Womens Day Special :ಕಂಚಿನ ಕಂಠದಿಂದ ಯಕ್ಷ ಪ್ರೇಮಿಗಳ ಮನಸ್ಸು ಗೆದ್ದಿರುವ ಮಹಿಳಾ ಭಾಗವತ ಕು. ಚಿಂತನಾ ಹೆಗಡೆ ಮಾಳ್ಕೋಡ್

ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಯಾವುದು ತೊಡಕಾಗುವುದಿಲ್ಲ. ಶ್ರದ್ಧ ಭಕ್ತಿಯಿಂದ ಗುರಿಯತ್ತ ಲಕ್ಷ್ಯ ಕೊಟ್ಟರೆ ಯಶಸ್ಸು ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ಕು.ಚಿಂತನಾ ಹೆಗಡೆ ಮಾಳ್ಕೋಡ್ ರವರೇ ಉತ್ತಮ ಉದಾಹರಣೆ. ಕರಾವಳಿಯ ಗಂಡು ಕಲೆಯಾದ ಯಕ್ಷಗಾನದಲ್ಲಿ ಮಹಿಳಾ ಭಾಗವತೆಯಾಗಿ ಚಿಂತನಾ ಹೆಗಡೆ ಮಾಳ್ಕೋಡ್ ಮಿಂಚುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ತನ್ನ ಸ್ವರ ಮಾಧುರ್ಯದಿಂದ ಯಕ್ಷ ಪ್ರೇಮಿಗಳಿಗೆ ಮನಸ್ಸು ಗೆದ್ದುಕೊಂಡಿದ್ದು, ಇವರ ಪ್ರತಿಭೆಯನ್ನು ಗುರುತಿಸಿ ಈಗಾಗಲೇ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ.

Womens Day Special :ಕಂಚಿನ ಕಂಠದಿಂದ ಯಕ್ಷ ಪ್ರೇಮಿಗಳ ಮನಸ್ಸು ಗೆದ್ದಿರುವ ಮಹಿಳಾ ಭಾಗವತ ಕು. ಚಿಂತನಾ ಹೆಗಡೆ ಮಾಳ್ಕೋಡ್
Chintanaa Hegde Malkod
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 08, 2024 | 9:37 AM

ಕರಾವಳಿ ಗಂಡು ಕಲೆಯಾದ ಯಕ್ಷಗಾನದಲ್ಲಿ ತೊಡಗಿಸಿಕೊಂಡು ಕಲಾಮಾತೆಯ ಸೇವೆಯನ್ನು ಮಾಡುತ್ತಿರುವವರು ಹಲವರು. ಆದರೆ ಈ ಚಿಂತನಾ ಸಾಮಾನ್ಯವಾದ ಪ್ರತಿಭೆಯಲ್ಲ. ತನ್ನ ಹೈಸ್ಕೂಲ್ ದಿನಗಳಲ್ಲಿ ಭಾಗವತಿಕೆಯಲ್ಲಿ ತೊಡಗಿಸಿಕೊಂಡವರು. ಹೊನ್ನಾವರ ತಾಲ್ಲೂಕು ಕೆಳಗಿನ ಇಡುಗುಂಜಿಯ ಮಾಳ್ಕೋಡಿನ ಚಿಂತನಾ ಹೆಗಡೆಯವರು ಎಲ್ಲರಿಗಿಂತ ವಿಶೇಷವಾಗಿ ಕಾಣಿಸುತ್ತಾರೆ. ಬಡಗುತಿಟ್ಟುವಿನ ಮೊದಲ ಮಹಿಳಾ ಭಾಗವತ  ಎನ್ನುವ ಖ್ಯಾತಿಗೆ ಪಾತ್ರರಾಗಿರುವ ಚಿಂತನಾರವರು, ಶ್ರೀಮತಿ ಪಲ್ಲವಿ ಹೆಗಡೆ ಹಾಗೂ ಶ್ರೀಯುತ ಉದಯ ಹೆಗಡೆ ಸುಪುತ್ರಿ. ಕಳೆದ ಆರು ವರ್ಷಗಳಿಂದ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದು, ಇವರ ಮನೆಯಲ್ಲೇ ಕಲೆಯ ವಾತಾವರಣವಿತ್ತು. ಇವರ ತಂದೆ ಉದಯ ಹೆಗಡೆ ಯಕ್ಷಗಾನ ರಂಗದ ಹಿರಿಯ ಕಲಾವಿದರಾಗಿದ್ದ ಕಾರಣ ಸಣ್ಣ ವಯಸ್ಸಿನಿಂದಲೇ ತಂದೆಯೊಂದಿಗೆ ಯಕ್ಷಗಾನಕ್ಕೆ ಹೋಗುತ್ತಿದ್ದರು. ಆದರೆ ಬಾಲ್ಯದಲ್ಲಿ ಒಂದೆರಡು ವೇಷಗಳನ್ನು ಹಾಕಿದ್ದರು, ಆ ನಂತರದ ದಿನಗಳಲ್ಲಿ ಭಾಗವತಿಕೆಯು ಕೈ ಹಿಡಿಯಿತು.

