ಗ್ರೀನ್ ಟೀ ಬ್ಯಾಗ್​​​ನ್ನು ಎಸೆಯುವ ಬದಲು, ಈ ರೀತಿಯಾಗಿ ಮರುಬಳಕೆ ಮಾಡಿ

ಗ್ರೀನ್ ಟೀಯ ಆರೋಗ್ಯ ಪ್ರಯೋಜನಗಳ ಬಗ್ಗೆ ಬಹುತೇಕ ನಮ್ಮೆಲ್ಲರಿಗೂ ತಿಳಿದಿದೆ. ಇದೇ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೆಫೀನ್ ಸೇವನೆಯ ಬದಲು ಗ್ರೀನ್ ಟೀ ಸೇವನೆ ಮಾಡುತ್ತಾರೆ. ಆದರೆ ಗ್ರೀನ್ ಟೀ ಕುಡಿದ ಬಳಿಕ ಗ್ರೀನ್ ಟೀ ಬ್ಯಾಗ್ ಗಳನ್ನು ಅನೇಕ ಜನರು ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ. ಅದರ ಬದಲಿಗೆ ಅವುಗಳನ್ನು ಹಲವು ರೀತಿಯಲ್ಲಿ ಮರುಬಳಕೆ ಮಾಡಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಗ್ರೀನ್ ಟೀ ಬ್ಯಾಗ್​​​ನ್ನು ಎಸೆಯುವ ಬದಲು, ಈ ರೀತಿಯಾಗಿ ಮರುಬಳಕೆ ಮಾಡಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 22, 2023 | 7:18 PM

ಗ್ರೀನ್ ಟೀ (Green tea) ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಅ್ಯಂಟಿಆಕ್ಸಿಡೆಂಟ್ ಪ್ರಮಾಣವು ತುಂಬಾ ಹೆಚ್ಚಿದ್ದು, ಇದು ರೋಗಗಗಳನ್ನು ತಡೆಯಲು ನಮಗೆ ಸಹಾಯ ಮಾಡುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ತೂಕ ನಷ್ಟಕ್ಕೆ ಇದು ಸಹಾಯ ಮಾಡುತ್ತದೆ. ಅಲ್ಲದೆ ಇದು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಕಾರಿಯಾಗಿದೆ. ಈ ಎಲ್ಲಾ ಆರೋಗ್ಯ ಪ್ರಯೋಜನಗಳಿಂದ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಗ್ರೀನ್ ಟೀ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಗ್ರೀನ್ ಟೀ ಕುಡಿಯಲು ಹೆಚ್ಚಿನ ಜನರು ಟೀ ಬ್ಯಾಗ್ ಗಳನ್ನು ಬಳಸುತ್ತಾರೆ. ಮತ್ತು ಅದನ್ನು ಬಿಸಿ ನೀರಿನಲ್ಲಿ ಅದ್ದಿ ನಂತರ ಅದರಿಂದ ಯಾವುದೇ ಉಪಯೋಗವಿಲ್ಲವೆಂದು ಅದನ್ನು ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ. ಆದರೆ ಆ ಬ್ಯಾಗ್ ನಲ್ಲಿ ಗ್ರೀನ್ ಟೀ ಎಲೆಗಳು ಹಾಗೆ ಇರುತ್ತದೆ. ಅದನ್ನು ಮತ್ತೆ ಕುಡಿಯಲು ಬಳಸಲಾಗುವುದಿಲ್ಲ ನಿಜ. ಅದರ ಬದಲಾಗಿ ಆ ಟೀ ಬ್ಯಾಗ್ ಗಳನ್ನು ಅನೇಕ ರೀತಿಯಲ್ಲಿ ಮರುಬಳಕೆ ಮಾಡಬಹುದು. ಅದು ಹೇಗೆ ಎಂಬ ಮಾಹಿತಿಯನ್ನು ತಿಳಿಯೋಣ.

ಗ್ರೀನ್ ಟೀ ಬ್ಯಾಗ್​​​ಗಳನ್ನು ಹೇಗೆಲ್ಲಾ ಮರುಬಳಕೆ ಮಾಡಬಹುದು:

ಸಸ್ಯಗಳಿಗೆ ಗೊಬ್ಬರ:

ಗ್ರೀನ್ ಟೀ ಮಾಡಿದ ನಂತರ ಅದರ ಬ್ಯಾಗ್​​​ನ್ನು ಎಸೆಯಬೇಡಿ. ಬದಲಿಗೆ ಆ ಚಹಾ ಚೀಲವನ್ನು ಕತ್ತರಿಸಿ, ಅದರೊಳಗಿನ ಗ್ರೀನ್ ಟೀ ಎಲೆಗಳನ್ನು ಮನೆಯಲ್ಲಿ ಹೂದೋಟ ಅಥವಾ ತರಕಾರಿ ಗಿಡಗಳಿದ್ದರೆ ಆ ಸಸಿಗಳ ಬುಡಕ್ಕೆ ಹಾಕಿ. ಇದರಿಂದ ಗಿಡಗಳಿಗೆ ಉತ್ತಮ ಗೊಬ್ಬರ ಸಿಗುತ್ತದೆ. ಅಲ್ಲದೆ ಇದು ಮಣ್ಣಿನಲ್ಲಿ ಪೋಷಕಾಂಶಗಳ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಗಿಡಗಳ ಬೇರುಗಳು ಉತ್ತಮವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ರೆಫ್ರಿಜರೇಟರ್ ವಾಸನೆ ತೆಗೆದುಹಾಕಲು:

