ನೀವು ಮಾವು ಪ್ರಿಯರೇ? ಹಾಗದರೆ ಈ ರೆಸಿಪಿ ಟ್ರೈ ಮಾಡಿ, ಒಂದು ವರ್ಷ ಇಟ್ಟರು ಏನು ಆಗಲ್ಲ!

| Updated By: ಅಕ್ಷತಾ ವರ್ಕಾಡಿ

Updated on: Jul 29, 2023 | 6:46 AM

ಮಾವಿನ ಕಾಯಿಯ ತೊಕ್ಕು ಅಥವಾ ಹಿಂಡಿ ಎಂಬುದನ್ನು ನೀವು ಕೇಳಿರಬಹುದು. ಇದು ನಿಮಗೆ ಉಪ್ಪಿನಕಾಯಿಯ ಮತ್ತು ಚಿತ್ರಾನ್ನ, ಎರಡರ ರುಚಿಯನ್ನು ನೀಡುತ್ತದೆ. ಇದು ಸರಳ ವಿಧಾನವಾಗಿದ್ದು ಇದನ್ನು ಮಾಡಿ ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳುವುದರಿಂದ ಅಥವಾ ಮಡಿಕೆಯಲ್ಲಿ ಇಡುವುದರಿಂದ ವರ್ಷ ಪೂರ್ತಿ ಮಾವಿನ ಸ್ವಾದವನ್ನು ಸವಿಯಬಹುದು. ಹೇಗೆ ಮಾಡುವುದು? ಇಲ್ಲಿದೆ ಪಾಕವಿಧಾನ.

ನೀವು ಮಾವು ಪ್ರಿಯರೇ? ಹಾಗದರೆ ಈ ರೆಸಿಪಿ ಟ್ರೈ ಮಾಡಿ, ಒಂದು ವರ್ಷ ಇಟ್ಟರು ಏನು ಆಗಲ್ಲ!
ಮಾವಿನ ಕಾಯಿಯ ತೊಕ್ಕು
Image Credit source: Youtube
Follow us on

ಮಾವಿನ ಹಣ್ಣಿನ ಸೀಸನ್ ನಿಮಗೆ ತುಂಬಾ ಇಷ್ಟನಾ? ಮತ್ತೆ ಮತ್ತೆ ತಿನ್ನೋದಕ್ಕೆ ತುಂಬಾ ತಿಂಗಳು ಕಾಯಬೇಕು ಅನ್ನೋದು ನಿಮ್ಮ ಬೇಸರನಾ? ಹಾಗಾದರೆ ಇದಕ್ಕೆಲ್ಲಾ ಒಂದು ಪರಿಹಾರ ಇದೆ. ಈ ಮಾವಿನ ಹಣ್ಣಿನ ರೆಸಿಪಿ ಮಾಡುವುದರಿಂದ ಒಂದು ವರ್ಷ ಬೇಕಾದರೂ ನೀವು ಮಾವಿನ ರುಚಿಯನ್ನು ಸವಿಯಬಹುದು. ಅದು ಹೇಗೆ ಅಂತೀರಾ? ಮಾವಿನ ಕಾಯಿಯ ತೊಕ್ಕು ಅಥವಾ ಹಿಂಡಿ ಎಂಬುದನ್ನು ನೀವು ಕೇಳಿರಬಹುದು. ಇದು ನಿಮಗೆ ಉಪ್ಪಿನಕಾಯಿಯ ಮತ್ತು ಚಿತ್ರಾನ್ನ, ಎರಡರ ರುಚಿಯನ್ನು ನೀಡುತ್ತದೆ. ಇದು ಸರಳ ವಿಧಾನವಾಗಿದ್ದು ಇದನ್ನು ಮಾಡಿ ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳುವುದರಿಂದ ಅಥವಾ ಮಡಿಕೆಯಲ್ಲಿ ಇಡುವುದರಿಂದ ವರ್ಷ ಪೂರ್ತಿ ಮಾವಿನ ಸ್ವಾದವನ್ನು ನೀಡುತ್ತದೆ.

ಮಾವಿನ ತೊಕ್ಕು, ಗೊಜ್ಜು ಅಥವಾ ಹಿಂಡಿ ಮಾಡಲು ಬೇಕಾಗುವ ಸಾಮಾಗ್ರಿಗಳು:

  • ಸಾಸಿವೆ -1 ಚಮಚ
  • ಮೆಂತೆ ಕಾಳು – 2 ಚಮಚ
  • ತೆಂಗಿನ ಎಣ್ಣೆ – 2 ಚಮಚ
  • ಕೆಂಪು ಮೆಣಸು – 14-15
  • ಗುಂಟೂರು ಅಥವಾ ಬ್ಯಾಡಗಿ ಮೆಣಸು 5 ರಿಂದ 6 (ಖಾರ ಹೆಚ್ಚು ಬೇಕಾದಲ್ಲಿ ಮಾತ್ರ)
  • ಮಾವಿನ ಕಾಯಿ – 2 ರಿಂದ 3
  • ಉಪ್ಪು ರುಚಿಗೆ ತಕ್ಕಷ್ಟು
  • ಇಂಗು – ಅರ್ಧ ಚಮಚ
  • ಬೆಲ್ಲ – ಅರ್ಧ ಕಪ್

