Snake and Ladder Board Game: ನೀವು ಹಾವು-ಏಣಿ ಆಟವನ್ನು ಆಡಿದ್ದೀರಿ ಅಲ್ಲವೇ? ಹಾಗಾದರೆ ಈ ಆಟದ ಇತಿಹಾಸ ನಿಮಗೆ ಗೊತ್ತಿದೆಯಾ?
ಹಾವು-ಏಣಿ ಆಟ: ಮೂಲ ಆಟದಲ್ಲಿ ಏಣಿಗಳಿಗಿಂತ ಹೆಚ್ಚಿನ ಹಾವುಗಳನ್ನು ಹೊಂದಿತ್ತು, ಕೆಟ್ಟತನದ ಜೀವನಕ್ಕಿಂತ ಒಳ್ಳೆಯತನದ ಹಾದಿಯು ಕಠಿಣವಾಗಿದೆ ಎಂಬುದನ್ನು ಸಂಕೇತಿಸುತ್ತಿತ್ತು
ಬಾಲ್ಯದಲ್ಲಿ ಹಾವು-ಏಣಿ (Snake and Ladder) ಆಟ ಆಡದೆ ಬೆಳೆದ ಮಕ್ಕಳೇ ಇಲ್ಲ. ತುಂಬಾ ಮಕ್ಕಳಿಗೆ ಹಾವು-ಏಣಿ ಆಟ ಅಂದರೆ ಬಲು ಪ್ರೀತಿ. ಅದೆಷ್ಟೋ ಮಧ್ಯಾಹ್ನಗಳು ಲೂಡೋ, ಹಾವು-ಏಣಿ, ಚೌಕಾ-ಬಾರಾ, ಇಂತಹ ಆಟಗಳನ್ನು ಆಡುತ್ತಲೇ ಕಾಲ ಕಳೆದಿದ್ದೇವೆ. ಈ ಆಟಗಳು ಕೇವಲ ಮಕ್ಕಳಿಗೆ ಪ್ರೀಯವಾದ್ದದ್ದಲ್ಲ, ಮನೆಯಲ್ಲಿ ಹಿರಿಯರೂ ಮಕ್ಕಳೊಡನೆ ಕೂತು ಆಟ ಆಡುತ್ತಾರೆ. ಭಾರತೀಯ ಕುಟುಂಬದಲ್ಲಿ ಇಂತಹ ಆಟಗಳು ಒಂದು ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಹೀಗಿರುವಾಗ ಈ ಹಾವು-ಏಣಿ ಆಟವು ಭಾರತದಲ್ಲಿ ಹುಟ್ಟಿಕೊಂಡಿರುವುದು ಎಂದರೆ ಆಶ್ಚರ್ಯವೇನಿಲ್ಲ. ಆದರೆ ಮೂಲ ಹಾವು-ಏಣಿ ಆಟ ಈಗ ನೀವು ಆಡುವ ಆಟದಂತೆ ಇಲ್ಲವೇ ಇಲ್ಲ!
ಪ್ರಾಚೀನ ಕಾಲದಲ್ಲಿ, ಈ ಆಟವನ್ನು ‘ಮೋಕ್ಷಪತ್’ ಅಥವಾ ‘ಮೋಕ್ಷ ಪಟಮು’ ಎಂದು ಕರೆಯುತ್ತಿದ್ದರು. ಕೆಲವು ಇತಿಹಾಸಕಾರರು ಈ ಆಟವನ್ನು ಕ್ರಿಸ್ತಪೂರ್ವ 2 ನೇ ಶತಮಾನದಷ್ಟು ಹಿಂದೆಯೇ ಆಡುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ. ಆದರೆ ಇತರರು ಸ್ವಾಮಿ ಜ್ಞಾನದೇವ ಈ ಆಟವನ್ನು 13 ನೇ ಶತಮಾನದಲ್ಲಿ ಕಂಡುಹಿಡಿದರು ಎಂದು ಹೇಳಿದ್ದಾರೆ.
ಮಕ್ಕಳಿಗೆ ನೈತಿಕತೆಯ ಪಾಠವನ್ನು ಕಲಿಸಲು ಈ ಆಟವನ್ನು ಸೃಷ್ಟಿಸಲಾಯಿತು ಎಂದು ಇತಿಹಾಸಕಾರರು ಹೇಳುತ್ತಾರೆ. ಅದರಲ್ಲೂ ಮಕ್ಕಳಿಗೆ ಕರ್ಮ ಮತ್ತು ಕಾಮ (ಮೋಕ್ಷ ಮತ್ತು ಆಸೆ) ಒಂದು ಒಳ್ಳೆಯ ಜೀವನ ಕಟ್ಟಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸಲು ಈ ಆಟವನ್ನು ಮಕ್ಕಳೊಂದಿಗೆ ಹಿರಿಯರು ಆಡುತ್ತಿದ್ದರು.