ಫ್ರಿಜ್​​​ನಲ್ಲಿ ಉತ್ಪತ್ತಿಯಾಗುವ ವಾಸನೆಯನ್ನು ತೊಡೆದುಹಾಕಲು ಗ್ರೀನ್ ಟೀ ಬ್ಯಾಗ್​​​ನ್ನು ಬಳಸಬಹುದು. ದಕ್ಕಾಗಿ ಗ್ರೀನ್ ಟೀ ಬ್ಯಾಗ್ ಬಳಸಿದ ನಂತರ ಅದನ್ನು ಚೆನ್ನಾಗಿ ಒಣಗಿಸಿ. ಬಳಿಕ ಅವುಗಳನ್ನು ಒಂದು ಬಟ್ಟಲಿನಲ್ಲಿ ಇಟ್ಟು ಫ್ರಿಜ್ ನಲ್ಲಿ ಇರಿಸಿ. ಇದು ಫ್ರಿಜ್​​​ನ ಒಳಗಿನ ಆಹಾರದ ವಾಸನೆಯನ್ನು ತೆಗೆದುಹಾಕುವ ಮೂಲಕ ತಾಜಾ ವಾಸನೆಯನ್ನು ಹರಡಲು ಸಹಾಯ ಮಾಡುತ್ತದೆ.

ನಾನ್ ಸ್ಟಿಕ್ ಪಾತ್ರೆಯನ್ನು ಸ್ವಚ್ಛಗೊಳಿಸಲು:

ನಾನ್ ಸ್ಟಿಕ್ ಪಾತ್ರೆಯಲ್ಲಿ ಅಂಟಿಕೊಂಡಿರುವ ಜಿಡ್ಡಿನಾಂಶವನ್ನು ತೆಗೆದುಹಾಕುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ನೀವು ಗ್ರೀನ್ ಟೀ ಬ್ಯಾಗ್ ಸಹಾಯದಿಂದ ಅವುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಅದಕ್ಕಾಗಿ ಮೊದಲು ಜಿಡ್ಡಿನಾಂಶವಿರುವ ನಾನ್ ಸ್ಟಿಕ್ ಪಾತ್ರೆಯೊಳಗೆ ಗ್ರೀನ್ ಟೀ ಬ್ಯಾಕ್ ಹಾಕಿ ಅದಕ್ಕೆ ಬಿಸಿ ನೀರನ್ನು ತುಂಬಿಸಿ. ಅದನ್ನು ರಾತ್ರಿಯಿಡಿ ನೆನೆಯಲು ಬಿಡಿ. ಈ ಮೂಲಕ ಬೆಳಗ್ಗೆ ಸುಲಭವಾಗಿ ಪಾತ್ರೆಯ ಜಿಡ್ಡಿನಾಂಶವನ್ನು ಸ್ವಚ್ಛಗೊಳಿಸಬಹುದು.

ಇದನ್ನೂ ಓದಿ:ಗ್ರೀನ್ ಟೀ ಕುಡಿಯುವುದರಿಂದಾಗುವ 5 ಆಶ್ಚರ್ಯಕರ ಪ್ರಯೋಜನಗಳು ಇಲ್ಲಿವೆ

ಕಣ್ಣಿನ ಕೆಳಗಿರುವ ಕಪ್ಪು ವರ್ತುಲಗಳನ್ನು ತೆಗೆದುಹಾಕಲು:

ಕಣ್ಣಿನ ಕೆಳಗೆ ಕಪ್ಪು ವರ್ತುಲಗಳಿದ್ದರೆ ಅಥವಾ ಕಣ್ಣಿನ ಸುತ್ತ ಊತ ಇದ್ದರೆ, ಗ್ರೀನ್ ಟೀ ಸಹಾಯದಿಂದ ಈ ಸಮಸ್ಯೆಯನ್ನು ತೊಡೆದುಹಾಕಬಹುದು. ಚಹಾ ಮಾಡಲು ಉಪಯೋಗಿಸಿದಂತಹ ಗ್ರೀನ್ ಟೀ ಚೀಲವನ್ನು ಫ್ರಿಜ್​​​ನಲ್ಲಿ ತಣ್ಣಗಾಗಲು ಇಡಿ. ಅವುಗಳನ್ನು ಪ್ರತಿದಿನ ಕಣ್ಣಿನ ಮೇಲೆ ಇರಿಸಿ. ಇದರಿಂದ ಕಣ್ಣಿನ ಸುತ್ತ ಕಾಣಿಸಿಕೊಳ್ಳುವ ಊತ ಮತ್ತು ಕಪ್ಪು ವರ್ತುಲಗಳಿಂದ ಕೆಲವೇ ದಿನಗಳಲ್ಲಿ ಪರಿಹಾರ ಪಡೆಯಬಹುದು.

ಬೆವರಿನ ದುರ್ವಾಸನೆಯನ್ನು ತೆಗೆಯಲು:

ಕೆಲವೊಬ್ಬರಿಗೆ ದೇಹದಿಂದ ಅತಿಯಾಗಿ ಬೆವರಿಳಿದು, ಅದು ಗಾಢವಾದ ದುರ್ವಾಸನೆಯನ್ನು ಉಂಟುಮಾಡುತ್ತದೆ. ಹೀಗಿರುವಾಗ ಸ್ನಾನ ಮಾಡುವ ನೀರಿಗೆ ಗ್ರೀನ್ ಟೀ ಬ್ಯಾಗ್ ಹಾಕಿ. ಈ ನೀರಿನಿಂದ ಸ್ನಾನ ಮಾಡುವುದರಿಂದ ತ್ವಚೆ ಫ್ರೆಶ್ ಆಗಿರುತ್ತದೆ ಮತ್ತು ಬೆವರಿನ ವಾಸನೆ ದೂರವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ: