Cluster Fig Fruit Chutney: ಆರೋಗ್ಯಕ್ಕೂ ಹಿತ, ನಾಲಿಗೆಗೂ ರುಚಿ ಈ ಅತ್ತಿ ಕಾಯಿ ಚಟ್ನಿ
ಹಳ್ಳಿ ಕಡೆಗಳಲ್ಲಿ ಹೆಚ್ಚಾಗಿ ಅತ್ತಿ ಕಾಯಿ ಕಾಣಸಿಗುತ್ತವೆ. ಮರದಲ್ಲಿ ಗೊಂಚಲು ಗೊಂಚಲಾಗಿ ಬಿಡುವ ಈ ಅತ್ತಿ ಕಾಯಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಬಾಯಿ ಹುಣ್ಣಿನ ಸಮಸ್ಯೆಗೆ, ಕೆಂಪು ರಕ್ತಕಣಗಳನ್ನು ಹೆಚ್ಚಿಸಲು. ಮಧುಮೇಹ ನಿಯಂತ್ರಣಕ್ಕೆ ತುಂಬಾನೇ ಒಳ್ಳೆಯದು. ಹೀಗಿರುವಾಗ ನಿಮ್ಗೆ ಏನಾದ್ರೂ ಎಲ್ಲಾದ್ರೂ ಅತ್ತಿ ಕಾಯಿ ಸಿಕ್ರೆ ಹೀಗೊಮ್ಮೆ ತುಂಬಾನೇ ಸುಲಭವಾಗಿ ಮಾಡಬಹುದಾದ ಅತ್ತಿ ಕಾಯಿ ಚಟ್ನಿಯನ್ನು ತಯಾರಿಸಿ. ಈ ರೆಸಿಪಿ ಬಿಸಿ ಬಿಸಿ ಗಂಜಿಯೂಟದೊಂದಿಗೆ ಸವಿಯಲು ಬೆಸ್ಟ್ ಅಂತಾನೇ ಹೇಳಬಹುದು.

ಧಾರ್ಮಿಕ ಪ್ರಾಶಸ್ತ್ಯವನ್ನು ಹೊಂದಿರುವ, ಔಷಧೀಯ ಗುಣಗಳನ್ನು ಹೊಂದಿರುವ ಅತ್ತಿ ಮರಗಳು (cluster fig tree) ಹಳ್ಳಿ ಕಡೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಈ ಅತ್ತಿ ಮರ ಅಂಜೂರದಂತೆಯೇ (fig) ಕಾಣುವ ಹಣ್ಣುಗಳನ್ನು ಬಿಡುತ್ತದೆ. ಈ ಅತ್ತಿ ಕಾಯಿ (cluster fig) ಆರೋಗ್ಯಕ್ಕೆ (health) ತುಂಬಾನೇ ಒಳ್ಳೆಯದು. ಅಷ್ಟೇ ಅಲ್ಲದೆ ಇದರ ಹಣ್ಣು, ಬೇರು, ತೊಗಟೆ ಎಲ್ಲವೂ ಒಂದೊಂದು ರೀತಿಯ ಔಷಧೀಯ ಗುಣಗಳನ್ನು (Medicinal Properties) ಹೊಂದಿದೆ. ಅತ್ತಿ ಹಣ್ಣು ಅಥವಾ ಅತ್ತಿ ಕಾಯಿಯಲ್ಲಿ ಫೈಬರ್ ಅಂಶವಿದ್ದು, ಇದು ಕರುಳಿನ ಆರೋಗ್ಯವನ್ನು ಕಾಪಾಡಲು, ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ. ಅಲ್ಲದೆ ಇದು ಹೃದಯದ ಆರೋಗ್ಯಕ್ಕೆ, ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಈ ಅತ್ತಿ ಕಾಯಿಯಿಂದ ಒಂದಷ್ಟು ರೆಸಿಪಿಗಳನ್ನು ಕೂಡಾ ತಯಾರಿಸಬಹುದು. ನೀವೇನಾದ್ರೂ ಆರೋಗ್ಯಕರ ಅಡುಗೆ ಮಾಡಬೇಕೆಂದಿದ್ರೆ ಈ ಅತ್ತಿಕಾಯಿಯ ಸಿಂಪಲ್ ಚಟ್ನಿ (chutney) ರೆಸಿಪಿಯನ್ನೊಮ್ಮೆ ತಯಾರಿಸಿ. ಗಂಜಿ ಊಟದೊಂದಿಗೆ ಸವಿಯಲು ಸೂಪರ್ ಆಗಿರುವ ಅತ್ತಿ ಕಾಯಿ ಚಟ್ನಿ ನಾಲಿಗೆ ರುಚಿ ಮಾತ್ರವಲ್ಲದೆ, ಆರೋಗ್ಯಕ್ಕೆ ಹಿತಕರವೂ ಹೌದು.
