ಸೋಮವಾರ ಸಿಎಂ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಿದ ಕರ್ನಾಟಕ ರಾಜ್ಯ ರೈತ ಸಂಘ
ಸೋಮವಾರ (ಜುಲೈ 11) ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಗೆ ಕಬ್ಬು ಬೆಳೆಗಾರರು ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರ ಮನೆಗೆ ಸೋಮವಾರ (ಜುಲೈ 11) ಬೆಳಿಗ್ಗೆ 11 ಗಂಟೆಗೆ ಕಬ್ಬು (Sugarcane) ಬೆಳೆಗಾರರು ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಅದಾದಮೇಲೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ (Krantiveera Sangolli Rayanna) ಬೃಹತ್ ರ್ಯಾಲಿ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಬೆಂಗಳೂರಿನಲ್ಲಿ (Bengaluru) ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಬಡಗಲಪುರ ನಾಗೇಂದ್ರ ಅವರು ಕಬ್ಬು ಬೆಳೆಗಾರರಿಗೆ ಬೆಲೆಯಲ್ಲಿ ಮೋಸ, ತೂಕದಲ್ಲಿ ವಂಚನೆ ಹಾಗೂ ಪಾವತಿಯಲ್ಲಿ ವಿಳಂಬವಾಗುತ್ತಿದೆ ಎಂದರು.
ಎಫ್ಆರ್ಪಿಗಿಂತಲೂ, ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಂದ ಕಬ್ಬನ್ನು ಕೊಂಡು ಅವರನ್ನು ಶೋಷಣೆ ಮಾಡಲಾಗುತ್ತಿದೆ. ಈ ಎಲ್ಲಾ ವಿಚಾರ ಗೊತ್ತಿದ್ದರೂ ಸರ್ಕಾರ ಇದರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಎಸ್ಎಪಿಯನ್ನು ಸರ್ಕಾರ ನಾಲ್ಕು ವರ್ಷದಿಂದ ಕಬ್ಬು ಬೆಳೆಗಾರರಿಗೆ ಕೊಟ್ಟಿಲ್ಲ. ಇದಕ್ಕೆ ಕಾರಣ ಕಬ್ಬು ಕಾರ್ಖಾನೆಯ ಮಾಲೀಕರೇ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿದ್ದಾರೆ. ಎಲ್ಲಾ ಪಕ್ಷಗಳಲ್ಲೂ ಅವರೇ ಇದ್ದಾರೆ. ರಾಜ್ಯ ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.
ಪ್ರೋ ಎಂಡಿ ನಂಜುಡ ಸ್ವಾಮಿ ಇದ್ದಾಗ ವಿದ್ಯುತ್ ತಾರತಮ್ಯದ ವಿರುದ್ಧ ಕರ ನಿರಾಕರಣೆ ಚಳುವಳಿಗೆ ಕರೆ ನೀಡಿದ್ದರು. ಇದರಿಂದ ರಾಜ್ಯದ ಸಾವಿರಾರು ರೈತರು ವಿದ್ಯುತ್ ಬಿಲ್ನ್ನು ಪಾವತಿ ಮಾಡಿರಲಿಲ್ಲ. 2017 ರಲ್ಲಿ ರಾಜ್ಯ ಸರ್ಕಾರ ಹಳೆ ಬಿಲ್ನ್ನು ಮನ್ನಾ ಮಾಡುತ್ತೆವೆ. ಹೊಸ ಮೀಟರ್ ಹಾಕುತ್ತೇವೆ ಹೊಸ ದರ ಪಾವತಿ ಮಾಡಿಕೊಂಡು ಹೋಗುವಂತೆ ಸೂಚನೆ ನೀಡಿದರು. ಈಗ ಸರ್ಕಾರ ಹಳೆಯ ಬಿಲ್ನ್ನು ವಸೂಲಿ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕರಾ ನಿರಾಕರಣೆ ಚಳುವಳಿಯಲ್ಲಿ ಹಳೆಯ ಬಿಲ್ ಪಾವತಿ ಮಾಡಿಸಿಕೊಳ್ಳದಂತೆ, ಕಬ್ಬು ಬೆಳೆಗಾರರಿಗೆ ನ್ಯಾಯ ಕೇಳಿ ಸೋಮವಾರ ರಾಜ್ಯದ ರೈತರು ಮುಖ್ಯಮಂತ್ರಿ ಅವರ ಮನೆ ಮುತ್ತಿಗೆ ಹಾಕಲು ರಾಜ್ಯದ ರೈತ ಸಂಘ ತೀರ್ಮಾನ ಮಾಡಿದೆ. ಇದಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ರೈತರು ರಾಜಧಾನಿಗೆ ಬರುತ್ತಾರೆ. ನ್ಯಾಯ ಸಿಗೋವರೆಗೂ ನಾವು ಅಲ್ಲಿಂದ ವಾಪಸ್ ಬರೋದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.