ಬಾಗಲಕೋಟೆ: ಸ್ನೇಹಿತರ ಜೊತೆ ನಿಧಿ ಅಗೆಯಲು ಹೋಗಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ಇಂದು ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಇಳಕಲ್ಲು ತಾಲ್ಲೂಕಿನ ಹೂಲಗೇರಿ ರಸ್ತೆಯ ಚಿದಾನಂದ ಚಿಲ್ಲಾಳ (32) ಮೃತ ದುರ್ದೈವಿ. ಹುಲಗೇರಿ ರಸ್ತೆ ಬಳಿ ಸಂಗಮೇಶ್ ಹಿರೇಮಠ್ ಅವರ ಹೊಲದಲ್ಲಿ ನಿಧಿ ಅಗೆಯಲು ಹೋಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಸ್ಥಳದಲ್ಲಿ ನಿಂಬೆಹಣ್ಣು, ಬಾಳೆಹಣ್ಣು, ಬಳೆ, ಎಣ್ಣೆ, ಕುಂಕುಮ ಭಂಡಾರ, ವಿಭೂತಿ, ತೆಂಗಿನಕಾಯಿ, ಪೂಜಾ ಬಟ್ಟಲು, ಗೋಮೂತ್ರದ ಕ್ಯಾನ್, ಮತ್ತು ಪೂಜಾ ಸಾಮಗ್ರಿ ಪತ್ತೆಯಾಗಿದೆ. ಜೊತೆಗೆ ನಿಧಿ ತೆಗೆಯಲು ಬಳಸಿದ್ದ ಸಲಿಕೆ, ಹಾರೆ ಹಾಗೂ ಚಪ್ಪಲಿಗಳು ಸ್ಥಳದಲ್ಲಿ ಪತ್ತೆಯಾಗಿವೆ.
ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಪಾಟೀಲರ ಬೆಂಬಲಿಗರು ಹಾಗೂ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ದೊಡ್ಡನಗೌಡ ಪಾಟಿಲ್ ಬಂಟರಾದ ಶಿವನಗೌಡ ಪಾಟಿಲ್, ಪರತಗೌಡ ಪಾಟಿಲ್, ಹಾಗೂ ಇಳಕಲ್ ಗ್ರಾಮೀಣ ಠಾಣೆ ಪೇದೆಗಳಾದ ಸಿದ್ದು, ಎಸ್ ವಿ ಗೌಡರ,ಎಮ್ ಎಸ್ ಲಮಾಣಿ, ಮತ್ತು ಇಳಕಲ್ ನಗರ ಠಾಣೆ ಪೇದೆ ವಿ ಹೆಚ್ ತುಂಬದ ಎಲ್ಲರೂ ಮನಬಂದಂತೆ ಚಿದಾನಂದ ಮೇಲೆ ಹಲ್ಲೆ ಮಾಡಿದ್ದಾರೆ.
ಇದೇ ಕಾರಣಕ್ಕೆ ಚಿದಾನಂದ ಸಾವನ್ನಪ್ಪಿದ್ದಾನೆ. ನಂತರ ಈ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾ ಎಂದು ಸುಳ್ಳು ಹೇಳುತ್ತಿದ್ದಾರೆಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪ ಆರೋಪ ಮಾಡಿದ್ದಾರೆ.