Father’s Day 2022 : ಅಪ್ಪ ಬರೆದ ಪ್ರೀತಿಯ ಪತ್ರ…ಅಪ್ಪ… ಐ ಲವ್ ಯು
"ಕಂದಾ.... ಈ ಪತ್ರದಲ್ಲಿ ಬರೆದಿರುವುದನ್ನು ನಿನ್ನ ಮುಂದೆ ಹೇಳಿ ಬಿಡಬೇಕು ಎಂದು ಅಂದುಕೊಂಡೆ ಆದರೆ ನೀನು ಮುಂದೆ ಬಂದಾಗಲೆಲ್ಲ ಮಾತೇ ಹೊರಡುವುದಿಲ್ಲ. ಅತ್ತೇ ಬಿಡುತ್ತೇನೆ ಎಂಬ ಭಯ ನನ್ನನ್ನು ಕಾಡುತ್ತದೆ. ನಿನ್ನ ತಾಯಿ ಗರ್ಭವತಿಯಾಗಿದ್ದ ಸಂದರ್ಭದಲ್ಲಿ ಮನೆಯವರೆಲ್ಲಾ ವಾರಸುದಾರನ ನಿರೀಕ್ಷೆಯಲ್ಲಿದ್ದರು.
ಆತ ಯಾರೊಬ್ಬರ ಗಮನಕ್ಕೆ ಬರದಂತೆ ಬಿಕ್ಕಳಿಸುತ್ತಿದ್ದ. ಒಳಗೊಳಗೆ ಕೊರಗುತ್ತಿದ್ದ .ಆ ನೋವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಮರುಗುತ್ತಿದ್ದ. ಯಾಕೋ ಏನೋ ಎಲ್ಲಾ ಖಾಲಿ ಖಾಲಿ ಎಂದು ಅನಿಸುತ್ತಿತ್ತು. ಅಂದು ಆತ ಸಂಭ್ರಮಿಸಬೇಕಾದ ದಿನ, ಸಂತೋಷದಿಂದ ಹಿರಿಹಿರಿ ಹಿಗ್ಗ ಬೇಕಾದ ದಿನ. ಆತನನ್ನು ಹೊರತುಪಡಿಸಿ ಎಲ್ಲರೂ ಖುಷಿ ಖುಷಿಯಾಗಿ ಮನೆತುಂಬಾ ಓಡಾಡಿಕೊಂಡಿದ್ದರು. ಈ ನೋವು ಯಾರೊಬ್ಬರ ಗಮನಕ್ಕೆ ಬರದೇ ಕೆನ್ನೆಯು ಕಣ್ಣೀರಿಗೆ ಸಾಂತ್ವನ ಹೇಳುತ್ತಿದ್ದಾಗ ಇದನ್ನೆಲ್ಲಾ ದೂರದಲ್ಲಿ ನಿಂತು ಮೌನವಾಗಿ ಗಮನಿಸುತ್ತಿದ್ದ ಮಗಳು ಬಳಿಗೆ ಬಂದು ಅಪ್ಪ ಎಂದು ಕರೆದು ಬಿಗಿದಪ್ಪಿಕೊಂಡಳು. ಮಾತು ಮೂಕಾಗಿತ್ತು, ಆ ಎರಡು ಜೀವಗಳ ನಡುವಿನ ಮೌನವೇ ಎದೆಯನ್ನು ಆವರಿಸಿದ್ದ ನೋವನ್ನು ಸಾರಿ ಸಾರಿ ಹೇಳುತ್ತಿತ್ತು. ಹೇಳಿಕೊಳ್ಳಬೇಕು ಎಂದು ಅಂದುಕೊಂಡ ಮಾತುಗಳು ಗಂಟಲಲ್ಲೆ ಉಳಿದುಕೊಂಡು ಮನಸೇಕೋ ಬಹಳ ಭಾರವಾದಂತೆ ಅನಿಸುತ್ತಿತ್ತು. ಒತ್ತರಿಸಿ ಬರುತ್ತಿದ್ದ ಕಣ್ಣೀರನ್ನು ಬಿಗಿ ಹಿಡಿದು, ಸಾವರಿಸಿಕೊಂಡು ಮಗಳ ಕೈಗೆ ಒಂದು ಪತ್ರವನ್ನೂ ಚಿಕ್ಕ ಪೊಟ್ಟಣವನ್ನು ಕೊಟ್ಟು ಹೊರನಡೆದನು. ಆಕೆ ಕುತೂಹಲ ತಡೆದುಕೊಳ್ಳಲಾಗದೆ ಪತ್ರವನ್ನು ಬಿಡಿಸಿದಳು. ಆ ಪತ್ರವನ್ನು ಓದುತ್ತಿದ್ದಂತೆ ಕಂಗಳು ತೇವಗೊಂಡವು.
“ಕಂದಾ…. ಈ ಪತ್ರದಲ್ಲಿ ಬರೆದಿರುವುದನ್ನು ನಿನ್ನ ಮುಂದೆ ಹೇಳಿ ಬಿಡಬೇಕು ಎಂದು ಅಂದುಕೊಂಡೆ ಆದರೆ ನೀನು ಮುಂದೆ ಬಂದಾಗಲೆಲ್ಲ ಮಾತೇ ಹೊರಡುವುದಿಲ್ಲ. ಅತ್ತೇ ಬಿಡುತ್ತೇನೆ ಎಂಬ ಭಯ ನನ್ನನ್ನು ಕಾಡುತ್ತದೆ. ನಿನ್ನ ತಾಯಿ ಗರ್ಭವತಿಯಾಗಿದ್ದ ಸಂದರ್ಭದಲ್ಲಿ ಮನೆಯವರೆಲ್ಲಾ ವಾರಸುದಾರನ ನಿರೀಕ್ಷೆಯಲ್ಲಿದ್ದರು. ಆದರೆ ನನಗೇಕೋ ಮನೆಗೆ ಪುಟ್ಟ ಲಕ್ಷ್ಮಿ ಬರುತ್ತಾಳೆಂಬ ನಂಬಿಕೆ ಬಲವಾಗಿತ್ತು. ಹೆಣ್ಣು ಮಗುವಾಯಿತೆಂದು ತಿಳಿದು ತಮ್ಮ ನಿರೀಕ್ಷೆ ಹುಸಿಯಾಯಿತು ಎಂದಾಗ ಆ ಕಂದನಿಗೆ ಅಕ್ಕರೆ ತೋರಲು ಮುಂದಾದವರು ಕೆಲವರು ಮಾತ್ರ. ದಾದಿ ಬಂದು ಮುದ್ದು ಮುದ್ದಾದ, ಪಿಳಿಪಿಳಿ ಕಣ್ಣನ್ನು ಆಗ ತಾನೇ ಬಿಟ್ಟು ಎಲ್ಲೆಲ್ಲೋ ನೋಡುತ್ತಿದ್ದ ಆ ಹಸುಳೆಯನ್ನು ಕೈಯಲ್ಲಿ ಇಟ್ಟಾಗ ಯಾರಲ್ಲೂ ಹೇಳಿಕೊಳ್ಳಲಾಗದ ಭಾವ ನನ್ನಲ್ಲಿ… ಕೆಂಪನೆ ಪುಟಾಣಿ ಕಾಲುಗಳಿಂದ ನನ್ನ ಎದೆಗೆ ಒದಿಯುತ್ತಿದ್ದಾಗ ಏನೋ ಆಹ್ಲಾದ. ಆಗ ನನಗೇನೂ ನೋವಾಗಿರಲಿಲ್ಲ.ಆದರೆ ಈಗ ಅದೇ ಕಂದಮ್ಮ ಎದೆ ಎತ್ತರಕ್ಕೆ ಬೆಳೆದು ನಿಂತು ಗಂಡನ ಮನೆಗೆ ಹೋಗಲು ಸಿದ್ಧವಾಗಿರುವಾಗ. ಈಗೇಕೋ ತುಂಬಾ ನೋವಾಗುತ್ತಿದೆ ಪುಟ್ಟ…!!