ಅತ್ತಿ ಕಾಯಿ ಚಟ್ನಿ ಮಾಡಲು ಬೇಕಾಗಿರುವ ಪದಾರ್ಥಗಳು:
ಅತ್ತಿಕಾಯಿ, ಎಣ್ಣೆ, ಉದ್ದಿನ ಬೇಳೆ, ಸಾಸಿವೆ, ಇಂಗು, ಬ್ಯಾಡಗಿ ಮೆಣಸು ಅಥವಾ ಹಸಿ ಮೆಣಸಿನಕಾಯಿ, ತೆಂಗಿನ ತುರಿ, ಹುಣಸೆ, ಉಪ್ಪು
ಇದನ್ನೂ ಓದಿ: ಯುವ ಜನರೇ… ಮದುವೆ ವಿಷಯದಲ್ಲಿ ಅಮ್ಮನ ಈ ಮಾತುಗಳನ್ನು ಕೇಳಿ
ಅತ್ತಿ ಕಾಯಿ ಚಟ್ನಿ ಮಾಡುವ ವಿಧಾನ:
- ಮೊದಲಿಗೆ ಅತ್ತಿ ಕಾಯಿಯನ್ನು ಚೆನ್ನಾಗಿ ತೊಳೆದು, ಅವುಗಳನ್ನು ಎರಡು ಹೋಳುಗಳನ್ನಾಗಿ ಮಾಡಿ, ಒಂದು ಪಾತ್ರೆಗೆ ಉಪ್ಪು ಹಾಗೂ ನೀರು ಹಾಕಿ, ಆ ಉಪ್ಪು ನೀರಿನಲ್ಲಿ ಅತ್ತಿ ಕಾಯಿಯನ್ನು ಚೆನ್ನಾಗಿ ತೊಳೆಯಬೇಕು.
- ಹೀಗೆ ಉಪ್ಪು ನೀರಲ್ಲಿ ತೊಳೆದ ಅತ್ತಿಕಾಯಿಯನ್ನು ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಸ್ವಲ್ಪ ಬೇಯಿಸಿಕೊಳ್ಳಬೇಕು.
- ಈಗ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಉದ್ದಿನ ಬೇಳೆ, ಸಾಸಿವೆ, ಇಂಗು, ಬ್ಯಾಡಿಗೆ ಮೆಣಸು ಹಾಕಿ ಒಗ್ಗರಣೆ ಮಾಡಿ. (ನೀವು ಚಟ್ನಿಗೆ ಬ್ಯಾಡಗಿ ಮೆಣಸು ಬದಲು ಹಸಿ ಮೆಣಸಿನಕಾಯಿಯನ್ನು ಸಹ ಬಳಸಬಹುದು)
- ಇದೀಗ ಮಿಕ್ಸಿ ಜಾರಿಗೆ ತುರಿದಿಟ್ಟ ತೆಂಗಿನಕಾಯಿ, ಸ್ವಲ್ಪ ಹುಣಸೆ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆ ಮಾಡಿಟ್ಟುಕೊಂಡ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಂಡರೆ ಸೂಪರ್ ಟೇಸ್ಟಿಯಾದ ಅತ್ತಿ ಚಟ್ನಿ ಸವಿಯಲು ಸಿದ್ಧ.
- ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ಅತ್ತಿ ಕಾಯಿಯ ಚಟ್ನಿ ಬಿಸಿ ಬಿಸಿ ಗಂಜಿ ಊಟದೊಂದಿಗೆ ಸವಿಯಲು ಸೂಪರ್ ಆಗಿರುತ್ತೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Wed, 16 April 25