ಕೆಲವರಿಗಂತೂ ಬೆಳಗ್ಗೆ ಎದ್ದ ತಕ್ಷಣ ಟೀ ಕಾಫಿ ಇರಲೇಬೇಕು. ಇನ್ನು ದಿನಕ್ಕೆ ಮೂರು ನಾಲ್ಕು ಸಲವಾದರೂ ಕಾಫಿ ಹೀರುವ ಚಟವಿರುತ್ತದೆ. ಈ ಕೆಲಸದ ಒತ್ತಡದಲ್ಲಿದ್ದಾಗ ಬಿಸಿ ಬಿಸಿ ಟೀ ಕುಡಿದರೆ ಮನಸ್ಸು ಹಾಗೂ ದೇಹ ಎರಡು ಕೂಡ ರಿಲ್ಯಾಕ್ಸ್ ಆಗುತ್ತದೆ. ಅದಲ್ಲದೇ, ನಮ್ಮಲ್ಲಿ ಹೆಚ್ಚಿನವರು ಚಹಾವನ್ನು ಸೋಸಿದ ಬಳಿಕ ಆ ಚಹಾ ಪುಡಿಯನ್ನು ಎಸೆದು ಬಿಡುತ್ತಾರೆ. ಆದರೆ ಈ ನಿರುಪಯುಕ್ತ ಚಹಾ ಪುಡಿಯೂ ವಿವಿಧ ರೀತಿಯ ಉಪಯೋಗಗಳನ್ನು ಹೊಂದಿದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಹೀಗಾಗಿ ಚಹಾ ಸೋಸಿದ ಬಳಿಕ ಚಹಾ ಪುಡಿ ಬಿಸಾಡುವ ಮುನ್ನ ಈ ಬಗ್ಗೆ ನಿಮಗೆ ತಿಳಿದಿರುವುದು ಉತ್ತಮ.
- ಅಡುಗೆ ಮನೆಯಲ್ಲಿ ನೊಣಗಳ ಕಾಟಗೂ ಹೆಚ್ಚಾಗಿದ್ದರೆ ಅವುಗಳನ್ನು ಓಡಿಸಲು, ಉಳಿದ ಚಹಾ ಪುಡಿಯನ್ನು ಬಳಸಿಕೊಳ್ಳಬಹುದು. ಚಹಾಪುಡಿಯನ್ನು ಎಸೆಯುವ ಬದಲು ಹತ್ತಿ ಬಟ್ಟೆಯಲ್ಲಿ ಸುತ್ತಿ ಅಡುಗೆಮನೆಯಲ್ಲಿ ಇರಿಸಿದರೆ ನೊಣಗಳು ಆ ಕಡೆ ಸುಳಿಯುವುದಿಲ್ಲ.
- ಮನೆಯಲ್ಲಿ ಹಳೆಯ ಪೀಠೋಪಕರಣಗಳಿಂದ ಹೊಳಪು ಕಳೆದುಕೊಂಡಿದ್ದರೆ ಬಳಸಿದ ಚಹಾ ಪುಡಿಯನ್ನು ನೀರಿಗೆ ಹಾಕಿ ಕುದಿಸಿ ಸ್ಪ್ರೇ ಬಾಟಲಿಯಲ್ಲಿ ಬೆರೆಸಿ ಪೀಠೋಪಕರಣಗಳ ಮೇಲೆ ಸ್ಪ್ರೇ ಮಾಡುವುದರಿಂದ ಕಳೆಗುಂದಿದ ಉಪಕರಣಗಳು ಹೊಳೆಯುತ್ತದೆ.
- ನಿರುಪಯುಕ್ತ ಚಹಾ ಪುಡಿಯೂ ಕೂದಲಿಗೆ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಚಹಾ ಪುಡಿಯನ್ನು ಎಸೆಯುವ ಬದಲು, ಕುದಿಸಿ ಈ ನೀರನ್ನು ಕಂಡಿಷನರ್ ಆಗಿ ಬಳಸಬಹುದು. ಇದರಿಂದ ಕೂದಲಿನ ಹೊಳಪು ಹೆಚ್ಚಾಗುತ್ತದೆ.
- ಚಹಾ ಪುಡಿಯಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಉಳಿದ ಚಹಾ ಪುಡಿಯನ್ನು ತೊಳೆದು, ಬಿಸಿ ನೀರಿನಲ್ಲಿ ಕುದಿಸಿ ಗಾಯದ ಜಾಗಕ್ಕೆ ಹಚ್ಚಿ ನಂತರ ತೊಳೆಯುವುದರಿಂದ ಗಾಯವು ಮಾಗುತ್ತದೆ.
- ಚಹಾ ಸೋಸಿದ ಬಳಿಕ ಉಳಿದ ಚಹಾ ಪುಡಿಯನ್ನು ಬಿಸಾಡುವ ಬದಲು ಇದರಿಂದ ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು. ಚಹಾ ಪುಡಿಯನ್ನು ನೀರಿನಲ್ಲಿ ಕುದಿಸಿ ಇದರಲ್ಲಿ ಪಾತ್ರೆಯನ್ನು ತೊಳೆದರೆ ಎಣ್ಣೆಯ ಕಲೆಗಳು ಮಾಯವಾಗಿ ಪಾತ್ರೆಯೂ ಸ್ವಚ್ಛವಾಗುವುದಲ್ಲದೆ ಫಳಫಳನೇ ಹೊಳೆಯುತ್ತದೆ.
- ಚರ್ಮವು ಟ್ಯಾನ್ ಆದಾಗ ಉಳಿದ ಚಹಾ ಪುಡಿಯನ್ನು ಬಿಸಿಲಿನಲ್ಲಿ ಒಣಗಿಸಿ ರುಬ್ಬಿ ಅದಕ್ಕೆ ಸೋಡಾ ಮತ್ತು ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮೊಣಕಾಲುಗಳು, ಮೊಣಕೈಗಳು, ಕುತ್ತಿಗೆ ಸೇರಿದಂತೆ ಚರ್ಮಕ್ಕೆ ಅನ್ವಯಿಸುವುದರಿಂದ ಕಲೆಗಳನ್ನು ನಿವಾರಿಸಿ ಆ ಜಾಗವನ್ನು ಬಿಳುಪಾಗಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