ಮಾಡುವ ವಿಧಾನ:

ಒಂದು ಬಾಣಲೆಗೆ ಒಂದು ಚಮಚ ಸಾಸಿವೆ ಹಾಕಿ ಒಂದರಿಂದ ಎರಡು ನಿಮಿಷ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ, ಬಳಿಕ ಅದಕ್ಕೆ ಎರಡು ಚಮಚದಷ್ಟು ಮೆಂತೆ ಕಾಳು ಹಾಕಿ ಅವೆರಡನ್ನು ಮತ್ತೆ ಮಧ್ಯಮ ಉರಿಯಲ್ಲಿ ಹುರಿಯಿರಿ. ಮೆಂತೆ ಸ್ವಲ್ಪ ಕೆಂಪಾದರೆ ಸಾಕು. ಬಳಿಕ ಅದನ್ನು ಒಂದು ಪ್ಲೇಟ್ ನಲ್ಲಿ ಹಾಕಿ ತಣಿಯಲು ಬಿಡಿ. ನಂತರ ಅದನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ತರಿ ತರಿಯಾಗಿ ಪುಡಿಯಾದರೆ ಸಾಕು ನುಣ್ಣಗೆ ಪುಡಿ ಮಾಡುವ ಅವಶ್ಯಕತೆ ಇಲ್ಲ.

ಬಳಿಕ ಒಂದು ಬಾಣಲೆಗೆ ಒಂದು ಟೀ ಸ್ಪೂನ್ ಕೊಬ್ಬರಿ ಎಣ್ಣೆ ಹಾಕಿ ಬಳಿಕ ಅದಕ್ಕೆ 14 ರಿಂದ 15 ಕೆಂಪು ಮೆಣಸಿಕಾಯಿಯನ್ನು ಹಾಕಿ, ಗರಿಗರಿ ಯಾಗುವ ವರೆಗೆ ಚೆನ್ನಾಗಿ ಹುರಿದುಕೊಳ್ಳಿ. ಹೆಚ್ಚು ಖಾರ ಬೇಕಾದಲ್ಲಿ ೫ ರಿಂದ ೬ಗುಂಟೂರು ಅಥವಾ ಬ್ಯಾಡಗಿ ಮೆಣಸನ್ನು ಸೇರಿಸಿಕೊಳ್ಳಿ. ಖಾರ ಬೇಡವಾದಲ್ಲಿ ಸೇರಿಸಿಕೊಳ್ಳಬೇಕೆಂಬ ಅವಶ್ಯಕತೆ ಇಲ್ಲ. ಹುರಿದ ಕೆಂಪು ಮೆಣಸನ್ನು ತಣ್ಣಗಾಗಲು ಬಿಡಿ. ಬಳಿಕ ಮಿಕ್ಸಿಗೆ ಹಾಕಿ ಅದಕ್ಕೆ ಮೊದಲೇ ಮಾಡಿಟ್ಟಿರುವ ಸಾಸಿವೆ, ಮೆಂತೆ ಹುಡಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

ಬಳಿಕ ಮೂರು ಮಾವಿನ ಕಾಯಿ ತೆದಗೆದುಕೊಂಡು ಚೆನ್ನಾಗಿ ಸಿಪ್ಪೆ ಸುಲಿದು, ತರಿ ತರಿಯಾಗಿ ತುರಿದುಕೊಳ್ಳಿ. ಆದಷ್ಟು ಹುಳಿ ಜಾಸ್ತಿ ಇರುವ ಮಾವಿನಕಾಯಿ ಉಪಯೋಗಿಸಿ. ತುಂಬಾ ರುಚಿಯಾಗಿರುತ್ತದೆ. ಬಳಿಕ ತುರಿದ ಮಾವಿನಕಾಯಿಯನ್ನು ಪುಡಿ ಮಾಡಿಟ್ಟ ಮೆಣಸಿನ ಹುಡಿಯ ಜೊತೆಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಕೆಲವರು ಇದನ್ನೇ ಫ್ರಿಡ್ಜ್ ನಲ್ಲಿ ಇಡುತ್ತಾರೆ. ಆದರೆ ಇದಕ್ಕೆ ಒಂದು ಒಗ್ಗರಣೆ ಬಿದ್ದರೆ ರುಚಿ ಜಾಸ್ತಿಯಾಗುತ್ತದೆ. ಹಾಗಾಗಿ ಒಂದು ಬಾಣಲೆಗೆ 2 ದೊಡ್ಡ ಚಮಚ ಎಣ್ಣೆ ಹಾಕಿ ಕೊಬ್ಬರಿ ಎಣ್ಣೆ ಹಾಕಿದರೆ ಒಳ್ಳೆಯದು. ಇಲ್ಲದಿದ್ದಲ್ಲಿ ಬೇರೆ ಎಣ್ಣೆಯನ್ನು ಉಪಯೋಗಿಸಬಹುದು. ಎಣ್ಣೆ ಕಾದ ಬಳಿಕ ಅದಕ್ಕೆ ಎರಡು ಟೀ ಸ್ಪೂನ್ ಸಾಸಿವೆ ಹಾಕಿ ಅದಕ್ಕೆ ಕಾಲು ಟೀ ಸ್ಪೂನ್ ಇಂಗು ಹಾಕಿ ಒಂದು ಸಲ ಕೈಯಾಡಿಸಿ.