ಏಣಿಗಳು ಒಳ್ಳೆಯ ಕಾರ್ಯಗಳನ್ನು ಸೂಚಿಸುತ್ತವೆ ಆದರೆ ಹಾವುಗಳು ನಾವು ಮಾಡುವ ಎಲ್ಲಾ ಕೆಟ್ಟದ್ದನ್ನು ಪ್ರತಿನಿಧಿಸುತ್ತವೆ. ನಾವು ಮಾಡುವ ಎಲ್ಲಾ ಒಳ್ಳೆಯ ಕಾರ್ಯಗಳು ನಮ್ಮನ್ನು 100 ರ ಹತ್ತಿರಕ್ಕೆ ಕೊಂಡೊಯ್ಯುತ್ತವೆ, ಇದು ಮೋಕ್ಷವನ್ನು ಸಂಕೇತಿಸುತ್ತದೆ. ಆದರೆ ನಾವು ಮಾಡುವ ದುಷ್ಟ ಕೆಲಸವು ನಾವು ಕೀಳು ಮಟ್ಟದಲ್ಲಿ ಜೀವನ ಮಾಡುವಂತೆ ಮಾಡುತ್ತದೆ. ಇದರಿಂದಾಗಿ ನಾವು ಮೇಲೆ ಹೋಗುವುದಕ್ಕೆ ಆಗುವುದಿಲ್ಲ, ಮೋಕ್ಷ ಪಡೆಯಲು ಸಾಧ್ಯವಾಗುವುದಿಲ್ಲ.
ಮೂಲ ಆಟದಲ್ಲಿ ಏಣಿಗಳಿಗಿಂತ ಹೆಚ್ಚು ಹಾವುಗಳನ್ನು ಹೊಂದಿತ್ತು, ಕೆಟ್ಟತನದ ಜೀವನಕ್ಕಿಂತ ಒಳ್ಳೆಯತನದ ಹಾದಿಯು ಕಠಿಣವಾಗಿದೆ ಎಂಬುದನ್ನು ಸಂಕೇತಿಸುತ್ತಿತ್ತು.
ಮೂಲ ಆಟದಲ್ಲಿ, ಕೇವಲ 5 ಚೌಕಗಳಲ್ಲಿ ಏಣಿಗಳಿದ್ದವು, ಇವು ಸದ್ಗುಣದ ವರ್ಗದ ಸಂಕೇತವಾಗಿತ್ತು: ನಂಬಿಕೆ (12), ವಿಶ್ವಾಸಾರ್ಹತೆ (51), ಔದಾರ್ಯ (57), ಜ್ಞಾನ (76) ಮತ್ತು ತಪಸ್ವಿ (78).
ಉಳಿದ 13 ಚೌಕಗಳಲ್ಲಿ ಹಾವುಗಳಿದ್ದವು, ಇವು ದುಷ್ಟ ವರ್ಗದ ಸಂಕೇತವಾಗಿತ್ತು: ಅಸಹಕಾರ (41), ಆಡಂಬರ (44), ಅಸಭ್ಯತೆ (49), ಕಳ್ಳತನ (52), ಸುಳ್ಳು (58), ಕುಡಿತ (62), ಸಾಲ (69), ಕೊಲೆ (73), ಕ್ರೋಧ (84) ), ದುರಾಸೆ (92), ಹೆಮ್ಮೆ (95) ಮತ್ತು ಕಾಮ (99).
19 ನೇ ಶತಮಾನದ ಅಂತ್ಯದ ವೇಳೆಗೆ ಇಲ್ಲಿನ ಬ್ರಿಟಿಷ್ ಅಧಿಕಾರಿಗಳ ಮೂಲಕ ಹಾವು-ಏಣಿ ಆಟ ಇಂಗ್ಲೆಂಡ್‌ಗೆ ತಲುಪಿತು. 1943 ರಲ್ಲಿ, ಆಟದ ಪ್ರವರ್ತಕ ಮಿಲ್ಟನ್ ಬ್ರಾಡ್ಲಿ USA ನಲ್ಲಿ ಚ್ಯೂಟ್ಸ್ ಮತ್ತು ಲ್ಯಾಡರ್ಸ್ ಎಂದು ಈ ಆಟವನ್ನು ಪರಿಚಯಿಸಿದರು.
ಇದನ್ನೂ ಓದಿ: ನಿಮಗಿದು ಗೊತ್ತೇ: ವಿಶ್ವದ ಅತಿದೊಡ್ಡ ಏಕಶಿಲೆಯ ಪ್ರತಿಮೆ ಇರುವುದು ಕರ್ನಾಟಕದ ಈ ಭಾಗದಲ್ಲಿ
ಅಮೇರಿಕಾದಲ್ಲಿ ಪರಿಚಯಿಸಿದ ಆಟವು ಬಹಳ ಸುಲಭದ್ದಾಗಿತ್ತು. ಹಾವಿನ ಸಂಖ್ಯೆಯನ್ನು ಕಮ್ಮಿ ಮಾಡಿ ಏಣಿಯ ಸಂಖ್ಯೆಯನ್ನು ಹೆಚ್ಚಿಸಿದ್ದರು. ಆ ಆಟದಲ್ಲಿ ಹಾವುಗಳ ಸಂಖ್ಯೆ ಮತ್ತು ಏಣಿಗಳ ಸಂಖ್ಯೆ ಸಮವಾಗಿತ್ತು. ಈಗ ಇದು ಕೇವಲ ಮತ್ತೊಂದು ಆಟವಾಗಿದೆ ಅಷ್ಟೇ, ಇಲ್ಲಿ ನೀವು ಸಾಮಾನ್ಯ ಆಟದಂತೆ ಗೆಲ್ಲುತ್ತೀರಿ ಅಥವಾ ಸೋಲುತ್ತೀರಿ, ಈ ಆಟದಲ್ಲಿ ಕಲಿಯಲು ಯಾವುದೇ ನೈತಿಕ ಪಾಠ ಉಳಿದಿಲ್ಲ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:27 pm, Fri, 17 February 23