
ತಪ್ಪು (mistakes) ಮಾಡುವುದು ಮನುಷ್ಯನ ಸಹಜ ಗುಣ. ಪ್ರತಿಯೊಬ್ಬರೂ ಕೂಡ ಒಂದಷ್ಟು ತಪ್ಪುಗಳನ್ನು ಮಾಡೇ ಮಾಡುತ್ತಾರೆ. ಆದರೆ ನಾವು ಮಾಡುವಂತಹ ಕೆಲವೊಂದು ತಪ್ಪುಗಳು ಸಮಾಜದಲ್ಲಿ ನಮ್ಮ ಗೌರವವನ್ನು ಕಡಿಮೆ ಮಾಡುತ್ತದೆ ಮತ್ತು ನಾಲ್ಕು ಜನರ ಮುಂದೆ ನಮ್ಮನ್ನು ನಗೆಪಾಟಲಿಗೆ ಗುರಿ ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಸಮಾಜದಲ್ಲಿ ಗೌರವಯುತ ಬಾಳಲು ಆ ತಪ್ಪುಗಳನ್ನು ಮಾಡದಿರುವುದೇ ಒಳ್ಳೆಯದು ಎಂದು ಹೇಳಿದ್ದಾರೆ. ಹಾಗಿದ್ರೆ ಸಮಾಜದಲ್ಲಿ ನಮ್ಮ ಗೌರವವನ್ನು ಕಡಿಮೆ ಮಾಡುವ ಆ ತಪ್ಪುಗಳು ಮತ್ತು ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಕೆಲವರು ತಮ್ಮ ಸಾಧನೆ, ಆಸ್ತಿ-ಅಂತಸ್ತು, ಸಾಮರ್ಥ್ಯಗಳ ಬಗ್ಗೆ ಎಲ್ಲರ ಬಳಿಯೂ ಬಡಾಯಿ ಕೊಚ್ಚಿಕೊಂಡು ಬರುತ್ತಾರೆ. ಎಲ್ಲೆ ಮೀರಿ ಮಾತನಾಡುತ್ತಾರೆ. ಈ ಗುಣ ನಮ್ಮನ್ನು ನಾಲ್ಕು ಜನರ ಮುಂದೆ ನಗೆ ಪಾಟಲಿಗೆ ಗುರಿ ಮಾಡುತ್ತದೆ. ಆದ್ದರಿಂದ ನಮ್ಮ ಮಾತು ಯಾವಾಗಲೂ ಹಿತಮಿತವಾಗಿರಬೇಕು. ಎಲ್ಲರ ಗಮನವನ್ನು ಸೆಳೆಯಲು ಹೆಚ್ಚು ಮಾತನಾಡುವ ಅವಶ್ಯಕತೆಯಿಲ್ಲ. ಹೆಚ್ಚು ಮಾತನಾಡುವುದರಿಂದ ಇತರರು ನಮ್ಮತ್ತ ಆಕರ್ಷಿತರಾಗುವುದಿಲ್ಲ ಬದಲಿಗೆ ಅವರು ನಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಮಾಜದಲ್ಲಿ ಗೌರವವನ್ನು ಕಾಪಾಡಿಕೊಳ್ಳಲು, ಅಗತ್ಯವಿರುವಷ್ಟು ಮಾತ್ರ ಮಾತನಾಡಬೇಕು ಮತ್ತು ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಚಾರ್ಯ ಚಾಣಕ್ಯರು ಸಲಹೆಯನ್ನು ನೀಡಿದ್ದಾರೆ.
ಪ್ರತಿಯೊಂದು ಸಣ್ಣ ವಿಷಯಕ್ಕೂ ಯೋಚಿಸದೆ ಮಾತನಾಡುವುದು, ಸಣ್ಣ ವಿಷಯಗಳಿಗೆ ಎಲ್ಲರೊಂದಿಗೆ ವಾದ ಮಾಡುವುದು ಈ ಅಭ್ಯಾಸ ನಿಮಗಿದ್ದರೆ, ನೀವು ಇತರರ ದೃಷ್ಟಿಯಲ್ಲಿ ದುರ್ಬಲರಾಗಿ ಕಾಣುತ್ತೀರಿ ಎಂದಿದ್ದಾರೆ ಚಾಣಕ್ಯ. ಯೋಚಿಸದೆ ಬಾಯಿಗೆ ಬಂದಹಾಗೆ ಮಾತನಾಡುವವರು ಸರಿಯಾದ ಅಭಿಪ್ರಾಯಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ಅವರು ನಗೆಪಾಟಲಿಗೆ ಗುರಿಯಾಗುತ್ತಾರೆ. ಆದ್ದರಿಂದ ಯಾವಾಗಲೂ ಯೋಚಿಸಿ ಮಾತನಾಡಬೇಕು. ಪ್ರತಿ ವಿಷಯಕ್ಕೂ ಜಗಳ ಮಾಡಬಾರದು, ತಾಳ್ಮೆಯಿಂದ ವ್ಯವಹರಿಸಬೇಕು. ಈ ಗುಣವಿದ್ದರೆ ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ.
