AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 1.29 ಗುಂಟೆ ಜಮೀನಿನಲ್ಲಿ ಭರ್ಜರಿ ಕೃಷಿ: ಯುವ ರೈತನ ಸಾಧನೆಗೆ ವಿದೇಶಿಗರು ಫಿದಾ

ಹಾವೇರಿ: ಮಳೆಯ ಜೂಜಾಟಕ್ಕೆ ಸೆಡ್ಡು ಹೊಡೆದ ಕುನ್ನೂರಿನ ಯುವಕ ಶಂಕರ್ ಸ್ವಪ್ರಯತ್ನದಿಂದ ಕೊಳವೆ ಬಾವಿಗೆ ನೀರು ಇಂಗಿಸುವ ಪದ್ಧತಿ ಅಳವಡಿಸಿಕೊಂಡು ಯಶಸ್ವಿ ರೈತನಾಗಿ ದೇಶ-ವಿದೇಶಿಗರ ಗಮನ ಸೆಳೆದಿದ್ದಾರೆ. ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ಐ.ಟಿ.ಐ. ಪದವೀಧರ ಶಂಕರ ಸೋಗಲಿ ತಮ್ಮ ಹೊಲದಲ್ಲಿ ಕೊರೆಸಿದ ಬೋರವೆಲ್ ನೀರಿನ ಇಳುವರಿಯನ್ನು ದ್ವಿಗುಣಗೊಳಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡು ಅಲ್ಪ ಜಮೀನಿನಲ್ಲಿ ಲಾಭದಾಯಕ ಕೃಷಿ ಮಾಡಿ ಯಶಸ್ಸು ಪಡೆದಿದ್ದಾರೆ. ಕೊಳವೆಬಾವಿ ಪಕ್ಕದಲ್ಲಿ ಎರಡು ಇಂಗು ಗುಂಡಿಗಳ ನಿರ್ಮಾಣ ಆರಂಭದಲ್ಲಿ ಕೇವಲ ಎರಡು […]

ಕೇವಲ 1.29 ಗುಂಟೆ ಜಮೀನಿನಲ್ಲಿ ಭರ್ಜರಿ ಕೃಷಿ: ಯುವ ರೈತನ ಸಾಧನೆಗೆ ವಿದೇಶಿಗರು ಫಿದಾ
Follow us
ಸಾಧು ಶ್ರೀನಾಥ್​
| Updated By: KUSHAL V

Updated on: Aug 23, 2020 | 6:44 PM

ಹಾವೇರಿ: ಮಳೆಯ ಜೂಜಾಟಕ್ಕೆ ಸೆಡ್ಡು ಹೊಡೆದ ಕುನ್ನೂರಿನ ಯುವಕ ಶಂಕರ್ ಸ್ವಪ್ರಯತ್ನದಿಂದ ಕೊಳವೆ ಬಾವಿಗೆ ನೀರು ಇಂಗಿಸುವ ಪದ್ಧತಿ ಅಳವಡಿಸಿಕೊಂಡು ಯಶಸ್ವಿ ರೈತನಾಗಿ ದೇಶ-ವಿದೇಶಿಗರ ಗಮನ ಸೆಳೆದಿದ್ದಾರೆ.

ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ಐ.ಟಿ.ಐ. ಪದವೀಧರ ಶಂಕರ ಸೋಗಲಿ ತಮ್ಮ ಹೊಲದಲ್ಲಿ ಕೊರೆಸಿದ ಬೋರವೆಲ್ ನೀರಿನ ಇಳುವರಿಯನ್ನು ದ್ವಿಗುಣಗೊಳಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡು ಅಲ್ಪ ಜಮೀನಿನಲ್ಲಿ ಲಾಭದಾಯಕ ಕೃಷಿ ಮಾಡಿ ಯಶಸ್ಸು ಪಡೆದಿದ್ದಾರೆ.

ಕೊಳವೆಬಾವಿ ಪಕ್ಕದಲ್ಲಿ ಎರಡು ಇಂಗು ಗುಂಡಿಗಳ ನಿರ್ಮಾಣ ಆರಂಭದಲ್ಲಿ ಕೇವಲ ಎರಡು ಇಂಚಿನಷ್ಟು ಮಾತ್ರ ನೀರು ಬಿದ್ದಿದ್ದು ತನ್ನ 1.29 ಗುಂಟೆ ಜಮೀನಿಗೆ ನೀರು ಉಣಿಸಲು ಪರದಾಡುತಿದ್ದರು. ಇದೀಗ, ಜಮೀನಿನಲ್ಲಿ ತೋಡಿದ ಕೊಳವೆಬಾವಿ ಸಮೀಪದಲ್ಲಿಯೇ ಎರಡು ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ಎರಡು ಮೀಟರ್ ಉದ್ದ, ಒಂದು ಮೀಟರ್ ಅಗಲ ಹಾಗೂ ಎರಡು ಮೀಟರ್ ಆಳವಾದ ಗುಂಡಿಗಳನ್ನು ತೋಡಿ, ಅದರಲ್ಲಿ ಎರಡು ಅಡಿಯಷ್ಟು ಮರಳು, ಎರಡು ಅಡಿಯಷ್ಟು ಇದ್ದಿಲು ಮತ್ತು ಎರಡು ಅಡಿಯಷ್ಟು ದಪ್ಪದಾದ ಜಲ್ಲಿ ಕಲ್ಲು ತುಂಬಿಸಿದ್ದಾರೆ.

