ಕುಟುಂಬ ಸದಸ್ಯನಂತಿದ್ದ ನವಿಲು ವಿದ್ಯುತ್ ಸ್ಪರ್ಶಕ್ಕೆ ಬಲಿ.. ಗ್ರಾಮಸ್ಥರು ಕಣ್ಣೀರು

ಕುಟುಂಬ ಸದಸ್ಯನಂತಿದ್ದ ನವಿಲು ವಿದ್ಯುತ್ ಸ್ಪರ್ಶಕ್ಕೆ ಬಲಿ.. ಗ್ರಾಮಸ್ಥರು ಕಣ್ಣೀರು

ಶಿವಮೊಗ್ಗ: ಊರಿನವರ ಮುದ್ದಿನ ನವಿಲು ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪಿದ ಕಾರಣ ಊರಿನ ಮಂದಿ ಮತ್ತು  ಮನೆಯವರು ಸೇರಿ ಬಿಳಿ ಬಟ್ಟೆ ಹೊದಿಸಿ ಕಣ್ಣೀರು ಹಾಕಿ ಅಂತಿಮ ನಮನ ಸಲ್ಲಿಸಿದ ಮನ ಕಲಕುವ ಘಟನೆ ತೀರ್ಥಹಳ್ಳಿ ತಾಲೂಕಿನ ಹಾರೋಗೋಳಿಗೆಯಲ್ಲಿ ನಡೆದಿದೆ.

ಕಳೆದ 2 ವರ್ಷದಿಂದ ಹಾರೋಗೊಳಿಗೆಯಲ್ಲಿ ನೆಲೆಸಿದ್ದ ನವಿಲಿಗೆ ಕೆಲವರು ರಾಮು ಎಂದು ಕರೆಯುತ್ತಿದ್ದರು. ಈ ನವಿಲು ಪ್ರಸಿದ್ಧ ಚಿಂತಕ ನೆಂಪೆ ದೇವರಾಜ್ ಮತ್ತು ಅವರ ಪತ್ನಿ ಸುಧಾ ಅವರ ಮಾತು ಕೇಳುವ, ನೃತ್ಯ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ನವಿಲು ಮರಣ ಹೊಂದಿದ್ದು ಊರಿನವರು ಕಂಬನಿ ಮಿಡಿದಿದ್ದಾರೆ.

ಶನಿವಾರ ಬೆಳಗ್ಗೆ ಯಾವುದೋ ಹಕ್ಕಿ ಒದ್ದಿದ್ದರಿಂದ ವಿದ್ಯುತ್ ತಂತಿ ಮೇಲೆ ಬಿದ್ದ ನವಿಲು ಸ್ಥಳದಲ್ಲೇ ಮೃತಪಟ್ಟಿದೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಿದ ನೆಂಪೆ ದೇವರಾಜ್ ಮತ್ತು ಸ್ಥಳೀಯರು ನವಿಲಿಗೆ ಬಿಳಿ ಬಟ್ಟೆ ಹೊದಿಸಿ, ಹೂವು ಹಾಕಿ ಅಂತಿಮ ನಮನ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಸಂಸ್ಕಾರ ಮಾಡಿದ್ದಾರೆ.

ಈ ನವಿಲು ಇಡೀ ಊರಿನ ಜನರ ಪ್ರೀತಿಗೆ ಪಾತ್ರವಾಗಿತ್ತು. ಜನರಂತೆ ಬುದ್ದಿ ಹೊಂದಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
-ಬಸವರಾಜ್ ಯರಗಣವಿ