ.. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ದೇವರ ವಿಷಯ ಬಂದಾಗ ನಮ್ಮ ಜನ ಯಾವ ನಿರ್ಬಂಧಗಳಿಗೂ ಕ್ಯಾರೇ ಅನ್ನೋದಿಲ್ಲ.
ಇದೇ ರೀತಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಸಗೂಲಿ ಗ್ರಾಮದ ಅಲ್ಲಹಳ್ಳಿ ಪಾರ್ವತಾಂಬ ಜಾತ್ರೆಯನ್ನು ಭಕ್ತರು ವಿಜೃಂಭಣೆಯಿಂದ ನೆರವೇರಿಸಿದ್ದಾರೆ. ಕೊರೊನಾ ಮಧ್ಯೆಯೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ಭಕ್ತಿ ಪರವಶರಾದರು.
ಹರಕೆ ತೀರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಭಕ್ತರು: ಗ್ರಾಮಸ್ಥರು ಕಾಡಿನಲ್ಲಿರುವ ಕಸಗಲಪುರದ ಪಾರ್ವತಾಂಬೆಯನ್ನು ಹೊತ್ತು ತಂದು ಸೋಮವಾರ ಮತ್ತು ಮಂಗಳವಾರ ನಡೆದ ಜಾತ್ರೆಯಲ್ಲಿ ತಾಯಿಯ ಮೆರವಣಿಗೆ ಮಾಡಿದ್ರು. ಜಾತ್ರೆ ಹಿನ್ನೆಲೆಯಲ್ಲಿ ತಳಿರು ತೋರಣಗಳಿಂದ ಗ್ರಾಮವನ್ನು ಅಲಂಕರಿಸಿ ಪಾರ್ವತಾಂಬೆಯ ಅಹ್ವಾನ ಮಾಡಲಾಗಿತ್ತು. ಛತ್ರಿ, ಚಾಮರ, ಡೋಲು, ನಗಾರಿ ಮೂಲಕ ದೇವರ ಪೆಟ್ಟಿಗೆಯನ್ನು ಸ್ವಾಗತಿಸಿದ್ರು.
ಪಾರ್ವತಾಂಬೆಯ ವಿಗ್ರಹವನ್ನು ಸೇವಂತಿಗೆ ಹೂವಿನಿಂದ ಅಲಂಕರಿಸಿದ್ರು. ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಗ್ರಾಮದ ತುಂಬ ಮೆರವಣಿಗೆ ಮಾಡಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ರದ್ದು ಮಾಡಲಾಗಿತ್ತು. ಆದರೆ ಗ್ರಾಮಸ್ಥರು ಸರಳವಾಗಿ ಅದನ್ನು ಅಯೋಜನೆ ಮಾಡಿದ್ದರು. ಈ ವೇಳೆ ಶಕ್ತಿ ದೇವತೆಯ ಹರಕೆ ತೀರಿಸಲು ಹರಕೆ ಹೊತ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಈ ರೀತಿ ಕೊರೊನಾ ನಿಯಮ ಉಲ್ಲಂಘನೆಯಾಗಿದೆ.
Published On - 12:14 pm, Wed, 2 December 20