ಇದನ್ನೂ ಓದಿ: ಮಳೆಗಾಲಕ್ಕೆ ಹೇಳಿ ಮಾಡಿಸಿದ ಘರಂ ಕಾಳುಮೆಣಸಿನ ಸಾರು; ರೆಸಿಪಿ ಇಲ್ಲಿದೆ

ಈಗ ರುಬ್ಬಿದ ಮಾವಿನ ಹಣ್ಣಿನ ಮಿಶ್ರಣ ಹಾಕಿ ಮಧ್ಯ ಉರಿಯಲ್ಲಿ ಇಟ್ಟು ಕೈಯಾಡಿಸಿ, 8 ರಿಂದ 10 ನಿಮಷ ಮಿಕ್ಸ್ ಮಾಡಿ. ಹಾಗೆಯೇ ಮಾವಿನ ಕಾಯಿ ಮಿಶ್ರಣದಲ್ಲಿರುವ ನೀರು ಕಡಿಮೆಯಾಗಿ ಗಟ್ಟಿಯಾಗುತ್ತಾ ಬರುತ್ತದೆ. ಅಲ್ಲಿವರೆಗೂ ಕೈಯಾಡಿಸುತ್ತಲೇ ಇರಿ. ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ಒಂದು ಬೌಲ್ ನಲ್ಲಿ ಈ ಮಿಶ್ರಣ ಎತ್ತಿಟ್ಟುಕೊಳ್ಳಿ. ಇದು ಖಾರ ಗೊಜ್ಜು ಅಥವಾ ಹಿಂಡಿ. ಕೆಲವು ಕಡೆಗಳಲ್ಲಿ ಇದನ್ನು ತೊಕ್ಕು ಎಂದು ಕರೆಯುತ್ತಾರೆ. ಇನ್ನು ನಿಮಗೆ ಸಿಹಿ ಗೊಜ್ಜು ಬೇಕಾದಲ್ಲಿ ಉಳಿದ ಮಿಶ್ರಣಕ್ಕೆ ನೀವು ನಿಮಗೆ ಎಷ್ಟು ಸಿಹಿ ಬೇಕಾಗಬಹುದು ಎಂಬುದನ್ನು ಅಂದಾಜಿಸಿ ಬೆಲ್ಲವನ್ನು ಮಿಶ್ರಣಕ್ಕೆ ಸೇರಿಸಿಕೊಳ್ಳಿ. ಇವೆರಡನ್ನು ಸರಿಯಾಗಿ ಕಲಸಿಕೊಳ್ಳಿ, ಮಿಶ್ರಣ ಸರಿಯಾಗಿ ಆದ ಮೇಲೆ ಗ್ಯಾಸ್ ಆಫ್ ಮಾಡಬಹುದು. ಆಗ ಸಿಹಿ ಮಾವಿನ ಹಿಂಡಿ ಗೊಜ್ಜು ಸಿದ್ಧವಾಗುತ್ತದೆ.

ಇದನ್ನು ಗ್ಲಾಸ್ ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಎತ್ತಿಡುವುದರಿಂದ ಒಂದು ವರ್ಷದ ವರೆಗೂ ಬಳಸಬಹುದ. ಇದನ್ನು ಒಗ್ಗರಣೆಯಲ್ಲಿ ಹುರಿದಿರುವುದರಿಂದ ಬೇಗ ಹಾಳಾಗುವುದಿಲ್ಲ. ಇದನ್ನು ದೋಸೆ, ಚಪಾತಿ, ಅನ್ನದ ಜೊತೆ ಒಳ್ಳೆ ಕಾಂಬಿನೇಶನ್ ಆಗಿದೆ ಹಾಗಾದರೆ ಯಾಕೆ ತಡ ನೀವು ಮಾಡಿ ನೋಡಿ.

ಪಾಕವಿಧಾನ: ಕುಕ್ ವಿಥ್ ಹೇಮಾ ಅಡುಗೆ ಯೂಟ್ಯೂಬ್ ಚಾನಲ್

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: