International Day of Happiness 2025: “ಸಂತೋಷವಾಗಿರಿ” ಇದು ಆದೇಶವೂ ಹೌದು, ಆಶೀರ್ವಾದವೂ ಹೌದು!

| Updated By: ಅಕ್ಷತಾ ವರ್ಕಾಡಿ

Updated on: Mar 19, 2025 | 10:04 AM

ಈ ಲೇಖನದಲ್ಲಿ ಈ ‘ಅಂತಾರಾಷ್ಟ್ರೀಯ ಸಂತೋಷದ ದಿನ’ದಂದ ಪ್ರಯುಕ್ತ ಜೀವನದ ಸಂತೋಷವನ್ನು ಕಂಡುಕೊಳ್ಳುವುದರ ಬಗ್ಗೆ ಚರ್ಚಿಸಲಾಗಿದೆ. ಅನಿಶ್ಚಿತತೆಗಳನ್ನು ಸವಾಲುಗಳಾಗಿ ಮಾರ್ಪಡಿಸುವುದು ಮತ್ತು ವರ್ತಮಾನದಲ್ಲಿ ಬದುಕುವ ಮಹತ್ವವನ್ನು ಒತ್ತಿಹೇಳಲಾಗಿದೆ. ಧ್ಯಾನದ ಪ್ರಯೋಜನಗಳು ಮತ್ತು ಇತರರಿಗೆ ಸಹಾಯ ಮಾಡುವ ಮೂಲಕ ಸಂತೋಷವನ್ನು ಹಂಚಿಕೊಳ್ಳುವುದರ ಮಹತ್ವವನ್ನು ವಿವರಿಸಲಾಗಿದೆ.

International Day of Happiness 2025: “ಸಂತೋಷವಾಗಿರಿ ಇದು ಆದೇಶವೂ ಹೌದು, ಆಶೀರ್ವಾದವೂ ಹೌದು!
International Day Of Happiness 2025
Image Credit source: Pexels
Follow us on

ಜೀವನದ ಗುರಿ ಸಂತೋಷವಾಗಿರುವುದು. ನೀವು ಯಾವುದೇ ಕೆಲಸವನ್ನಾದರೂ ಮಾಡುವುದೇತಕ್ಕೆ? ಯಾಕೆಂದರೆ ನೀವು ಸಂತೋಷವಾಗಿರಲು ಬಯಸುವಿರಿ. ಹಣ, ಅಧಿಕಾರ ಅಥವಾ ಲೈಂಗಿಕ ಕ್ರಿಯೆ—ಸಂತೋಷವನ್ನೇ ನೀವು ಇದರಲ್ಲಿ ಹುಡುಕುವುದು. ಆದರೆ ಇದನ್ನು ಗಳಿಸಿಯೂ ನೀವು ಸಂತೋಷವಾಗಿಲ್ಲ.

ಶಾಲೆಗೆ ಹೋಗುವ ಒಬ್ಬ ಬಾಲಕನಿಗೆ, ತಾನು ಕಾಲೇಜಿಗೆ ಹೋದರೆ ಸ್ವಾತಂತ್ರ್ಯ ಮತ್ತು ಸಂತೋಷ ಸಿಗುತ್ತದೆ ಎಂದು ತೋರುತ್ತದೆ. ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಕೇಳಿದರೆ, ಉದ್ಯೋಗ ಸಿಕ್ಕರೆ ಸಂತೋಷವಾಗುತ್ತದೆ ಎನ್ನುತ್ತಾನೆ. ಉದ್ಯೋಗಸ್ಥನನ್ನು ಕೇಳಿದರೆ, ಪರಿಪೂರ್ಣ ಜೀವನಸಂಗಾತಿ ಸಿಕ್ಕರೆ ಸಂತೋಷವಾಗಿರುತ್ತೇನೆ ಎನ್ನುತ್ತಾನೆ. ಜೀವನಸಂಗಾತಿ ಸಿಕ್ಕ ಮೇಲೆ ಮಗುವಾಗಬೇಕು ಎನ್ನುತ್ತಾನೆ. ಮಕ್ಕಳು ದೊಡ್ಡವರಾಗಿ, ವಿದ್ಯಾಭ್ಯಾಸ ಪಡೆದು ಸ್ವತಂತ್ರವಾಗಿ ಬದುಕುವವರೆಗೂ ತಂದೆ ತಾಯಂದಿರು ಶಾಂತಿಯಿಂದಿರಲು ಸಾಧ್ಯವಿಲ್ಲ. ನಿವೃತ್ತರಾದವರು ತಮ್ಮ ಯೌವನದ ದಿನಗಳನ್ನು ಮರಳಿ ಬಯಸುತ್ತಾರೆ.