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ದೇಹದ ಚಯಾಪಚಯ ಹೆಚ್ಚಿಸಲು ಇಲ್ಲಿದೆ ಸಲಹೆ
ಆ ಪುಟಾಣಿ ಪಾದಗಳಿಗೆ ಗೆಜ್ಜೆ ತೊಡಿಸಿದಾಗ ಪುಟ್ಟ ಪುಟ್ಟ ಹೆಜ್ಜೆ ಇಟ್ಟುಕೊಂಡು ಮನೆತುಂಬ ಓಡಾಡುತ್ತಿದ್ದ ಮಗಳು ಇಂದು ಸೇರನ್ನು ಒದ್ದು ಬಲಗಾಲಿಟ್ಟು ಇನ್ನೊಂದು ಮನೆಯ ಸೇರಲಿದ್ದಾಳೆ. ನಿನ್ನ ಕಾಲ್ಗೆಜ್ಜೆಯ ದನಿ ಇಲ್ಲದೆ ಮನೆ ಏಕೋ ಬಿಕೋ ಎನ್ನಲಿದೆ . ಆ ಕೈಗಳಿಂದ ನನ್ನ ಕಿರುಬೆರಳನ್ನು ಹಿಡಿದು ನಡೆಯುತ್ತಿದ್ದ ಮಗಳನ್ನು ಧಾರೆ ಎರೆದು ಕೊಡುವಾಗ ಕೈ ನಡುಗಲಿದೆ. ಅದೆಷ್ಟೇ ಚಿಂತೆಗಳಿರಲಿ, ತಲೆನೋವು -ತಾಪತ್ರೇಯಗಳಿರಲಿ ನಿನ್ನನ್ನು ಎದೆಗವಚಿಕೊಂಡು ಮಲಗುವಾಗ ಅದೇನು ನಿರಾಳತೆ ದೊರಕುತ್ತಿತ್ತು. ತೊದಲು ಮಾತುಗಳನ್ನಾಡುತ್ತಾ ಅಪ್ಪ ಎಂದು ಕರೆಯುತ್ತಾ ಓಡಿ ಬರುತ್ತಿದ್ದ ನಿನ್ನನ್ನು ಎತ್ತಿಕೊಳ್ಳಲು ತೋಳುಗಳು ಕಾಯುತ್ತಿತ್ತು. ವರುಷಗಳು ಎಷ್ಟು ಬೇಗ ಕಳೆದು ಹೋದವಲ್ಲ…!! ಮಕ್ಕಳು ಎಷ್ಟು ಬೇಗ ದೊಡ್ಡವರಾಗಿ ಬಿಟ್ಟರಲ್ಲ…!! ಯಾರೋ ಬಂದು ಮಗಳ ಮದುವೆಯ ಯಾವಾಗ ಎಂದು ಕೇಳಿದಾಗಲೇ ನನಗೆ ತಿಳಿದದ್ದು ಮಗಳು ಮದುವೆ ವಯಸ್ಸಿಗೆ ಬಂದಿದ್ದಾಳೆಂದು. ಅಲ್ಲಿಯವರೆಗೂ ನನ್ನ ಪಾಲಿಗೆ ನೀನು ಪುಟ್ಟ ಕಂದಮ್ಮನೇ ಆಗಿದ್ದೆ.
ಕೆಲವರು ಮಗಳ ಮದುವೆ ಮಾಡಿ ಮುಗಿಸಿದರೆ ತಲೆನೋವು ಕಳೆಯಿತೆಂದು, ಭಾರ ಇಳಿಯಿತೆಂದು ಸಂತೋಷ ಪಡುತ್ತಾರೆ, ಸಂಭ್ರಮಿಸುತ್ತಾರೆ. ಆದರೆ ನನಗೇಕೋ ಹಾಗೆ ಅನಿಸುತ್ತಲೇ ಇಲ್ಲ. ಹಾಗೆ ನೋಡಿದರೆ ನನಗೆ ನಿನ್ನನ್ನು ಕಳುಹಿಸಿಕೊಡಲು ಕಿಂಚಿತ್ತೂ ಇಷ್ಟವಿಲ್ಲ. ಮದುವೆಯ ದಿನ ಇನ್ನೇನು ಹತ್ತಿರ ಬರುತ್ತಿದೆ ಎಂದಾಗುವಾಗ ಮನೆಯವರೆಲ್ಲ ಕಾತರದಿಂದ ಕಾಯುತ್ತಿದ್ದರು. ನಾನು ಮದುವೆ ದಿನ ಹತ್ತಿರ ಬರುತ್ತಿದೆ ಎಂದಾಗಲೆಲ್ಲ ಯಾರೊಬ್ಬರ ಗಮನಕ್ಕೆ ಬರದಂತೆ ಒಳಗೊಳಗೆ ಮರುಗುತ್ತಿದೆ. ಮಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾಳೆ ಎಂಬ ಸಂತೋಷ ಒಂದು ಕಡೆಯಾದರೆ ಅವಳಿನ್ನೂ ಮನೆಗೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಅಪರೂಪದ ಅತಿಥಿ ಎಂಬ ಸಂಕಟ ಇನ್ನೊಂದು ಕಡೆ.
