Winter Tips: ಆರೋಗ್ಯವಂತರಾಗಿರಲು ಚಳಿಗಾಲದಲ್ಲಿ ನಿಮ್ಮ ಜೀವನಶೈಲಿ, ದಿನಚರಿ ಹೀಗಿದ್ದರೆ ಚೆಂದ
ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿವಹಿಸಬೇಕು. ಏಕೆಂದರೆ ಈ ಶೀತ ವಾತಾವರಣದಿಂದಾಗಿ ಅನೇಕರು ಜ್ವರ, ಶೀತ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿರುತ್ತಾರೆ. ಈ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಾರದೆಂದರೆ ನೀವು ನಿಮ್ಮ ದಿನಚರಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಹಾಗಿದ್ರೆ ರೋಗ ರುಜಿನಗಳಿಂದ ದೂರವಿರಲು ಚಳಿಗಾಲದಲ್ಲಿನ ಜೀವನಶೈಲಿ ಹಾಗೂ ದಿನಚರಿ ಹೇಗಿದ್ದರೆ ಚೆಂದ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಚಳಿಗಾಲದಲ್ಲಿ (winter) ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಸಂಗತಿಯೇ ಸರಿ. ಈ ಸಮಯದಲ್ಲಿ ನೆಗಡಿ, ಕೆಮ್ಮಿನಿಂದ ಹಿಡಿದು ಅಸ್ತಮಾವರೆಗೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ತುಟಿ ಒಡೆಯುವುದು, ಚರ್ಮದ ಶುಷ್ಕತೆ ಸೇರಿದಂತೆ ಹಲವು ತ್ವಚೆ ಸಂಬಂಧಿ ಸಮಸ್ಯೆಗಳೂ ಬಾಧಿಸುತ್ತದೆ, ಆಲಸ್ಯ ಮತ್ತು ಸೋಮಾರಿತನವೂ ದೇಹವನ್ನು ಆವರಿಸುತ್ತವೆ. ಹಾಗಾಗಿ ಚಳಿಗಾಲದ ಜೀವನಶೈಲಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಬದಲಾವಣೆಗಳನ್ನು ನಿಮ್ಮ ದಿನನಿತ್ಯದ ದಿನಚರಿಯಲ್ಲಿ ಅಳವಡಿಸಿದ್ದೇ ಆದಲ್ಲಿ ರೋಗಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ. ಹಾಗಿದ್ರೆ ಚಳಿಗಾದಲ್ಲಿ ಪಾಲಿಸಬೇಕಾದ ಆರೋಗ್ಯಕರ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಈ ಚಳಿಗಾಲದಲ್ಲಿ ನಿಮ್ಮ ದಿನಚರಿ ಹೀಗಿರಲಿ:
ದಿನವನ್ನು ಕಷಾಯದೊಂದಿಗೆ ಪ್ರಾರಂಭಿಸಿ: ಚಳಿಗಾಲದಲ್ಲಿ ಅನೇಕ ಜನರು ಶೀತ ಮತ್ತು ಜ್ವರದಂತಹ ಸೋಂಕುಗಳಿಂದ ಬಳಲುತ್ತಿದ್ದಾರೆ, ಇದರಿಂದಾಗಿ ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ಈ ರೋಗಗಳು ಬಾಧಿಸದಿರಲು ಪ್ರತಿನಿತ್ಯ ಬೆಳಗ್ಗೆ ಶುಂಠಿ ಕಷಾಯ, ಕಾಳುಮೆಣಸಿನ ಕಷಾಯ, ತುಳಸಿ, ಜೀರಿಗೆ, ಈರುಳ್ಳಿ ಇತ್ಯಾದಿಗಳಿಂದ ತಯಾರಿಸಿದ ಕಷಾಯಗಳನ್ನು ಕುಡಿಯಿರಿ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಕುಳಿತುಕೊಳ್ಳಿ: ಚಳಿಗಾಲದಲ್ಲಿ ಅನೇಕ ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುತ್ತಾರೆ. ಹಾಗಾಗಿ ಈ ಋತುವಿನಲ್ಲಿ ಬೆಳಗ್ಗೆ ಕನಿಷ್ಠ 10 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ. ಇದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಸಿಗುತ್ತದೆ. ಇದು ಮೂಳೆಗಳನ್ನು ಬಲಪಡಿಸುವುದಲ್ಲದೆ ಆಲಸ್ಯವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗೂ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ನಿಯಮಿತ ವ್ಯಾಯಾಮ ಮತ್ತು ಯೋಗವನ್ನು ಪ್ರಾರಂಭಿಸಿ: ಚಳಿಗಾಲವು ದೇಹವನ್ನು ಆಲಸ್ಯಗೊಳಿಸುತ್ತದೆ, ಇದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹಾಗಾಗಿ ವ್ಯಾಯಾಮ ಮಾಡಿ, ಪ್ರತಿದಿನ 20–30 ನಿಮಿಷಗಳ ಲಘು ವ್ಯಾಯಾಮ ಅಥವಾ ಯೋಗವು ದೇಹವನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಇದು ಸರಿಯಾದ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ.