ಹೀಗೆ, ಇಡೀ ಜೀವನವು ಭವಿಷ್ಯದಲ್ಲಿ ಯಾವಾಗಲೋ ಸಂತೋಷಪಡುವುದಕ್ಕಾಗಿ ಕಳೆದುಹೋಗುತ್ತದೆ. ಆದರೆ ನಿಮ್ಮ ಜೀವನದ ಎಷ್ಟು ಕ್ಷಣಗಳು, ಗಂಟೆಗಳು ಮತ್ತು ದಿನಗಳನ್ನು ನೀವು ಅಂತರಂಗದಿಂದ ಸಂತೋಷವಾಗಿ ಕಳೆದಿದ್ದೀರಿ? ಅವೇ ನಿಜವಾಗಿ ನೀವು ಬದುಕಿರುವ ಕ್ಷಣಗಳು. ಅದು ಬಹುಶಃ ನೀವು ಸಂಪೂರ್ಣವಾಗಿ ಆನಂದಮಯವಾಗಿದ್ದ ನಿಮ್ಮ ಬಾಲ್ಯದ ದಿನಗಳಿರಬಹುದು, ಅಥವಾ ಸಮುದ್ರ ತೀರದಲ್ಲಿ ಆಟವಾಡುವಾಗ, ಈಜುವಾಗ, ಇಲ್ಲವೇ ಪರ್ವತದ ಮೇಲೆ ನಿಂತು ತಾಜಾ ಗಾಳಿಯನ್ನು ಅನುಭವಿಸುವಾಗ ವರ್ತಮಾನದ ಕ್ಷಣದಲ್ಲಿದ್ದು ಆಸ್ವಾದಿಸಿದ ಕೆಲವು ಕ್ಷಣಗಳಿರಬಹುದು.

ಇದನ್ನೂ ಓದಿ
ತುಳಸಿ ಗಿಡ ಒಣಗಿ ಹೋಗಿದೆಯೇ? ಹಚ್ಚಹಸುರಾಗಿ ಬೆಳೆಯಲು ಈ ಟಿಪ್ಸ್​ ಫಾಲೋ ಮಾಡಿ
ರಸಭರಿತ ತಾಜಾ ಕಲ್ಲಂಗಡಿ ಹಣ್ಣು ಖರೀದಿಸುವುದು ಹೇಗೆ?
ಕೂದಲಿಗೆ ಅತಿಯಾಗಿ ಅಲೋವೆರಾ ಜೆಲ್ ಹಚ್ಚುತ್ತೀರಾ? ಇದರ ಅಡ್ಡಪರಿಣಾಮಗಳೇನು?
ಮಾವಿನ ಹಣ್ಣುಗಳನ್ನು ಖರೀದಿಸುವ ಮುನ್ನ ಎಚ್ಚರ!

ನಮ್ಮ ಹೆಚ್ಚಿನ ಸಮಯವು ಆಗಿಹೋದದ್ದರ ಬಗ್ಗೆ ಯೋಚಿಸುವಲ್ಲಿ ಅಥವಾ ಭವಿಷ್ಯದ ಬಗ್ಗೆ ಚಿಂತಿಸುವಲ್ಲಿ ಕಳೆದುಹೋಗುತ್ತದೆ. ಆದರೆ ಸಂತೋಷವು ವರ್ತಮಾನದ ಕ್ಷಣದಲ್ಲಿದೆ. ಹಲವು ಯುವಕರು ನನ್ನಲ್ಲಿ ಹಂಚಿಕೊಂಡಿದ್ದಾರೆ, ಕಳೆದ ಕೆಲವು ವರ್ಷಗಳಿಂದ; ವಿಶೇಷವಾಗಿ ಮಹಾಮಾರಿಯ ನಂತರ, ಅವರು ಜೀವನದಲ್ಲಿನ ಅನಿಶ್ಚಿತತೆಯ ಬಗ್ಗೆ ಚಿಂತೆಪಡುತ್ತಿದ್ದಾರೆ—ಉದ್ಯೋಗ, ಹಣ, ಸಂಬಂಧಗಳು ಮತ್ತು ಕುಟುಂಬದ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದಾರೆ.

