Anushka-Virat Kohli: ಮತ್ತೊಂದು ಐಶಾರಾಮಿ ಮನೆ ಖರೀದಿಸಿದ ಅನುಷ್ಕಾ-ವಿರಾಟ್: ಬೆಲೆ ಎಷ್ಟು?

ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮುಂಬೈನ ಅಲಿಬಾಗ್​ನಲ್ಲಿ ಐಶಾರಾಮಿ ವಿಲ್ಲಾ ಒಂದನ್ನು ಖರೀದಿಸಿದ್ದಾರೆ. 2000 ಚದರ ಅಡಿ ವಿಸ್ತೀರ್ಣದ ಈ ವಿಲ್ಲಾದ ಬೆಲೆ ಕೆಲವು ಕೋಟಿಗಳು!

Anushka-Virat Kohli: ಮತ್ತೊಂದು ಐಶಾರಾಮಿ ಮನೆ ಖರೀದಿಸಿದ ಅನುಷ್ಕಾ-ವಿರಾಟ್: ಬೆಲೆ ಎಷ್ಟು?
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
Follow us
ಮಂಜುನಾಥ ಸಿ.
|

Updated on: Feb 25, 2023 | 8:10 PM

ನಟಿ ಅನುಷ್ಕಾ ಶರ್ಮಾ  (Anushka Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಜೋಡಿ ಭಾರತದ ಜನಪ್ರಿಯ ಜೋಡಿಗಳಲ್ಲೊಂದು ಮಾತ್ರವಲ್ಲ ಭಾರಿ ಶ್ರೀಮಂತ ಸೆಲೆಬ್ರಿಟಿ ಜೋಡಿಗಳಲ್ಲೊಂದು ಸಹ. ಕ್ರಿಕೆಟ್ ಮೂಲಕ ವಾರ್ಷಿಕ ನೂರಾರು ಕೋಟಿ ವಿರಾಟ್ ಕೊಹ್ಲಿ ಗಳಿಸಿದರೆ ನಟನೆ ಹಾಗೂ ನಿರ್ಮಾಣದಿಂದ ಅನುಷ್ಕಾ ಶರ್ಮಾ ಸಹ ಕೋಟ್ಯಂತರ ಹಣ ಗಳಿಸುತ್ತಾರೆ. ಹಣವನ್ನು ಮನೆ, ಕಾರು ಇತ್ಯಾದಿ ತಮ್ಮ ಅನುಕೂಲಕ್ಕೆ ತಕ್ಕಂತೆ ಖರ್ಚು ಸಹ ಮಾಡುತ್ತಾರೆ.

ಇದೀಗ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೊಸ ಐಶಾರಾಮಿ ಮನೆಯೊಂದನ್ನು ಖರೀದಿಸಿದ್ದಾರೆ. ಈ ಜೋಡಿ ಈಗ ಖರೀದಿಸಿರುವ ಮನೆಯನ್ನು ಮನೆ ಎನ್ನುವಂತಿಲ್ಲ ಬೃಹತ್ ಐಶಾರಾಮಿ ವಿಲ್ಲಾ ಇದು.

ಆರು ತಿಂಗಳ ಹಿಂದಷ್ಟೆ ಮುಂಬೈನ ಐಶಾರಾಮಿ ಪ್ರದೇಶ ಅಲಿಬಾಗ್​ನಲ್ಲಿ ಮನೆಯೊಂದನ್ನು ಖರೀದಿಸಿದ್ದ ವಿರಾಟ್ ಹಾಗೂ ಅನುಷ್ಕಾ, ಇದೀಗ ಅದೇ ಏರಿಯಾದ ಅವಾಸ್​ ಪ್ರಾಜೆಕ್ಟ್​ ಪ್ರದೇಶದಲ್ಲಿ ವಿಲ್ಲಾ ಖರೀದಿಸಿದ್ದಾರೆ. 2000 ಚದರ ಅಡಿಯ ವಿಶಾಲವಾದ ವಿಲ್ಲಾ ಇದಾಗಿದ್ದು, ಈ ವಿಲ್ಲಾಗೆ ಬರೋಬ್ಬರಿ 6 ಕೋಟಿ (ಲೆಕ್ಕದ ಪ್ರಕಾರ) ನೀಡಿದ್ದಾರೆ ವಿರಾಟ್ ಕೊಹ್ಲಿ. ನೊಂದಣಿ ಶುಲ್ಕವಾಗಿ 34 ಲಕ್ಷ ಹಣ ಕಟ್ಟಲಾಗಿದೆ.