ಇದರ ಪ್ರತಿಫಲವಾಗಿ ಗುಂಡಿಯಲ್ಲಿ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಶೇಖರಿಸಿ ಭೂಮಿಗೆ ಇಂಗಿಸಿದ್ದಾರೆ. ಇದರ ಪರಿಣಾಮವಾಗಿ ಕೇವಲ ಎರಡು ಇಂಚು ನೀರಿನ ಕೊಳವೆಬಾವಿಯಲ್ಲಿ ನಾಲ್ಕು ಇಂಚು ನೀರು ಹೊರಹೊಮ್ಮುತ್ತಿದೆ.

ಹೊಲದ ಸುತ್ತಲೂ ತಿರುಗಾಲುವೆ ನಿರ್ಮಾಣ ಇದಲ್ಲದೆ ಹೊಲದ ಸುತ್ತಲೂ ನಿರ್ಮಿಸಲಾದ ತಿರುಗಾಲುವೆಯಿಂದ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿ ಅದನ್ನು ಇಂಗುಗುಂಡಿಗೆ ಸೇರಿಸಲಾಗಿದೆ. ಇಂತಹ ಪ್ರಯೋಗದಿಂದ ತಮ್ಮ ಹೊಲದಲ್ಲಿನ ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಸವಕಳಿಯನ್ನು ತಡೆಯಬಹುದು. ಹೀಗೆ ಮಾಡುವುದರಿಂದ ಇಂಗು ಗುಂಡಿಯಲ್ಲಿ ವರ್ಷಕ್ಕೆ ಸುಮಾರು ತೊಂಬತ್ತು ಲಕ್ಷ ಲೀಟರ್​ಗೂ ಅಧಿಕ ಮಳೆ ನೀರನ್ನು ಸಂಗ್ರಹಿಸಬಹುದಾಗಿದೆ.

ಕೃಷಿಗೆ ಕೈ ಹಾಕಿದ ಆರಂಭದಲ್ಲಿ ಒಂದು ಬೆಳೆ ಬೆಳೆಯಲು ಪರದಾಡುತ್ತಿದ್ದ ಶಂಕರಗೆ ಈಗ ಮೂರು ಬೆಳೆಯನ್ನು ಬೆಳೆಯುವಷ್ಟು ತೇವಾಂಶ ಭೂಮಿಯಲ್ಲಿದೆ. ಇದರಿಂದ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ಅಲ್ಲದೆ ರೈತ ಶಂಕರ, ಇಂಗುಗುಂಡಿಯನ್ನ ಕೇವಲ ಮಣ್ಣು, ಕಲ್ಲುಗಳನ್ನು ಬಳಸಿ ನಿರ್ಮಿಸುವ ವಿಧಾನವನ್ನು ಬದಲಿಸಿ, ಹೊಸದಾಗಿ ಸಿಮೆಂಟ್ ರಿಂಗು, ಜಲ್ಲಿ, ಮರಳನ್ನು ಬಳಸಿಕೊಂಡು ಸುಲಭವಾದ ರೀತಿಯಲ್ಲಿ ನೀರನ್ನು ಇಂಗಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಮಳೆಗಾಲದಲ್ಲಿ ಇಂಗುಗುಂಡಿಗಳು ಮುಚ್ಚಿಹೋಗುವುದು ತಪ್ಪಿದೆ.

ಯುವ ರೈತನ ಈ ಹೊಸ ಪ್ರಯೋಗವನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯ ವಿದೇಶಿಯರಿಗೆ ಪರಿಚಯಿಸಿದೆ. ಆಸ್ಟ್ರೇಲಿಯಾ, ಇಸ್ರೇಲ್, ಕೆನಡಾ, ಸೇರಿದಂತೆ ಏಳು ರಾಷ್ಟ್ರದ ರೈತ ಪ್ರತಿನಿಧಿಗಳು ಕುನ್ನೂರ ಗ್ರಾಮದ ಯುವ ರೈತ ಶಂಕರ ಜಮೀನಿಗೆ ಬಂದು ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಪ್ರಯೋಗಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯವು 2017ರ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ, ದೇಶಪಾಂಡೆ ಫೌಂಡೇಶನ್​ನ ಕೃಷಿ ಸಿಂಚನ ಪ್ರಶಸ್ತಿ, 2019-20ನೇ ಸಾಲಿನ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿ ದೊರೆತಿವೆ.

