Navarathri Fasting recipe: ನವರಾತ್ರಿಯ ಹಬ್ಬಕ್ಕೆ ಉಪವಾಸ ಮಾಡುತ್ತಿದ್ದೀರಾ? ಈ ಸಮಯದಲ್ಲಿ ದೀರ್ಘಕಾಲ ಹಸಿವಾಗಬಾರದೆಂದರೆ ಅಂಜೂರದ ಲಡ್ಡು ತಿನ್ನಿರಿ
9 ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದಲ್ಲಿ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಈ ನವರಾತ್ರಿ ಹಬ್ಬದಲ್ಲಿ ಹೆಚ್ಚಿನ ಮಹಿಳೆಯರು ಉಪವಾಸ ವ್ರತಾಚರಣೆ ಮಾಡುತ್ತಾರೆ. ಈ ಉಪವಾಸದ ಸಮಯದಲ್ಲಿ ಪದೇ ಪದೇ ನಿಮಗೆ ಹಸಿವಾಗುತ್ತದೆಯೇ, ಹಾಗಿದ್ದರೆ ಅಂಜೂರದ ಲಡ್ಡನ್ನು ತಿನ್ನಿರಿ, ಇದು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಅಂಜೂರದ ಲಡ್ಡನ್ನು ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ.

ಸಾಮಾನ್ಯವಾಗಿ ನವರಾತ್ರಿ ಹಬ್ಬದಲ್ಲಿ ಹೆಚ್ಚಿನ ಮಹಿಳೆಯರು ಉಪವಾಸ ವ್ರತಾಚರಣೆ ಮಾಡುತ್ತಾರೆ. ಈ ಸಮಯದಲ್ಲಿ ಊಟ ಮಾಡದೆ ಇರುವ ಕಾರಣ ಅನೇಕರಿಗೆ ಪದೇ ಪದೇ ಹಸಿವಾಗತೊಡಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅಂಜೂರದ ಲಡ್ಡನ್ನು ತಿಂದು ಉಪವಾಸನ್ನು ಆಚರಿಸಿ. ಏಕೆಂದರೆ ಅಂಜೂರದ ಲಡ್ಡು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಂಜೂರ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಂ, ವಿಟಮಿನ್ ಬಿ6, ಇತ್ಯಾದಿ ಪೋಷಕಾಂಶಗಳು ಮತ್ತು ಜೀವಸತ್ವಗಳು ಅಂಜೂರದಲ್ಲಿ ಹೇರಳವಾಗಿ ಕಂಡುಬರುತ್ತದೆ. ಅದೇ ರೀತಿ ಅಂಜೂರದ ಲಡ್ಡು ಕೂಡಾ ತುಂಬಾ ಪ್ರಯೋಜನಕಾರಿ. ಇದನ್ನು ತಿನ್ನುವುದರಿಂದ ದೀರ್ಘಕಾಲ ಹೊಟ್ಟೆ ತುಂಬಿರುತ್ತದೆ. ಹಾಗಾಗಿ ಈ ಲಡ್ಡು ಉಪವಾಸದ ಸಮಯದಲ್ಲಿ ತಿನ್ನಲು ಉತ್ತಮ ಆಯ್ಕೆಯಾಗಿದೆ. ಈ ಲಡ್ಡು ಎಷ್ಟು ಪೌಷ್ಟಿದಾಯಕವಾಗಿದೆಯೋ, ಇದರ ರುಚಿಯೂ ಅಷ್ಟೇ ಅದ್ಬುತವಾಗಿದೆ. ಈ ಲಡ್ಡುಗಳನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು.
