
ಮದುವೆಯಾದ ಬಳಿಕ ಹೆಣ್ಣಿನ ಜೀವನದಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳು ನಡೆಯುತ್ತವೆ. ಆಕೆಯ ಇಡೀ ಪರಿಸರ ಮತ್ತು ದೈನಂದಿನ ಜೀವನವೂ ಬದಲಾಗುತ್ತದೆ. ಹೊಸ ಜನರಿಗೆ ಮತ್ತು ಹೊಸ ಮನೆಗೆ ಹೊಂದಿಕೊಳ್ಳಲು ಅವಳಿಗೆ ಸಮಯ ಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಅತ್ತೆ (mother-in-law) ಮತ್ತು ಮಾವ ಆಕೆಯ ಮೇಲೆ ಅಧಿಕಾರ ಚಲಾಯಿಸಿದರೆ ಅಥವಾ ಸಣ್ಣಪುಟ್ಟ ತಪ್ಪುಗಳಾದಾಗ ಗದರಿದರೆ ಇವೆಲ್ಲಾ ಅತ್ತೆ ಸೊಸೆ ಮಧ್ಯೆ ಮನಸ್ತಾಪ ಏರ್ಪಡಲು ಕಾರಣವಾಗುತ್ತದೆ. ನಂತರ ಇದುವೇ ಜಗಳಗಳು ನಡೆಯಲು ಕಾರಣವಾಗಬಹುದು. ಇದ್ಯಾವುದು ಜಗಳಗಳಿಲ್ಲದೆ ಅತ್ತೆ ಸೊಸೆ ಉತ್ತಮ ಬಾಂಧವ್ಯ ಬೆಳೆಯಬೇಕೆಂದರೆ ಸೊಸೆಯ ಜೊತೆ ಅತ್ತೆ-ಮಾವ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ.
ನಾವು ಹೇಳಿದಂತೆಯೇ ನಡೆದುಕೊಳ್ಳಬೇಕು ಎಂದು ಒತ್ತಡ ಹೇರುವ ಬದಲು ಸೊಸೆಯ ಆದ್ಯತೆ, ಅಭಿಪ್ರಾಯಗಳಿಗೂ ಅತ್ತೆ ಮಾವ ಗೌರವ ನೀಡಬೇಕು. ಆಕೆಯನ್ನು ಅವಳಿಷ್ಟದ ಕೆಲಸ ಮಾಡಲು ಬಿಡಿ. ಆಕೆಯ ಅಭಿಪ್ರಾಯಗಳಿಗೂ ಆದ್ಯತೆ ನೀಡಿ. ಮುಖ್ಯವಾಗಿ ಮದುವೆಯ ನಂತರವೂ, ಒಬ್ಬ ಹುಡುಗಿ ತನ್ನ ಹೆತ್ತವರು ಮತ್ತು ಒಡಹುಟ್ಟಿದವರೊಂದಿಗಿನ ಸಂಬಂಧವು ಹಾಗೆಯೇ ಬಲವಾಗಿರುತ್ತದೆ. ಹೀಗಿರುವಾಗ ಅವಳು ತನ್ನ ಹೆತ್ತವರಿಗೆ ಕರೆ ಮಾಡಿದರೆ, ತವರು ಮನೆಗೆ ಹೋದರೆ ಅಥವಾ ತವರು ಮನೆಯವರಿಗೆ ಸಹಾಯ ಮಾಡಿದರೆ ಅತ್ತೆ ಮಾವ ಅದನ್ನು ತಪ್ಪಾಗಿ ಅರ್ಥೈಸಿ, ಕೊಂಕು ಮಾತನಾಡಬಾರದು. ಸೊಸೆಯ ಪರವಾಗಿಯೇ ನಿಲ್ಲಬೇಕು, ಹೀಗಿದ್ದರೆ ಮನೆಯಲ್ಲಿ ಯಾವುದೇ ಮನಸ್ತಾಪಗಳು ಏರ್ಪಡುವುದಿಲ್ಲ.
