ಬೆಂಗಳೂರು: ಗಣೇಶ ಹಬ್ಬದ ಸಂಭ್ರಮದಲ್ಲಿರುವಾಗಲೇ ಗಣೇಶ ಮೂರ್ತಿ ವ್ಯಾಪಾರಿಗಳು ಮತ್ತು ಅಧಿಕಾರಿಗಳ ಮಧ್ಯೆ ಜಟಾಪಟಿ ನಡೆದಿದೆ. ಟ್ಯಾನರಿ ರಸ್ತೆಯ ಅಶೋಕ್ ಟಾಕೀಸ್ ಬಳಿ ಇರುವ ಅಂಗಡಿಗಳಿಗೆ ದಾಳಿ ನಡೆಸಿದ ಅಧಿಕಾರಿಗಳು ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡದಂತೆ ತಡೆ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಗಣೇಶ ಮೂರ್ತಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ರು.
ಪಿಒಪಿ ನಿಷೇಧ ಮಾಡಿ ಈ ಬಾರಿ ಆದೇಶವನ್ನು ಹೊರಡಿಸಿಲ್ಲ. ಈಗ ನೀವು ಏಕಾಏಕಿ ಇಲ್ಲಿಗೆ ಬಂದು ಅಡ್ಡಿಪಡಿಸಿದರೆ ಹೇಗೆ? ನಾವು ಈಗ ಎಲ್ಲಿಗೆ ಹೋಗಬೇಕೆಂದು ಅಧಿಕಾರಿಗಳಿಗೆ ವ್ಯಾಪಾರಿಗಳು ಪ್ರಶ್ನಿಸಿದ್ದಾರೆ. ನಮ್ಮ ಪಾಡಿಗೆ ನಮಗೆ ವ್ಯಾಪಾರ ಮಾಡುವುದಕ್ಕೆ ಬಿಡಿ. 4 ಅಡಿಗೂ ಎತ್ತರದ ಮೂರ್ತಿ ಮಾರಾಟ ಮಾಡದಂತೆ ಸರ್ಕಾರದಿಂದ ಸೂಚನೆ ನೀಡಲಾಗಿತ್ತು. ಅದರಂತೆ ನಾವು ಗಣೇಶ ಮೂರ್ತಿ ಮಾರಾಟ ಮಾಡುತ್ತಿದ್ದೇವೆ ಎಂದಿದ್ದಾರೆ. ವ್ಯಾಪಾರಸ್ಥರ ಮಾತಿಗೆ ಅಧಿಕಾರಿಗಳು ಕೂಡ ಗರಂ ಆಗಿದ್ದಾರೆ.
ಪಿಒಪಿ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡುವಂತಿಲ್ಲ. ಸರ್ಕಾರದ ಆದೇಶವೇ ಇದೆ. ತಕ್ಷಣ ಅಂಗಡಿ ಮುಚ್ಚಿ ಇಲ್ಲದಿದ್ರೆ ಸೀಜ್ ಮಾಡುತ್ತೇವೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ರು. ಈ ವೇಳೆ ಅಂಗಡಿಯನ್ನು ಮುಚ್ಚಲ್ಲವೆಂದು ವ್ಯಾಪಾರಿಗಳು ಪಟ್ಟು ಹಿಡಿದ್ರು. ನಮಗೆ ಮೊದಲೇ ನೋಟಿಸ್ ಕೊಡಬೇಕಿತ್ತು. ದಿಢೀರ್ ಅಂತ ಬಂದು ಗಣೇಶ್ ಎತ್ತಂಗಡಿ ಮಾಡಿದ್ರೆ ಹೇಗೆ. ನಮಗೆ ಯಾರು ಬಂಡವಾಳವನ್ನು ಕೊಡುತ್ತಾರೆಂದು ಅಧಿಕಾರಿಗಳು ಮತ್ತು ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.