ಹಗುರವಾದ ಮತ್ತು ಬೆಚ್ಚಗಿನ ಆಹಾರವನ್ನು ಸೇವಿಸಿ: ಚಳಿಗಾಲದಲ್ಲಿ ಹುರಿದ ಮತ್ತು ಭಾರವಾದ ಆಹಾರಗಳನ್ನು ತಿನ್ನುವುದರಿಂದ ಅವು ಜೀರ್ಣಗೊಳ್ಳಲು ಕಷ್ಟವಾಗಬಹುದು. ಹಾಗಾಗಿ ಈ ಋತುವಿನಲ್ಲಿ ಹಗುರವಾದ, ಸುಲಭವಾಗಿ ಜೀರ್ಣವಾಗುವ ಮತ್ತು ಬೆಚ್ಚಗಿನ ಆಹಾರಗಳನ್ನು ಸೇವನೆ ಮಾಡಿ. ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ ಮತ್ತು ಅನಾರೋಗ್ಯದಿಂದ ರಕ್ಷಿಸುತ್ತವೆ. ಜೊತೆಗೆ ಕಾಲೋಚಿತ ಹಣ್ಣು ತರಕಾರಿಗಳನ್ನು ಸೇವನೆ ಮಾಡಿ.
ನೀರು ಕುಡಿಯಿರಿ: ಚಳಿಗಾಲದಲ್ಲಿ ಅನೇಕ ಜನರು ನೀರಿನ ಸೇವನೆಯನ್ನು ಕಡಿಮೆ ಮಾಡುತ್ತಾರೆ, ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಋತುವಿನಲ್ಲಿ ನೀವು ಸಾಕಷ್ಟು ನೀರು ಕುಡಿಯಬೇಕು ಮತ್ತು ನಿಮ್ಮ ದೇಹವನ್ನು ನಿರ್ಜಲೀಕರಣದಿಂದ ಕಾಪಾಡಿಕೊಳ್ಳಬೇಕು. ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ.
ಇದನ್ನೂ ಓದಿ: ಬಿರುಕು ಬಿಟ್ಟ ಹಿಮ್ಮಡಿಯನ್ನು ಗುಣಪಡಿಸಲು ಸಹಕಾರಿ ಈ ಮನೆಮದ್ದುಗಳು
ನೈರ್ಮಲ್ಯದ ಅಭ್ಯಾಸವನ್ನು ಬೆಳೆಸಿಕೊಳ್ಳಿ: ಚಳಿಗಾಲದಲ್ಲಿ ಶೀತ ಮತ್ತು ಸೋಂಕುಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ನಿಮ್ಮ ಅಭ್ಯಾಸಗಳನ್ನು ಬದಲಾಯಿಸುವುದು ಮುಖ್ಯ. ಆಗಾಗ್ಗೆ ಕೈ ತೊಳೆಯುವುದು, ಸ್ವಚ್ಛವಾದ ಬಟ್ಟೆಗಳನ್ನು ಧರಿಸುವುದು ಮತ್ತು ಜನಸಂದಣಿಯಲ್ಲಿ ಮಾಕ್ಸ್ ಧರಿಸುವುದನ್ನು ರೂಢಿಸಿಕೊಳ್ಳಿ. ಇದು ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:15 pm, Sat, 22 November 25




