Men’s Grooming Tips: ಪುರುಷರು ತಮ್ಮ ಮುಖದ ಅಂದವನ್ನು ಕಾಪಾಡಿಕೊಳ್ಳಲು ಹೀಗೆ ಮಾಡಿ
ಮಹಿಳೆಯರಿಗೆ ಹೋಲಿಸಿದರೆ ಪುರುಷರು ತಮ್ಮ ತ್ವಚೆಯ ಬಗ್ಗೆ ಕಡಿಮೆ ಕಾಳಜಿ ವಹಿಸುತ್ತಾರೆ. ಈ ಅಭ್ಯಾಸದಿಂದ ಮುಖದಲ್ಲಿ ಮೊಡವೆ ಮತ್ತು ಕಪ್ಪು ಕಲೆಗಳು ಹೆಚ್ಚಾಗುವಂತಹ ಸಾಧ್ಯತೆ ಇರುತ್ತದೆ. ಆದ್ದರಿಂದ ಕೇವಲ ಫೇಶ್ ವಾಶ್ ಮತ್ತು ಶೇವಿಂಗ್ ಮಾಡಿದರೆ ಮಾತ್ರ ಸಾಕಾಗುವುದಿಲ್ಲ. ಮಹಿಳೆಯರಂತೆ ಪುರುಷರು ಕೂಡ ಮುಖದ ಕಾಂತಿಯನ್ನು ಹೆಚ್ಚಿಸಲು ತ್ವಚೆಯ ಆರೈಕೆಯ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅವಶ್ಯಕ.
ಮಹಿಳೆಯರು ತಮ್ಮ ತ್ವಚೆಯ ಆರೈಕೆಯ ಬಗ್ಗೆ ಕಾಳಜಿ ವಹಿಸುವಷ್ಟು ಪುರುಷರು ತಮ್ಮ ತ್ವಚೆಯ ಆರೈಕೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ಪುರುಷರು ಕೂಡಾ ತಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಏಕೆಂದರೆ ಪುರುಷರ ಚರ್ಮವು ಮಹಿಳೆಯರಿಗಿಂತ ಒರಟಾಗಿರುತ್ತದೆ. ಅಲ್ಲದೆ ಮುಖದಲ್ಲಿನ ಗಡ್ಡ ಮೀಸೆಯ ಕಾರಣದಿಂದಾಗಿ, ಅವರ ತ್ವಚೆಯಲ್ಲಿ ಬೆವರು ಹೆಚ್ಚು ಸಂಗ್ರಹವಾಗುತ್ತದೆ ಮತ್ತು ಇದರಿಂದ ಮುಖದಲ್ಲಿ ಮೊಡವೆಗಳು ಮತ್ತು ಕಲೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಇದಲ್ಲದೆ ದೀರ್ಘಕಾಲದವರೆಗೆ ಮುಖದ ಮೇಲೆ ಕೊಳಕು ಸಂಗ್ರಹವಾಗುವುದರಿಂದ ತ್ವಚೆಯ ಹೊಳಪು ಕೂಡಾ ಕಳೆದು ಹೋಗುತ್ತದೆ. ಹೀಗಿರುವಾಗ ಪುರುಷರು ಕೂಡ ಪ್ರತಿನಿತ್ಯ ಸರಿಯಾದ ರೀತಿಯಲ್ಲಿ ತ್ವಚೆಯ ಆರೈಕೆ ಮಾಡುವುದು ಬಹಳ ಮುಖ್ಯ. ಪುರುಷರು ತಮ್ಮ ತ್ವಚೆಯ ಆರೈಕೆಯಲ್ಲಿ ಅಳವಡಿಸಿಕೊಳ್ಳಬೇಕಾದ ಸಲಹೆಗಳು:
ಕ್ಲೆನ್ಸರ್ ಬಳಸಿ ದಿನಕ್ಕೆ ಎರಡು ಬಾರಿ ತ್ವಚೆಯನ್ನು ಸ್ವಚ್ಛಗೊಳಿಸಿ:
ತ್ವಚೆಯ ಆರೈಕೆಯ ಮೊದಲ ಹಂತವು ಶುಚಿಗೊಳಿಸುವುದಾಗಿದೆ. ದಿನದಲ್ಲಿ ಎರಡು ಬಾರಿ ಅಂದರೆ ಬೆಳಗ್ಗೆ ಮತ್ತು ರಾತ್ರಿ ಮೃದುವಾದ ಕ್ಲೆನ್ಸರ್ ಬಳಸಿ ಮುಖವನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಏಕೆಂದರೆ ಕ್ಷೆನ್ಸರ್ ಚರ್ಮದಿಂದ ಧೂಳು, ಜಿಡ್ಡುತನ ಮತ್ತು ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಕ್ಲೆನ್ಸರ್ ಬಳಸಿ ಪ್ರತಿನಿತ್ಯ ಮುಖವನ್ನು ಸ್ವಚ್ಛಗೊಳಿಸಿ.
