ಬೋನ್ ಇಟ್ಟರೂ ತಪ್ಪಿಸಿಕೊಳ್ಳುತ್ತಿದೆ ಚಾಲಾಕಿ ಚಿರತೆ; ಆತಂಕದಲ್ಲಿ ಸ್ಥಳೀಯರು
ಕೆಲವು ದಿನಗಳಿಂದ ಗ್ರಾಮದ ಬಳಿ ಚಿರತೆಯೊಂದು ಬಿಂದಾಸ್ ಆಗಿ ಓಡಾಡುತ್ತ ಗ್ರಾಮದ ಬಳಿ ಓಡಾಡುವ ನಾಯಿಗಳು, ಕುರಿ, ಮೇಕೆಗಳನ್ನು ತಿನ್ನುತ್ತಿದೆ. ರಾತ್ರಿ ಆಗುತ್ತಿದ್ದಂತೆ ದೊಡ್ಡಿಗಳಿಗೆ ಬರುವ ಚಿರತೆ ಕುರಿ, ಮೇಕೆಗಳನ್ನು ತಿಂದು ಯಾರ ಭಯ, ಅಂಜಿಕೆ ಇಲ್ಲದಂತೆ ಓಡಾಡಿಕೊಂಡಿದೆ.

ಹಾವೇರಿ: ಇಲ್ಲಿನ ರಟ್ಟೀಹಳ್ಳಿ ತಾಲೂಕಿನ ನಾಗವಂದ ಗ್ರಾಮದಲ್ಲಿ ಚಿರತೆ ಆತಂಕ ತಂದಿಟ್ಟಿದೆ. ಇದು ದಟ್ಟವಾದ ಗುಡ್ಡಗಾಡು ಪ್ರದೇಶವಾಗಿದ್ದು, ಕುರಿಗಾಹಿಗಳು, ಶಾಲಾ ಮಕ್ಕಳು ಭಯದಲ್ಲಿಯೇ ಓಡಾಡುವಂತಾಗಿದೆ.
ಕೆಲವು ದಿನಗಳಿಂದ ಗ್ರಾಮದ ಬಳಿ ಚಿರತೆಯೊಂದು ಬಿಂದಾಸ್ ಆಗಿ ಓಡಾಡುತ್ತ ಗ್ರಾಮದ ಬಳಿ ನಾಯಿಗಳು, ಕುರಿ, ಮೇಕೆಗಳನ್ನು ತಿನ್ನುತ್ತಿದೆ. ರಾತ್ರಿ ಆಗುತ್ತಿದ್ದಂತೆ ದೊಡ್ಡಿಗಳಿಗೆ ಬರುವ ಚಿರತೆ ಕುರಿ, ಮೇಕೆಗಳನ್ನು ತಿಂದು ಯಾರ ಭಯ, ಅಂಜಿಕೆ ಇಲ್ಲದಂತೆ ಓಡಾಡಿಕೊಂಡಿದೆ. ಈಗಾಗಲೇ ಹತ್ತಕ್ಕೂ ಅಧಿಕ ಕುರಿ ಮತ್ತು ಮೇಕೆಗಳನ್ನು ತಿಂದು ಹಾಕಿರುವ ಚಿರತೆ ನಾಗವಂದ ಮಾತ್ರವಲ್ಲ ಸುತ್ತಮುತ್ತಲಿನ ಅಣಜಿ, ಹಳಿಯಾಳ, ಮೇದೂರು, ತಡಕನಹಳ್ಳಿ, ಆರೀಕಟ್ಟಿ ತಾಂಡಾದ ಜನರಲ್ಲಿ ಎಲ್ಲಿಲ್ಲದ ಭಯ ಸೃಷ್ಟಿಸಿದೆ.
ಗ್ರಾಮದ ಹೊರವಲಯದಲ್ಲಿರುವ ಶಾಲೆಗೆ ನಡೆದುಕೊಂಡು ಹೋಗುವ ಶಾಲಾ ಮಕ್ಕಳು ಚಿರತೆ ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಹರಿದಾಡಿದಾಗಿನಿಂದ ಭಯದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಆಗಾಗ ಗ್ರಾಮದ ಬಳಿ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದ ಶಾಲೆಯ ಶಿಕ್ಷಕರಿಗೂ ಮಕ್ಕಳದ್ದೆ ದೊಡ್ಡ ಚಿಂತೆಯಾಗಿದೆ ಎಂದು ಶಿಕ್ಷಕ ಪರಮೇಶ್ವರಪ್ಪ ತಿಳಿಸಿದ್ದಾರೆ.
ಚಿರತೆಗೆ ಬೋನು ಕೆಲವು ದಿನಗಳ ಹಿಂದೆ ರಾತ್ರಿ ವೇಳೆಯಲ್ಲಿ ಗ್ರಾಮದ ಸಮೀಪದ ರಸ್ತೆಯಲ್ಲಿ ಓಡಾಡುತ್ತಿದ್ದ ಚಿರತೆಯ ದೃಶ್ಯವನ್ನು ಗ್ರಾಮಸ್ಥರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಇರುವ ಬಗ್ಗೆ ಖಚಿತ ಮಾಡಿಕೊಂಡು ಚಿರತೆ ಸೆರೆಗೆ ಶಾಲೆಯ ಸಮೀಪದ ರೈತರೊಬ್ಬರ ಜಮೀನಿನಲ್ಲಿ ಬೋನ್ ಇಟ್ಟಿದ್ದಾರೆ. ರಾತ್ರಿ ವೇಳೆ ಬೋನಿನಲ್ಲಿ ನಾಯಿಯೊಂದನ್ನು ಕಟ್ಟಿ ಹಾಕಿ, ನಾಯಿಯ ಒದರಾಟ ಕೇಳಿ ಚಿರತೆ ನಾಯಿ ತಿನ್ನಲು ಬಂದು ಬೋನಿಗೆ ಬೀಳಬಹುದು ಎಂಬ ಲೆಕ್ಕಾಚಾರದಲ್ಲಿ ಬೋನ್ ಇಡಲಾಗಿದೆ. ಆದರೆ ಚಾಲಾಕಿ ಚಿರತೆ ಮಾತ್ರ ಬೋನಿಗೆ ಬೀಳದಂತೆ ಓಡಾಡುತ್ತಿದೆ. ಇದು ನಾಗವಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ನಿದ್ದೆಗೆಡಿಸಿದೆ. ಕುರಿಗಾಹಿಗಳಂತೂ ಅರಣ್ಯ ಪ್ರದೇಶ, ಗುಡ್ಡಗಾಡು ಪ್ರದೇಶ ಬಿಟ್ಟು ಗ್ರಾಮದ ಬಳಿ ಬಂದು ಟೆಂಟ್ ಹಾಕಿದ್ದಾರೆ.
ಆದಷ್ಟು ಬೇಗ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿದು ಜನವಸತಿ ಇಲ್ಲದ ಕಡೆ ಇರುವ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಾಗ ಮಾತ್ರ ಜನರಲ್ಲಿ ಮನೆ ಮಾಡಿರುವ ಆತಂಕ ದೂರವಾಗಲಿದೆ.
Published On - 12:19 pm, Mon, 25 January 21