ಸತ್ಯವೇನೆಂದರೆ, ಜೀವನವೇ ಅನಿಶ್ಚಿತ. ಖಗೋಳ ವಿಜ್ಞಾನಿಗಳ ಮಾತನ್ನು ಕೇಳಿದರೆ, ನಮ್ಮ ಬ್ರಹ್ಮಾಂಡವೇ ಅನಿಶ್ಚಿತತೆಯಿಂದ ಕೂಡಿದುದು ಎಂದು ಅವರು ಹೇಳುತ್ತಾರೆ. ನಮ್ಮ ಭೂಮಿಯು ಬ್ಲ್ಯಾಕ್ ಹೋಲ್ ಗಳು ಮತ್ತು ಕಾಸ್ಮಿಕ್ ವಿದ್ಯಮಾನಗಳಿಂದ ತುಂಬಿದ ವಿಶಾಲವಾದ ವಿಶ್ವದಲ್ಲಿ ಚಲಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ಎಲ್ಲವೂ ಅಂತ್ಯವಾಗಬಹುದು. ಇದರ ಹೊರತಾಗಿಯೂ, ಸೃಷ್ಟಿಯಲ್ಲಿ ಒಂದು ಕ್ರಮ ಮತ್ತು ಸಮನ್ವಯವಿದೆ.

ಜೀವನವು ಒಂದು ರೋಲರ್‌ ಕೋಸ್ಟರ್ ನಂತೆ. ಈ ಅನಿಶ್ಚಿತತೆಯನ್ನು ಎರಡು ರೀತಿಯಲ್ಲಿ ನೋಡಬಹುದು. ನೀವು ಭಯಗ್ರಸ್ತರಾಗಿ ಅದರ ಕಡೆ ನೋಡಿದರೆ, ನಿಮ್ಮ ಅನುಭವವು ಬಹಳ ಕೆಟ್ಟದ್ದಾಗಿರಬಹುದು. ಆದರೆ, ನೀವು ಅದನ್ನು ಸಾಹಸವೆಂದು ಪರಿಗಣಿಸಿದರೆ, ಅದು ಹರ್ಷದಾಯಕವಾಗುತ್ತದೆ. ನೀವು ಅನಿಶ್ಚಿತತೆಗಳ ಬಗ್ಗೆ ಆತಂಕಗೊಳ್ಳುವುದು ಯಾವಾಗ? ಅವುಗಳನ್ನು ಜಯಿಸಲು ನಿಮ್ಮಲ್ಲಿ ಆತ್ಮವಿಶ್ವಾಸವಿಲ್ಲದಿದ್ದಾಗ. ನಿಮ್ಮಲ್ಲಿರುವ ಪ್ರತಿಭೆಯ ಬಗ್ಗೆ ಅನುಮಾನಿಸಬೇಡಿ. ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿದೆ ಎಂಬ ವಿಶ್ವಾಸ ನಿಮ್ಮಲ್ಲಿದ್ದಾಗ, ಅನಿಶ್ಚಿತತೆಯು ಅಷ್ಟೊಂದು ಭಯಾನಕವಾಗಿರುವುದಿಲ್ಲ ಮತ್ತು ಅದು ಹೆಚ್ಚು ಸಾಹಸಮಯವಾಗಿ ಕಾಣಿಸುತ್ತದೆ.