ಇದನ್ನೂ ಓದಿ: ಪುರುಷರ ತ್ವಚೆಯ ಆರೈಕೆ ಹೇಗೆ? ನಿಮ್ಮ ಚರ್ಮದ ಸಂರಕ್ಷಣೆ ಹೀಗೆ ಮಾಡಿ
ಶೇವಿಂಗ್ ಮಾಡಿದ ನಂತರ ಮಾಯಿಶ್ಚರೈಸರ್ ಹಚ್ಚಿ:
ಶೇವಿಂಗ್ ಮಾಡಿದ ನಂತರ ತ್ವಚೆಯನ್ನು ತೇವಗೊಳಿಸುವುದು ಬಹಳ ಮುಖ್ಯ. ಏಕೆಂದರೆ ಶೇವಿಂಗ್ ಮಾಡುವುದರಿಂದ ಚರ್ಮವು ಒಣಗುತ್ತದೆ ಮತ್ತು ಶೇವಿಂಗ್ ಮಾಡಿದ ಜಾಗದಲ್ಲಿ ಸುಟ್ಟಗಾಯಗಳು ಮತ್ತು ದದ್ದುಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ ಕೆಲವೊಮ್ಮೆ ಚರ್ಮದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಮಾಯಿಶ್ಚರೈಸರ್ ಹಚ್ಚುವುದು ಅವಶ್ಯಕ. ಅಲೋವೆರಾ ಮಾಯಿಶ್ಚರೈಸರ್ ಬಳಸುವುದು ಸೂಕ್ತ. ಏಕೆಂದರೆ ಇದು ನಿಮ್ಮ ತ್ವಚೆಯಲ್ಲಿನ ಶುಷ್ಕತೆಯನ್ನು ಕಡಿಮೆ ಮಾಡುವ ಮೂಲಕ ತ್ವಚೆಯನ್ನು ತೇವಭರಿತವಾಗಿ ಇಡಲು ಸಹಾಯ ಮಾಡುತ್ತದೆ.
ಮನೆಯಿಂದ ಹೊರಗಡೆ ಹೋಗುವ ಮೊದಲು ತ್ವಚೆಗೆ ಸನ್ಸ್ಕ್ರೀನ್ ಹಚ್ಚಲು ಮರೆಯದಿರಿ:
ಹೆಚ್ಚಿನ ಪುರುಷರು ಮನೆಯಿಂದ ಹೊರ ಹೋಗುವ ಮೊದಲು ಫೇಸ್ವಾಶ್ ಮಾಡುತ್ತಾರೆಯೇ ಹೊರತು ಮುಖಕ್ಕೆ ಸನ್ಸ್ಕ್ರೀನ್ ಹಚ್ಚುವುದಿಲ್ಲ. ಆದರೆ ಪುರುಷರು ಹಾಗೂ ಮಹಿಳೆಯರು ಮುಖಕ್ಕೆ ಸನ್ಸ್ಕ್ರೀನ್ ಹಚ್ಚುವುದು ಅವಶ್ಯಕ. ಏಕೆಂದರೆ ಸನ್ಸ್ಕ್ರೀನ್ ಸೂರ್ಯನ ಹಾನಿಕಾರಕ ಕಿರಣಗಳಿಂದ ಉಂಟಾಗುವ ಅನೇಕ ಚರ್ಮದ ಸಮಸ್ಯೆಗಳಿಂದ ನಿಮ್ಮ ತ್ವಚೆಯನ್ನು ರಕ್ಷಿಸುತ್ತದೆ.
ವ್ಯಾಯಾಮ ಮಾಡಿದ ನಂತರ ಮುಖ ತೊಳೆಯಿರಿ:
ವ್ಯಾಯಾಮ ಅಥವಾ ಜಿಮ್ ವರ್ಕೌಟ್ ಮಾಡಿದ ನಂತರ ಮುಖವನ್ನು ತೊಳೆಯುವುದರಿಂದ ನಿಮ್ಮ ಚರ್ಮದಲ್ಲಿ ಬೆವರು ಸಂಗ್ರಹವಾಗುವುದನ್ನು ತಡೆಯಬಹುದು. ಹೆಚ್ಚಿನ ಬೆವರುವಿಕೆಯು ಮೊಡವೆಗಳನ್ನು ಹೆಚ್ಚಿಸಬಹುದು. ಹಾಗಾಗಿ ವ್ಯಾಯಾಮದ ಬಳಿಕ ಕಡ್ಡಾಯವಾಗಿ ಮುಖ ತೊಳೆಯಿರಿ.
ರಾತ್ರಿ ಮಲಗುವ ಮುನ್ನ ಮುಖವನ್ನು ಸ್ವಚ್ಛಗೊಳಿಸುವುದು ಮುಖ್ಯ:
ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ಮರೆಯದಿರಿ. ಇಲ್ಲದಿದ್ದರೆ ನಿಮಗೆ ಅನೇಕ ಚರ್ಮ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ನೀವು ರಾತ್ರಿ ಮಲಗುವ ಮುನ್ನ ತ್ವಚೆಯನ್ನು ಸ್ವಚ್ಛಗೊಳಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Wed, 27 September 23