Indian News Paper day 2025: ಜನವರಿ 29ರಂದೇ ಭಾರತೀಯ ವೃತ್ತಪತ್ರಿಕೆ ದಿನವನ್ನಾಗಿ ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ
ಕೈಯಲ್ಲೊಂದು ದಿನಪತ್ರಿಕೆ ಹಾಗೂ ಒಂದು ಕಪ್ ಕಾಫಿ ಇಲ್ಲದೇ ಹೋದರೆ ಕೆಲವರ ದಿನವು ಪೂರ್ಣವಾಗುವುದೇ ಇಲ್ಲ. ಬೆಳ್ಳಗೆ ಸುದ್ದಿಯನ್ನು ಓದುತ್ತಾ ಓದುಗರು ತಮ್ಮ ದಿನವನ್ನು ಆರಂಭಿಸುತ್ತಾರೆ. ಇಂದು ಡಿಜಿಟಲ್ ಮಾಧ್ಯಮಗಳಿಂದ ಸುದ್ದಿಯನ್ನು ತಿಳಿಯಬಹುದಾದರೂ, ಆದರೆ ಸುದ್ದಿಗಾಗಿ ದಿನಪತ್ರಿಕೆಯನ್ನು ಓದುವ ವರ್ಗ ಮಾತ್ರ ಕಡಿಮೆಯಾಗಿಲ್ಲ. ಇವತ್ತಿಗೂ ದಿನಪತ್ರಿಕೆಗಳು ಜನರ ನಂಬಿಕೆಯನ್ನು ಉಳಿಸಿಕೊಂಡಿದೆ. ರಾಜ್ಯ, ದೇಶ, ವಿದೇಶ ಸುದ್ದಿಗಳನ್ನು ಮನೆ ಮನೆಗೆ ತಲುಪಿಸುವ ದಿನಪತ್ರಿಕೆಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಹೌದು, ಬೆಂಗಾಲ್ ಗೆಜೆಟ್ ಪತ್ರಿಕೆ ಆರಂಭವಾದ ದಿನವೇ ಜನವರಿ 29, ಈ ದಿನವನ್ನೇ ಭಾರತೀಯ ವೃತ್ತಪತ್ರಿಕೆ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
![Indian News Paper day 2025: ಜನವರಿ 29ರಂದೇ ಭಾರತೀಯ ವೃತ್ತಪತ್ರಿಕೆ ದಿನವನ್ನಾಗಿ ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ](https://images.tv9kannada.com/wp-content/uploads/2025/01/indian-news-paper-day.jpg?w=1280)
ಡಿಜಿಟಲ್ ಯುಗದಲ್ಲಿರುವ ನಾವಿಂದು ಕೈಯಲ್ಲಿರುವ ಮೊಬೈಲ್, ಕಂಪ್ಯೂಟರ್ ಗಳಿಂದ ದೇಶ ವಿದೇಶದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ತಿಳಿದುಕೊಳ್ಳಬಹುದು. ಕಳೆದ ಕೆಲವು ದಶಕಗಳಲ್ಲಿ, ಡಿಜಿಟಲ್ ಮಾಧ್ಯಮವು ಸುದ್ದಿ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಸುದ್ದಿ ವೆಬ್‌ಸೈಟ್‌ಗಳು ಸುದ್ದಿ ತಲುಪಿಸುವ ವಿಧಾನವನ್ನು ಬದಲಾಯಿಸಿವೆ. ಈ ಬದಲಾವಣೆಯು ಪತ್ರಿಕೆಗಳಿಗೆ ಅನೇಕ ಸವಾಲುಗಳನ್ನು ಸೃಷ್ಟಿಸಿದೆ. ಆದರೆ ಭಾರತೀಯ ವೃತ್ತಪತ್ರಿಕೆ ದಿನವು ನಮ್ಮ ದೇಶದಲ್ಲಿ ಮಾಧ್ಯಮದ ಪಾತ್ರ ಹಾಗೂ ಪ್ರಾಮುಖ್ಯತೆಯನ್ನು ಒತ್ತಿಹೇಳಲು ಇರುವ ಅವಕಾಶವಾಗಿದೆ. ಬ್ರಿಟಿಷರ ಆಡಳಿತವನ್ನು ಟೀಕಿಸಿ ಸುದ್ದಿಯನ್ನು ಬಿತ್ತರಿಸಿದ್ದ ಜೇಮ್ಸ್ ಆಗಸ್ಟಸ್ ಹಿಕ್ಕಿಯ ‘ದಿ ಬೆಂಗಾಲ್ ಗೆಜೆಟ್’ ಪತ್ರಿಕೆಯೂ ಆರಂಭವಾದ ದಿನವೇ ಜನವರಿ 29. ಈ ದಿನವು ಆ ಪತ್ರಿಕೆಯನ್ನು ನೆನಪಿಸುವುದಾಗಿದೆ.