ತುಂಡು ಭೂಮಿಯಲ್ಲಿ ಹಿಂಡು ಬೇಸಾಯ 1.29 ಗುಂಟೆ ಜಮೀನು ಮಾತ್ರ ಹೊಂದಿರುವ ಶಂಕರ, ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬಹು ಬೆಳೆಗಳ ಪದ್ಧತಿಯನ್ನು ಅನುಸರಿಸಿದ್ದಾರೆ. ಈ ಜಮೀನಿನಲ್ಲಿ 303 ಅಡಿಕೆ ಸಸಿ, 1,200 ಅಂಗಾಂಶ ಬಾಳೆ, 300 ಶ್ರೀಗಂಧದ ಗಿಡಗಳು, 10 ತೆಂಗಿನ ಗಿಡ, 100 ಲಿಂಬು, ಐದು ಪೇರಲ , ಹೊಲದ ಸುತ್ತಲೂ 1,120 ಗಾಳಿ ಮರಗಳು ಹಾಗೂ ಔಷಧೀಯ ಸಸ್ಯಗಳಾದ ಲಿಂಬೆಹುಲ್ಲು, ಮಾಗಣಿ ಬೇರು, ಬಿಳಿ ಗಲಗುಂಜಿ, ಪತ್ರಿ ಪಟ-ಪಟ, ಒಂದೆಲಗಾ ಹೀಗೆ ವಿವಿಧ ಆಯುರ್ವೇದದ ಔಷಧಿಯ ಸಸ್ಯಗಳನ್ನು ಬೆಳೆಸಿರುವುದು ವಿಶೇಷವಾಗಿದೆ.

ತೋಟಗಾರಿಕೆ ಇಲಾಖೆ ನೆರವು ತೋಟಗಾರಿಕೆ ಇಲಾಖೆ ನೆರವಿನಿಂದ ಹತ್ತು ಗುಂಟೆಯಲ್ಲಿ ನೆರಳು ಪರದೆ ನಿರ್ಮಿಸಿಕೊಂಡು ತರಕಾರಿ ಬೆಳೆಯನ್ನು ಸಹ ಬೆಳೆಯುತ್ತಾರೆ. ಜಮೀನಿಗೆ ಬೇಕಾಗುವ ಸಾವಯವ ಗೊಬ್ಬರ ತಯಾರಿಸಲು ಎರೆಹುಳ ತೊಟ್ಟಿ ನಿರ್ಮಿಸಿಕೊಂಡಿದ್ದಾರೆ. ದೇಸಿ ಆಕಳು ಸಾಕಾಣಿಕೆಯಿಂದ ಹೈನುಗಾರಿಕೆಯಲ್ಲಿಯೂ ಯಶಸ್ಸು ಕಂಡಿದ್ದಾರೆ. ದೇಸಿ ಹಸುವಿನಿಂದ ಬೀಜಾಮೃತ, ಜೀವಾಮೃತ, ಹೊದಿಕೆ ಮತ್ತು ವಾಪಾಸಾ ಹಂತಗಳನ್ನು ಅನುಸರಿಸುತ್ತಿದ್ದಾರೆ.

ಈ ಎಲ್ಲ ಪದ್ಧತಿಯ ಅನುಸರಣೆಗೆ ಮಹಾರಾಷ್ಟ್ರದ ಸಹಜ ಕೃಷಿ ಪದ್ಧತಿಯ ಸುಭಾಷ ಪಾಳೆಕರ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ಇಡೀ ಜಗತ್ತೆ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅನುಸರಿಸುವ ತವಕದಲ್ಲಿದ್ದರೆ ನಮ್ಮಲ್ಲಿಯೇ ಸದ್ದಿಲ್ಲದೆ ನೈಸರ್ಗಿಕ ಕೃಷಿ ಪದ್ಧತಿ ಮತ್ತು ಇಂಗುಗುಂಡಿಗಳ ಕ್ರಮದಿಂದ ಲಾಭದಾಯಕ ಕೃಷಿಯಲ್ಲಿ ತೊಡಗಿರುವ ಕುನ್ನೂರು ಗ್ರಾಮದ ಯುವ ರೈತ ಶಂಕರ ಎಲ್ಲ ರೈತರಿಗೂ ಮಾದರಿಯಾಗಿದ್ದಾರೆ. -ಪ್ರಭುಗೌಡ.ಎನ್.ಪಾಟೀಲ