
ದೆಹಲಿ: ಹೊಸ ವರ್ಷದಿಂದ ಚೆಕ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪಾಸಿಟಿವ್ ಪೇಮೆಂಟ್ ಸಿಸ್ಟಮ್ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ವಿಷಯವನ್ನು ಕಳೆದ ಆಗಸ್ಟ್ನಲ್ಲಿ RBI ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದ್ದರು.
ಈ ಹೊಸ ಚೆಕ್ ಪಾವತಿ ನಿಯಮದ ಪ್ರಕಾರ ₹ 50,000ಕ್ಕೂ ಅಧಿಕ ಮೊತ್ತದ ಚೆಕ್ಗಳ ಕ್ಲಿಯರೆನ್ಸ್ ಸಂದರ್ಭದಲ್ಲಿ ಬ್ಯಾಂಕ್ಗಳು ಗ್ರಾಹಕರಿಂದ ಮರು ದೃಢೀಕರಣ ಪ್ರಕ್ರಿಯೆಗೆ ಮುಂದಾಗಲಿವೆ. ಗ್ರಾಹಕರ ಹಣದ ಸುರಕ್ಷತೆಯನ್ನು ಖಾತರಿಪಡಿಸುವ ಮತ್ತು ಚೆಕ್ ಪಾವತಿಯಲ್ಲಿ ವಂಚನೆ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಜಾರಿಗೊಳಿಸಿರುವ ಈ ನಿಯಮವು ಜನವರಿ 1, 2021 ರಿಂದ ಜಾರಿಗೆ ಬರಲಿದೆ.
ಚೆಕ್‌ಗಳನ್ನು ನೀಡಿದವರು ಬ್ಯಾಂಕ್‌ಗಳಿಗೆ ಎಸ್‌ಎಂಎಸ್, ಮೊಬೈಲ್ ಆ್ಯಪ್, ಇಂಟರ್‌ನೆಟ್ ಬ್ಯಾಂಕಿಂಗ್, ಎಟಿಎಂ ಅಥವಾ ಇತರೆ ಸಾಧನಗಳ ಬಳಸಿ ಚೆಕ್‌ನ ಮಾಹಿತಿಯನ್ನು ನೀಡಬೇಕಾಗುತ್ತದೆ. ಹೀಗಾಗಿ, ಚೆಕ್ ವಂಚನೆಗಳು ತಪ್ಪಲಿವೆ.
ಸುರಕ್ಷೆಗೆ ಹೊಸ ಪದ್ಧತಿ
-ಪಾಸಿಟಿವ್ ಪೇಮೆಂಟ್ ಸಿಸ್ಟಮ್ ಸ್ವಯಂಚಾಲಿತ ವಂಚನೆ ಪತ್ತೆ ಮಾಡುವ ಸಾಧನವಾಗಿದೆ. ಹೊಸ ವ್ಯವಸ್ಥೆಯಲ್ಲಿ ಚೆಕ್ ವಿತರಣೆ ಮಾಡುವವರು ಚೆಕ್ ವಿತರಿಸುವಾಗ ಬ್ಯಾಂಕಿಗೆ ಮಾಹಿತಿ ನೀಡಬೇಕು. ಅಂದರೆ ವಿತರಿಸುತ್ತಿರುವ ಚೆಕ್ ಸಂಖ್ಯೆ, ಚೆಕ್ ದಿನಾಂಕ, ಪಾವತಿಸುವವರ ಹೆಸರು, ಖಾತೆ ಸಂಖ್ಯೆ, ಮೊತ್ತ ಮತ್ತು ಇತರ ವಿವರಗಳನ್ನು ಬ್ಯಾಂಕಿಗೆ ನೀಡಬೇಕು. ಬಳಿಕ ಚೆಕ್ ನಗದು ಮಾಡಿಕೊಳ್ಳುವ ಮೊದಲು ಬ್ಯಾಂಕು ನೀವು ನೀಡಿದ ಮಾಹಿತಿಯನ್ನು ಮರು ಪರಿಶೀಲಿಸುತ್ತೆ. ಒಂದು ವೇಳೆ ನೀವು ಕಳಿಸಿದ ಮಾಹಿತಿ ಹಾಗೂ ಚೆಕ್ನಲ್ಲಿರುವ ಮಾಹಿತಿ ತಾಳೆಯಾಗದಿದ್ದರೆ ಕ್ರಮ ಕೈಗೊಳ್ಳಲಾಗುವುದು.
-ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಚೆಕ್ ಮೊಟಕುಗೊಳಿಸುವ ವ್ಯವಸ್ಥೆಯಲ್ಲಿ (CTS) ಪಾಸಿಟಿವ್ ಪೇಮೆಂಟ್ ಸೌಲಭ್ಯವನ್ನು ಅಭಿವೃದ್ಧಿಪಡಿಸುತ್ತದೆ. ಅದನ್ನು ಬ್ಯಾಂಕುಗಳಿಗೆ ಲಭ್ಯವಾಗುವಂತೆ ಮಾಡುತ್ತದೆ. ₹ 50,000ಕ್ಕೂ ಹೆಚ್ಚಿನ ಮೊತ್ತದ ಚೆಕ್ ಕ್ಲಿಯರೆನ್ಸ್ಗೆ ಸಂಬಂಧಿಸಿದ ಮಾಹಿತಿಯನ್ನು ಖಾತೆ ಹೊಂದಿರುವ ಗ್ರಾಹಕರು ಮತ್ತೊಮ್ಮೆ ಖಾತರಿ ನೀಡಬೇಕಾಗುತ್ತದೆ.
-ಈ ಪ್ರಕ್ರಿಯೆಯಡಿಯಲ್ಲಿ, ಚೆಕ್ ನೀಡುವವರು ಆ ಚೆಕ್‌ನ ಕೆಲವು ಕನಿಷ್ಠ ವಿವರಗಳು ಅಂದರೆ ದಿನಾಂಕ, ಫಲಾನುಭವಿ / ಪಾವತಿಸುವವರ ಹೆಸರು, ಮೊತ್ತ ಇತ್ಯಾದಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಎಸ್‌ಎಂಎಸ್, ಮೊಬೈಲ್ ಆ್ಯಪ್, ಇಂಟರ್‌ನೆಟ್ ಬ್ಯಾಂಕಿಂಗ್, ಎಟಿಎಂ ಅಥವಾ ಇತರೆ ಸಾಧನಗಳನ್ನು ಬಳಸಿ ಚೆಕ್‌ನ ಮಾಹಿತಿಯನ್ನು ನೀಡಬೇಕಾಗುತ್ತದೆ.
-ಈ ಸೌಲಭ್ಯವನ್ನು ಪಡೆಯುವುದು ಖಾತೆದಾರರ ವಿವೇಚನೆಗೆ ಬಿಟ್ಟಿದ್ದು. ಖಾತೆದಾರರು ಇಚ್ಛೆಪಟ್ಟರೆ ಮಾತ್ರ ಹೊಸ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ₹ 5 ಲಕ್ಷ ಅಥವಾ ಅದಕ್ಕೂ ಮೇಲ್ಪಟ್ಟ ಅಧಿಕ ಮೊತ್ತದ ಚೆಕ್ಕುಗಳಿಗೆ ಪಾಸಿಟಿವ್ ಪೇಮೆಂಟ್ ಸಿಸ್ಟಮ್ ಕಡ್ಡಾಯಗೊಳಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು.
-SMS, ಬ್ಯಾಂಕ್ ಶಾಖೆ, ಎಟಿಎಂ, ಬ್ಯಾಂಕ್ನ ವೆಬ್ಸೈಟ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾಸಿಟಿವ್ ಪೇಮೆಂಟ್ ಸಿಸ್ಟಮ್ ವ್ಯವಸ್ಥೆಯ ವೈಶಿಷ್ಟ್ಯಗಳ ಬಗ್ಗೆ ತಮ್ಮ ತಮ್ಮ ಗ್ರಾಹಕರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು RBI ಬ್ಯಾಂಕುಗಳಿಗೆ ಸೂಚಿಸಿದೆ.