ಭಾರತೀಯ ವೃತ್ತಪತ್ರಿಕೆ ದಿನದ ಇತಿಹಾಸ
1780 ಜನವರಿ 29ರಂದು ಭಾರತದ ಮೊದಲ ವೃತ್ತಪತ್ರಿಕೆ ‘ದಿ ಬೆಂಗಾಲ್ ಗೆಜೆಟ್’ ಪ್ರಕಟಗೊಂಡಿತ್ತು. ಭಾರತದ ಮೊದಲ ಸುದ್ದಿಪತ್ರಿಕೆಯಾದ ಬೆಂಗಾಲ್ ಗೆಜೆಟ್ ಪತ್ರಿಕೆಯನ್ನು ಜೇಮ್ಸ್ ಆಗಸ್ಟಸ್ ಹಿಕ್ಕಿ ಆರಂಭಿಸಿದನು. ಈ ಸುದ್ದಿ ಪತ್ರಿಕೆಯನ್ನು ಹಿಕ್ಕಿ ಗೆಜೆಟ್ ಅಥವಾ ದಿ ಕಲ್ಕತ್ತಾ ಜನರಲ್ ಅಡ್ವರ್ಟೈಸರ್ ಎಂದೂ ಕರೆಯಲಾಗುತ್ತದೆ. ಮೊದಲ ಪತ್ರಿಕೆ ಆರಂಭಿಸಿದ ಹಿಕ್ಕಿಯನ್ನೇ ಭಾರತೀಯ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗಿದೆ. ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿಯ ಸಮನ್ಸ್ ಪ್ರಕಾರ, ಮೊದಲ ಪತ್ರಿಕೆ ಆರಂಭವಾದ ದಿನವನ್ನು ಪ್ರತಿ ವರ್ಷ ಜನವರಿ 29 ರಂದು ಆಚರಿಸಲಾಗುತ್ತದೆ.
ಇದನ್ನೂ ಓದಿ: ಉಡುಗೆಗೆ ಹೊಂದುವಂತೆ ಚೆಂದನೆಯ ಆಭರಣಗಳ ಆಯ್ಕೆ ಹೀಗಿರಲಿ
ಭಾರತೀಯ ವೃತ್ತಪತ್ರಿಕೆ ದಿನದ ಮಹತ್ವ ಹಾಗೂ ಆಚರಣೆ
ಭಾರತೀಯ ವೃತ್ತಪತ್ರಿಕೆ ದಿನವು ಮುದ್ರಣ ಮಾಧ್ಯಮ ಕ್ಷೇತ್ರವನ್ನು ಗೌರವಿಸುವ ದಿನವಾಗಿದೆ. ಸಾರ್ವಜನಿಕರಿಗೆ ಮಾಹಿತಿ ನೀಡಿ ಜನರನ್ನು ಜಾಗೃತರನ್ನಾಗಿಸಿದ್ದು ಮಾತ್ರವಲ್ಲದೇ, ಸಬಲರನ್ನಾಗಿ ಮಾಡಿದೆ. ಹೀಗಾಗಿ ಸಾಂಪ್ರದಾಯಿಕ ಮಾಧ್ಯಮವಾದ ಈ ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿದವರಿಗೆ, ಮತ್ತೆ ಪತ್ರಿಕೆಗಳನ್ನು ಓದಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಸಮಾಜವನ್ನು ಜಾಗೃತಗೊಳಿಸುವಲ್ಲಿ ಗಣನೀಯ ಕೊಡುಗೆ ನೀಡಿದ ಎಲ್ಲ ಪತ್ರಕರ್ತರನ್ನು ನೆನಪಿಸಲಾಗುತ್ತದೆ. ಈ ದಿನದಂದು ಪತ್ರಕರ್ತರ ಹಕ್ಕುಗಳು ಮತ್ತು ಸುರಕ್ಷತೆಯ ಬಗ್ಗೆ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತದೆ. ಈ ವಿಶೇಷ ದಿನದಂದು ಶಾಲಾ ಮಕ್ಕಳಿಗೆ, ಯುವಕರಿಗೆ ಪತ್ರಿಕೋದ್ಯಮದ ಮಹತ್ವ ಮತ್ತು ಇತಿಹಾಸದ ತಿಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