ಹಿಂದೂಸ್ತಾನಿ ಸಂಗೀತವನ್ನು ಸಂಗೀತ ಗುರುಗಳಾದ ಶ್ರೀಮತಿ ನಾಗವೇಣಿ ಹೆಗ್ಡೆಯವರಿಂದ ಕಲಿತರು. ಹೀಗಾಗಿ ಸಂಗೀತದ ಅಭಿರುಚಿ, ಅಪ್ಪನೊಂದಿಗೆ ಯಕ್ಷಗಾನದ ತಿರುಗಾಟವು ಭಾಗವತಿಕೆಯತ್ತ ಮುಖ ಮಾಡುವಂತೆ ಮಾಡಿತ್ತು. ಅದಲ್ಲದೇ ಬಾಲ್ಯದಿಂದಲೇ ತನ್ನ ಸಹೋದರನ ಜೊತೆ ಸೇರಿ 500 ಕ್ಕೂ ಹೆಚ್ಚು ಭಕ್ತಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಇನ್ನು, ಯಕ್ಷ ಕಲಾಮಾತೆಯ ಸೇವೆಯನ್ನು ಮಾಡುತ್ತಾ ಬರುತ್ತಿರುವ ಚಿಂತನಾನವರು ಉತ್ತರ ಕನ್ನಡ, ದಕ್ಷಿಣ ಕನ್ನಡ, ಹುಬ್ಬಳ್ಳಿ, ಧಾರವಾಡ ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ಯುವ ಯಕ್ಷ ಪ್ರತಿಭೆ ಕು. ಚಿಂತನಾ ಹೆಗಡೆ ಮಾಳ್ಕೋಡ್ ಅವರು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮರವರ ಅಧಿಕಾರ ಸ್ವೀಕಾರದ ಶುಭ ಸಂದರ್ಭದಲ್ಲಿ ಯಕ್ಷಗಾನ ಶೈಲಿಯಲ್ಲಿ ಸುಶ್ರಾವ್ಯವಾಗಿ ಹಾಡಿ ಶುಭ ಹಾರೈಸಿದ್ದರು. ಇವರು ಹಾಡಿನ ಮೂಲಕ ಶುಭ ಹಾರೈಸಿದ್ದ ರೀತಿಗೆ ರಾಷ್ಟ್ರಪತಿಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಈಗಾಗಲೇ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿರುವ ಚಿಂತನಾನವರು ಶಿಕ್ಷಣದ ಜೊತೆ ಜೊತೆಗೆ ಯಕ್ಷಗಾನದಲ್ಲೇ ಮುಂದುವರೆಯಬೇಕೆಂಬ ಕನಸನ್ನು ಹೊಂದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇವರದೇ ಸಂಸ್ಥೆಯಾದ “ಯಕ್ಷ ಪಲ್ಲವಿ ಮೇಳದಲ್ಲಿ ಭಾಗವತಿಕೆಯನ್ನು ಮಾಡುತ್ತಿದ್ದಾರೆ. ಬಡಗಿನ ಬಯಲಾಟ ಹಾಗೂ ಡೇರೆ ಮೇಳಗಳಲ್ಲಿ ಅತಿಥಿಯಾಗಿ ಕೆಲವು ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದ್ದು, ಯಕ್ಷಲೋಕದ ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ.

ಸಣ್ಣ ವಯಸ್ಸಿನಲ್ಲಿಯೇ ಇವರು ಮಾಡಿದ ಸಾಧನೆಗೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕಲಾಶ್ರೀ ಪ್ರಶಸ್ತಿ, ದಕ್ಷಿಣ ಕನ್ನಡದ ಸಿದ್ದಾಪುರದಲ್ಲಿ ನಡೆದ ಯಕ್ಷನುಡಿಸಿರಿ ಬಳಗದವರಿಂದ ಸನ್ಮಾನ, ಯಕ್ಷಗಾನ ಮಹಾನ್ ಪ್ರೇಮಿ ಕಾಳಿಂಗ ನಾವುಡರ ಆಪ್ತರಾದ ಶ್ರೀ ಕುಶಲ್ ಶೆಟ್ಟಿ ಅವರು ಕಂಚಿನ ತಾಳವನ್ನು ನೀಡಿ “ಯಕ್ಷ ಮಾಣಿಕ್ಯ” ಎಂದು ಬಿರುದು ನೀಡಿ ಸನ್ಮಾನಿಸಿದ್ದಾರೆ.

ಸಿಗಂಧೂರಿನ ಪ್ರಧಾನ ಅರ್ಚಕರಾದ ಶೇಷಗಿರಿ ಭಟ್ರು ಹಾಗೂ ಅವರ ಸಂಘ ಸಂಸ್ಥೆಯವರು ಸ್ವರ ಸಂಪನ್ನೆ ಬಿರುದು ನೀಡಿ ಸನ್ಮಾನ ಮಾಡಿದ್ದಾರೆ. ಈಗಾಗಲೇ ಇವರ ಪ್ರತಿಭೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ. ಬಡಗಿನ ಯಕ್ಷ ಸಂಪ್ರದಾಯವನ್ನು ಉಳಿಸಿ, ಅಭಿಮಾನಿಗಳಿಗೆ ಹಾಗೂ ಯಕ್ಷಗಾನಕ್ಕೆ ನ್ಯಾಯವನ್ನು ಕೊಡಬೇಕೆನ್ನುವುದು ಇವರ ಗುರಿಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Thu, 7 March 24