ಕೆಲವು ಮನೆಗಳಲ್ಲಿ ಸೊಸೆಯನ್ನು ಇತರರೊಂದಿಗೆ ಹೋಲಿಕೆ ಮಾಡುತ್ತಾರೆ. ಹೌದು ಬೇರೆ ಮನೆಯ ಸೊಸೆ ಬೆಳಗ್ಗೆ ಬೇಗ ಎದ್ದು ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸುತ್ತಾಳೆ, ನಮ್ಮ ಮನೆ ಸೊಸೆ ಆ ರೀತಿ ಇಲ್ವೇ ಇಲ್ಲ, ಕೆಲಸನೇ ಮಾಡೋದಿಲ್ಲ ಅಂತೆಲ್ಲಾ ಹೋಲಿಕೆ ಮಾಡಿ ಮಾತನಾಡುತ್ತಾರೆ. ಈ ಮಾತುಗಳು ಸಹ ಸೊಸೆಯ ಅಸಮಾಧಾನಕ್ಕೆ ಕಾರಣವಾಗುತ್ತದೆ ಮತ್ತು ಇದು ಕೂಡ ಮನೆಯಲ್ಲಿ ಜಗಳಗಳು ನಡೆಯಲು ಕಾರಣವಾಗುತ್ತದೆ. ಆದ್ದರಿಂದ ಅತ್ತೆ-ಮಾವ ತಮ್ಮ ಸೊಸೆಯನ್ನು ಇತರರೊಂದಿಗೆ ಹೋಲಿಕೆ ಮಾಡಬಾರದು.
ಪ್ರತಿಯೊಂದು ವಿಷಯಕ್ಕೂ ಗಂಡ ಹೆಂಡತಿಯ ನಡುವೆ ಹಸ್ತಕ್ಷೇಪ ಮಾಡುವುದು ಅಥವಾ ಮಗ ಹೆಂಡತಿಯ ಮಾತು ಕೇಳಬಾರದು, ನಾವು ಹೇಳಿದಂತೆಯೇ ನಡೆದುಕೊಳ್ಳಬೇಕು ಎಂದು ಅತ್ತೆ ಮಾವ ಬಯಸಿದರೆ ಖಂಡಿತವಾಗಿಯೂ ಇದು ಮನೆಯಲ್ಲಿ ಜಗಳಗಳು ನಡೆಯಲು ಕಾರಣವಾಗುತ್ತದೆ. ಹಾಗಾಗಿ ಗಂಡ ಹೆಂಡತಿಯ ಮಧ್ಯೆ ಹಸ್ತಕ್ಷೇಪ ಮಾಡದೆ, ಅತ್ತೆ ಮಾವ ಅವರಿಗೆ ಬೆಂಬಲವಾಗಿ ನಿಲ್ಲಬೇಕು. ಆಗ ಮಾತ್ರ ಸಂಬಂಧ ಬಲು ಸುಂದರವಾಗಿರುತ್ತದೆ.
ಇದನ್ನೂ ಓದಿ: ಮದುವೆಗೆ ಮುನ್ನ ಸಂಗಾತಿಯ ಬಳಿ ಹಣಕಾಸಿನ ವಿಚಾರವನ್ನು ಚರ್ಚಿಸುವುದು ಎಷ್ಟು ಮುಖ್ಯ?
ಹೆತ್ತ ಮಗಳನ್ನು ಪ್ರೀತಿಯಿಂದ ನೋಡಿಕೊಳ್ಳುವಂತೆ, ಅತ್ತೆ ಮಾವ ತಮ್ಮ ಸೊಸೆಯನ್ನು ಸಹ ಮಗಳ ರೀತಿಯಲ್ಲೇ ನಡೆಸಿಕೊಳ್ಳಬೇಕು. ಬೇರೆ ಮನೆಯಿಂದ ಬಂದಾಕೆ ಎಂದು ಅಸಡ್ಡೆ ತೋರುವ ಬದಲು ಆಕೆಗೂ ಒಂದಷ್ಟು ಪ್ರೀತಿ, ವಾತ್ಸಲ್ಯ ನಿಡಬೇಕು. ಆಗ ಸೊಸೆಯು ಸಹ ತನ್ನ ಅತ್ತೆ ಮಾವನನ್ನು ತನ್ನ ತಂದೆ ತಾಯಿಯಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಹೀಗೆ ಸೊಸೆ ಮತ್ತು ಅತ್ತೆ ನಡುವೆ ಒಂದೊಳ್ಳೆ ಬಾಂಧವ್ಯ ಬೆಳೆದಾಗ ಅಲ್ಲಿ ಯಾವುದೇ ರೀತಿಯ ಮನಸ್ತಾಪ ಜಗಳಗಳು ನಡೆಯುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