ಯಾರ ಜೀವನವೂ ಸವಾಲುಗಳಿಂದ ಮುಕ್ತವಾಗಿರುವುದಿಲ್ಲ. ಕೆಲವೊಮ್ಮೆ, ದಿನನಿತ್ಯದ ಜೀವನದಲ್ಲಿ ಸಂಭವಿಸುವ ಘಟನೆಗಳಿಗಿಂತ ಜೀವನವು ತುಂಬಾ ದೊಡ್ಡದಾಗಿದೆ ಎಂಬುದನ್ನು ನಾವು ಮರೆತುಬಿಡುತ್ತೇವೆ. ಇಂದು, ಪ್ರತಿ 40 ಸೆಕೆಂಡುಗಳಿಗೊಮ್ಮೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಎಚ್ಚರವಾಗಿರಿ! ಜೀವನದಲ್ಲಿ ಈ ಜೀವನಕ್ಕಿಂತ ಹೆಚ್ಚು ಮುಖ್ಯವಾದುದು ಯಾವುದೂ ಇಲ್ಲ. ನೀವು ಜೀವಂತವಾಗಿದ್ದರೆ, ಉಳಿದದ್ದೆಲ್ಲಾ ಇರುತ್ತವೆ. ನೀವು ಜೀವಂತವಾಗಿದ್ದರೆ, ವ್ಯವಹಾರ ಮಾಡಬಹುದು. ನೀವು ಜೀವಂತವಾಗಿದ್ದರೆ, ಸಂಬಂಧಗಳು ಇರುತ್ತವೆ. ನೀವು ಜೀವಂತವಾಗಿದ್ದರೆ, ಯಶಸ್ಸು ಅಥವಾ ನೀವು ಬಯಸಿದ್ದೆಲ್ಲವೂ ಇರುವುದು.

ನಿಮ್ಮ ನಗುವನ್ನು ಕಸಿದುಕೊಳ್ಳುವುದು ಅಹಿತಕರ ಘಟನೆಗಳು. ಅಂತಹ ಸಂದರ್ಭಗಳಲ್ಲಿ ಮೊದಲು ಮಾಡಬೇಕಾದದ್ದು ನೀವು ಸುಖ-ದುಃಖಗಳಿಗಿಂತ ಮಿಗಿಲಾದವರು ಎಂಬುದನ್ನು ನೆನಪಿಡಿ. ಎರಡನೆಯದಾಗಿ, ನೀವು ಈ ಜಗತ್ತಿನಲ್ಲಿರುವುದು ಕೊಡುಗೆ ನೀಡಲು ಮತ್ತು ನಿಮ್ಮ ಅಗತ್ಯವಿರುವ ಜನರಿದ್ದಾರೆ ಎಂಬುದನ್ನು ತಿಳಿಯಿರಿ. ಕೊನೆಯದಾಗಿ, ನೀವು ಒಬ್ಬಂಟಿಯಾಗಿಲ್ಲ, ವಿಶ್ವದಲ್ಲಿ ನಿಮ್ಮನ್ನು ಪ್ರೀತಿಸುವ ಮತ್ತು ನಿಮ್ಮ ಬಗ್ಗೆ ಆಳವಾಗಿ ಕಾಳಜಿ ವಹಿಸುವ ಒಂದು ಶಕ್ತಿ ಇದೆ ಎಂಬುದನ್ನು ತಿಳಿಯಿರಿ.

ಹೆಚ್ಚಾಗಿ ಜನರು ಒಂಟಿಯಾಗಿರಲು ಹೆದರುತ್ತಾರೆ. ನೀವು ಇತರರಿಂದ ಏನಾದರೂ ನಿರೀಕ್ಷಿಸುತ್ತಿದ್ದರೆ, ಆಗ ನಿಮಗೆ ಒಂಟಿತನದ ಅನುಭವವಾಗುತ್ತದೆ. ಆದರೆ ಈ ಬಯಕೆಯಿಂದ ಹೊರಬಂದು, ನೀವು ಏನಾದರೂ ಕೊಡುವ ಮನಸ್ಥಿತಿಯಲ್ಲಿದ್ದರೆ; ಇತರರಿಗೆ ಸಂತೋಷವನ್ನು ಹಂಚುವವರಾಗಿದ್ದರೆ, ನೀವು ಒಂಟಿಯಾಗಿರಲು ಹೇಗೆ ಸಾಧ್ಯ? ಇಡೀ ಜಗತ್ತು ನಿಮ್ಮ ಪ್ರೀತಿಗಾಗಿ ಕಾಯುತ್ತಿದೆ. ಆದರೆ ನೀವು “ನನ್ನನ್ನು ಪ್ರೀತಿಸು, ನನ್ನನ್ನು ಪ್ರೀತಿಸು, ನನ್ನನ್ನು ಪ್ರೀತಿಸು” ಎಂದು ಭಿಕ್ಷೆ ಬೇಡುತ್ತಾ ತಿರುಗಿದರೆ, ಅದರಿಂದ ನಿಮಗೆ ಇನ್ನೂ ಹೆಚ್ಚಿನ ಹೊಡೆತ ಬೀಳುವುದಷ್ಟೆ.

ಮಾನವರು ಸಾಮಾಜಿಕ ಪ್ರಾಣಿಗಳು; ಜನರೊಂದಿಗೆ ಇರಲು ಮತ್ತು ಅವರು ನಮ್ಮನ್ನು ಇಷ್ಟಪಡಬೇಕೆಂದು ಬಯಸುವುದು ಸಹಜ. ಆದರೆ ಜನರು ನಮ್ಮನ್ನು ಇಷ್ಟಪಡಬೇಕು ಎಂದು ಹಂಬಲಿಸುವುದೇ ಒತ್ತಡವನ್ನು ತಂದೊಡ್ಡುತ್ತದೆ. ನೀವು ಸದಾ ಒತ್ತಡದಲ್ಲಿ ಇದ್ದರೆ, ಯಾರು ನಿಮ್ಮನ್ನು ಇಷ್ಟಪಡುತ್ತಾರೆ? ನೀವು ಸಂತೋಷವಾಗಿರುವ ಜನರೊಂದಿಗೆ ಇರಲು ಇಷ್ಟಪಡುತ್ತೀರಿ, ಅಲ್ಲವೇ? ನಮ್ಮ ಮಾತುಗಳಿಗಿಂತ ನಮ್ಮ ತರಂಗಗಳು (ವೈಬ್ರೇಶನ್ಸ್) ಹೆಚ್ಚಿನ ಪ್ರಭಾವ ಬೀರುತ್ತವೆ. ನಾವು ನಮ್ಮ ತರಂಗಗಳನ್ನು ಸಕಾರಾತ್ಮಕವಾಗಿಸುವುದು ಹೇಗೆ? ಧ್ಯಾನದ ಮೂಲಕ. ನೀವು ಧ್ಯಾನ ಮಾಡುವಾಗ, ಜೀವನದಲ್ಲಿ ಯಾವುದೇ ಭಯವಿರುವುದಿಲ್ಲ. ಭಯವು ಹೋಗಿ, ಅಲ್ಲಿ ನಿಮಗೆ ಒಂಟಿತನವೂ ಅನ್ನಿಸುವುದಿಲ್ಲ ಅಥವಾ ನೀವು ದುಃಖಿತರಾಗಿಯೋ ಅಸಮಾಧಾನದಿಂದನೋ ಇರುವುದಿಲ್ಲ. ನೀವು ಸೃಜನಶೀಲ, ಉತ್ಪಾದಕ ಮತ್ತು ಸಂತೋಷಕರ ವ್ಯಕ್ತಿಯಾಗಿ ಬೆಳೆಯುತ್ತೀರಿ.

ಹೆಚ್ಚು ಜನರು ನಿಮ್ಮನ್ನು ಇಷ್ಟಪಡುವಂತೆ ಮಾಡುವ ಇನ್ನೊಂದು ಮಾರ್ಗವೆಂದರೆ ಈ ಇಷ್ಟವಾಗಬೇಕೆಂಬ ಬಯಕೆಯನ್ನು ಬಿಟ್ಟುಬಿಡುವುದು. ಯಾರಿಗೂ ನೀವು ಇಷ್ಟವಾಗದೆ ಇದ್ದರೇನಂತೆ? ನೀವು ಯಾರನ್ನೂ ಮೆಚ್ಚಿಸುವ ಪ್ರಯತ್ನ ಮಾಡಬೇಕಾಗಿಲ್ಲ, ನಿಮ್ಮ ನೈಜ ಸ್ವರೂಪದಲ್ಲಿರಿ, ಆಗ ನೀವು ಇನ್ನೂ ಹೆಚ್ಚು ಆಕರ್ಷಕವಾಗಿರುತ್ತೀರಿ. ಯಾರೋ ಕೆಲವರು ನಿಮ್ಮನ್ನು ನೀವು ಇರುವಂತೆ ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ, ನೀವು ನಿಮ್ಮ ಸ್ವಂತಿಕೆಯನ್ನು ಬಿಟ್ಟುಬಿಡಬೇಕಾದ ಅಗತ್ಯವಿಲ್ಲ. ನೀವು ನಿಮಗೆ ಉನ್ನತ ಸ್ಥಾನ ನೀಡಬೇಕು, ಏಕೆಂದರೆ ಜಗತ್ತು ನಿಮ್ಮನ್ನು ನಿಮ್ಮ ಸ್ವಯಂ-ಅಂದಾಜಿನ ಪ್ರಕಾರ ಸ್ವೀಕರಿಸುತ್ತದೆ. ಸಂಬಂಧವನ್ನು ಗಳಿಸಲಿಕ್ಕಾಗಿ ನಿಮ್ಮ ನೈಜ ಸ್ವಭಾವವನ್ನು ಎಂದಿಗೂ ಬಿಟ್ಟುಕೊಡಬೇಡಿ. ದೀರ್ಘಾವಧಿಯಲ್ಲಿ, ನಿಮ್ಮ ಶ್ರೇಷ್ಠತೆಯನ್ನು – ನಿಮ್ಮ ಅನನ್ಯತೆಯನ್ನು ಕ್ಷಣಿಕ ದೃಢೀಕರಣಕ್ಕಾಗಿ ನೀವು ವಿನಿಮಯ ಮಾಡಿಕೊಂಡಿದ್ದಕ್ಕೆ ನೀವು ವಿಷಾದಿಸುತ್ತೀರಿ.

ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಚಿಂತಿಸಬೇಡಿ. ಅವರ ಅಭಿಪ್ರಾಯಗಳು ಏನೇ ಇದ್ದರೂ ಅದು ಶಾಶ್ವತವಲ್ಲ. ವ್ಯಕ್ತಿ, ವಿಷಯಗಳ ಬಗ್ಗೆ ನಿಮ್ಮದೇ ಅಭಿಪ್ರಾಯಗಳು ಕಾಲಾನುಸಾರ ಬದಲಾಗುತ್ತವೆ. ಆದ್ದರಿಂದ, ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಏಕೆ ಚಿಂತಿಸಬೇಕು? ಚಿಂತೆಯು ದೇಹ, ಮನಸ್ಸು, ಬುದ್ಧಿಶಕ್ತಿ ಮತ್ತು ಜಾಗರೂಕತೆಯ ಮೇಲೆ ಪರಿಣಾಮ ಬೀರುತ್ತದೆ. ವರ್ತಮಾನದ ಕ್ಷಣದಲ್ಲಿರುವಂತೆ ಮನಸ್ಸಿಗೆ ತರಬೇತಿ ಕೊಡಿ. ಅನಗತ್ಯವಾಗಿ ನೀವು ಹೊತ್ತುಕೊಂಡಿರುವಂತಹ ಒತ್ತಡವನ್ನು ಬಿಡಿ.

ಜೀವನದಲ್ಲಿ ಯಾವಾಗಲೂ ಕೆಲವು ಸವಾಲುಗಳು ಅಥವಾ ತೊಂದರೆಗಳು ಇರುತ್ತವೆ. ಸವಾಲುಗಳು ಎದುರಾದಾಗಲೆಲ್ಲಾ, ಸ್ವಲ್ಪ ಸಮಯ ಧ್ಯಾನ ಮಾಡಿ. ಧ್ಯಾನವೆಂದರೆ ಏನೂ ಮಾಡದೆ ಇರುವಂತಹ ಸೂಕ್ಷ್ಮವಾದ ಕಲೆ. ಹೆಚ್ಚಾಗಿ ಜನರು ಧ್ಯಾನಕ್ಕೆ ಪ್ರಯತ್ನ ಬೇಕು ಎಂದು ಭಾವಿಸುತ್ತಾರೆ ಆದರೆ ಅದು ಪ್ರಯತ್ನವಿಲ್ಲದಿರುವಿಕೆ. ಧ್ಯಾನವೆಂದರೆ ಸಂಪೂರ್ಣ ವಿಶ್ರಾಂತಿ; ಏನನ್ನೂ ಬಯಸದಿರುವ, ಏನೂ ಆಗಿಲ್ಲದಿರುವ, ಏನನ್ನೂ ಮಾಡದಿರುವ, ಮತ್ತು ಹೀಗಿದ್ದರೂ ಯಾವುದೇ ಪ್ರಯತ್ನವಿಲ್ಲದೆ ಸಂಪೂರ್ಣ ಜಾಗೃತರಾಗಿರುವ ಸ್ಥಿತಿ. ಧ್ಯಾನವೆಂದರೆ ವರ್ತಮಾನದ ಕ್ಷಣದಲ್ಲಿರುವ ಮನಸ್ಸು. ನೀವು ಧ್ಯಾನ ಮಾಡುವಾಗ, ನೀವು ಸಂತೋಷವನ್ನು ಅನುಭವಿಸುತ್ತೀರಿ, ಮನಸ್ಸು ತೃಪ್ತಿಯನ್ನು ಅನುಭವಿಸುತ್ತದೆ ಮತ್ತು ಆಲೋಚನೆಗಳು ಹೆಚ್ಚು ಸ್ಪಷ್ಟವಾಗಿ ಹರಿಯುತ್ತವೆ.

ಇದನ್ನೂ ಓದಿ: ಈ ಗುಣಲಕ್ಷಣ ಹೊಂದಿರುವ ಜನರೊಂದಿಗೆ ಎಂದಿಗೂ ಸ್ನೇಹ ಬೆಳೆಸಿಕೊಳ್ಳಬೇಡಿ!

ನಿಮ್ಮ ಸಂತೋಷಕ್ಕೆ ನೀವೇ ಹೊಣೆಗಾರರು. ಆದ್ದರಿಂದ ಪ್ರತಿದಿನ ಈ ನಿರ್ಣಯವನ್ನು ತೆಗೆದುಕೊಳ್ಳಿ: “ಏನೇ ಆಗಲಿ, ನಾನು ನನ್ನ ಸಂತೋಷವನ್ನು ಕಳೆದುಕೊಳ್ಳುವುದಿಲ್ಲ.” ನಿಮ್ಮ ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿರಲಿ, ಸಂಬಂಧದಲ್ಲಿ ನಷ್ಟ ಅನುಭವಿಸುತ್ತಿರಲಿ; ಅಥವಾ ಜೀವನದ ಯಾವುದೇ ಕ್ಷೇತ್ರದಲ್ಲಿ ನಷ್ಟ ಅನುಭವಿಸುತ್ತಿರಲಿ; ನೀವು ನಿಮ್ಮ ಸಂತೋಷವನ್ನು ಕಳೆದುಕೊಳ್ಳಬಾರದು. ಎಲ್ಲವೂ ಸುಗಮವಾಗಿದ್ದರೆ, ನಗುವುದು ಸುಲಭ! ಆದರೆ, ಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಘಟನೆ ನಡೆದಾಗಲೂ ನಿಮಗೆ ನಗಲು ಸಾಧ್ಯವಾದರೆ, ನೀವು ಜೀವನ ಕಲೆಯನ್ನು (Art of Living) ಕರಗತ ಮಾಡಿಕೊಂಡಿದ್ದೀರಿ ಎಂದರ್ಥ.

ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ದುಃಖಿತ ವ್ಯಕ್ತಿಯನ್ನು ನೋಡಿದಾಗ, ಸುಮ್ಮನೆ ಹಾದುಹೋಗಬೇಡಿ. ನಿಂತು ಅವರೊಂದಿಗೆ ಮಾತನಾಡಿ. ಏನಾಯಿತೆಂದು ಕೇಳಿ ಮತ್ತು ಅವರಿಗೆ ನೀವು ಸಹಾಯ ಮಾಡಲು ಸಾಧ್ಯವೇ ಎಂದು ನೋಡಿ. ಈ ಜಗತ್ತಿನಲ್ಲಿ ಮಾನವೀಯತೆ ಸಾಕಷ್ಟಿದೆ, ದುಃಖಿತರಿಗೆ ಸಾಂತ್ವನ ನೀಡಲು ಎಲ್ಲರೂ ಇದ್ದಾರೆ ಎಂಬ ಸಂದೇಶವನ್ನು ಹರಡೋಣ. ಈ ‘ಅಂತಾರಾಷ್ಟ್ರೀಯ ಸಂತೋಷದ ದಿನ’ದಂದು, ಸಂತೋಷವಾಗಿರುವ ಸಂಕಲ್ಪ ಮಾಡಿ.

“ಸಂತೋಷವಾಗಿರಿ!” – ಇದು ಆದೇಶವೂ ಹೌದು, ಆಶೀರ್ವಾದವೂ ಹೌದು.

– ಗುರುದೇವ್ ಶ್ರೀ ಶ್ರೀ ರವಿಶಂಕರ್

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:58 am, Wed, 19 March 25