ಅಂಜೂರ ಲಡ್ಡು ಮಾಡಲು ಬೇಕಾಗಿರುವ ಸಾಮಾಗ್ರಿಗಳು:
- ನೀರಿನಲ್ಲಿ ನೆನೆಸಿಟ್ಟ ಅಂಜೂರದ ಹಣ್ಣು – 1 ಕಪ್
- ಖರ್ಜೂರ – ½ ಕಪ್
- ಬಾದಾಮಿ ಚೂರು – 2 ಟೀಸ್ಪೂನ್
- ಕಲ್ಲಂಗಡಿ ಬೀಜ – 1 ಟೀಸ್ಪೂನ್
- ಗಸಗಸೆ ಬೀಜ – 1 ಟೀಸ್ಪೂನ್
- ಏಲಕ್ಕಿ ಪುಡಿ – ½ ಟೀಸ್ಪೂನ್
- ತುಪ್ಪ
- ಸ್ವಲ್ಪ ಕೊಬ್ಬರಿ ಪುಡಿ
ಇದನ್ನೂ ಓದಿ: ಹಬ್ಬಕ್ಕೆ ಮನೆಯಲ್ಲಿಯೇ ತಯಾರಿಸಿ ಆರೋಗ್ಯಕರ ಮಖಾನ ಡ್ರೈ ಫ್ರೂಟ್ ಬರ್ಫಿ
ಅಂಜೂರದ ಲಡ್ಡು ತಯಾರಿಸುವ ಸುಲಭ ವಿಧಾನ:
- ಅಂಜೂರ ಹಣ್ಣನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ನೆನೆಸಿದ ಅಂಜೂರದ ಹಣ್ಣುಗಳು ಮತ್ತು ಬೀಜ ತೆಗೆದ ಖರ್ಜೂರವನ್ನು ಒಂದು ಮಿಕ್ಸಿ ಜಾರ್ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
- ಈಗ ಗ್ಯಾಸ್ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು, ಅದಕ್ಕೆ ತುಪ್ಪ ಹಾಕಿ, ತುಪ್ಪ ಕಾದ ಬಳಿಕ ಅದಕ್ಕೆ ಬಾದಮಿ ಚೂರು, ಕಲ್ಲಂಗಡಿ ಬೀಜ, ಗಸಗಸೆ ಸೇರಿಸಿ 2 ನಿಮಿಷಗಳ ಕಾಲ ಹುರಿದುಕೊಳ್ಳಿ. ಮತ್ತು ಆ ಮಿಶ್ರಣವನ್ನು ಪಕ್ಕಕ್ಕೆ ಇಟ್ಟುಬಿಡಿ. ಈಗ ಅದೇ ಪ್ಯಾನ್ಗೆ ಸ್ವಲ್ಪ ತುಪ್ಪವನ್ನು ಸೇರಿಸಿ ರುಬ್ಬಿಟ್ಟ ಅಂಜೂರ ಮತ್ತು ಖರ್ಜೂರದ ಮಿಶ್ರಣವನ್ನು ಸೇರಿಸಿಕೊಂಡು ಬೇಯಿಸಿಕೊಳ್ಳಿ.
- ಮಿಶ್ರಣ ಗಟ್ಟಿಯಾಗಲು ಆರಂಭಿಸಿದಾಗ ಅದಕ್ಕೆ ತುಪ್ಪದಲ್ಲಿ ಹುರಿದ ಬಾದಮಿ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ. ಹಾಗೂ ಆ ಮಿಶ್ರಣಕ್ಕೆ ಏಲಕ್ಕಿ ಪುಡಿ ಮತ್ತು ಕೊಬ್ಬರಿ ಪುಡಿಯನ್ನು ಸೇರಿಸಿ. ಮತ್ತು ಗ್ಯಾಸ್ ಆಫ್ ಮಾಡಿ.
- ಈಗ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ. ನಂತರ ಅಂಗೈಗೆ ತುಪ್ಪವನ್ನು ಸವರಿ, ಮತ್ತು ತಯಾರಿಸಿಟ್ಟ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಿಕೊಳ್ಳಿ. ಹೀಗೆ ಬಹಳ ಸುಲಭವಾಗಿ ಅಂಜೂರದ ಲಡ್ಡುಗಳನ್ನು ಮಾಡಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:27 pm, Tue, 17 October 23