ಮಗಳೇ…. ನೀನು ಇಂದೂ ಕೂಡ ಅಪ್ಪನ ಮನೆಯ ಪುಟಾಣಿ ರಾಜಕುಮಾರಿ. ನಿನ್ನ ಮುಂದೆ ಮನ ಬಿಚ್ಚಿ ಮಾತನಾಡುವ ಧೈರ್ಯ ನನಗಿಲ್ಲಮ್ಮ .ಯಾಕೋ ಸಂಭ್ರಮಿಸಬೇಕಾದ ವೇಳೆಯಲ್ಲಿ ಬಹಳ ದುಃಖವಾಗುತ್ತಿದೆ .ಆದರೆ ನೀನು ಸಿಂಗರಿಸಿಕೊಂಡು ಹಸೆಮಣೆಯ ಮೇಲೆ ಕೂತು ಮದುಮಗನನ್ನು ನೋಡಿ ನಾಚುತ್ತಿರುವ ದೃಶ್ಯ ನನ್ನ ಕಣ್ಣಿಗೆ ಒಂದು ಹಬ್ಬ…. ಸದಾ ಹಸನ್ಮುಖಿಯಾಗಿ ನಗುನಗುತ್ತಾ ಬಾಳು ಎಂದು ಆಶೀರ್ವದಿಸುತ್ತೇನೆ .ನಿನಗಿದು ಒಲವಿನ ಉಡುಗೊರೆ. ನಿನ್ನ ಜೊತೆಗೆ ಸದಾ ಇದ್ದೇ ಇರುತ್ತೇನೆ .ಅಪ್ಪನ ಬೆಚ್ಚನೆ ಅಪ್ಪುಗೆಯಲ್ಲಿ ಜಗವನ್ನೇ ಮರೆಯುತ್ತಿದ್ದ ಯುವರಾಣಿಗೆ ನನ್ನ ಹಾರೈಕೆಗಳು, ಮಿಸ್ ಯು ಕಂದಾ…..
ಇಂತಿ ನಿನ್ನ ಅಪ್ಪ”
ಅವಳ ಕಣ್ಣುಗಳು ಅಪ್ಪನ್ನನ್ನು ನೋಡಲು ಹವಣಿಸುತ್ತಿತ್ತು…. ಅಷ್ಟರಲ್ಲಿ ಆ ಪೊಟ್ಟಣದ ನೆನಪಾಗಿ ಅದರಲ್ಲೇನಿದೆ ಎಂದು ನೋಡಿದಳು. ಅವಳಿಗೆ ಮೊದಲನೇ ಬಾರಿಗೆ ತೊಡಿಸಿದ್ದ ಕಾಲ್ಗೆಜ್ಜೆಗಳಿದ್ದವು. ಅದನ್ನು ನೋಡುತ್ತಾ ಅಪ್ಪಾ….ಲವ್ ಯು…. ಎಂದು ಮನದಲ್ಲೇ ಹೇಳಿಕೊಂಡಳು.. ಆ ಜೀವ ಸದಾ ನೆಮ್ಮದಿಯಿಂದ ಇರಲೆಂದು ದೇವರಲ್ಲಿ ಬೇಡಿಕೊಂಡಳು.
ಶುಭ್ರ. ಪುತ್ರಕಳ ದ್ವಿತೀಯ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು
ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:00 am, Sun, 19 June 22