WHO ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಾಗಿ ಭಾರತೀಯರು ಉಪ್ಪನ್ನು ಸೇವಿಸುತ್ತಿದ್ದಾರೆ: ಅಧ್ಯಯನ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಅಧಿಕ ಉಪ್ಪನ್ನು ಸೇವಿಸುವ ಜನರು ಅನೇಕ ರೋಗಗಳಿಗೆ ಬಲಿಯಾಗುತ್ತಾರೆ. ಉಪ್ಪಿನ ಅತಿಯಾದ ಸೇವನೆಯು ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು ಮುಂತಾದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಮಿತ ಪ್ರಮಾಣದಲ್ಲಿ ಉಪ್ಪನ್ನು ಆಹಾರದಲ್ಲಿ ಸೇರಿಸಬೇಕೆಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ. ಹೀಗಿದ್ದರೂ ಕೂಡಾ ಭಾರತೀಯರು ಪ್ರತಿದಿನ ಅಗತ್ಯಕ್ಕಿಂತ ಹೆಚ್ಚಿನ ಉಪ್ಪನ್ನು ಸೇವಿಸುತ್ತಿದ್ದಾರೆ ಎಂದು ಸಂಶೋಧನೆಯೊಂದು ಹೇಳಿದೆ.
ನಮ್ಮ ದೇಹವು ಆರೋಗ್ಯಕರವಾಗಿರಲು ಹಲವು ರೀತಿಯ ಪೋಷಕಾಂಶಗಳು, ಖನಿಜಗಳು ಮತ್ತು ಜೀವಸತ್ವಗಳ ಅಗತ್ಯವಿದೆ. ಈ ಅಗತ್ಯ ಖನಿಜಗಳಲ್ಲಿ ಒಂದು ಅಯೋಡಿನ್. ಈ ಅಯೋಡಿನ್ ಅಂಶ ಉಪ್ಪಿನಲ್ಲಿ ಕಂಡುಬರುತ್ತದೆ. ಅದಕ್ಕಾಗಿ ಮಿತ ಪ್ರಮಾಣದ ಉಪ್ಪಿನ ಸೇವನೆ ಒಳ್ಳೆಯದು. ಮಾತ್ರವಲ್ಲದೆ ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸಲು ಸಹ ಸಹಕಾರಿ. ಆದರೆ ಇದರಲ್ಲಿ ಸೋಡಿಯಂ ಕ್ಲೋರೈಡ್ ಕಂಡುಬರುತ್ತದೆ. ಹಾಗಾಗಿ ಆಹಾರದಲ್ಲಿ ಉಪ್ಪನ್ನು ಸರಿಯಾದ ಪ್ರಮಾಣದಲ್ಲಿ ಬಳಸಬೇಕು. ಹೆಚ್ಚಿನ ಪ್ರಮಾಣದ ಉಪ್ಪಿನ ಸೇವನೆಯು ಅನೇಕ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿದಿನ 5 ಗ್ರಾಂ ಉಪ್ಪು ಮಾನವ ದೇಹದ ಅತ್ಯುತ್ತಮ ಕಾರ್ಯಕ್ಕಾಗಿ ಸಾಕಾಗುತ್ತದೆ ಮತ್ತು 5 ಗ್ರಾಂಗಿಂತ ಹೆಚ್ಚು ಉಪ್ಪನ್ನು ಸೇವನೆ ಮಾಡಬಾರದು ಎಂದು ಹೇಳಿದೆ. ಆದರೆ ಭಾರತೀಯರು ಅಗತ್ಯಕ್ಕಿಂತ ಹೆಚ್ಚಿನ ಉಪ್ಪನ್ನು ಸೇವನೆ ಮಾಡುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ICMR) ನಡೆಸಿದ ಅಧ್ಯಯನವು ಭಾರತೀಯರು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಿನ ಉಪ್ಪನ್ನು ಸೇವನೆ ಮಾಡುತ್ತಿದ್ದಾರೆ ಎಂದು ಹೇಳಿದೆ.