ಕೊಹ್ಲಿ ಈಗ ಖರೀದಿಸಿರುವ ವಿಲ್ಲಾನಲ್ಲಿ 400 ಚದರ ಅಡಿಯ ಸ್ವಿಮ್ಮಿಂಗ್ ಪೂಲ್ ಇದ್ದು, ಬೃಹತ್ ಹೋಮ್ ಥಿಯೇಟರ್, ಕ್ರಿಕೆಟ್ ಪ್ರ್ಯಾಕ್ಟೀಸ್ ನೆಟ್ ಸೇರಿದಂತೆ ಇನ್ನೂ ಹಲವು ಐಶಾರಾಮಿ ಸೌಲಭ್ಯಗಳನ್ನು ಈ ಮನೆ ಹೊಂದಿರಲಿದೆ. ಮನೆಯ ಒಳಾಂಗಣ ವಿನ್ಯಾಸವನ್ನು ನಟ ಹೃತಿಕ್ ರೋಷನ್​ರ ಮಾಜಿ ಪತ್ನಿ ಸೂಸೆನ್​ ಒಡೆತನದ ಸಂಸ್ಥೆ ಮಾಡುತ್ತಿದೆ. ಆವಾಸ್ ಪ್ರಾಜೆಕ್ಟ್​ ಸಹ ಕೊಹ್ಲಿಯ ವಿಲ್ಲಾದ ಕಿರು ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಕಳೆದ ತಿಂಗಳೇ ಬಿಡುಗಡೆ ಹಂಚಿಕೊಂಡಿತ್ತು.

ಆವಾಸ್ ಪ್ರಾಜೆಕ್ಟ್​ಗೆ ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ವಕೀಲ ಮಹೇಶ್ ಮಹ್ತ್ರೆ ನೀಡಿರುವ ಮಾಹಿತಿಯಂತೆ, ಆವಾಸ್ ವಿಲ್ಲೇಜ್ ಪ್ರಾಜೆಕ್ಟ್ ಅದರ ನೈಸರ್ಗಿಕ ಸೌಂದರ್ಯದಿಂದಾಗಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾಗೆ ಬಹಳ ಇಷ್ಟವಾಯ್ತಂತೆ. ಇಲ್ಲಿರುವ ಸ್ಪೀಡ್ ಬೋಟ್​ಗಳಿಂದಾಗಿ ಮುಂಬೈ ನಗರಕ್ಕೆ ತೆರಳುವ ಸಮಯ ಬಹಳ ಕಡಿಮೆಯಾಗಿದ್ದು ಹೆಚ್ಚಿನ ಸೆಲೆಬ್ರಿಟಿಗಳು ಈ ಪ್ರದೇಶದಲ್ಲಿ ಮನೆ ಹೊಂದುತ್ತಿದ್ದಾರೆ ಎಂದಿದ್ದಾರೆ.

ವಿರಾಟ್ ಕೊಹ್ಲಿ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿರುವ ಕಾರಣ ಮನೆಯ ನೊಂದಣಿಗೆ ಅವರ ಸಹೋದರ ವಿಕಾಸ್ ಕೊಹ್ಲಿ ಬಂದಿದ್ದರಂತೆ. ನಿಮಯಗಳ ಅನ್ವಯ ನೊಂದಣಿ ಶುಲ್ಕ, ಇನ್ನಿತರೆ ತೆರಿಗೆಗಳನ್ನು ಪಾವತಿಸಿ ಕೊಹ್ಲಿ ಹೆಸರಿಗೆ ಆಸ್ತಿಯನ್ನು ನೊಂದಣಿ ಮಾಡಿಸಲಾಗಿದೆ. ನೊಂದಣಿ ಆದ ಮೊತ್ತಕ್ಕಿಂತಲೂ ದುಪ್ಪಟ್ಟು ಮಾರುಕಟ್ಟೆ ಮೌಲ್ಯ ಅಲಿಬಾಗ್​ನಲ್ಲಿದೆ ಎನ್ನಲಾಗುತ್ತಿದ್ದು, ಆರು ಕೋಟಿಯ ದುಪ್ಪಟ್ಟು ಹಣವನ್ನು ಹಣವನ್ನು ವಿಲ್ಲಾ ಖರೀದಿಸಲು ಕೊಹ್ಲಿ ನೀಡಿರಬಹುದು ಎಂದು ಕೆಲವು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇದೇ ಅಲಿಬಾಗ್​ನ ಸಮೀಪದ ಜಿರಾದ್​ ಎಂಬಲ್ಲಿ ಬೃಹತ್ ಫಾರಂ ಹೌಸ್ ಒಂದನ್ನು ಖರೀದಿಸಿದ್ದರು. 36000 ಚದರ ಅಡಿಯ ಈ ಫಾರಂ ಹೌಸ್​ಗೆ ಈ ಜೋಡಿ 19.24 ಕೋಟಿ ಹಣ ನೀಡಿತ್ತು. ಈ ಪ್ರಾಪರ್ಟಿಯು ಅನುಷ್ಕಾ ಶರ್ಮಾ ಹೆಸರಿನಲ್ಲಿ ನೊಂದಣಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