ಎಷ್ಟೇ ಕ್ಲೋಸ್ ಫ್ರೆಂಡ್ ಆದ್ರೂ ಸರಿ, ನಮ್ಮ ಕೆಲವೊಂದು ಸೀಕ್ರೆಟ್‌ಗಳನ್ನು ನಾವು ಯಾರೊಂದಿಗೂ ಹಂಚಿಕೊಳ್ಳಬಾರದು. ನೀವು ಯಾರನ್ನಾದರೂ ಕುರುಡಾಗಿ ನಂಬಿ ನಿಮ್ಮ ವೀಕ್‌ನೆಸ್‌ಗಳನ್ನು ಬಹಿರಂಗಪಡಿಸಿದರೆ, ಅದನ್ನು ಕೇಳಿ ನಿಮ್ಮನ್ನು ಗೇಲಿ ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ದೌರ್ಬಲ್ಯಗಳನ್ನು ಇತರರ ಮುಂದೆ ಬಹಿರಂಗವಾದರೆ ಇದರಿಂದ ಸಮಾಜದಲ್ಲಿ ನಿಮ್ಮ ಖ್ಯಾತಿ ಹಾಳಾಗುತ್ತದೆ. ಇಲ್ಲವೆ ನಿಮ್ಮ ದೌರ್ಬಲ್ಯವನ್ನು ನಿಮ್ಮ ವಿರುದ್ಧವೇ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾರಿಗೂ ನಿಮ್ಮ ಭವಿಷ್ಯದ ಯೋಜನೆಗಳು ಮತ್ತು ನಿಮ್ಮ ದೌರ್ಬಲ್ಯ, ಸೀಕ್ರೆಟ್‌ಗಳನ್ನು ಶೇರ್ ಮಾಡಿಕೊಳ್ಳಬೇಡಿ.
ಇದನ್ನೂ ಓದಿ: ಗಂಡ-ಹೆಂಡತಿಯ ಈ ತಪ್ಪುಗಳು ಮನೆಯ ಶಾಂತಿ, ನೆಮ್ಮದಿಯನ್ನೇ ಕೆಡಿಸುತ್ತದೆ
ಶೋಕಿಗಾಗಿ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿ, ಕೊನೆಗೆ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಸಾಲ ಮಾಡಿಕೊಳ್ಳುವ ವ್ಯಕ್ತಿ ಸಮಾಜದಲ್ಲಿ ನಗೆಪಾಟಲಿಗೆ ಗುರಿಯಾಗುತ್ತಾನೆ. ಸಾಲ ಮಾಡಿಕೊಳ್ಳುವ ವ್ಯಕ್ತಿಯ ಗೌರವವೂ ಹಾಳಾಗುತ್ತದೆ ಮತ್ತು ಆತ ಯಾವಾಗಲೂ ಟೀಕೆಗೆ ಗುರಿಯಾಗುತ್ತಾನೆ. ಆದ್ದರಿಂದ ಯಾವತ್ತಿಗೂ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬಾರದು. ಬದಲಿಗೆ ಹೂಡಿಕೆ ಮತ್ತು ಉಳಿತಾಯಕ್ಕೆ ಆದ್ಯತೆ ನೀಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
ಮೂರ್ಖ ಹಾಗೂ ದುರಾಭ್ಯಾಸಗಳಿರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿದರೆ ಸಮಾಜದಲ್ಲಿ ನಿಮ್ಮ ಸ್ಥಾನಮಾನವೂ ಕಡಿಮೆಯಾಗುತ್ತದೆ. ಅವರೊಂದಿಗೆ ಸ್ನೇಹ ಬೆಳೆಸಿದರೆ ಜನ ನಿಮ್ಮನ್ನು ಸಹ ಮೂರ್ಖ ಹಾಗೂ ಕೆಟ್ಟ ವ್ಯಕ್ತಿಗಳೆಂದು ಭಾವಿಸುತ್ತಾರೆ. ಇದರಿಂದ ನಿಮ್ಮ ಮರ್ಯಾದೆ ಕಡಿಮೆಯಾಗುತ್ತದೆ. ಆದ್ದರಿಂದ ಯಾವಾಗಲೂ ಸಜ್ಜನರ ಸಹವಾಸದಲ್ಲಿರುವುದು ಒಳ್ಳೆಯದು ಎಂದು ಆಚಾರ್ಯ ಚಾಣಕ್ಯರು ಸಲಹೆಯನ್ನು ನೀಡಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