ಸ್ವಾಮಿ ಹರ್ಷಾನಂದರ ಸ್ಮರಣೆ | ಮಗುವಿನಂತೆ ಕರೆಯುತ್ತಿದ್ದ ಮಹಾನ್ ವ್ಯಕ್ತಿ, ಸಕಲರನ್ನೂ ಗೌರವಿಸುತ್ತಿದ್ದ ಸ್ವಾಮೀಜಿ
ಹರ್ಷಾನಂದ ಸ್ವಾಮೀಜಿ ಅಪಾರ ಜ್ಞಾನಿ, ವಿದ್ವಾಂಸರು. ಅದರಾಚೆಗೆ ಅವರಲ್ಲಿ ಸ್ಯಪ್ರವೃತ್ತಿ ಇತ್ತು. ಗಂಭೀರವಾಗಿ ಹಾಸ್ಯ ಮಾಡುತ್ತಿದ್ದರು. ಜೀವನದಲ್ಲಿ ತುಂಬಾ ಅನುಭವ ಹೊಂದಿದ್ದರು. ನಾವೆಲ್ಲ ಹೀಗೆ ಮೀಟಿಂಗ್, ಚರ್ಚೆಗೆಂದು ಕುಳಿತುಕೊಂಡಾಗ ಯಾವುದಾದರೂ ಒಂದು ಹಾಸ್ಯಭರಿತ ಕತೆಯನ್ನು ಹೇಳಿ ನಗಿಸುತ್ತಿದ್ದರು. ಕೆಲವೊಮ್ಮೆ ತಮ್ಮ ಅನುಭವಗಳನ್ನೇ ಹಾಸ್ಯದ ರೂಪದಲ್ಲಿ ಬಿಚ್ಚಿಡುತ್ತಿದ್ದರು.
ಈ ಬರಹದಲ್ಲಿ ಬೆಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಹರ್ಷಾನಂದರೊಂದಿಗಿನ ಒಡನಾಟವನ್ನು ಬೆಂಗಳೂರು ನಗರ ಇತಿಹಾಸಕಾರ ಸುರೇಶ್ ಮೂನ ನೆನಪಿಸಿಕೊಂಡಿದ್ದಾರೆ.
ಅಂತಹ ದೊಡ್ಡ ಸನ್ಯಾಸಿಯೊಟ್ಟಿಗೆ ನಾನು ಸಮಯ ಕಳೆದಿದ್ದು ನನ್ನ ಗೌರವ ಹೆಚ್ಚಿಸಿದೆ. ಇಂದು ಅವರು ನಿಧನರಾದ ಸುದ್ದಿಕೇಳಿ ತುಂಬ ನೋವಾಯಿತು. ಅನಾರೋಗ್ಯದ ಕಾರಣದಿಂದ ನನಗೆ ಕೊನೆಯದಾಗಿ ಅವರ ದರ್ಶನವನ್ನೂ ಪಡೆಯಲಾಗುತ್ತಿಲ್ಲ ಎಂಬ ಬೇಸರ ಇದೆ.
ಹರ್ಷಾನಂದ ಜೀ ಅವರೊಂದಿಗೆ 25 ವರ್ಷಗಳ ಒಡನಾಟ ಇತ್ತು. ಅವರ ಮರಣವನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು. ನಾನು ರಾಮಕೃಷ್ಣ ಆಶ್ರಮದೊಂದಿಗೆ ನಿಕಟ ಸಂಪರ್ಕ ಹೊಂದಿದ್ದೆ. ಆಶ್ರಮದಿಂದ ನಡೆಸುವ ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೆ. ಈ ಸಂಬಂಧ ಸ್ವಾಮೀಜಿ ನಮ್ಮನ್ನು ಮೀಟಿಂಗ್ಗೆ ಕರೆಯುತ್ತಿದ್ದರು. ಕಾಲೇಜು ಶಿಕ್ಷಕರು, ಸಿಬ್ಬಂದಿ, ನಾವೆಲ್ಲ ಸ್ವಯಂಸೇವಕರಾಗಿ ಪಾಲ್ಗೊಳ್ಳುತ್ತಿದ್ದೆವು. ಅವರ ಕೋಣೆಯ ಪಕ್ಕದಲ್ಲೇ ಇರುವ ಹಾಲ್ನಲ್ಲಿ ನಾವು ಮೀಟಿಂಗ್ ನಡೆಸುತ್ತಿದ್ದೆವು. ಇಂಥ ಮೀಟಿಂಗ್ನಲ್ಲಿ ಸ್ವಾಮೀಜಿ ಅನವಶ್ಯಕವಾಗಿ ಮಾತನಾಡುತ್ತಿರಲಿಲ್ಲ. ಮುಂಚಿತವಾಗಿಯೇ ಒಂದಷ್ಟು ಪಾಯಿಂಟ್ಸ್ಗಳನ್ನು ಹಾಕಿಕೊಂಡು ಬರುತ್ತಿದ್ದರು. ಅಷ್ಟು ವಿಚಾರಗಳನ್ನು ಚರ್ಚೆ ಮಾಡುತ್ತಿದ್ದರು. ವಿಷಯಗಳ ಬಗ್ಗೆ ತುಂಬ ನಿಖರತೆ ಇರುತ್ತಿತ್ತು.. ಅವರು ತುಂಬ ದೊಡ್ಡ ವಿದ್ವಾಂಸರಾಗಿದ್ದರೂ ಮೈಕ್ ಸಿಕ್ಕ ತಕ್ಷಣ ಏನೇನೋ ಮಾತನಾಡಿಬಿಡುತ್ತಿರಲಿಲ್ಲ. ಎಷ್ಟು ಅಗತ್ಯವಿದೆಯೋ ಅಷ್ಟನ್ನೇ ಹೇಳುತ್ತಿದ್ದರು. ಅವರ ಪ್ರವಚನ ಮನಸಿಗೆ ನಾಟುವಂತೆ ಇರುತ್ತಿತ್ತು.
ಹರ್ಷಾನಂದರು ಬರೆದ ಎನ್ಸೈಕ್ಲೋಪೀಡಿಯಾ ಆಫ್ ಹಿಂದೂಯಿಸಂ 30 ವರ್ಷಗಳ ತಪಸ್ಸು. ಅದ್ಭುತವಾದ ಕೃತಿ. ಅಂಥ ಪುಸ್ತಕ ಬರೆಯಬೇಕಾದರೆ ಅದೆಷ್ಟು ಅಧ್ಯಯನ ಮಾಡುತ್ತಿದ್ದರು! ಎಷ್ಟು ಕಡೆಯಿಂದ ವಿಷಯ ಸಂಗ್ರಹ ಮಾಡಿದರು! ಆ ವಯಸ್ಸಿನಲ್ಲೂ ಅಷ್ಟೆಲ್ಲ ಅಧ್ಯಯನದಲ್ಲಿ ತೊಡಗಿದರು. ಪುಸ್ತಕ ಪ್ರಕಟವಾದ ತಕ್ಷಣ ಸುಮ್ಮನೆ ಕೂರುತ್ತಿರಲಿಲ್ಲ. ರಿವ್ಯೂ ಮಾಡುತ್ತಿದ್ದರು. ಅಪ್ಡೇಟ್ಗಳನ್ನೂ ಮಾಡುತ್ತಿದ್ದರು. ಕೊನೆವರೆಗೂ ಅವರಲ್ಲಿ ಜ್ಞಾನದಾಹ ಇತ್ತು.
ಹರ್ಷಾನಂದ ಸ್ವಾಮೀಜಿ ಅಪಾರ ಜ್ಞಾನಿ, ವಿದ್ವಾಂಸರು. ಅದರಾಚೆ ಅವರಲ್ಲಿ ಒಂದು ಹಾಸ್ಯಪ್ರವೃತ್ತಿ ಇತ್ತು. ಗಂಭೀರವಾಗಿ ಹಾಸ್ಯ ಮಾಡುತ್ತಿದ್ದರು. ಜೀವನದಲ್ಲಿ ತುಂಬ ಅನುಭವ ಹೊಂದಿದ್ದರು. ನಾವೆಲ್ಲ ಹೀಗೆ ಮೀಟಿಂಗ್, ಚರ್ಚೆಗೆಂದು ಕುಳಿತುಕೊಂಡಾಗ ಕೊನೆಯಲ್ಲಿ ಯಾವುದಾದರೂ ಒಂದು ಹಾಸ್ಯಭರಿತ ಕತೆಯನ್ನು ಹೇಳಿ ನಗಿಸುತ್ತಿದ್ದರು. ಕೆಲವೊಮ್ಮೆ ತಮ್ಮ ಅನುಭವಗಳನ್ನೇ ಹಾಸ್ಯದ ರೂಪದಲ್ಲಿ ಬಿಚ್ಚಿಡುತ್ತಿದ್ದರು. ಇನ್ನೂ ಕೆಲವು ಸಲ, ನಾವೇನಾದರೂ ಹೇಳಿದರೆ ಅದಕ್ಕೆ ಪ್ರತಿಕ್ರಿಯೆಯಾಗಿ ಸಡನ್ ಆಗಿ ಹಾಸ್ಯ ಮಾಡಿಬಿಡುವರು. ಕೂತ್ಕೋಳಿ ಹೇಳ್ತಿನಿ ಅಂತಾ ಕತೆ ಹೇಳುತ್ತಿದ್ದರು. ನಾವೆಲ್ಲ ತುಂಬ ನಕ್ಕು ಅಲ್ಲಿಂದ ಹೊರಡುತ್ತಿದ್ದೆವು. ಇದು ಅವರ ಸಿಗ್ನೇಚರ್ ಸ್ಟೈಲ್ ಆಗಿತ್ತು.
ಇದನ್ನೂ ಓದಿ: ವಿವೇಕಾನಂದರ ಜನ್ಮ ದಿನವಾದ ಇಂದೇ ಇಹಲೋಕ ತ್ಯಜಿಸಿದ ಸ್ವಾಮಿ ಹರ್ಷಾನಂದ
ಮಗುವಿನಂತೆ ಕರೆಯುತ್ತಿದ್ದರು ಸ್ವಾಮೀಜಿ ಎಲ್ಲರಿಗೂ ಗೌರವ ಕೊಡುತ್ತಿದ್ದರು. ಹಾಗೇ ನನ್ನ ಬಗ್ಗೆ ಕೂಡ ಅಪಾರ ಗೌರವ ಇಟ್ಟುಕೊಂಡಿದ್ದರು. ನನ್ನ ಜತೆ ಏನಾದರೂ ಚರ್ಚೆ ಮಾಡಬೇಕು ಎಂದರೆ ನೇರವಾಗಿ ಕರೆ ಮಾಡುತ್ತಿದ್ದರು. ನೀವು ಸ್ವಲ್ಪ ಸಮಯ ಮಾಡಿಕೊಂಡು ಮಠಕ್ಕೆ ಬರೋಕೆ ಆಗತ್ತಾ..? ಎಂದು ಮಗುವಿನಂತೆ ಕರೆಯುತ್ತಿದ್ದರು. ಇಲ್ಲ ಎಂದು ಹೇಳಲೇ ಸಾಧ್ಯವಿಲ್ಲ. ಅಷ್ಟು ದೊಡ್ಡ ಸ್ಥಾನದಲ್ಲಿರುವ ವಿದ್ವಾಂಸ, ಸನ್ಯಾಸಿ ಹೀಗೆ ಕರೆ ಮಾಡಿ, ವಿಧೇಯತೆಯಿಂದ ಕರೆದರೆ ಹೇಗಾಗಬೇಡ? ನಾನಂತೂ ತುಂಬ ಚಿಕ್ಕವನಾಗಿಬಿಡುತ್ತಿದ್ದೆ. ನೀವು ಒಂದು ಸಮಯ ಹೇಳಿ, ನಾನು ಸಮಯಕ್ಕೆ ಖಂಡಿತ ಬರುತ್ತೇನೆ ಎನ್ನುತ್ತಿದ್ದೆ. ಅವರ ಮುಂದೆ ನಾವೆಲ್ಲ ಏನೂ ಅಲ್ಲ. ಆದರೆ ಮತ್ತೊಬ್ಬರಿಗೆ ಗೌರವ ಕೊಡುವ ದೊಡ್ಡ ಗುಣ ಸ್ವಾಮೀಜಿಯಲ್ಲಿತ್ತು. ಪ್ರತಿಯೊಬ್ಬ ವ್ಯಕ್ತಿಗೂ ಗೌರವ ಸಲ್ಲಬೇಕು ಎಂಬುದೇ ಅವರ ಆಶಯವಾಗಿತ್ತು. ಈ ಸ್ವಭಾವ ಎಲ್ಲರಿಗೂ ಬರುವುದಿಲ್ಲ. ಹರ್ಷಾನಂದ ಮುಖದಲ್ಲಿ ಆ ಜ್ಞಾನದ ಹೊಳಪು ಇತ್ತು. ಇನ್ನು ಅವರನ್ನು ಭೇಟಿಯಾಗಲು ಮಠಕ್ಕೆ ಹೋದರೆ ತಮ್ಮ ಚೇಂಬರ್ಗೇ ಕರೆಸಿಕೊಳ್ಳುತ್ತಿದ್ದರು. ಪಕ್ಕದ ಕುರ್ಚಿಯಲ್ಲೇ ಕುಳಿತುಕೊಳ್ಳಿ ಎನ್ನುತ್ತಿದ್ದರು. ಅದೆಲ್ಲ ನನ್ನ ಪಾಲಿಗೆ ದೊಡ್ಡ ಗೌರವದ ವಿಚಾರ. ನನ್ನ ಬಳಿ ಎಷ್ಟೋ ಸಲಹೆಗಳನ್ನು ಕೇಳುತ್ತಿದ್ದರು. ಅದನ್ನೂ ತೆಗೆದುಕೊಳ್ಳುತ್ತಿದ್ದರು.
ಮೆಟ್ಟಿಲುಹತ್ತಿ ಬಂದಿದ್ದರು ‘ಕರ್ನಾಟಕದಲ್ಲಿ ಸ್ವಾಮಿ ವಿವೇಕಾನಂದರು ಮತ್ತು ಅವರ ಪ್ರಭಾವ’ ಎಂಬ ಪುಸ್ತಕವನ್ನು 2015ರಲ್ಲಿ ನಾನು ಬರೆದಿದ್ದೆ. ಮುನ್ನುಡಿಯನ್ನು ಬರೆದುಕೊಡುವಂತೆ ಹರ್ಷಾನಂದ ಸ್ವಾಮೀಜಿ ಬಳಿ ಕೇಳಿದ್ದೆ. ಅದನ್ನು ಸಂತೋಷದಿಂದ ಒಪ್ಪಿಕೊಂಡು, ನನ್ನ ಬರಹವನ್ನು ಇಂಚಿಂಚೂ ಓದಿ ಚೆಂದನೆಯ ಮುನ್ನುಡಿ ಬರೆದುಕೊಟ್ಟಿದ್ದರು. ಪುಸ್ತಕ ಚೆನ್ನಾಗಿ ಮೂಡಿಬಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದೆವು. ಅದರಲ್ಲೂ ಸ್ವಾಮೀಜಿಯೇ ಬಿಡುಗಡೆ ಮಾಡಲಿ ಎಂಬುದು ನನ್ನ ಆಸೆಯಾಗಿತ್ತು. ಅದನ್ನು ಅವರಿಗೆ ಹೇಳಿದೆ. ಖುಷಿಯಿಂದ ಬಂದರು. ಆದರೆ ಆಗಲೇ 85ವರ್ಷವಾಗಿತ್ತು. ಆರೋಗ್ಯ ಸಮಸ್ಯೆ ಕಾರಣ ಮೆಟ್ಟಿಲು ಹತ್ತುವುದು ಅವರಿಗೆ ಸ್ವಲ್ಪ ಕಷ್ಟವಾಗಿತ್ತು. ಅಲ್ಲಿ ಹೋಗಿ ಮೆಟ್ಟಿಲುಗಳನ್ನು ನೋಡುತ್ತಿದ್ದಂತೆ ಅಯ್ಯೋ ಮೆಟ್ಟಿಲಾ ಎಂದರು. ನನಗೇ ಒಂಥರ ಆಗೋಯ್ತು. ನಾನು ಕ್ಷಮೆ ಕೇಳಿದೆ. ಆದರೆ ಅವರೇನೂ ತುಂಬ ತಲೆ ಕೆಡಿಸಿಕೊಳ್ಳಲಿಲ್ಲ. ಮೆಟ್ಟಿಲು ಹತ್ತಿ ಬಂದು ನನ್ನ ಪುಸ್ತಕ ಬಿಡುಗಡೆ ಮಾಡಿದರು. ನನಗಂತೂ ಒಬ್ಬ ಮಹಾನ್ ವ್ಯಕ್ತಿ ನನ್ನ ಪುಸ್ತಕ ಬಿಡುಗಡೆ ಮಾಡಿದ್ದು ತುಂಬ ಖುಷಿ ಕೊಟ್ಟಿತು.
ಇದನ್ನೂ ಓದಿ: ನಿತ್ಯ ಬಳಸುವ ಪದಗಳಿಗೆ ಭಾವ-ಜೀವ ತುಂಬಿದ್ದ ಅಪರೂಪದ ಅಧ್ಯಾತ್ಮ ಸಾಧಕ ಸ್ವಾಮಿ ಹರ್ಷಾನಂದ ಮಹಾರಾಜ್
ಹರಿಕತೆ ಜವಾಬ್ದಾರಿ ವಹಿಸಿದ್ದರು ಸಾಮಾನ್ಯವಾಗಿ ಮಠದಲ್ಲಿ ಜನವರಿ 1ರಿಂದ 12ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಈ ಬಾರಿ ಕೊರೊನಾ ಇರುವುದರಿಂದ ಇಲ್ಲ. ಹೀಗೆ ಪ್ರತಿವರ್ಷ ಕಾರ್ಯಕ್ರಮದ ಸಂದರ್ಭದಲ್ಲಿ ಒಂದು ದಿನ ಹರಿಕತೆ ಇರುತ್ತದೆ. ಈ ಹರಿಕತೆ ಜವಾಬ್ದಾರಿಯನ್ನು ಸ್ವಾಮೀಜಿ ನನಗೆ ವಹಿಸುತ್ತಿದ್ದರು. ಹರಿಕತೆ ಮಾಡುವವರನ್ನು ಪರಿಚಯಿಸುವುದು, ವಂದನಾರ್ಪಣೆ ಎಲ್ಲವೂ ನನ್ನದೇ ಜವಾಬ್ದಾರಿಯಾಗಿತ್ತು. ಹರಿಕತೆ ಎಂದರೆ ಸ್ವಾಮೀಜಿ ನನಗೇ ಹೇಳುತ್ತಾರೆ ಎಂಬುದು ಮಠದ ಪ್ರತಿಯೊಬ್ಬರಿಗೂ ಗೊತ್ತಾಗಿತ್ತು. ನನಗೆ ಇದು ಸಂತೋಷದ ವಿಚಾರವೇ ಆಗಿತ್ತು. ಆಶ್ರಮಕ್ಕೆ ಹೋಗಿ ಪ್ರಸಾದ ಸ್ವೀಕರಿಸಿದರೆ ಧನ್ಯ ಎಂದು ಭಾವಿಸುವ ನಮಗೆ ಸ್ವಾಮೀಜಿ ಇಂಥ ಜವಾಬ್ದಾರಿಯನ್ನೆಲ್ಲ ಕೊಡುವುದು ಇನ್ನೂ ಖುಷಿಕೊಡುತ್ತಿತ್ತು. ಸ್ವಾಮೀಜಿಯವರದ್ದು ವಾತ್ಸಲ್ಯಮಯ ಹೃದಯವಾಗಿತ್ತು. ಅಷ್ಟು ಕಾಳಜಿ ಮಾಡುತ್ತಿದ್ದರು. ಹಾಗಂತ ಯಾರಾದರೂ ತಪ್ಪು ಮಾಡಿದರೆ ಅದನ್ನು ನೇರವಾಗಿ, ಮುಖಕ್ಕೆ ಹೊಡೆದಂತೆ ಹೇಳಿಬಿಡುತ್ತಿದ್ದರು.
ಇನ್ನೊಂದು ವಿಷಯ ನೆನಪಿಸಿಕೊಳ್ಳಬೇಕು, ಮಠದ ಸಲಹಾ ಸಮಿತಿಯಲ್ಲಿ ಇಬ್ಬರು ಅಥವಾ ಮೂವರು ಸಾರ್ವಜನಿಕರಿಗೆ ಅವಕಾಶ ಇರುತ್ತದೆ. ಆದರೆ ಅವರನ್ನು ಸುಮ್ಮನೆ ಆಯ್ಕೆ ಮಾಡುವುದಿಲ್ಲ. ಮಠದ ದೀರ್ಘಾವಧಿ ಭಕ್ತರ ಪಟ್ಟಿಯಲ್ಲಿರುವ 100 ಸದಸ್ಯರಲ್ಲೇ ಆಯ್ಕೆ ಮಾಡುತ್ತಾರೆ. ಮಠದ ನಿಯಮಗಳು ಗೊತ್ತಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಈ ಸಮಿತಿಗೆ ಒಮ್ಮೆ ನಾನು ಆಯ್ಕೆಯಾಗಿದ್ದೆ. ಆದರೆ ಎರಡನೇ ಬಾರಿ ಆಯ್ಕೆ ಪ್ರಕ್ರಿಯೆ ದಿನ ನಾನು ಹೋಗದೆ ಇದ್ದರೂ, ಸ್ವಾಮೀಜಿ ನನ್ನ ಹೆಸರನ್ನು ಶಿಫಾರಸ್ಸು ಮಾಡಿ, ಆಯ್ಕೆ ಮಾಡಿಸಿದ್ದರು. ಮಠದಿಂದ ಫೋನ್ ಮಾಡಿ, ನೀವು ಆಯ್ಕೆಯಾಗಿದ್ದೀರಿ ಸಹಿ ಮಾಡಿ ಎಂದು ಹೇಳಿದಾಗ ನನಗೇ ಆಶ್ಚರ್ಯವಾಗಿತ್ತು.
ಇದನ್ನೂ ಓದಿ: ಸ್ವಾಮಿ ಹರ್ಷಾನಂದರ ಸ್ಮರಣೆ | ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಎಂಬಂತಿದ್ದರು ಗುರುಗಳು
10 ವರ್ಷದ ಹಿಂದಿನ ನೆನಪು ಸ್ವಾಮಿ ವಿವೇಕಾನಂದರು 1892ದಲ್ಲಿ ಬೆಂಗಳೂರಿಗೆ ಬಂದಾಗ ಕುಳಿತುಕೊಂಡಿದ್ದ ಒಂದು ಕಲ್ಲು ಮೆಜೆಸ್ಟಿಕ್ನ ಬಳಿ ಮನೆಯ ಬಳಿ ಇತ್ತು. 10 ವರ್ಷಗಳ ಹಿಂದೆ ನಾನು ಅದರ ಅಧ್ಯಯನ ಮಾಡುತ್ತಿದ್ದೆ. ಹಾಗೇ ಇನ್ನೂ ಇಬ್ಬರು ಹಿರಿಯರು ಆಶ್ರಮದಲ್ಲಿ ಇದರ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ನಂತರ ಆ ಕಲ್ಲನ್ನು ರಾಮಕೃಷ್ಣ ಆಶ್ರಮಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಯಿತು. ಹಾಗೆ ಕಲ್ಲನ್ನು ತೆಗೆದುಕೊಂಡು ಹೋಗುವ ದಿನ ಹರ್ಷಾನಂದ ಸ್ವಾಮೀಜಿ ನಮ್ಮೊಂದಿಗೆ ಇದ್ದರು. ಅಂದು ಕಲ್ಲಿಗೆ ಮಂಗಳಾರತಿ ಮಾಡಿದರು. ನಂತರದ ದಿನಗಳಲ್ಲಿ ಆ ಕಲ್ಲನ್ನು ಸೂಕ್ತ ಜಾಗದಲ್ಲಿ ಇಡಲಾಯಿತು.
ಪ್ರೋತ್ಸಾಹಿಸುತ್ತಿದ್ದರು ಸಭೆ, ಸಮ್ಮೇಳನಕ್ಕೆ ಆಹ್ವಾನಿಸುತ್ತಿದ್ದರು. ಭಾಷಣ ಮಾಡಲು ಅವಕಾಶ ಕೊಡುತ್ತಿದ್ದರು. ನಮ್ಮ ಮಾತುಗಳನ್ನು ಸಂಪೂರ್ಣವಾಗಿ ಕೇಳಿಸಿಕೊಂಡು ನಂತರ, ತುಂಬ ಚೆನ್ನಾಗಿ ಮಾತನಾಡಿದಿರಿ ಎಂದು ಶ್ಲಾಘಿಸುತ್ತಿದ್ದರು. ಸದಾ ಪ್ರೋತ್ಸಾಹ ನೀಡುತ್ತಿದ್ದರು. 1984ರಿಂದಲೂ ಮಠದ ಜತೆ ಸಂಪರ್ಕವಿದೆ. ನನಗದು ಎರಡನೇ ಮನೆಯಾಗಿದೆ. ಎಲ್ಲ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿದ್ದೆ. ಆದರೆ ಇದೇ ಮೊದಲಬಾರಿಗೆ, ಸ್ವಾಮೀಜಿ ಇಲ್ಲದ ಹೊತ್ತಲ್ಲಿ ಅವರನ್ನು ನೋಡಲು ಹೋಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ತುಂಬ ನೋವಿದೆ.
(ನಿರೂಪಣೆ: ಲಕ್ಷ್ಮೀ ಹೆಗಡೆ)
ಸ್ವಾಮಿ ಹರ್ಷಾನಂದರ ನೆನಪು | ಸದಾ ಪ್ರೋತ್ಸಾಹ, ಸ್ಫೂರ್ತಿ ನೀಡುತ್ತಿದ್ದ ಹಿರಿಯ ಸೋದರ
Published On - 8:13 pm, Tue, 12 January 21