ಐ.ಸಿ.ಎಮ್.ಆರ್ ಸಮೀಕ್ಷೆಯ ಪ್ರಕಾರ, ಭಾರತೀಯರು ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುತ್ತಾರೆ. ಭಾರತೀಯರು ತಮ್ಮ ಆಹಾರದಲ್ಲಿ 5 ಗ್ರಾಂ ಬದಲಿಗೆ 8 ಗ್ರಾಂ ಉಪ್ಪನ್ನು ಸೇವಿಸುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ನೇಚರ್ಸ್ ಜರ್ನಲ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಅಧ್ಯಯನವು ಭಾರತೀಯರು ಪ್ರತಿದಿನ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚು ಉಪ್ಪನ್ನು ಸೇವಿಸುತ್ತಿದ್ದಾರೆ ಎಂದು ಹೇಳಿದೆ. ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುತ್ತಾನೆ ಎಂಬುದನ್ನು ಬಹಿರಂಗಪಡಿಸಿದೆ. ಪುರುಷರು (8.9ಗ್ರಾಂ), ಉದ್ಯೋಗಸ್ಥರು (8.6ಗ್ರಾಂ), ತಂಬಾಕು ಸೇವನೆ ಮಾಡುವವರು (8.3ಗ್ರಾಂ), ಸ್ಥೂಲಕಾಯತೆಯತೆಯಿಂದ ಬಳಲುತ್ತಿರುವವರು (9.2 ಗ್ರಾಂ), ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ಜನರು (8.5 ಗ್ರಾಂ) ಗಿಂತ ಹೆಚ್ಚು ಉಪ್ಪನ್ನು ಸೇವನೆ ಮಾಡುತ್ತಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: ನೀವು ನಿತ್ಯ 5 ಗ್ರಾಂಗಿಂತ ಹೆಚ್ಚು ಉಪ್ಪು ತಿಂದ್ರೆ ಏನಾಗುತ್ತೆ? ಇಲ್ಲಿದೆ ಮಾಹಿತಿ
ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಉಪ್ಪಿನ ಸೇವನೆಯನ್ನು 5 ಗ್ರಾಂ ನಷ್ಟು ಕಡಿಮೆ ಮಾಡಿದರೆ, ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಶೇಕಡಾ 25 ರಷ್ಟು ಕಡಿಮೆ ಮಾಡಬಹುದು. ಹಾಗೂ ಅಧಿಕ ಉಪ್ಪಿನ ಸೇವನೆಯನ್ನು ಕಡಿಮೆ ಮಾಡಬೇಕೆಂದರೆ ನಾವು ಸಂಸ್ಕರಿಸಿದ ಆಹಾರಗಳು ಮತ್ತು ಹೊರಗಿನ ಆಹಾರಗಳನ್ನು ಸೇವನೆ ಮಾಡುವುದನ್ನು ತಪ್ಪಿಸುವ ಅವಶ್ಯಕತೆಯಿದೆ ಎಂದು ಐ.ಸಿ.ಎಮ್.ಆರ್ ನಿರ್ದೇಶಕ ಡಾ. ಪ್ರಶಾಂತ್ ಮಾಥುರ್ ಹೇಳಿದರು.
ನಾವು ಸೇವನೆ ಮಾಡುವ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದು ಹೇಗೆ?
ಪ್ರತಿದಿನ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ಸೇವನೆ ಮಾಡಲು ಡಾ. ಮಾಥುರ್ ಕೆಲವು ಸರಳ ಮಾರ್ಗಸೂಚಿಗಳನ್ನು ನೀಡಿದ್ದಾರೆ. ʼನಮ್ಮಲ್ಲಿ ಹೆಚ್ಚಿನವರು ಸಾಮಾನ್ಯವಾಗಿ ಹೆಚ್ಚು ಉಪ್ಪನ್ನು ಸೇವನೆ ಮಾಡುತ್ತಿದ್ದಾರೆ. ಆದ್ದರಿಂದ ನಾವು ಅದರ ಪ್ರಮಾಣದ ಬಗ್ಗೆ ಗಮನಹರಿಸುವುದು ಬಹಳ ಮುಖ್ಯʼ ಎಂದು ಅವರು ಹೇಳಿದರು. ಉದಾಹರಣೆಗೆ ಅಧಿಕ ಉಪ್ಪಿನಾಂಶವಿರುವ ಹಪ್ಪಳ, ಚಟ್ನಿ ಮತ್ತು ಉಪ್ಪಿನಕಾಯಿ ಬಳಕೆಯನ್ನು ಕಡಿಮೆ ಮಾಡಬೇಕು. ಮತ್ತು ನಾವು ಸೇವಿಸುವ ಆಹಾರಕ್ಕೆ ಹೆಚ್ಚುವರು ಉಪ್ಪನ್ನು ಹಾಕುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Wed, 27 September 23